ADVERTISEMENT

‘ಜಸ್ಟ್‌ ಪಾಸ್‌’ ಸಿನಿಮಾ ವಿಮರ್ಶೆ: ಸಿನಿಮಾದಲ್ಲಿ ಕಥೆಯೂ ಜಸ್ಟ್‌ ಪಾಸ್‌

ಅಭಿಲಾಷ್ ಪಿ.ಎಸ್‌.
Published 9 ಫೆಬ್ರುವರಿ 2024, 12:55 IST
Last Updated 9 ಫೆಬ್ರುವರಿ 2024, 12:55 IST
<div class="paragraphs"><p>ಜಸ್ಟ್‌ ಪಾಸ್‌ ಸಿನಿಮಾ ಪೋಸ್ಟರ್</p></div>

ಜಸ್ಟ್‌ ಪಾಸ್‌ ಸಿನಿಮಾ ಪೋಸ್ಟರ್

   

ಸಿನಿಮಾ: ಜಸ್ಟ್‌ ಪಾಸ್‌(ಕನ್ನಡ)

ನಿರ್ದೇಶನ: ಕೆ.ಎಂ.ರಘು

ADVERTISEMENT

ನಿರ್ಮಾಣ: ಕೆ.ವಿ.ಶಶಿಧರ್‌ 

ತಾರಾಗಣ: ಶ್ರೀ, ಪ್ರಣತಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್‌ ಮತ್ತಿತರರು 

ಗಟ್ಟಿಯಾದ ಕಥೆಯಿಲ್ಲದ ಕಮರ್ಷಿಯಲ್‌ ಸಿನಿಮಾಗಳು ತೆರೆಗೆ ಬಂದು ಮುಗ್ಗರಿಸಿದ ಹಲವು ಉದಾಹರಣೆಗಳಿವೆ. ಇದಕ್ಕೆ ಸೇರ್ಪಡೆ ‘ಜಸ್ಟ್‌ ಪಾಸ್‌’. ‘ದೊಡ್ಡಹಟ್ಟಿ ಬೋರೇಗೌಡ’ದಂಥ ಅಪ್ಪಟ ಹಳ್ಳಿ ಸೊಗಡಿನ ಉತ್ತಮವಾದ ಸಿನಿಮಾ ನೀಡಿದ್ದ ನಿರ್ದೇಶಕ ಕೆ.ಎಂ.ರಘು, ‘ಸಿದ್ಧಸೂತ್ರದ ಕಮರ್ಷಿಯಲ್‌ ಸಿನಿಮಾ’ ಎಂಬುವುದರ ಹಿಂದೆ ಬಿದ್ದು ಎಡವಿದ್ದಾರೆ. ಹೀಗಾಗಿ ಸಿನಿಮಾ ಕಥೆಯೂ ಜಸ್ಟ್‌ ಪಾಸ್‌ ಆಗಿದೆಯಷ್ಟೇ. 

ನಿವೃತ್ತ ಪ್ರಾಧ್ಯಾಪಕ ದಳವಾಯಿ(ರಂಗಾಯಣ ರಘು) ಎನ್ನುವವರು ‘ಜಸ್ಟ್‌ ಪಾಸ್‌’ ಆದ ವಿದ್ಯಾರ್ಥಿಗಳಿಗೆಂದೇ ತೆರೆದ ಕೆ.ವಿ. ಡಿಗ್ರಿ ಕಾಲೇಜಿನಿಂದ ಈ ಸಿನಿಮಾದ ಕಥೆ ಆರಂಭವಾಗುತ್ತದೆ. ನಿರ್ದೇಶಕರು ಆಯ್ದುಕೊಂಡ ಈ ಒನ್‌ಲೈನ್‌ ಆರಂಭದಲ್ಲಿ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಆದರೆ ಈ ವಿಷಯವಿಟ್ಟುಕೊಂಡು ಚಿತ್ರಕಥೆಯನ್ನು ಮನರಂಜನಾತ್ಮಕವಾಗಿ ಹೆಣೆಯುವಲ್ಲಿ ವಿಫಲವಾಗಿದ್ದಾರೆ. ಸಂಭಾಷಣೆಗಳು, ಘಟನಾವಳಿಗಳು ಸಪ್ಪೆಯಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳ ತರಲೆ, ತಮಾಷೆಗಳು ನಗು ತರಿಸುವುದಿಲ್ಲ. ಮೊದಲಾರ್ಧದಲ್ಲಿ ಹಾಡುಗಳು, ಕಾರಣವಿಲ್ಲದೆ ನಡೆಯುವ ಫೈಟ್ಸ್‌, ಪೋಲಿ ಜೋಕ್ಸ್‌ ಹೀಗೆ ಕಮರ್ಷಿಯಲ್‌ ಸಿನಿಮಾದ ಸಿದ್ಧಸೂತ್ರಗಳನ್ನು ತುರುಕಲಾಗಿದೆ. ಮಧ್ಯಂತರ ಸಮೀಪಿಸುತ್ತಿದ್ದಂತೇ ಸಂಭವಿಸುವ ಕಥೆಯಲ್ಲಿನ ತಿರುವು ಸಿನಿಮಾ ವೇಗ ಹೆಚ್ಚಿಸಬಹುದು ಎಂಬ ನಿರೀಕ್ಷೆ ಹುಟ್ಟಿಸಿದರೂ, ಅದೂ ಹುಸಿಯಾಗುತ್ತದೆ.

ಒಂದೆರಡು ಸಂದೇಶಗಳನ್ನು ಹೇಳುವ ಉದ್ದೇಶದಿಂದ ನಿರ್ದೇಶಕರು ಹೆಣೆದಿರುವ ಈ ಕಥೆ ಜಾಳುಜಾಳಾಗಿದೆ. ಗಟ್ಟಿಯಾದ ಕಥೆಯ ಅನುಪಸ್ಥಿತಿಯು ಸೂತ್ರ ಕಿತ್ತ ಗಾಳಿಪಟದಂತೆ ಸಿನಿಮಾವನ್ನು ಕೊಂಡೊಯ್ದಿದೆ. ಹೀಗಾಗಿ ಕಲಾವಿದರಿಗೆ ನಟನೆಗೂ ಇಲ್ಲಿ ಹೆಚ್ಚಿನ ಅವಕಾಶ ದೊರೆತಿಲ್ಲ. ಕನಸು ಹೊತ್ತ ಪ್ರಾಧ್ಯಾಪಕನ ಪಾತ್ರವನ್ನು ರಂಗಾಯಣ ರಘು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ‘ಗಜೇಂದ್ರ’ನಾಗಿ ಸಾಧುಕೋಕಿಲ ಪಾತ್ರವೂ ನಗಿಸುವಲ್ಲಿ ವಿಫಲವಾಗುತ್ತದೆ. ಸಂಭಾಷಣೆಗಳಲ್ಲಿ ಸತ್ವವಿಲ್ಲವೆನ್ನುವುದಕ್ಕೆ ಇದು ಸಾಕ್ಷಿ. ಸಿನಿಮಾದಲ್ಲಿ ಹಾಡುಗಳ ಸಾಹಿತ್ಯ, ಸಂಗೀತ, ಛಾಯಾಚಿತ್ರಗ್ರಹಣವೂ ‘ಜಸ್ಟ್‌ ಪಾಸ್‌’ ಆಗಿದೆಯಷ್ಟೇ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.