‘ಫಸ್ಟ್ ರ್‍ಯಾಂಕ್ ರಾಜು’ ಸಿನಿಮಾದಲ್ಲಿ ‘ಮುಗ್ಧ ರಾಜು’ವಾಗಿ ಕಾಣಿಸಿಕೊಂಡಿದ್ದ ಗುರುನಂದನ್ ನಾಯಕನಾಗಿ ನಟಿಸಿರುವ ಸಿನಿಮಾವಿದು. ಇಲ್ಲಿ ರಾಜು ಸಾಲ ಹಾಗೂ ಪ್ರೀತಿಯ ಸುಳಿಯಲ್ಲಿ ಸಿಲುಕಿದ್ದಾನೆ. ಈ ಅಂಶಗಳ ಸುತ್ತವೇ ಸಿನಿಮಾ ಕಥೆಯಿದ್ದು, ಸಿದ್ಧಸೂತ್ರವನ್ನಿಟ್ಟುಕೊಂಡೇ ನಿರ್ದೇಶಕರು ಈ ಸಿನಿಮಾ ಹೆಣೆದಿದ್ದಾರೆ.
ಬಡ ಹುಡುಗನೊಬ್ಬ ಮಧ್ಯಮ ವರ್ಗದ ಹುಡುಗಿಯನ್ನು ಪ್ರೀತಿಸುವ, ಅದನ್ನು ಹುಡುಗಿಯ ಮನೆಯವರು ವಿರೋಧಿಸುವ, ಇದರಿಂದ ದುಃಖತಪ್ತನಾದ ಹುಡುಗ ಕುಡಿಯುತ್ತಾ ಪ್ಯಾತೋ ಹಾಡು ಹಾಡುವ, ಆಗ ಬಾರಲ್ಲೊಂದು ಫೈಟು...ಇಂತಹ ಸಿದ್ಧಸೂತ್ರದಲ್ಲಿ ಬಂದಿರುವ ಹಲವು ಸಿನಿಮಾಗಳ ಪಟ್ಟಿಗೆ ಈ ಸಿನಿಮಾ ಹೊಸ ಸೇರ್ಪಡೆ. ಸಿನಿಮಾದ ದ್ವಿತೀಯಾರ್ಧದಲ್ಲಿ ನಿರ್ದೇಶಕರು ಕಥೆಗೆ ತಿರುವು ನೀಡಿದ್ದರೂ, ಅದನ್ನು ಇನ್ನಷ್ಟು ಕುತೂಹಲಕಾರಿಯಾಗಿ ತೆರೆಗೆ ತರಬಹುದಿತ್ತು.
ರಾಜು(ಗುರುನಂದನ್) ಪೇಟೆಯೊಂದರಲ್ಲಿ ತನ್ನ ಮಾವನ(ಅಚ್ಯುತ್ ಕುಮಾರ್) ಜೊತೆ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕೆಲಸ ಮಾಡುವಾತ. ಈತನ ಅಪ್ಪ–ಅಮ್ಮ ಸತ್ತುಹೋಗಿದ್ದಾರೆ. ಸಾಲ ಕಟ್ಟಿಲ್ಲ ಎಂಬ ಕಾರಣಕ್ಕೆ ಅವರಿದ್ದ ಮನೆಯನ್ನು ಬ್ಯಾಂಕ್ ಜಪ್ತಿ ಮಾಡಲು ಸಿದ್ಧವಾಗಿದೆ. ಬ್ಯಾಂಕ್ ಪರೀಕ್ಷೆಗೆ ಸಿದ್ಧನಾಗುತ್ತಿರುವ ರಾಜುಗೆ ಬ್ಯಾಂಕ್ ಮ್ಯಾನೇಜರ್ ಆಗುವ ಇಚ್ಛೆ. ಊರಿನ ಹುಡುಗಿಯೊಬ್ಬಳ ಮೇಲೆ ಈತನಿಗೆ ಪ್ರೀತಿ. ಆ ಪ್ರೀತಿಗೆ ಹುಡುಗಿ ಮನೆಯವರು ವಿರೋಧಿಸುತ್ತಾರೆ. ಸಾಲ ತೀರಿಸಿ ಅಮ್ಮನ ಕನಸಿನ ಮನೆಯನ್ನು ಉಳಿಸಿಕೊಳ್ಳಲು ರಾಜು ಹೆಣೆಯುವ ತಂತ್ರವೇ ಚಿತ್ರದ ಕಥೆ.
ಸಿದ್ಧಸೂತ್ರದ ಮೊದಲಾರ್ಧದ ಚಿತ್ರಕಥೆ ಪೇಲವವಾಗಿದೆ. ಒಟ್ಟಾರೆ ಸಿನಿಮಾದಲ್ಲಿ ಚಿತ್ರಕಥೆಯನ್ನು ಇನ್ನಷ್ಟು ಸೂಕ್ಷ್ಮವಾಗಿ ಹೆಣೆಯಬಹುದಾಗಿತ್ತು. ಜೇಮ್ಸ್ ಬಾಂಡ್ ಎನ್ನುವುದು ಶೀರ್ಷಿಕೆಗಷ್ಟೇ ಸೀಮಿತ. ಇಲ್ಲಿ ನಾಯಕನ ಬುದ್ಧಿವಂತಿಕೆಗಷ್ಟೇ ಕೆಲಸ. ನಗಿಸುವ ಜವಾಬ್ದಾರಿ ಚಿಕ್ಕಣ್ಣ ಹಾಗೂ ಸಾಧು ಕೋಕಿಲ ಅವರ ಪಾತ್ರಗಳ ಮೇಲೆ ಹೆಚ್ಚಿದೆ. ಆ ಪಾತ್ರಗಳ ಬರವಣಿಗೆ ಹಾಗೂ ಸಂಭಾಷಣೆ ಮೇಲೆ ಮತ್ತಷ್ಟು ಒತ್ತು ನೀಡಬೇಕಿತ್ತು. ‘ಕಬಾಲಿ’ ಸ್ಟೈಲ್‌ನಲ್ಲಿ ಸಾಧು ಕೋಕಿಲ ಅವರ ‘ತೆನಾಲಿ’ ಪಾತ್ರ ತೆರೆ ಪ್ರವೇಶಿಸಿದರೂ ಮುಂದಿನ ದೃಶ್ಯಗಳಲ್ಲಿ ಬರವಣಿಗೆಯ ಕೊರತೆಯಿಂದ ಸಪ್ಪೆಯಾಗುತ್ತಾ ಸಾಗಿದೆ. ಚಿಕ್ಕಣ್ಣ ತಮ್ಮ ಹಾವಭಾವದಿಂದ ನಗಿಸುತ್ತಾರೆ. ಗುರುನಂದನ್, ಮೃದುಲ ಹಾಗೂ ಅಚ್ಯುತ್ ಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದ್ವಿತೀಯಾರ್ಧದಲ್ಲಿ ತೆರೆ ಪ್ರವೇಶಿಸುವ ರವಿಶಂಕರ್ ತಮ್ಮ ಭಿನ್ನವಾದ ಧ್ವನಿ ಹಾಗೂ ನಟನೆಯಿಂದ ಸೆಳೆಯುತ್ತಾರೆ. ಹಲವು ದೃಶ್ಯಗಳಲ್ಲಿ ಲಾಜಿಕ್ ಹುಡುಕಲು ಹೋಗಬಾರದು.
‘ಕಣ್ಮಣಿ..’ ಹಾಡು ಮತ್ತೆ ಮತ್ತೆ ಗುನುಗುವಂತಿದೆ. ಹಾಡುಗಳ ಛಾಯಾಚಿತ್ರಗ್ರಹಣ ಚೆನ್ನಾಗಿದೆ. ಹಿನ್ನೆಲೆ ಸಂಗೀತದ ಬಗ್ಗೆ ಇನ್ನಷ್ಟು ಗಮನಹರಿಸಬಹುದಿತ್ತು. ಚಿತ್ರದ ಸೀಕ್ವೆಲ್ ಬಗ್ಗೆಯೂ ಕ್ಲೈಮ್ಯಾಕ್ಸ್‌ನಲ್ಲಿ ಸುಳಿವು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.