ADVERTISEMENT

ಮೋಹನ್‌ಲಾಲ್ ನಟನೆಯ ‘ಎಂಪುರಾನ್’ ಚಿತ್ರವಿಮರ್ಶೆ: ಬಜರಂಗಿ ಬಾಬಾನ ಕಥೆ

ವಿನಾಯಕ ಕೆ.ಎಸ್.
Published 27 ಮಾರ್ಚ್ 2025, 13:25 IST
Last Updated 27 ಮಾರ್ಚ್ 2025, 13:25 IST
<div class="paragraphs"><p>ಮೋಹನ್‌ಲಾಲ್‌</p></div>

ಮೋಹನ್‌ಲಾಲ್‌

   

ಮಲಯಾಳದ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್ ‘ಲೂಸಿಫರ್‌’ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು. ಮೋಹನ್‌ಲಾಲ್‌ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ 2019ರಲ್ಲಿ ತೆರೆ ಕಂಡಿತ್ತು. ಇದರ ಮುಂದುವರಿದ ಭಾಗವೇ ‘ಎಂಪುರಾನ್’. ಕೇರಳದ ಮುಖ್ಯಮಂತ್ರಿ, ಐಯುಎಫ್‌ ಪಕ್ಷದ ನಾಯಕ ಪಿ.ಕೆ.ರಾಮದಾಸ್‌, ಕೇರಳದ ರಾಜಕೀಯ, ಅಬ್‌ರಾಮ್‌, ಲೂಸಿಫರ್‌ ಎಂದೆಲ್ಲ ಗುರುತಿಸಿಕೊಂಡ ಸ್ಟೀಫನ್‌ ನೆಡುಂಪಲ್ಲಿ ನಡುವಿನ ಕಥೆಯನ್ನು ಹೊಂದಿದ್ದ ‘ಲೂಸಿಫರ್‌’ ಸೂಪರ್‌ ಹಿಟ್‌ ಆಗಿತ್ತು. ಹೀಗಾಗಿ ನಿರ್ದೇಶಕ ಪೃಥ್ವಿರಾಜ್ ಅಲ್ಲಿನ ಪಾತ್ರಗಳನ್ನೇ ಉಳಿಸಿಕೊಂಡು, ಆ ಪಾತ್ರಗಳ ಕಥನವನ್ನು ಇಲ್ಲಿ ಮುಂದುವರಿಸಿಕೊಂಡು ಹೋಗಿದ್ದಾರೆ. 

ಹಿಂದುಗಳನ್ನು ಹತ್ಯೆ ಮಾಡುವ ಮುಸ್ಲಿಮರ ವಿರುದ್ಧ ಕಿಡಿ ಹೊತ್ತಿಸುವ ಒಂದಷ್ಟು ಚಿತ್ರಗಳು ಬಂದಿವೆ. ಅದಕ್ಕೆ ‘ಕೌಂಟರ್‌’ ಎಂಬಂತೆ ಈ ಚಿತ್ರ ಮುಸ್ಲಿಂರನ್ನು ಬರ್ಬರವಾಗಿ ಹತ್ಯೆ ಮಾಡುವ ಬಜರಂಗಿ ಬಾಬಾನ ಕಥೆಯಿಂದ ಪ್ರಾರಂಭವಾಗುತ್ತದೆ. ಧರ್ಮದ ದ್ವೇಷದೊಂದಿಗೆ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಈ ಬಾಬಾ ಮುಂದೆ ಕೇಂದ್ರ ಸರ್ಕಾರದಲ್ಲಿ ಬಲರಾಜ್‌ ಎಂಬ ದೊಡ್ಡ ರಾಜಕಾರಣಿಯಾಗುತ್ತಾನೆ. ಈತನಿಗೆ ಕೇರಳದ ರಾಜಕೀಯದ ಮೇಲೆ ಕಣ್ಣು ಬೀಳುತ್ತದೆ. ದಿವಂಗತ ಪಿ.ಕೆ.ರಾಮದಾಸ್‌ ಪುತ್ರ ಹಾಗೂ ಕೇರಳದ ಮುಖ್ಯಮಂತ್ರಿ ಜತಿನ್‌ ರಾಮ್‌ದಾಸ್‌ ಜೊತೆ ಕೈಜೋಡಿಸಿ ಕೇರಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಾನೆ. ಈತನ ಸಂಹಾರವೇ ಚಿತ್ರದ ಮುಖ್ಯಕಥೆ. ಈ ಕಾಲ್ಪನಿಕ ಬಾಬಾನನ್ನು ನೋಡುವಾಗ ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರದ ಒಂದಿಬ್ಬರು ನಾಯಕರು ನೆನಪಿಗೆ ಬರುತ್ತಾರೆ!

ADVERTISEMENT

ಇನ್ನೊಂದು ಟ್ರ್ಯಾಕ್‌ನಲ್ಲಿ ಖುರೇಷಿ ಅಬ್‌ರಾಮ್‌ ಕಥೆ ತೆರೆದುಕೊಳ್ಳುತ್ತದೆ. ಅಬ್‌ರಾಮ್‌, ಲೂಸಿಫರ್‌, ಸ್ಟೀಫನ್‌ ನೆಡುಂಪಲ್ಲಿಯಾಗಿ ಗುರುತಿಸಿಕೊಳ್ಳುವ ನಾಯಕ ನಟ ಮೋಹನ್‌ಲಾಲ್‌ ಅಭಿಮಾನಿಗಳಿಗೆಂದೇ ಮಾಡಿದ ಚಿತ್ರದಂತಿದೆ. ‘ಲೂಸಿಫರ್‌’ನಲ್ಲಿಯೂ ಮೋಹನ್‌ಲಾಲ್‌ ಮಾಸ್‌ ಅವತಾರ ಜನಮೆಚ್ಚುಗೆ ಗಳಿಸಿತ್ತು. ಇಲ್ಲಿ ನಿರ್ದೇಶಕ ಅದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೋಹನ್‌ಲಾಲ್‌ ಆ್ಯಕ್ಷನ್‌ ದೃಶ್ಯಗಳು ರಜನಿಕಾಂತ್‌ ಸಿನಿಮಾಗಳನ್ನು ನೆನಪಿಸುತ್ತವೆ. ಸಿನಿಮಾ ಶುರುವಾಗಿ ಸುಮಾರು 40 ನಿಮಿಷಗಳವರೆಗೂ ಮೋಹನ್‌ಲಾಲ್‌ ತೆರೆಯ ಮೇಲೆ ಕಾಣಿಸುವುದಿಲ್ಲ. ಬೇರೆ ಬೇರೆ ದೇಶಗಳಲ್ಲಿ ಅವರ ವ್ಯವಹಾರವನ್ನು ತೋರಿಸುವ ಮೂಲಕ ಪಾತ್ರಕ್ಕೆ ಬಿಲ್ಡಪ್‌ ನೀಡಲಾಗಿದೆ. ಎಲ್ಲಿಯೂ ಅವರಿಗೆ ಹೆಚ್ಚು ಮಾತುಗಳೂ ಇಲ್ಲ. ಹಾವಭಾವ, ಗತ್ತಿನಿಂದಲೇ ಮೋಹನ್‌ಲಾಲ್‌ ಇಷ್ಟವಾಗುತ್ತಾರೆ.

ಸುಲಭವಾಗಿ ಊಹಿಸಬಹುದಾದ ಮಾಸ್‌ ಕಥೆ. ಆದರೆ ಅದನ್ನು ಕಟ್ಟಿಕೊಟ್ಟ ರೀತಿ ಭಿನ್ನವಾಗಿದೆ. ಕಥೆಯ ಬಹುಭಾಗ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತದೆ. ಹೀಗಾಗಿ ಇಡೀ ಸಿನಿಮಾ ಒಂದು ಹಾಲಿವುಡ್‌ ಸಿನಿಮಾ ನೋಡಿದ ಅನುಭವ ನೀಡುತ್ತದೆ. ಎಲ್ಲಿಯೂ ಜಾತ್ರೆ ಎನ್ನಿಸಿದಂತೆ, ಫ್ರೇಮ್‌ಗಳಲ್ಲಿ ಅನಗತ್ಯವಾಗಿ ಏನನ್ನೂ ತುರುಕದೆ ಬಹಳ ಅಚ್ಚುಕಟ್ಟಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಪೃಥ್ವಿರಾಜ್‌. ಸ್ಟಾರ್‌ ನಟರ ದಂಡೇ ಇರುವುದು ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌. ರಾಮದಾಸ್‌ ಮಗಳಾಗಿ ಮಂಜು ವಾರಿಯರ್‌, ಜತಿನ್‌ ಆಗಿ ಟೊವಿನೋ ಥಾಮಸ್‌, ಬಲರಾಜ್‌ ಪಾತ್ರದಲ್ಲಿ ಅಭಿಮನ್ಯು ಸಿಂಗ್‌, ಕೇಂದ್ರದ ಅಧಿಕಾರಿಯಾಗಿ ಕನ್ನಡದ ನಟ ಕಿಶೋರ್‌, ಇಂದ್ರಜಿತ್‌ ಸುಕುಮಾರನ್‌ ಮೊದಲಾದ ನಟರು ಗಮನ ಸೆಳೆಯುತ್ತಾರೆ. ಹಿನ್ನೆಲೆ ಸಂಗೀತ ಕೂಡ ದೃಶ್ಯಗಳಿಗೆ ಸರಿಹೊಂದುವಂತಿದೆ. ಮುಂಬೈ ಮತ್ತು ಚೀನಾದಲ್ಲಿ ಚಿತ್ರದ ಮೂರನೇ ಭಾಗದ ಕಥೆ ನಡೆಯುತ್ತದೆ, ಅದೊಂದು ತಮಿಳು ಶೈಲಿಯ ಮಾಸ್‌ ಸಿನಿಮಾವಾಗಿರಲಿದೆ ಎಂಬ ಝಲಕ್‌ ಅನ್ನು ಚಿತ್ರದ ಕೊನೆಯಲ್ಲಿ ನೀಡಲಾಗಿದೆ. ಅಭಿಮಾನಿಗಳಿಗೆಂದೇ ಮಾಡಿದ ಮಾಸ್‌ ಸಿನಿಮಾಗಳು ಅವಧಿಯನ್ನು ಮೂರು ಗಂಟೆ ಕಾಲ ಹಿಗ್ಗಿಸುವ ಪರಿಪಾಠ ಇತ್ತೀಚೆಗೆ ಶುರುವಾಗಿದೆ. ಇಲ್ಲಿಯೂ ಅದೇ ಆಗಿದ್ದು, ಕಥೆಯಾಗಿ ಚಿತ್ರದ ಅವಧಿಯನ್ನು ತಗ್ಗಿಸುವ ಅವಕಾಶ ನಿರ್ದೇಶಕರಿಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.