ADVERTISEMENT

Movie review | ಕುತೂಹಲ ಕೆರಳಿಸದ ಶಿವಾಜಿ

ವಿನಾಯಕ ಕೆ.ಎಸ್.
Published 14 ಏಪ್ರಿಲ್ 2023, 23:45 IST
Last Updated 14 ಏಪ್ರಿಲ್ 2023, 23:45 IST
   

ಸಾಮಾನ್ಯವಾಗಿ ಕೊಲೆ ಹಿಂದಿನ ಪತ್ತೇದಾರಿ ಕಥೆಗಳೆಂದರೆ ಪ್ರೇಕ್ಷಕರಿಗೆ ಒಂದು ಬಗೆಯ ಕುತೂಹಲವಿರುತ್ತದೆ. ಸಿನಿಮಾ ಮುಗಿಯುವ ತನಕವೂ ಕುರ್ಚಿ ತುದಿಯಲ್ಲಿ ಕುಳಿತು ಮುಂದೇನಾಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ‘ಶಿವಾಜಿ ಸುರತ್ಕಲ್‌–2’ರ ವಿರಾಮದ ಹೊತ್ತಿಗೆ ಪ್ರೇಕ್ಷಕ ಕುರ್ಚಿಯ ಹಿಂದಕ್ಕೆ ಒರಗಿ ಆರಾಮದಾಯಕ ಸ್ಥಿತಿಯಲ್ಲಿ ಚಿತ್ರವನ್ನು ಕಣ್ಣುತುಂಬಿಕೊಳ್ಳುತ್ತಿರುತ್ತಾನೆ! ಈಗಾಗಲೇ ಸಾಕಷ್ಟು ಭಾಷೆಗಳಲ್ಲಿ ಹತ್ತಾರು ಸಲ ಬಂದು ಹೋಗಿರುವ ಸರಣಿ ಕೊಲೆಗಳ ಟ್ರ್ಯಾಕ್‌, ಇಂಥ ಕಥೆಯ ನಡು-ನಡುವೆ ಬಂದು ಹೋಗುವ ಗಂಡ–ಹೆಂಡತಿ ಕಥೆ, ಅಪ್ಪ–ಮಗಳ ಬಾಂಧವ್ಯ, ಹೆಂಡತಿ ಸಾವಿನ ಪ್ಲಾಷ್‌ಬ್ಯಾಕ್‌, ಅಪ್ಪ–ಮಗನ ಹಿನ್ನೆಲೆ...ಹೀಗೆ ಚಿತ್ರಕಥೆಯಲ್ಲಿ ವಿಪರೀತ ಅಂಶಗಳು ಮಿಶ್ರಣವಾಗಿರುವುದೇ ಇದಕ್ಕೆ ಮುಖ್ಯ ಕಾರಣ.

‘ಶಿವಾಜಿ ಸುರತ್ಕಲ್‌’ ಪೊಲೀಸ್‌ ಅಧಿಕಾರಿಯಾಗಿ ನಟ ರಮೇಶ್‌ಗೆ ಒಂದೊಳ್ಳೆ ಯಶಸ್ಸು ನೀಡಿತ್ತು. ಅದರ ಭಾಗ–2 ಕೂಡ ಅದೇ ರೀತಿ ಇರಬಹುದೆಂದು ಬಂದವರಿಗೆ ಸ್ವಲ್ಪ ನಿರಾಸೆ ಉಂಟು ಮಾಡುತ್ತದೆ. ಚಿತ್ರದ ಮೊದಲ ಭಾಗದಲ್ಲಿ ಕೊಲೆಯಾದ ಶಿವಾಜಿಯ ಹೆಂಡತಿ ಮತ್ತೆ ಸುಂದರ ಪ್ರೇತವಾಗಿ ಬರುವುದೇ ಭಾಗ–1 ಮತ್ತು 2ಕ್ಕೆ ಇರುವ ಒಂದು ಕೊಂಡಿ. ಅದರ ಹೊರತಾಗಿ ‘ಸುರತ್ಕಲ್​–2’ರಲ್ಲಿ ಹೊಸದೊಂದು ಪ್ರಕರಣದ ಅಧ್ಯಾಯ ಆರಂಭವಾಗುತ್ತದೆ.

ನಟ ರಮೇಶ್‌ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಚಿತ್ರದಲ್ಲಿ ಅವರಿಲ್ಲದ ದೃಶ್ಯಗಳಲ್ಲ, ಫ್ರೇಮುಗಳೇ ಕಡಿಮೆ ಎನ್ನಬಹುದಾದಷ್ಟು ಆವರಿಸಿಕೊಂಡಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್‌ವರೆಗೂ ರಮೇಶ್‌ ದ್ವಿಪಾತ್ರ ಇರಬಹುದು ಎನಿಸುತ್ತದೆ. ಪೊಲೀಸ್‌ ಅಧಿಕಾರಿಯಾದ ರಮೇಶ್‌, ಕೊಲೆಗಾರನ ಪಾತ್ರದಲ್ಲಿಯೂ ಬಂದು ಹೋಗುತ್ತಾರೆ. ಈ ಮೂಲಕ ಶಿವಾಜಿಯೇ ಕೊಲೆಗಾರನೂ ಆಗಿರಬಹುದೇ ಎಂಬ ಸಣ್ಣ ಅನುಮಾನವನ್ನು ಪ್ರೇಕ್ಷಕರಲ್ಲಿ ಮೂಡಿಸಲು ನಿರ್ದೇಶಕರು ಯತ್ನಿಸಿದ್ದಾರೆ. ಆದರೆ ಒಂದು ಗಟ್ಟಿಯಾದ ಬರವಣಿಗೆ, ಸರಿಯಾದ ಲಾಜಿಕ್‌ ಕೊರತೆಯಿಂದ ಈ ಯತ್ನ ಫಲಪ್ರದವಾಗುವುದಿಲ್ಲ.

ADVERTISEMENT

ಅದಕ್ಕಿಂತ ಹೆಚ್ಚಾಗಿ ಅದೇನೋ ಕಾಯಿಲೆ ಬಂದಿದೆ ಎಂದು ಶಿವಾಜಿ ವರ್ತಿಸುವುದು, ಆಗಾಗ ಮಾತ್ರೆ ಸೇವಿಸುವುದು ಒಂದು ಗಂಭೀರವಾದ ಪೊಲೀಸ್‌ ಅಧಿಕಾರಿ ಪಾತ್ರಕ್ಕೆ, ಆತನ ಪತ್ತೇದಾರಿಕೆಗೆ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ನಡೆಯುವ ಕೊಲೆಗಳು ಮತ್ತು ಕೊಲೆಗಾರರ ಹುಡುಕಾಟ ಎರಡೂ ಎಲ್ಲಿಯೂ ರೋಚಕ ಎನ್ನಿಸುವುದಿಲ್ಲ. ಚಿತ್ರಕಥೆ ಕುತೂಹಲ ಮೂಡಿಸುತ್ತಿದೆ ಎನ್ನುವ ಹೊತ್ತಿಗೆ ಶಿವಾಜಿಯ ಸತ್ತುಹೋದ ಹೆಂಡತಿ ಮತ್ತೆ ಪ್ರತ್ಯಕ್ಷವಾಗಿ ಬಿಡುತ್ತಾಳೆ.

ಚಿತ್ರದ ಛಾಯಾಗ್ರಹಣ ಸೊಗಸಾಗಿದೆ. ಮುರುಡೇಶ್ವರ, ಯಲ್ಲಾಪುರದ ಕೆಲ ಫ್ರೇಂಗಳು ಖುಷಿ ನೀಡುತ್ತವೆ. ಶಿವಾಜಿಯ ಮಗಳಾಗಿ ಬಾಲನಟಿ ಆರಾಧ್ಯ ಬಹಳ ಮುದ್ದಾಗಿ ನಟಿಸಿದ್ದಾಳೆ. ಅಪ್ಪ–ಮಗಳ ಬಾಂಧವ್ಯದ ‘ಮಾತಾಡೋ ಗೊಂಬೆ’ ಹಾಡು ಮತ್ತು ಅದಕ್ಕೆ ನಿರ್ದೇಶಕರು ಕಟ್ಟಿಕೊಟ್ಟ ದೃಶ್ಯಗಳು ಬಹಳ ಸೊಗಸಾಗಿವೆ. ಈ ಭಾವುಕತೆ ನಾವೊಂದು ಪತ್ತೆದಾರಿ ಕೊಲೆಯ ಕಥೆ ನೋಡುತ್ತಿದ್ದೇವೆ ಎಂಬುದನ್ನು ಮರೆಸಿಬಿಟ್ಟಿರುತ್ತದೆ.

ಪೊಲೀಸ್‌ ಪೇದೆಯಾಗಿ ರಘು ರಾಮನಕೊಪ್ಪ ಕೆಲವು ಕಡೆ ಪ್ರೇಕ್ಷಕರನ್ನು ನಗಿಸುತ್ತಾರೆ. ರಾಧಿಕಾ ನಾರಾಯಣ್‌, ಮೇಘನಾ ಗಾಂವ್ಕರ್‌ ಸಿಕ್ಕಿರುವ ಅವಕಾಶದಲ್ಲೇ ಗಮನ ಸೆಳೆಯಲು ಪ್ರಯತ್ನಿಸಿ​ದ್ದಾರೆ. ಜ್ಯೂಡಾ ಸ್ಯಾಂಡಿ ದೃಶ್ಯಗಳನ್ನು ಹಿನ್ನೆಲೆ ಸಂಗೀತದೊಂದಿಗೆ ಒಂದಷ್ಟು ರೋಚಕವಾಗಿಸಲು ಯತ್ನಿಸಿದ್ದಾರೆ. ಆದರೆ ಕಥೆಯೇ ಜಾಳಾಗಿ ಅವರ ಯತ್ನ ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.