ADVERTISEMENT

‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಸಿನಿಮಾ ವಿಮರ್ಶೆ: ಮೊಬೈಲೇ... ದಾಸನ ಮಾಡದಿರೆನ್ನ

ಶರತ್‌ ಹೆಗ್ಡೆ
Published 13 ಮೇ 2022, 13:02 IST
Last Updated 13 ಮೇ 2022, 13:02 IST
ಸೃಜನ್‌ ಲೋಕೇಶ್‌ ಮತ್ತು ಮೇಘನಾ ರಾಜ್
ಸೃಜನ್‌ ಲೋಕೇಶ್‌ ಮತ್ತು ಮೇಘನಾ ರಾಜ್   

ಚಿತ್ರ: ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ (ಕನ್ನಡ)

ನಿರ್ದೇಶನ: ಮಧುಚಂದ್ರ

ನಿರ್ಮಾಣ: ಆಕಾಶಬುಟ್ಟಿ ಸಿನಿಮಾಸ್‌

ADVERTISEMENT

ತಾರಾಗಣ: ಸೃಜನ್‌ ಲೋಕೇಶ್‌, ಮೇಘನಾ ರಾಜ್‌, ಗಿರಿಜಾ ಲೋಕೇಶ್‌, ದತ್ತಾತ್ರೇಯ, ಸುಂದರರಾಜ್‌

ಸಂಗೀತ: ಸುಮಂತ್‌, ಛಾಯಾಗ್ರಹಣ: ರವೀಂದ್ರನಾತ್‌ ಟಿ.

ಮಕ್ಕಳನ್ನು ತಿದ್ದುವ ಮುನ್ನ ಅಪ್ಪ–ಅಮ್ಮ ಸರಿಯಾಗಬೇಕು. ಮೊಬೈಲ್‌ನ ಭ್ರಮಾಲೋಕ ಮಾಯಾ ಮೋಹವಾಗುವ ಮೊದಲು ವಾಸ್ತವದಲ್ಲಿ ಬಾಳಬೇಕು ಎನ್ನುವುದನ್ನು ಪರಿಣಾಮಕಾರಿಯಾಗಿ ಹೇಳಿದೆ ಈ ಚಿತ್ರ.

ಹೆತ್ತವರು, ಮಕ್ಕಳು, ಶಿಕ್ಷಕರು ನೋಡಲೇಬೇಕಾದ, ತಂತ್ರಜ್ಞಾನ ಮಾರುಕಟ್ಟೆಯವವರು ನೈತಿಕ ದೃಷ್ಟಿಯಲ್ಲಿ ಆಲೋಚಿಸುವಂತೆ ಮಾಡುವ ಚಿತ್ರ. ‘ಮೊಬೈಲ್‌ ಬಿಡಿ; ಮೈದಾನಕ್ಕೆ ಬನ್ನಿ’ ಅನ್ನುವುದೇ ಸಂದೇಶ.

ಕಂಡಕಂಡಲ್ಲಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಲೇ ಇರುವ ಮಮ್ಮಿ (ಮೇಘನಾ ರಾಜ್‌) ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌... ಅದೂ ಇದೂ ಗೂಗಲಿಸುತ್ತಿರುವ ಅಪ್ಪ (ಸೃಜನ್‌ ಲೋಕೇಶ್‌) ಇವರಿಬ್ಬರನ್ನು ಅನುಸರಿಸುತ್ತಮೊಬೈಲ್‌ ಆಟದಲ್ಲೇ ತಲ್ಲೀನವಾಗುವ ಮಕ್ಕಳು. ಡೇಟಾ ಭಿಕ್ಷುಕರಾಗುವುದು, ಶಾಲೆಯಲ್ಲೇ ಡೇಟಾ ಮಾರುವ, ಮೊಬೈಲ್‌ ಆಟದ ಚಟಕ್ಕೆ ಬೀಳುವ ಪುಟ್ಟ ಮಕ್ಕಳು. ಅವರನ್ನು ಚಟದಿಂದ ಹೊರತರಲಾಗದೇ ಒದ್ದಾಡುವ ಅಪ್ಪ–ಅಮ್ಮ. ಈ ಚಟ ತಾರಕಕ್ಕೇರಿ ಬ್ಲೂವೇಲ್‌ ಆಟಕ್ಕೆ ಬಲಿಯಾಗುವ ಬಾಲಕ ಹೀಗೆ ಎಲ್ಲವೂ ವಾಸ್ತವದ ಚಿತ್ರಗಳೇ.

ಮೊಬೈಲ್‌ ಕಂಪನಿಯ ಉದ್ಯೋಗಿ ಅಪ್ಪ ಮೊಬೈಲ್‌ ಬಳಕೆಯ ಜಾಗೃತಿ ಮೂಡಿಸುವ ಜಾಹೀರಾತು ನಿರ್ಮಿಸಿದ ಕಾರಣಕ್ಕೇ ಕೆಲಸ ಕಳೆದುಕೊಳ್ಳುತ್ತಾನೆ. ಹಾಗೆ ನೋಡಿದರೆ ಆತನೂ ತಂತ್ರಜ್ಞಾನ – ಮಾರುಕಟ್ಟೆ ಮಾಫಿಯಾದ ಬಲಿಪಶು. ಮೊಬೈಲ್‌ ಚಟ ಬಿಡಿಸಲು ಬರುವ ಅಜ್ಜಿ (ಗಿರಿಜಾ ಲೋಕೇಶ್‌) ಟಿ.ವಿ ಧಾರಾವಾಹಿಗಳಿಗೆ ದಾಸಿಯಾಗಿ ಮೊಮ್ಮಕ್ಕಳನ್ನು ಮೊಬೈಲ್‌ ಜೊತೆಗೇ ಬಿಟ್ಟುಬಿಡುವುದು ಇನ್ನೊಂದು ಹಸಿ ವಾಸ್ತವ.

ಮೊದಲಾರ್ಧ ತಮಾಷೆಯಾಗಿ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಸಮಸ್ಯೆಯ ಗಾಂಭೀರ್ಯ, ತೀವ್ರತೆಯನ್ನು ತೋರಿಸಿದ್ದಾರೆ.

ಮೊಬೈಲ್‌ ಚಟ ನಿವಾರಣಾ ಕೇಂದ್ರಕ್ಕೆ ದಾಖಲಾಗುವ ಪೋಷಕರು. ಅಲ್ಲಿಯೂ ಮೊಬೈಲ್‌ ಬಿಟ್ಟಿರಲಾರದ ಚಡಪಡಿಕೆ... ಒಟ್ಟಿನಲ್ಲಿ ನಿಮ್ಹಾನ್ಸ್‌ನಲ್ಲಿ ಕಾಣುವ ಪ್ರಕರಣಗಳನ್ನು ಇಲ್ಲಿ ಪ್ರಶಾಂತ ವಾತಾವರಣದಲ್ಲಿ ಸೌಮ್ಯವಾಗಿ ತೋರಿಸಿದ್ದಾರೆ ನಿರ್ದೇಶಕರು.

ಮೊಬೈಲ್‌ ಚಟ ಬಿಡಿಸುವ ಕೇಂದ್ರದ ಮುಖ್ಯಸ್ಥ (ಅಚ್ಯುತ್‌ ಕುಮಾರ್) ಮೊದಲು ಮೊಬೈಲ್‌ ಅಪ್ಲಿಕೇಷನ್‌ ತಯಾರಿಸುತ್ತಿದ್ದವನೇ. ತನ್ನ ಪತ್ನಿಯ ಹೊಟ್ಟೆಯೊಳಗಿನ ಭ್ರೂಣ ಮೊಬೈಲ್‌ ವಿಕಿರಣದಿಂದಲೇ ಮೃತಪಟ್ಟಿದ್ದು, ಹತಾಶೆಯಿಂದ ಅವಳು ಆತ್ಮಹತ್ಯೆ ಮಾಡಿಕೊಂಡಳು ಅನ್ನುವಲ್ಲಿ ತಂತ್ರಜ್ಞಾನ ಮನುಷ್ಯನ ಜೀವವನ್ನು ಬಲಿ ತೆಗೆದುಕೊಳ್ಳುವಮಟ್ಟಿಗೆ ಬೆಳೆದದ್ದು ಆತಂಕ ಮೂಡಿಸುತ್ತದೆ. ಅಚ್ಯುತ್‌ ಅವರ ಬೇರೆಯೇ ಗಾಂಭೀರ್ಯವನ್ನು ಇಲ್ಲಿ ಕಾಣಬಹುದು. 80 ಪೋಷಕರು ಈ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿರುವುದು ಹೊಸ ಪ್ರಯತ್ನ.

ಈ ಮಧ್ಯೆ ಆಪ್ತ ಸಮಾಲೋಚಕನ (ಸುಂದರರಾಜ್‌) ಪಾತ್ರ ತುರುಕಿದಂತಿದೆ. ಜೋಕರ್‌ನಂತೆ ತೋರಿಸಿರುವುದು ಪಾತ್ರದ ಗಾಂಭಿರ್ಯವನ್ನು ಸಡಿಲಗೊಳಿಸಿದೆ.

ಸೃಜನ್‌– ಮೇಘನಾರಾಜ್‌, ದತ್ತಣ್ಣ, ಗಿರಿಜಾ ಲೋಕೇಶ್‌ ಸುಧಾ ಬರಗೂರು ಸಹಿತ ಎಲ್ಲರ ಅಭಿನಯ ಸ್ಪರ್ಧಾತ್ಮಕವಾಗಿಯೇ ಇದೆ. ಸಂಗೀತವೂ ಹದವಾಗಿದೆ. ಒಟ್ಟಿನಲ್ಲಿ ಮೊಬೈಲ್‌ ದಾಸರಾಗಿರುವ ಎಲ್ಲರೂ ಒಮ್ಮೆ ನೋಡಬೇಕಾದ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.