
ಹುಡುಗ–ಹುಡುಗಿಯ ಪ್ರೀತಿ, ಪ್ರೇಮ ಪ್ರಾರಂಭದ ದಿನಗಳಲ್ಲಿ ಚೆನ್ನಾಗಿರುತ್ತದೆ. ಪ್ರೇಮ ಪಯಣ ಪ್ರಾರಂಭವಾಗಿ ಮೂರು–ನಾಲ್ಕು ವರ್ಷಗಳ ಬಳಿಕ ಅವರ ಸಂಬಂಧ ಹೇಗಿರುತ್ತದೆ ಎಂಬುದೇ ಲವ್ ಒಟಿಪಿ ಚಿತ್ರದ ಒಟ್ಟಾರೆ ಕಥೆ. ಅದನ್ನು ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಸರಳವಾಗಿ, ಹಾಸ್ಯಮಯವಾಗಿ ಹೇಳಿಕೊಂಡು ಹೋಗಿದ್ದಾರೆ ನಟ, ನಿರ್ದೇಶಕ ಅನೀಶ್ ತೇಜೇಶ್ವರ್. ಅಂದಹಾಗೆ ಇಲ್ಲಿ ಒಟಿಪಿ ಎಂದರೆ ಓವರ್ ಟಾರ್ಚರ್ ಪ್ರೆಷರ್. ಪ್ರೀತಿಯ ಇನ್ನೊಂದು ಮುಖವನ್ನು ಕಟ್ಟಿಕೊಡುವ ಯತ್ನವನ್ನು ನಿರ್ದೇಶಕ ಮಾಡಿದ್ದಾರೆ.
ಕ್ರಿಕೆಟರ್ ಆಗಬೇಕೆಂದು ಕನಸು ಕಾಣುವ ನಾಯಕ ನಟ ಅಕ್ಷಯ್. ಕಾಲೇಜಿನಲ್ಲಿ ಆತನಿಗೆ ಸನಾ ಪರಿಚಯವಾಗುತ್ತಾಳೆ. ಆತನ ತಂದೆ ಇನ್‌ಸ್ಪೆಕ್ಟರ್ ಶಂಕರ್‌ಗೆ ಮಗ ಪ್ರೀತಿಯ ಬಲೆಯಲ್ಲಿ ಬೀಳುವುದು ಸ್ವಲ್ಪವೂ ಇಷ್ಟವಿಲ್ಲ. ಹೀಗಾಗಿ ಆಗಾಗ ಮಗನ ಮೊಬೈಲ್ ಪರೀಕ್ಷಿಸುತ್ತ ಇರುತ್ತಾರೆ. ಮಗನಿಗೆ ಅಪ್ಪನ ಮೇಲೆ ವಿಪರೀತ ಭಯ. ಇಷ್ಟಾಗಿಯೂ ಸನಾ ಜತೆಗಿನ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಅವರಿಬ್ಬರ ಪ್ರೇಮಕಥೆಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಎಲ್ಲೆಲ್ಲೋ ಸುತ್ತಿ ಎಲ್ಲಿಗೋ ಬರುವ, ಲಾಜಿಕ್‌ಗಳಿಲ್ಲದ ಕಥೆ ಪ್ರಾರಂಭದಲ್ಲಿ ತಾಳ್ಮೆ ಪರೀಕ್ಷಿಸುತ್ತದೆ.
ಅಕ್ಷಯ್ ಮತ್ತು ಸನಾಳ ಪ್ರೀತಿ ಗಾಢವಾದಂತೆ ಸನಾ ಟಾರ್ಚರ್, ಅನಗತ್ಯ ಅನುಮಾನ ಕೂಡ ಹೆಚ್ಚಾಗುತ್ತದೆ. ಕೇವಲ ಸ್ನೇಹ ಎನ್ನುತ್ತಲೇ ಸನಾಳ ಪ್ರೀತಿಯನ್ನು ಒಪ್ಪಿಕೊಂಡ ಅಕ್ಷಯ್‌ಗೆ ಸನಾ ತಲೆನೋವಾಗಿ ಕಾಡಲು ಪ್ರಾರಂಭಿಸುತ್ತಾಳೆ. ಆಗ ಇಬ್ಬರ ನಡುವೆ ಪ್ರವೇಶಿಸುವುದು ಮತ್ತೋರ್ವ ನಾಯಕಿ. ಇಬ್ಬರ ಮುದ್ದಿನ ಹುಡುಗ ಅಕ್ಷಯ್ ಯಾರಿಗೆ ಒಲಿಯುತ್ತಾನೆ? ನಕ್ಷತ್ರ ಕಥೆ ಏನು ಎಂಬುದೇ ದ್ವಿತೀಯಾರ್ಧ.
ನಕ್ಷತ್ರ ಪಾತ್ರ ಆಗಮನದ ಬಳಿಕ ಕಥೆಯ ವೇಗ ಹೆಚ್ಚುತ್ತದೆ. ಅಕ್ಷಯ್ ಆಗಿ ಅನೀಶ್ ತೇಜೇಶ್ವರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರೊಮ್ಯಾಂಟಿಕ್ ದೃಶ್ಯಗಳಲ್ಲಿ ಇನ್ನೂ ಸಹಜವೆನಿಸುವಂತೆ ಅಭಿನಯಿಸುವ ಅವಕಾಶವಿತ್ತು. ಸನಾ ಆಗಿ ಸ್ವರೂಪಿಣಿ ನಟನೆಯಲ್ಲಿ ಇನ್ನೊಂಚೂರು ಪಳಗಬೇಕಿತ್ತು. ನಕ್ಷತ್ರಳಾಗಿ ಜಾಹ್ನವಿಕಾ ಕಲಕೇರಿ ಕಣ್ಣುಗಳಲ್ಲಿಯೇ ನಟಿಸಿದ್ದಾರೆ. ಅಕ್ಷಯ್ ಗೆಳೆಯ ವರುಣ್ ಆಗಿ ನಾಟ್ಯ ರಂಗ ಗಮನ ಸೆಳೆಯುತ್ತಾರೆ. ಶಂಕರ್ ಆಗಿ ರಾಜೀವ ಕನಕಾಲ ಇಷ್ಟವಾಗುತ್ತಾರೆ.
ಇಷ್ಟಾಗಿಯೂ ಸಿನಿಮಾ ಕಾಡುವುದಿಲ್ಲ. ಕಥೆಯಲ್ಲಿ ಪ್ರೀತಿಯ ಗಾಢತೆ, ಪಕ್ವತೆ ಕಾಣಿಸುವುದಿಲ್ಲ. ಗಟ್ಟಿಯಾದ ಪ್ರೀತಿಗೆ ಅಂಟಿಕೊಳ್ಳಲು ಒಪ್ಪದ ನಾಯಕ ಹುಡುಗಿಯರ ಬದುಕಿನೊಂದಿಗೆ ಚೆಲ್ಲಾಟವಾಡುವ ಖಳನಾಯಕನಂತೆ ಭಾಸವಾಗುತ್ತಾನೆ. ಕಥೆಯಲ್ಲಿ ಬರುವ ಬಹಳಷ್ಟು ಹಾಸ್ಯಮಯ ಸನ್ನಿವೇಶಗಳು ಹಳತು ಅನ್ನಿಸುತ್ತವೆ. ಒಂದೆರಡು ಹಾಡುಗಳು ಸೊಗಸಾಗಿವೆ. ಹಿನ್ನೆಲೆ ಸಂಗೀತ ಇಡೀ ಚಿತ್ರದ ದೊಡ್ಡ ಶಕ್ತಿ. ಛಾಯಾಚಿತ್ರಗ್ರಹಣದಲ್ಲಿಯೂ ಹೊಸತನವೇನಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.