ADVERTISEMENT

'ಜೂನಿಯರ್' ಚಿತ್ರ ವಿಮರ್ಶೆ: ಸಿರಿವಂತ ಸಿನಿಮಾದಲ್ಲಿ ಕಥೆಯೇ ಬಡವ

ವಿನಾಯಕ ಕೆ.ಎಸ್.
Published 18 ಜುಲೈ 2025, 10:34 IST
Last Updated 18 ಜುಲೈ 2025, 10:34 IST
ಕಿರೀಟಿ, ಶ್ರೀಲೀಲಾ
ಕಿರೀಟಿ, ಶ್ರೀಲೀಲಾ   

ಆ್ಯಕ್ಷನ್‌ ಇದೆ, ಉತ್ಸಾಹ ತುಂಬುವ ಹಾಡು, ನೃತ್ಯಗಳಿವೆ. ಪಾತ್ರವರ್ಗ ಜೋರಾಗಿದೆ. ಪ್ರತಿ ಫ್ರೇಮ್‌ನಲ್ಲಿಯೂ ಅದ್ದೂರಿತನ ಎದ್ದು ಕಾಣುತ್ತದೆ. ಇವೆಲ್ಲದರ ನಡುವೆ ಸಿದ್ಧಸೂತ್ರಗಳಿಂದ ಕೂಡಿದ ಕಥೆ ಬಡವಾಗಿದೆ. ಗಣಿ ಉದ್ಯಮಿ, ಶಾಸಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿಯನ್ನು ಮಾಸ್‌ ಹೀರೊ ಆಗಿ ಪರಿಚಯಿಸಲೆಂದೇ ಸಿದ್ಧಗೊಂಡ ಸಿನಿಮಾವಿದು ಎಂಬುದು ಚಿತ್ರ ನೋಡುವಾಗ ಸಾಕಷ್ಟು ಕಡೆ ಭಾಸವಾಗುತ್ತದೆ. ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿರುವ ಕಿರೀಟಿಗೆ ದೊಡ್ಡ ಸ್ಟಾರ್‌ ನಟರಿಗೆ ನೀಡಿರುವ ಬಿಲ್ಡಪ್‌ ನೀಡಿರುವುದು ಸಿನಿಮಾವನ್ನು ಸಾಕಷ್ಟು ಕಡೆ ನಾಟಕೀಯ ಎನ್ನಿಸುವಂತೆ ಮಾಡುತ್ತದೆ.     

ಕಾಲೇಜಿನಲ್ಲಿ, ಉದ್ಯೋಗದಲ್ಲಿ ಜೂನಿಯರ್‌ ಆಗಿದ್ದ ನಾಯಕ ಅಭಿ, ಬುದ್ಧಿ ಬಳಸಿ ಎದುರಾಳಿಗಳನ್ನು ಮಣಿಸುವುದು ಚಿತ್ರದ ಒಂದೆಳೆ ಕಥೆ. ಹುಟ್ಟುತ್ತಲೇ ಅಮ್ಮನನ್ನು ಕಳೆದುಕೊಳ್ಳುವ ನಾಯಕ ಅಪ್ಪನ ಆಶ್ರಯದಲ್ಲೇ ಬೆಳೆಯುತ್ತಾನೆ. ಅಪ್ಪನ ಅತಿಯಾದ ಪ್ರೀತಿ ಮಗನಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಕಾಲೇಜಿನ ಸಮಯದಲ್ಲಿ ಮನೆಯಿಂದ, ಅಪ್ಪನಿಂದ ದೂರ ಉಳಿಯಲು ನಿರ್ಧರಿಸುತ್ತಾನೆ. ತಾನು ಮಾಡುವ ಎಲ್ಲ ಕೆಲಸದಲ್ಲಿಯೂ ತನ್ನ ಮೊದಲ ಅನುಭವ ನೆನಪಿನಲ್ಲಿ ಉಳಿಯುವಂತೆ ಇರಬೇಕು ಎಂಬುದು ಆತನ ಬಯಕೆ. ಅದಕ್ಕಾಗಿ ಆತ ಕಾಲೇಜಿನಲ್ಲಿ ಮಾಡುವ ಒಂದಷ್ಟು ಚೇಷ್ಟೆಗಳೇ ಚಿತ್ರದ ಮೊದಲಾರ್ಧ.

ಕಾಲೇಜು, ಹಾಡು, ಆ್ಯಕ್ಷನ್‌, ಗೆಳೆಯರ ಬಳಗ, ತಮಾಷೆಯೊಂದಿಗೆ ಮೊದಲಾರ್ಧ ಸಾಗುತ್ತದೆ. ದೇವಿಶ್ರೀ ಪ್ರಸಾದ್‌ ಸಂಗೀತ ಮತ್ತು ನೃತ್ಯ ಸಂಯೋಜನೆ ಚಿತ್ರದ ಹೈಲೈಟ್‌. ಚಿತ್ರದ ಎಲ್ಲ ನೃತ್ಯಗಳು ಸಾಕಷ್ಟು ಎನರ್ಜಿಯಿಂದ ಕೂಡಿವೆ. ತಾವೊಬ್ಬ ಉತ್ತಮ ನೃತ್ಯಗಾರ ಎಂಬುದನ್ನು ಕಿರೀಟಿ ಮೊದಲ ಯತ್ನದಲ್ಲಿಯೇ ಸಾಬೀತುಪಡಿಸಿದ್ದಾರೆ. ಜತೆಗೆ ಛಾಯಾಚಿತ್ರಗ್ರಾಹಕ ಸೇಂಥಿಲ್‌ ಕುಮಾರ್‌ ಪ್ರತಿ ದೃಶ್ಯವನ್ನು ವರ್ಣಮಯವಾಗಿಸಿದ್ದಾರೆ. ಈ ಪಯಣದಲ್ಲಿ ಅಭಿಗೆ ನಾಯಕಿ ಸಿಗುತ್ತಾಳೆ. ಅಲ್ಲಿಂದ ಸಿದ್ಧಸೂತ್ರದ ಕಥೆಗೆ ಪ್ರೇಮಕಥೆಯೂ ಸೇರಿಕೊಳ್ಳುತ್ತದೆ. ಇಲ್ಲಿ ನಡೆಯುವ ಹಾಡು, ಹೊಡೆದಾಟ ಯಾವುದಕ್ಕೂ ಲಾಜಿಕ್‌ ಇರುವುದಿಲ್ಲ. ಕಥೆಯಲ್ಲಿ ಗಟ್ಟಿತನವೇ ಇಲ್ಲದ ಕಾರಣ ‘ಇದೇ’ ಚಿತ್ರದ ಮೊದಲಾರ್ಧದ ಕಥೆ ಎನ್ನಲು ಸಾಧ್ಯವಿಲ್ಲ. ಅಭಿಯ ಕಾಲೇಜು ಮುಗಿದು ಆತನ ಕೆಲಸ ಮಾಡುವ ಕಚೇರಿಗೆ ಕಥೆ ವರ್ಗಾವಣೆಯಾಗುತ್ತದೆ. ಅಲ್ಲಿಂದ ಕಥೆ ಬೇರೆಯೇ ದಿಕ್ಕಿಗೆ ಹೊರಳುತ್ತದೆ.

ADVERTISEMENT

ಅಪ್ಪ–ಮಗನ ಸಂಬಂಧ, ಅಕ್ಕ–ತಮ್ಮನ ಬಾಂಧವ್ಯ, ದ್ವೇಷದೊಂದಿಗೆ ಚಿತ್ರದ ದ್ವಿತೀಯಾರ್ಧ ಪ್ರಾರಂಭವಾಗುತ್ತದೆ. ಕಚೇರಿ ರಾಜಕೀಯ, ಖಳನಾಯಕನೊಂದಿಗೆ ಹೊಡೆದಾಟ, ಜತೆಗೆ ಒಂದಷ್ಟು ಭಾವನಾತ್ಮಕ ಸನ್ನಿವೇಶಗಳು ಈ ಭಾಗದಲ್ಲಿವೆ. ಅಭಿಯ ಗೆಳೆಯರ ಬಳಗ ಅಲ್ಲಲ್ಲಿ ನಗಿಸುವ ಕೆಲಸ ಮಾಡುತ್ತದೆ. ಸಾಕಷ್ಟು ಕಡೆ ಕಥೆಗೆ ಅಗತ್ಯವೇ ಇಲ್ಲದ ಅದ್ದೂರಿತನವಿದೆ. ಕಥೆಗೆ ಪಂಚತಾರ ಹೊಟೇಲ್‌ನಂತೆ ಭಾಸವಾಗುವ ಐಷಾರಾಮಿ ಕಚೇರಿ ಬೇಕಿರಲಿಲ್ಲ. ಆ ಐಷಾರಾಮಿತನದಿಂದಾಗಿಯೇ ಅಲ್ಲಿ ನಡೆಯುವ ಸನ್ನಿವೇಶಗಳು ಜಾಳು ಎನ್ನಿಸುತ್ತವೆ. ಇಂಥ ಸಾಕಷ್ಟು ದೃಶ್ಯಗಳು ಚಿತ್ರದುದ್ದಕ್ಕೂ ಕಾಣಸಿಗುತ್ತವೆ.

ಕಿರೀಟಿ ನಟನೆಯಲ್ಲಿ ಪಳಗಬೇಕು. ವಿಶೇಷವಾಗಿ ಭಾವನಾತ್ಮಕ ದೃಶ್ಯಗಳಲ್ಲಿ ನಟನೆ ಗಟ್ಟಿಯಾಗಬೇಕಿತ್ತು. ಮಾಸ್‌ ದೃಶ್ಯಗಳಲ್ಲಿ ಆ ಸನ್ನಿವೇಶಕ್ಕೆ ತೀರ ಎಳೆಯ ಹುಡುಗ ಎನ್ನಿಸುತ್ತಾರೆ. ನಾಯಕನ ಅಪ್ಪನಾಗಿ ರವಿಚಂದ್ರನ್‌ ಜೀವಿಸಿದ್ದಾರೆ. ಶ್ರೀಲೀಲಾ ಮುದ್ದಾಗಿ ಕಾಣುತ್ತಾರೆ. ಆದರೆ ಅವರ ಪಾತ್ರವನ್ನು ಗ್ಲಾಮರ್‌ಗೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಅವರ ನಟನೆಗೆ ಹೆಚ್ಚು ಜಾಗ ಸಿಕ್ಕಿಲ್ಲ. ಕಚೇರಿಯಲ್ಲಿನ ಸಿಇಒ ಆಗಿ ಜೆನಿಲಿಯಾ ಖಡಕ್‌ ಆಗಿ ನಟಿಸಿದ್ದಾರೆ. ನಾಯಕನನ್ನು ಪರಿಚಯಿಸಲೆಂದೇ ಮಾಡಿದ ಈ ಚಿತ್ರದಲ್ಲಿ ನಿರ್ದೇಶಕರು ಅದಕ್ಕೆ ಸರಿಹೊಂದುವಂತೆ ಕಥೆ ಹೆಣೆದುಕೊಳ್ಳುವತ್ತ ಹೆಚ್ಚು ಗಮನವಹಿಸಬೇಕಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.