
ಕಿರುತೆರೆಯಲ್ಲಿ ಹಾಸ್ಯ ಪ್ರಧಾನ ಶೋ ಮೂಲಕ ಗುರುತಿಸಿಕೊಂಡಿರುವ ನಟ ಸೃಜನ್ ಲೋಕೇಶ್ ಈ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ. ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಬಳಿಕ ಬ್ಯಾಂಕ್ ದರೋಡೆ ಕಾನ್ಸೆಪ್ಟ್ ಇಟ್ಟುಕೊಂಡು ಈ ವಾರ ಬಂದಿರುವ ಎರಡನೇ ಸಿನಿಮಾ ಇದು.
‘ಲಕ್ಕಿ’ (ಸೃಜನ್ ಲೋಕೇಶ್) ಹುಟ್ಟಿದಾಗಿನಿಂದಲೇ ‘ಅನ್‌ಲಕ್ಕಿ’ ಎನ್ನುವ ಹಣೆಪಟ್ಟಿಯನ್ನು ಹೊತ್ತು ಬಂದಾತ. ಜನಿಸಿದ ದಿನವೇ ಆತನ ಅಪ್ಪನ ಫ್ಯಾಕ್ಟರಿಗೆ ಬೆಂಕಿ ಬೀಳುತ್ತದೆ, ಶಾಲೆಗೆ ಕಾಲಿಟ್ಟರೆ ಕಟ್ಟಡ ಕುಸಿದು ಬೀಳುತ್ತದೆ, ಅಂಗಡಿ ತೆರೆದರೆ ಲಾಕ್‌ಡೌನ್ ಆಗುತ್ತದೆ... ಹೀಗೆ ಸಾಲು ಸಾಲು ಕಾಕತಾಳೀಯ ಘಟನೆಗಳು ಆತ ಕಾಲಿಟ್ಟಲ್ಲೆಲ್ಲಾ ಹಿಂಬಾಲಿಸುತ್ತವೆ. ಇದರಿಂದ ಬೇಸತ್ತ ‘ಲಕ್ಕಿ’ ಸ್ಮಶಾನಕ್ಕೆ ಬಂದು ಆತ್ಮಹತ್ಯೆಗೆ ಯತ್ನಿಸುತ್ತಾನೆ. ಎಷ್ಟೇ ಪ್ರಯತ್ನಿಸಿದರೂ ಸಾವಿನ ಕದ ತೆರೆದುಕೊಳ್ಳುವುದಿಲ್ಲ. ಇಲ್ಲಿಂದ ಕಥೆ ಆರಂಭವಾಗುತ್ತದೆ, ಮುಕ್ತಿ ಸಿಗದ ಆತ್ಮಗಳು ‘ಲಕ್ಕಿ’ ಜೊತೆಯಾಗುತ್ತವೆ.
ನಿರ್ದೇಶಿಸುತ್ತಿರುವ ಮೊದಲ ಸಿನಿಮಾಗೆ ಹಾರರ್ ಜಾನರ್ ಆಯ್ಕೆ ಮಾಡಿಕೊಂಡಿದ್ದರೂ ಇಲ್ಲಿ ಹೆದರಿಸುವ ದೆವ್ವಗಳಿಲ್ಲ. ಮುಕ್ತಿ ಸಿಗದ ಆತ್ಮಗಳನ್ನಿಟ್ಟುಕೊಂಡು ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿರುವ ಸೃಜನ್ ಅವರು ಸಿನಿಮಾ ಮೇಕಿಂಗ್ ಮೇಲೆ ಇನ್ನೊಂದಿಷ್ಟು ಗಮನಹರಿಸಬಹುದಿತ್ತು. ಸಿನಿಮಾದ ಮೊದಲಾರ್ಧದ ಕಥೆ ಆರಂಭದಲ್ಲೇ ಊಹೆಗೆ ಸಿಕ್ಕುತ್ತದೆ.
ಬರವಣಿಗೆಯು ಕಿರುತೆರೆಯ ಹಾಸ್ಯ ಪ್ರದರ್ಶನಕ್ಕೆ ಬರೆದಂತಿದೆ. ಮೊದಲಾರ್ಧದ ಕಥೆ ಹಾಗೂ ಹಾಸ್ಯ ದೃಶ್ಯಗಳಲ್ಲಿ ಜೀವಂತಿಕೆಯಿಲ್ಲ. ದ್ವಿತೀಯಾರ್ಧದಲ್ಲಿ ರವಿಶಂಕರ್ ಗೌಡ ಹಾಗೂ ಶೋಭರಾಜ್ ನಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ತಮ್ಮ ಹಾವಭಾವದಿಂದಲೇ ಇವರಿಬ್ಬರೂ ಕೊಂಚ ನಗುವಿನೌತಣ ಬಡಿಸಿದ್ದಾರೆ. ತಬಲ ನಾಣಿ, ಗಿರೀಶ್ ಶಿವಣ್ಣ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರಕಥೆಯನ್ನು ಇನ್ನಷ್ಟು ಬಿಗಿಯಾಗಿಸುವ ಅವಕಾಶಗಳು ಇದ್ದವು. ನಿರೂಪಣೆಯಲ್ಲಿ ಹೊಸತನವಿಲ್ಲ. ನೆನಪಿನಲ್ಲಿ ಉಳಿಯುವಂಥ ಹಾಡುಗಳಿಲ್ಲ. ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಪುತ್ರ ಸುಕೃತ್ ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿರುವುದು ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.