ADVERTISEMENT

‘ಡೆವಿಲ್‌’ ಸಿನಿಮಾ ವಿಮರ್ಶೆ: ಕುತೂಹಲ ಉಳಿಸದ ಚಿತ್ರಕಥೆ

ಅಭಿಲಾಷ್ ಪಿ.ಎಸ್‌.
Published 11 ಡಿಸೆಂಬರ್ 2025, 14:21 IST
Last Updated 11 ಡಿಸೆಂಬರ್ 2025, 14:21 IST
ದರ್ಶನ್‌ 
ದರ್ಶನ್‌    

‘ಲೂಸಿಫರ್‌’, ‘ಒನ್‌’, ‘ಭರತ್‌ ಅನಿ ನೇನು’ ಹೀಗೆ ಮಲಯಾಳ, ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಪೂರ್ಣ ಪ್ರಮಾಣದ ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾಗಳು ತೆರೆಕಂಡಿವೆ. ‘ಡೆವಿಲ್‌’ ಇದೇ ಜಾನರ್‌ನಲ್ಲಿದ್ದು, ಆಸಕ್ತಿಕರವಾದ ‘ಒನ್‌ಲೈನರ್‌’ ಹೊಂದಿದೆ. ಆದರೆ ಸಿನಿಮಾದ ಚಿತ್ರಕಥೆಯನ್ನು ಅಭಿಮಾನಿ ವರ್ಗಕ್ಕೆ ಸೀಮಿತ ಮಾಡಿದ ಕಾರಣ ದಾರಿ ತಪ್ಪಿದೆ. ಕುತೂಹಲ ಮೂಡಿಸಬೇಕಾಗಿದ್ದ ಸಿನಿಮಾದ ವಿಷಯ ಮೊದಲಾರ್ಧದಲ್ಲೇ ಕಥೆಯನ್ನು ಬಿಟ್ಟುಕೊಡುತ್ತದೆ. 

‘ರಾಜಶೇಖರ್‌’(ಮಹೇಶ್‌ ಮಂಜ್ರೇಕರ್‌) ಕರುನಾಡು ಪ್ರಜಾ ಪಕ್ಷದಿಂದ ಗೆದ್ದು ಮುಖ್ಯಮಂತ್ರಿ ಸ್ಥಾನದಲ್ಲಿರುವಾತ. ಆತನ ರಾಜಕೀಯ ಸಲಹೆಗಾರ ಅನಂತ್‌ ನಂಬಿಯಾರ್‌(ಅಚ್ಯುತ್‌ ಕುಮಾರ್‌) ನಿವೃತ್ತ ಐಎಎಸ್‌ ಅಧಿಕಾರಿ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ರಾಜಶೇಖರ್‌ ಜೈಲು ಸೇರುವ ದೃಶ್ಯದ ಮುಖಾಂತರ ಕಥೆ ತೆರೆದುಕೊಳ್ಳುತ್ತದೆ. ಐಷಾರಾಮಿ ಆತಿಥ್ಯವಿರುವ ಜೈಲಿನೊಳಗಿದ್ದುಕೊಂಡೇ ರಾಜಶೇಖರ್‌ ವಿದೇಶದಲ್ಲಿರುವ ತನ್ನ ಮಗ ಧನುಷ್‌ ರಾಜಶೇಖರ್‌ನನ್ನು(ದರ್ಶನ್‌) ಸಿಎಂ ಕುರ್ಚಿಯಲ್ಲಿ ಕುಳ್ಳಿರಿಸುವಂತೆ ನಂಬಿಯಾರ್‌ಗೆ ಆದೇಶಿಸುತ್ತಾನೆ. ‘ಡೆವಿಲ್‌’ ಎಂದೇ ಕರೆಯಲ್ಪಡುವ ಧನುಷ್‌ ಆಸೆ ಪಟ್ಟಿದ್ದು ಸಿಗದೇ ಇದ್ದಾಗ ಕಿತ್ತುಕೊಳ್ಳುವ ವ್ಯಕ್ತಿತ್ವದವನು. ಈತನ ಭೇಟಿ ಬಳಿಕ ಗೊಂದಲದಲ್ಲೇ ದೇಶಕ್ಕೆ ಮರಳುವ ನಂಬಿಯಾರ್‌ ‘ಕೃಷ್ಣ ಮೆಸ್‌’ ನಡೆಸುವ ಬಾಣಸಿಗ ‘ಕೃಷ್ಣ’ನನ್ನು(ದರ್ಶನ್‌) ನೋಡುತ್ತಾನೆ. ಇಲ್ಲಿಂದ ಕಥೆ ತೆರೆದುಕೊಳ್ಳುತ್ತದೆ.    

ಹೀರೊ ದ್ವಿಪಾತ್ರಗಳನ್ನು ನಿಭಾಯಿಸಿದ ಸಿನಿಮಾಗಳಲ್ಲಿ ಒಂದು ಪಾತ್ರವನ್ನು ಗೌಪ್ಯವಾಗಿ ಇಡುವುದು ಮುಖ್ಯವಾಗುತ್ತದೆ. ‘ಡೆವಿಲ್‌’ನಲ್ಲಿ ಥ್ರಿಲ್ಲರ್‌ ಅಂಶವನ್ನು ಮಧ್ಯಂತರದವರೆಗೂ ಕೊಂಡೊಯ್ಯುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರಕಥೆಯ ಕೊರತೆಯು ಆರಂಭದಲ್ಲೇ ದರ್ಶನ್‌ ದ್ವಿಪಾತ್ರವನ್ನು ಬಹಿರಂಗಗೊಳಿಸಿದೆ. ಇಲ್ಲೇ ಕುತೂಹಲ ಹೋಗುತ್ತದೆ. ಸಿದ್ಧಸೂತ್ರದಲ್ಲೇ ಸಿನಿಮಾ ಕಟ್ಟಿಕೊಡಲಾಗಿದ್ದು, ಅನಗತ್ಯ ಹಾಡು, ಫೈಟ್‌ ಸಿನಿಮಾದ ಒಟ್ಟು ಅವಧಿ ಹೆಚ್ಚಿಸಿದೆ. ಸಿನಿಮಾದ ಚಿತ್ರಕಥೆಯಲ್ಲಿ ಗಟ್ಟಿತನವಿಲ್ಲ. ಹೀಗಾಗಿ ಕಥೆಯಲ್ಲಿ ಮುಂದೇನಾಗುತ್ತದೆ ಎಂದು ಊಹಿಸಬಹುದು. ದರ್ಶನ್‌ ಹಿಂದಿನ ಸಿನಿಮಾ ‘ಕಾಟೇರ’ಕ್ಕೆ ಹೋಲಿಸಿದರೆ ನಟನೆಯನ್ನು ಹೊರತೆಗೆಯುವ ಪ್ರಯತ್ನವೇ ನಡೆದಿಲ್ಲ. ನಾಯಕನೇ ಖಳನಾಯಕನ ಪಾತ್ರದೊಳಗೂ ಇದ್ದಾಗ ಆಗುವ ತಾಂತ್ರಿಕ, ಸಾಮಾಜಕ್ಕೆ ಹೋಗುವ ಸಂದೇಶದ ಸಮಸ್ಯೆಯನ್ನೂ ಈ ಚಿತ್ರ ತೆರೆದಿಟ್ಟಿದೆ.  

ADVERTISEMENT

ನಟನಾಗುವ ಕನಸು ಹೊತ್ತ ‘ಕೃಷ್ಣ’ನಾಗಿ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌ ಹಾಗೂ ಅಂಬರೀಷ್‌ ಅವರನ್ನು ದರ್ಶನ್‌ ಅನುಕರಣೆ ಮಾಡುವುದು ಚೆನ್ನಾಗಿದೆ. ಎಲ್ಲರನ್ನೂ ಮನಸ್ಸೋಇಚ್ಛೆ ಶೂಟ್‌ ಮಾಡುವ ‘ಧನುಷ್‌’ ‘ಕೃಷ್ಣ’ನನ್ನೇಕೆ ಸುಡುವುದೇ ಇಲ್ಲ ಎನ್ನುವ ಪ್ರಶ್ನೆಯೂ ಉಳಿಯುತ್ತದೆ. ರಾಜಕೀಯ ವಿಷಯವನ್ನಿಟ್ಟುಕೊಂಡೇ ಸಿನಿಮಾ ಮಾಡಲಾಗಿದೆ. ಆದರೆ ಅದಕ್ಕೆ ತಕ್ಕ ಹಾಗೆ ಚಿತ್ರದ ಮೇಕಿಂಗ್‌ ಇಲ್ಲ. ರಾಜಕೀಯ ರ್‍ಯಾಲಿಗಳು, ಸಭೆಗಳ ದೃಶ್ಯಗಳು ಕೃತಕವಾಗಿವೆ. ರಾಜಕೀಯ ರ್‍ಯಾಲಿಯು ‘ಲೂಸಿಫರ್‌’ನಂತಿದ್ದರೂ ಅದರಷ್ಟು ಉತ್ಕೃಷ್ಟವಾಗಿ ಬಂದಿಲ್ಲ. ‘ಇದ್ರೆ ನೆಮ್ದಿಯಾಗ್‌ ಇರ್ಬೇಕು’ ಹಾಡು ಚೆನ್ನಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.