‘ಕೈಥಿ’, ‘ವಿಕ್ರಮ್’, ‘ಲಿಯೋ’ ಹೀಗೆ ತನ್ನ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್(ಎಲ್‌ಸಿಯು) ಅಥವಾ ಲೋಕಿವರ್ಸ್‌ಗೆ ಹೆಸರುವಾಸಿಯಾಗಿರುವ ನಿರ್ದೇಶಕ ಲೋಕೇಶ್ ಕನಗರಾಜ್, ಈ ಪ್ರಪಂಚದಿಂದ ಹೊರಹೆಜ್ಜೆ ಇಟ್ಟು ‘ಕೂಲಿ’ಯನ್ನು ತೆರೆಗೆ ತಂದಿದ್ದಾರೆ. ಈ ಸಿನಿಮಾಗೂ ‘ಎಲ್‌ಸಿಯು’ಗೆ ಯಾವುದೇ ಸಂಬಂಧ ಇಲ್ಲ. ಇದು ಸೂಪರ್‌ಸ್ಟಾರ್ ರಜನಿಕಾಂತ್‌ಗಾಗಿಯೇ ಲೋಕೇಶ್ ಮಾಡಿದ ಪ್ರತ್ಯೇಕ ಸಿನಿಮಾ. ಹೀಗಾಗಿಯೇ ಫೈಟ್ಸ್, ಮಲ್ಟಿಸ್ಟಾರ್‌ಗಳು ಇದರಲ್ಲಿ ತುಂಬಿವೆ. ಲೋಕೇಶ್ ನಿರ್ದೇಶನದ ‘ವಿಕ್ರಮ್’, ರಜನಿಕಾಂತ್ ನಟನೆಯ ‘ಜೈಲರ್’ ಮಾದರಿಯಲ್ಲಿ ಈ ಸಿನಿಮಾ ಸಾಗುತ್ತದೆ. ಕಥೆಯನ್ನು ಎಳೆದಾಡಿ ಅಭಿಮಾನಿಗಳನ್ನು ಖುಷಿಪಡಿಸುವುಕ್ಕೆ ನಿರ್ದೇಶಕರು ಹೆಜ್ಜೆ ಇಟ್ಟಂತೆ ಭಾಸವಾಗುತ್ತದೆ.
ದೇವ;ದೇವರಾಜ್(ರಜನಿಕಾಂತ್) ‘ದೇವ ಮ್ಯಾನ್ಷನ್’ನ ಮಾಲೀಕ. ಈತನ ಸ್ನೇಹಿತ ರಾಜಶೇಖರ್(ಸತ್ಯರಾಜ್) ನಿಧನ ಹೊಂದಿದಾಗ ಈ ಸಾವು ಸಹಜವಲ್ಲ, ಅದೊಂದು ಕೊಲೆ ಎಂದು ದೇವನಿಗೆ ತಿಳಿಯುತ್ತದೆ. ಸ್ನೇಹಿತನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜಶೇಖರ್ ಮಗಳ ಜೊತೆಗೂಡಿ ದೇವ ಯೋಜನೆ ರೂಪಿಸುತ್ತಾನೆ. ಹೀಗೆ ವಿಶಾಖಪಟ್ಟಣ ಬಂದರಿನಲ್ಲಿರುವ ‘ಕಿಂಗ್‌ಪಿನ್’ ಕಂಪನಿ ಪ್ರವೇಶಿಸುವ ದೇವನಿಗೆ ಆ ಕಂಪನಿ ಮಾಲೀಕ ಸೈಮನ್(ನಾಗಾರ್ಜುನ) ಹಾಗೂ ದಯಾಳ್(ಸೌಬೀನ್) ಎದುರಾಗುತ್ತಾರೆ. ಇಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. ದೇವನ 30 ವರ್ಷಗಳ ಹಿಂದಿನ ‘ಕೂಲಿ’ ಪ್ರಪಂಚವೂ ಇಲ್ಲಿ ಅನಾವರಣಗೊಳ್ಳುತ್ತದೆ.
ಈ ಹಿಂದೆ ಹಲವು ಸಿನಿಮಾಗಳಲ್ಲಿ ಬಂದಂತಹ ಅಂಗಾಂಗ ಮಾರಾಟ ಮಾಫಿಯಾ ಕಥೆಯನ್ನು ಇದು ಹೊಂದಿದೆ. ‘ಡ್ರಗ್ಸ್’ ಬಳಿಕ ಈ ಮಾಫಿಯಾದ ಕಥೆಯನ್ನು ಲೋಕೇಶ್ ಇಲ್ಲಿ ಹೇಳಿದ್ದಾರೆ. ‘ಕೈಥಿ’, ‘ವಿಕ್ರಮ್’, ‘ಮಾಸ್ಟರ್’ನಲ್ಲಿರುವಂತೆ ಗಟ್ಟಿಯಾದ ಕಥೆಯ ಕೊರತೆ ‘ಕೂಲಿ’ಯಲ್ಲಿದೆ. ಇದು ಚಿತ್ರಕಥೆಯ ಮೇಲೂ ಪರಿಣಾಮ ಬೀರಿದೆ. ಸುಮಾರು ಮೂರು ಗಂಟೆಗಳ ಈ ಸಿನಿಮಾದಲ್ಲಿ ಅನಗತ್ಯ ದೃಶ್ಯಗಳ ಸರಣಿಯೇ ಕಾಣಸಿಗುತ್ತದೆ. ಇಡೀ ಸಿನಿಮಾದಲ್ಲಿ ರಜನಿಕಾಂತ್ ಗತ್ತು ಪ್ರದರ್ಶಿಸುವಂಥ ದೃಶ್ಯಗಳು ಹಾಗೂ ಬಿಜಿಎಂ ಕೊರತೆ ಎದ್ದುಕಾಣುತ್ತದೆ. ವಾವ್ ಎನ್ನುವಂತಹ, ಸತತವಾಗಿ ಶಿಳ್ಳೆ, ಚಪ್ಪಾಳೆ ಕೇಳಿಸುವಂತಹ ರಜನಿಕಾಂತ್ ಸ್ಟೈಲ್ ಸಿನಿಮಾದಲ್ಲಿಲ್ಲ. ರಜನಿಕಾಂತ್ ಅವರ ಗತ್ತು, ಗಮ್ಮತ್ತು ಈ ಹಿಂದಿನ ಸಿನಿಮಾಗಳಿಗಿಂತ ಇಲ್ಲಿ ಕೊಂಚ ಕಡಿಮೆಯೇ ಎನ್ನಬಹುದು. ಮೊದಲಾರ್ಧದಲ್ಲಿ ಬರುವ ‘ಮೋನಿಕಾ..’ ಹಾಡು ಹಾಗೂ ಅದರಲ್ಲಿನ ಸೌಬೀನ್ ನೃತ್ಯ ಚೆನ್ನಾಗಿದೆ.
ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ರಜನಿಕಾಂತ್ ಅವರಿಗಾಗಿಯೇ ಈ ಸಿನಿಮಾ ಮಾಡಿರುವುದರಿಂದ 74ರ ರಜನಿ ಪ್ರತಿ ಫ್ರೇಮ್‌ನಲ್ಲೂ ಮಿಂಚಿದ್ದಾರೆ. ಡ್ಯಾನ್ಸ್, ಫೈಟ್, ಡೈಲಾಗ್ಸ್, ಭಾವನಾತ್ಮಕ ದೃಶ್ಯಗಳು ಹೀಗೆ ರಜನಿಕಾಂತ್ ಅಭಿಮಾನಿಗಳಿಗೆ ಬೇಕಾದ ಅಂಶಗಳನ್ನು ಭರಪೂರವಾಗಿ ತುಂಬಲಾಗಿದೆ.
ನಾಗಾರ್ಜುನ ಹಾಗೂ ಸೌಬೀನ್ ಹೊರತುಪಡಿಸಿ ಉಳಿದ ಮಲ್ಟಿಸ್ಟಾರ್‌ಗಳನ್ನು ಕಥೆಗೆ ಅನಗತ್ಯವಾಗಿ ತುರುಕಿದಂತೆ ಭಾಸವಾಗುತ್ತದೆ. ನಾಗಾರ್ಜುನ ಹಾಗೂ ಸೌಬೀನ್ ವಿಲನ್ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ನಟನೆಯಲ್ಲಿ ಸೌಬೀನ್‌ಗೆ ಹೆಚ್ಚು ಅಂಕ. ಕನ್ನಡದ ‘ಘೋಸ್ಟ್’ನಲ್ಲಿದ್ದಂತೆ ಡಿಏಜಿಂಗ್ ಲುಕ್ ಪ್ರಯೋಗ ಸಿನಿಮಾದಲ್ಲಿದ್ದು ಸುಮಾರು 35–40ರ ಪ್ರಾಯದ ರಜನಿಕಾಂತ್ ಅವರನ್ನು ತೆರೆಯಲ್ಲಿ ನೋಡಬಹುದು. ನಟಿ ರಚಿತಾ ರಾಮ್ ನಟನೆಯ ಜೊತೆಗೆ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದಿದ್ದಾರೆ. ನಟ ಉಪೇಂದ್ರ ಅವರ ‘ಕಾಳೀಶ’ ಎಂಬ ಪಾತ್ರ ಒಂದು ಫೈಟ್ ಹಾಗೂ ನಾಲ್ಕೈದು ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಇದನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಅಮೀರ್ ಖಾನ್ ಪಾತ್ರ ಬಿಲ್ಡ್‌ಅಪ್‌ಗಷ್ಟೇ ಸೀಮಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.