2024ರಲ್ಲಿ ತೆರೆಕಂಡಿದ್ದ ‘ಹನುಮಾನ್’ ಚಿತ್ರದ ಮೂಲಕ ಖ್ಯಾತಿ ಪಡೆದ ನಟ ತೇಜ್ ಸಜ್ಜಾ ಮುಖ್ಯಭೂಮಿಕೆಯಲ್ಲಿರುವ ಸಿನಿಮಾವಿದು. ‘ಮಿರಾಯ್’ ಪೌರಾಣಿಕ, ಐತಿಹಾಸಿಕ ಹಾಗೂ ಪ್ರಸ್ತುತ ಕಾಲದ ಕಾಲ್ಪನಿಕ ಕಥೆಯ ಸಮ್ಮಿಶ್ರಣ. ‘ಹನುಮಾನ್’ನಲ್ಲಿ ಸೂಪರ್ ಹೀರೊ ಆಗಿದ್ದ ತೇಜ್ ‘ಮಿರಾಯ್’ನಲ್ಲಿ ಸೂಪರ್ ಯೋಧನಾಗಿದ್ದಾರೆ. ಉತ್ಕೃಷ್ಟವಾದ ಗ್ರಾಫಿಕ್ಸ್ ದೃಶ್ಯಗಳಿಂದಾಗಿ ಈ ಸಿನಿಮಾ ಹೊಸ ಲೋಕ ತೆರೆದಿಟ್ಟಿದೆ.
ಕಳಿಂಗ ಯುದ್ಧದ ಬಳಿಕ ಸಾಮ್ರಾಟ ಅಶೋಕ ತನ್ನಲ್ಲಿರುವ ದೈವಿಕ ಶಕ್ತಿಗೆ ಒಂಬತ್ತು ಗ್ರಂಥಗಳ ರೂಪ ನೀಡುತ್ತಾನೆ. ಈ ಗ್ರಂಥಗಳು ನಾನಾ ತಂತ್ರ ವಿದ್ಯೆಗಳ ಜೊತೆಗೆ ಮನುಷ್ಯನಿಗೆ ದೇವರ ಶಕ್ತಿ ನೀಡುವ ಸಾಮರ್ಥ್ಯ ಹೊಂದಿರುವವು. ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ಒಂಬತ್ತು ಯೋಧರಿಗೆ ಹಸ್ತಾಂತರಿಸುತ್ತಾನೆ.
ಈ ಪೈಕಿ ಅಮರ ಗ್ರಂಥವು ಪ್ರಸ್ತುತ ಅಂಬಿಕಾ(ಶ್ರಿಯಾ ಶರಣ್) ಎಂಬಾಕೆಯ ರಕ್ಷಣೆಯಲ್ಲಿರುತ್ತದೆ. ಎಲ್ಲಾ ಗ್ರಂಥಗಳನ್ನು ಪಡೆಯಲು ಮಾಂತ್ರಿಕ ವಿದ್ಯೆಯಲ್ಲಿ ಪರಿಣತಿ ಹೊಂದಿರುವ ಮಹಾಭೀರ್ ಲಾಮಾ(ಮಂಚು ಮನೋಜ್) ಮುಂದಾಗುತ್ತಾನೆ. ಈ ಭವಿಷ್ಯವನ್ನು ತನ್ನ ಶಕ್ತಿಯಿಂದಲೇ ಕಂಡ ಅಂಬಿಕಾ, ಲಾಮಾನನ್ನು ತಡೆಯಲು ತನ್ನ ಮಗುವನ್ನೇ ದೇವರಿಗೆ ಅರ್ಪಿಸುತ್ತಾಳೆ. ಹೆತ್ತ ಮಗುವನ್ನು ವಾರಾಣಸಿಯಲ್ಲಿ ಶಿವಲಿಂಗದೆದುರಿಗೆ ಇರಿಸಿ ತೆರಳುತ್ತಾಳೆ. ಈ ಮಗುವೇ ವೇದ ಪ್ರಜಾಪತಿಯಾಗಿ(ತೇಜ್ ಸಜ್ಜಾ) ಬೆಳೆಯುತ್ತದೆ. ಈತನ ಕಥೆಯೇ ‘ಮಿರಾಯ್’.
ಪ್ರೇಕ್ಷಕರಿಗೆ ವಿಷ್ಯುವಲ್ ಟ್ರೀಟ್ ನೀಡುವ ಎಲ್ಲಾ ಅಂಶಗಳು ಸಿನಿಮಾದುದ್ದಕ್ಕೂ ಇವೆ. ಪೌರಾಣಿಕ ಹಾಗೂ ಐತಿಹಾಸಿಕ ಕಥೆಗಳನ್ನು ಮಿಶ್ರಣ ಮಾಡಿ ಅವುಗಳಿಗೆ ಕಾಲ್ಪನಿಕ ಕಥೆಯ ಸ್ಪರ್ಶ ನೀಡಿ ಸಿನಿಮಾ ಕಥೆ ಹೆಣೆದಿರುವ ನಿರ್ದೇಶಕರ ಯೋಚನೆ ಬಹಳ ಭಿನ್ನವಾದದ್ದು. ಸಿನಿಮಾದ ಮೊದಲಾರ್ಧ ಕುತೂಹಲಕಾರಿಯಾಗಿದ್ದು, ಗ್ರಾಫಿಕ್ಸ್ ಮೂಲಕ ಕಥೆಗೆ ನಿರ್ದೇಶಕರು ಜೀವ ತುಂಬಿದ್ದಾರೆ. ಮಧ್ಯಂತರದಲ್ಲಿ ಶ್ರೀರಾಮನ ಕೋದಂಡದ ರಕ್ಷಣೆ ಮಾಡುತ್ತಿರುವ ಸಂಪಾತಿಯ ಜೊತೆ ವೇದನ ಮುಖಾಮುಖಿ ಮೈನವಿರೇಳಿಸುತ್ತದೆ. ದ್ವಿತೀಯಾರ್ಧದಲ್ಲಿ ಸಿನಿಮಾ ಕೊಂಚ ನಿಧಾನವಾಗುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಶ್ರೀರಾಮನ ದೃಶ್ಯಗಳು ಚಿತ್ರಕಥೆಗೆ ಹೊಸ ತಿರುವನ್ನೇ ನೀಡಿ ವೇಗ ಹೆಚ್ಚಿಸುತ್ತವೆ. ಮಧ್ಯಂತರದ ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳು ಕಣ್ಣಿಗೆ ಹಬ್ಬ. ಭರ್ಜರಿ ಆ್ಯಕ್ಷನ್ ದೃಶ್ಯಗಳೂ ಸಿನಿಮಾದುದ್ದಕ್ಕೂ ಇವೆ. ಖಳನಾಯಕನ ಹಿನ್ನೆಲೆಯ ಕಥೆಯನ್ನು ನಿರ್ದೇಶಕರು ಸಮರ್ಪಕವಾಗಿ ತೆರೆಗೆ ತಂದಿದ್ದಾರೆ.
ಕಥೆಯ ಮಾದರಿಯ ಕಾರಣದಿಂದ ‘ಹನುಮಾನ್’ನಂತೆಯೇ ‘ಮಿರಾಯ್’ ಭಾಸವಾಗುವುದು ಸಹಜ. ‘ಹನುಮಾನ್’ನಲ್ಲಿ ಹನುಮಂತನ ದೃಶ್ಯಗಳು ಸೆಳೆದಂತೆ, ‘ಮಿರಾಯ್’ನಲ್ಲಿ ಶ್ರೀರಾಮನ ದೃಶ್ಯಗಳು ವೀಕ್ಷಣೆಗೆ ಹುರುಪು ನೀಡುತ್ತವೆ. ನಟನೆಯಲ್ಲಿ ತೇಜ್ ಸಜ್ಜಾ, ಶ್ರಿಯಾ ಶರಣ್, ಮಂಚು ಮನೋಜ್, ಜಯರಾಮ್ ಹೆಚ್ಚಿನ ಅಂಕ ಪಡೆಯುತ್ತಾರೆ. ಕೆಲವು ಪಾತ್ರಗಳು ಕಥೆಗೆ ಅಗತ್ಯವೇ ಇರಲಿಲ್ಲ ಎನಿಸುತ್ತವೆ. ಕನ್ನಡದಲ್ಲಿ ಡಬ್ಬಿಂಗ್ ಇನ್ನಷ್ಟು ಪಕ್ವವಾಗಬೇಕಿತ್ತು. ‘ವೈಬ್ ಉಂದಿ’ ಹಾಡು ಸಿನಿಮಾದಲ್ಲಿಲ್ಲ.
ಗೌರ ಹರಿ ಸಂಗೀತ ಹಾಗೂ ಕಾರ್ತಿಕ್ ಗಟ್ಟಮ್ನೇನಿ ಛಾಯಾಚಿತ್ರಗ್ರಹಣ ಚೆನ್ನಾಗಿದೆ. ಸೀಕ್ವೆಲ್‌ನ ಸುಳಿವೂ ನೀಡಲಾಗಿದೆ.
ನೋಡಬಹುದಾದ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.