ADVERTISEMENT

ಗುರು ಶಿಷ್ಯರು ಸಿನಿಮಾ ವಿಮರ್ಶೆ: ಕೊಕ್ಕೊ ಊರು ಉಳಿಸೀತೇ ದೇಶದಲ್ಲಿ ಉಳಿದೀತೇ?

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 14:08 IST
Last Updated 23 ಸೆಪ್ಟೆಂಬರ್ 2022, 14:08 IST
ಶರಣ್‌ ಮತ್ತು ವಿದ್ಯಾರ್ಥಿಗಳು
ಶರಣ್‌ ಮತ್ತು ವಿದ್ಯಾರ್ಥಿಗಳು   

ಚಿತ್ರ: ಗುರು ಶಿಷ್ಯರು
ತಾರಾಗಣ: ಶರಣ್‌, ನಿಶ್ವಿಕಾ ನಾಯ್ಡು, ದತ್ತಾತ್ರೇಯ, ಸುರೇಶ್‌ ಹೆಬ್ಳೀಕರ್‌, ಅಪೂರ್ವ ಕಾಸರವಳ್ಳಿ
ನಿರ್ದೇಶನ: ಜಡೇಶ್‌ ಕುಮಾರ್‌ ಹಂಪಿ
ಸಂಗೀತ: ಅಜನೀಶ್‌ ಬಿ. ಲೋಕನಾಥ್‌
ನಿರ್ಮಾಣ: ಶರಣ್‌, ತರುಣ್‌ ಸುಧೀರ್‌
ಛಾಯಾಗ್ರಹಣ: ಆರೂರು ಸುಧಾಕರ ಶೆಟ್ಟಿ

ಕೊಕ್ಕೊ ಗೆಲ್ಲುವ ಮೂಲಕ ಊರು ಉಳಿಸಬೇಕೇ ಅಥವಾ ಕೊಕ್ಕೊಗೆ ದೇಶದಲ್ಲಿ ಮರುಹುಟ್ಟು ಕೊಡಬೇಕೇ?... ಈ ಎಳೆಯನ್ನಿಟ್ಟುಕೊಂಡು ತಿಳಿಯಾಗಿ ನಿರೂಪಿಸುತ್ತಾ ಹೋಗಿದೆ ‘ಗುರು ಶಿಷ್ಯರು’.

ಕೊಕ್ಕೊ ಆಟಗಾರರು ಚಾಂಪಿಯನ್‌ ಆದರೂ ಅವರಿಗೆ ಕ್ರಿಕೆಟ್‌, ಫುಟ್‌ಬಾಲ್‌ ಮತ್ತಿತರ ಕ್ರೀಡೆಗಳಲ್ಲಿ ಗೆದ್ದವರಷ್ಟು ಮಹತ್ವ ಇರುವುದಿಲ್ಲ. ಉದ್ಯೋಗ ನೇಮಕಾತಿಯಲ್ಲಿ ಆದ್ಯತೆಯೂ ಇರುವುದಿಲ್ಲ. ಅಂಥದ್ದೊಂದು ಕೊರಗನ್ನು ನಾಯಕನ ಕ್ರೀಡಾಗುರು ದತ್ತಣ್ಣನ ಮೂಲಕವೂ, ಚಿತ್ರದ ಕೊನೆಯಲ್ಲಿ ಕೊಕ್ಕೊ ಸಾಧಕರ ಮೂಲಕವೂ ಹೇಳಿಸಿದ್ದಾರೆ.

ADVERTISEMENT

ಅರಸೀಪುರದ ಊರ ಮುಖಂಡನಿಗೆ (ಅಪೂರ್ವ ಕಾಸರವಳ್ಳಿ) ಬೆಟ್ಟದಪುರವನ್ನು ವಶಪಡಿಸಿಕೊಂಡು ಗಣಿಗಾರಿಕೆ ಮಾಡಬೇಕು ಎಂಬ ಕನಸು. ಆ ಪ್ರದೇಶ ತನ್ನ ತಾತನ ಕಾಲದ ಆಸ್ತಿ. ‘ಉಳುವವನೇ ಹೊಲದೊಡೆಯ’ ಕಾನೂನು ಬಂದ ಬಳಿಕ ಜಮೀನು ಬೆಟ್ಟದಪುರದ ಜನರ ಪಾಲಾಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ಬಗೆಹರಿಯದಾದಾಗ ಕೊಕ್ಕೋ ಪಂದ್ಯದಲ್ಲಿ ಬೆಟ್ಟದಪುರದವರು ಗೆದ್ದರೆ ಊರು ಬಿಟ್ಟುಕೊಡುವುದಾಗಿ ಮುಖಂಡನ ಸವಾಲು ಇರುತ್ತದೆ. ಆ ಸವಾಲನ್ನು ಸ್ವೀಕರಿಸುವವನೇ ಬೆಟ್ಟದಪುರ ಶಾಲೆಯ ದೈಹಿಕ ಶಿಕ್ಷಕ ಮನೋಹರ (ಶರಣ್‌). ಮೊದಲಾರ್ಧದಲ್ಲಿ ಕೇವಲ ಟ್ರೋಫಿ ತೋರಿಸಿ ಊರ ಮಕ್ಕಳು ಪಂದ್ಯ ಗೆದ್ದಿದ್ದಾರೆ ಎನ್ನುವ ಪಿಇಟಿ ಮೇಷ್ಟ್ರು ದ್ವಿತೀಯಾರ್ಧದಲ್ಲಿ ಅಪ್ಪಟ ಕೋಚ್‌ ಆಗಿ ಬದಲಾಗುತ್ತಾನೆ. ಹುಡುಗರು ಪಂದ್ಯ ಗೆದ್ದರೇ, ಊರು ಜನರಿಗೇ ಉಳಿಯಿತೇ ಎನ್ನುವುದನ್ನು ಸಿನಿಮಾದಲ್ಲಿ ನೋಡಬೇಕು.

ಕೊಕ್ಕೊ ಗೆದ್ದರೆ ಊರು ಬಿಟ್ಟುಕೊಟ್ಟಾರೇ ಎಂಬ ಲಾಜಿಕ್‌ನಿಂದ ಆಚೆ ಯೋಚಿಸಬೇಕು. ಕೊಕ್ಕೊ ನಮ್ಮ ಊರಿನಲ್ಲಿ (ದೇಶದಲ್ಲಿ) ಅಸ್ತಿತ್ವ ಉಳಿಸಿಕೊಳ್ಳಬೇಕು. ಕ್ರೀಡಾಳುಗಳಿಗೆ ಬದುಕು ಕೊಡುವಂತಾಗಬೇಕು ಎಂಬುದೇ ಕಥೆಯ ಆಶಯ. ಇದು ಚಿತ್ರದ ಕೊನೆಯಲ್ಲಿ ಮನದಟ್ಟಾಗುತ್ತದೆ. ಕ್ರೀಡಾ ಕ್ಷೇತ್ರದ ಮೋಸ, ವಂಚನೆಗಳನ್ನೂ ಚಿತ್ರ ಕೊಂಚ ಚರ್ಚಿಸಿದೆ.

ಈ ಚಿತ್ರದಲ್ಲಿ ಶರಣ್‌ ಬೇರೆಯೇ ಗಾಂಭೀರ್ಯ ತೋರಿದ್ದಾರೆ. ಅವರ ಅಭಿನಯದಲ್ಲಿ ಗಟ್ಟಿತನವಿದೆ. ತಿಳಿ ಹಾಸ್ಯ ಅಗತ್ಯಕ್ಕೆ ತಕ್ಕಷ್ಟು ಇದೆ. 1994ರ ಕಾಲಘಟ್ಟದ ಕಥೆ, ಹಳ್ಳಿ, ಶಾಲೆ, ಅಲ್ಲಿನ ಮೇಷ್ಟ್ರು, ಮಕ್ಕಳು, ಊರ ರಾಜಕೀಯ ಇದೆಲ್ಲವನ್ನೂ ತೋರಿಸುತ್ತಲೇ ದೇಶದ ಪ್ರತಿಷ್ಠಿತ ಕ್ರೀಡೆಯಾಗಿದ್ದ ಕೊಕ್ಕೊಗೆ ಹೇಗೆ ಮರು ಜೀವ ಕೊಡಬೇಕು ಎಂಬ ಚಿಂತನೆಯನ್ನೂ ಕೊಟ್ಟಿದ್ದಾರೆ. ಆಟದ ಪ್ರತಿಭೆ ಹಂದಿ ಹಿಡಿಯುವ ಹುಡುಗನಲ್ಲೂ ಇದೆ. ಮೀನು ಹಿಡಿಯುವ ಬೆಸ್ತರ ಹುಡುಗನಲ್ಲಿಯೂ ಇದೆ. ಕೊನೆಗೆ ತಂಡಕ್ಕೆ ಆಸರೆಯಾಗಿ ಬರುವವರೂ ಅವರೇ. ದ್ವಿತೀಯಾರ್ಧದಲ್ಲಿ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ಕೊಕ್ಕೊ ಆಟಗಾರರದ್ದು ಅಭಿನಯ ಅನ್ನುವುದಕ್ಕಿಂತ ನಿಜ ಪಂದ್ಯವನ್ನೇ ಆಡಿದ್ದಾರೆ ಎಂಬಷ್ಟು ಸಹಜವಾಗಿ ದೃಶ್ಯಗಳು ಮೂಡಿ ಬಂದಿವೆ. ಸುಮಾರು 20ರಿಂದ 25 ನಿಮಿಷ ಕೊಕ್ಕೋ ಆಟದಲ್ಲೇ ಚಿತ್ರ ಕಳೆದುಹೋಗುತ್ತವೆ.

ಸ್ಟಾರ್‌ ನಟರ ಮಕ್ಕಳೇ ಇಲ್ಲಿ ಕೊಕ್ಕೋ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರನ್ನು ಆಟಗಾರರನ್ನಾಗಿಸುವಲ್ಲಿಯವರೆಗೆ ನಡೆಸಿದ ಆಳವಾದ ತಯಾರಿಯ ಫಲಿತಾಂಶ ತೆರೆಯ ಮೇಲೆ ಕಾಣಿಸಿದೆ.

ಸ್ವಾತಂತ್ರ್ಯ ಹೋರಾಟಗಾರ ಸುರೇಶ್‌ ಹೆಬ್ಳೀಕರ್‌, ಖಳನಾಗಿ ಅಪೂರ್ವ ಕಾಸರವಳ್ಳಿ, ಮಹಾಂತೇಶ್‌ ಹಿರೇಮಠ್‌ ಅವರ ಅಭಿನಯವೂ ಉತ್ತಮವಾಗಿದೆ. ನಿಶ್ವಿಕಾ ನಾಯ್ಡು ಅಭಿನಯವೂ ಅಗತ್ಯಕ್ಕೆ ತಕ್ಕಷ್ಟು ಇದೆ. ಛಾಯಾಗ್ರಹಣವೂ ಹಳ್ಳಿಯ ಸೊಗಡನ್ನು ಸಹಜವಾಗಿ ಕಟ್ಟಿಕೊಟ್ಟಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತವೂ ಚೆನ್ನಾಗಿವೆ. ಕ್ರೀಡಾ ದೃಶ್ಯಗಳಲ್ಲಿ ಕುತೂಹಲ ಹೆಚ್ಚಿಸಲು ಎಂಬಂತೆ ಅಲ್ಲಲ್ಲಿ ದಿಢೀರ್‌ ತೆರೆ ಕತ್ತಲಾಗುವುದು ವೀಕ್ಷಣೆಯ ಓಘಕ್ಕೆ ತೀವ್ರ ಭಂಗ ತರುತ್ತದೆ. ಸಂಕಲನದ ವೇಳೆ ಈ ಅಂಶ ಗಮನಿಸಬೇಕಿತ್ತು. ಈ ಅಂಶ ಹೊರತುಪಡಿಸಿದರೆ ನೋಡಿಸಿಕೊಂಡು ಹೋಗುವ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.