ADVERTISEMENT

ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌ ಸಿನಿಮಾ ವಿಮರ್ಶೆ: ಅಚ್ಚುಕಟ್ಟಾದ ‘ಸೀತಾರಾಮ್‌’

ವಿನಾಯಕ ಕೆ.ಎಸ್.
Published 20 ಫೆಬ್ರುವರಿ 2026, 15:40 IST
Last Updated 20 ಫೆಬ್ರುವರಿ 2026, 15:40 IST
ವಿಜಯ ರಾಘವೇಂದ್ರ
ವಿಜಯ ರಾಘವೇಂದ್ರ   

ಮಲೆನಾಡಿನ ಆನೆಗದ್ದೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ‍್ರಕರಣಗಳ ಕುರಿತಾದ ಕಥೆ ಹೊಂದಿರುವ ಚಿತ್ರ ‘ಸೀತಾರಾಮ್‌ ಬಿನೋಯ್‌’ 2021ರಲ್ಲಿ ತೆರೆ ಕಂಡಿತ್ತು. ಮಲೆನಾಡಿನ ಪ್ರಶಾಂತವಾದ ಊರುಗಳಲ್ಲಿನ ಕಳ್ಳತನ, ಕೊಲೆ, ಸ್ಥಳೀಯ ವ್ಯಾಜ್ಯಗಳೇ ಈ ಕಥೆಯ ಕೇಂದ್ರಬಿಂದುವಾಗಿತ್ತು. ಅದೇ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಮರ್ಡರ್‌ ಮಿಸ್ಟ್ರಿ ಕಥೆ ಹೊಂದಿರುವ ಚಿತ್ರ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’. ಕಥೆಯಾಗಿ ‘ಸೀತಾರಾಮ್‌ ಬಿನೋಯ್‌’ಗೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಆದರೆ ಅಲ್ಲಿನ ಜಾಗ, ಪಾತ್ರ, ಸಂಬಂಧಗಳು ಇಲ್ಲಿಯೂ ಮುಂದುವರಿದಿವೆ.

ಆನೆಗದ್ದೆ ಸಮೀಪದ ಊರಿನ ಅಶೋಕನ ಭೀಕರ ಕೊಲೆಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ನಂತರ ಸರಣಿ ಕೊಲೆಗಳಾಗುತ್ತವೆ. ಇನ್‌ಸ್ಪೆಕ್ಟರ್‌ ಸೀತಾರಾಮ್‌ಗೆ ಈ ಕೊಲೆಗಳು ಸವಾಲಾಗುತ್ತವೆ. ನಿಜವಾದ ಕೊಲೆಗಾರರನ್ನು ಹುಡುಕಿಕೊಂಡು ಹೋಗುವುದೇ ಚಿತ್ರದ ಒಟ್ಟಾರೆ ಕಥೆ. ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳಲ್ಲಿ ಕುತೂಹಲವೆಂಬುದು ಪ್ರೇಕ್ಷಕನನ್ನು ಕುರ್ಚಿಯ ತುದಿಗೆ ತಂದು ಕೂರಿಸಬೇಕು. ಜತೆಗೆ ಚಿತ್ರಕಥೆಯನ್ನು ಸರಪಳಿಯ ಕೊಂಡಿಯಂತೆ ಬೆಸೆಯಬೇಕು. ಸರಪಳಿಯ ಮೊದಲ ಕೊಂಡಿಗೂ, ಕೊನೆಯ ಕೊಂಡಿಗೂ ತಾತ್ವಿಕವಾದ ಬೆಸುಗೆ ಇರಬೇಕು. ಆ ವಿಚಾರದಲ್ಲಿ ಇಲ್ಲಿ ಚಿತ್ರಕಥೆ ಸೋಲುತ್ತದೆ. 

ಮಾನಸಿಕ ಅಸ್ವಸ್ಥನಾಗಿ ಬರುವ ಸಬಾಸ್ಟೀನ್‌ ಊರಿನಲ್ಲಿ ನಡೆಯುವ ಎಲ್ಲ ಕೊಲೆಗಳಿಗೂ ಕಾರಣವೆಂಬಂತೆ ಬಿಂಬಿಸಿ, ಆತನನ್ನು ಬಂಧಿಸಲಾಗುತ್ತದೆ. ನೋಡುಗನಿಗೆ ಆತನೇ ಕೊಲೆಗಾರ ಎನ್ನಿಸುವ ದೃಶ್ಯಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇದೇ ಗುಮಾನಿಯಲ್ಲಿ ಚಿತ್ರದ ಮೊದಲಾರ್ಧ ಮುಗಿದಿದ್ದೇ ಗೊತ್ತಾಗುವುದಿಲ್ಲ. ಆದರೆ ಆತ ಯಾಕೆ ಕೊಲೆಗಾರನಲ್ಲ ಎಂಬುದಕ್ಕೆ ಸ್ಪಷ್ಟವಾದ ತಾತ್ವಿಕ ವಿವರಣೆ ಸಿಗುವುದಿಲ್ಲ. ಕೊಲೆಗೆ ಸಾಕ್ಷಿ, ವಿಚಾರಣೆಗಳು ಎಲ್ಲಿಯೂ ತೀವ್ರ ಎನಿಸುವುದೇ ಇಲ್ಲ.

ADVERTISEMENT

ಇದೊಂದು ಅಂಶವನ್ನು ಬದಿಗಿಟ್ಟು ನೋಡಿದರೆ ಹಿತವಾದ ಅನುಭವ ನೀಡುವ, ಅಚ್ಚುಕಟ್ಟಾದ ಸಿನಿಮಾವಿದು. ಕಥೆಯ ಜತೆಗೆ ಮಲೆನಾಡಿನ ಊರುಗಳನ್ನು, ಅಲ್ಲಿಯ ಬದುಕನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಸೀತಾರಾಮನಾಗಿ ವಿಜಯ ರಾಘವೇಂದ್ರ ಇಷ್ಟವಾಗುತ್ತಾರೆ. ಸಬಾಸ್ಟಿನ್‌ ಆಗಿ ಗೋಪಾಲಕೃಷ್ಣ ದೇಶಪಾಂಡೆ ಗಮನ ಸೆಳೆಯುತ್ತಾರೆ. ಉಳಿದ ಬಹುತೇಕ ಪಾತ್ರಗಳನ್ನು ನಿರ್ದೇಶಕರು ಸ್ಥಳೀಯರಿಂದ ಮಾಡಿಸಿದ್ದಾರೆ. ಹೀಗಾಗಿ ಅವರೆಲ್ಲ ಪಾತ್ರವಾಗದೆ, ಆ ಊರಿನ ಸಹಜ ವ್ಯಕ್ತಿಗಳೆನಿಸುತ್ತಾರೆ. 

ಕಥೆಯೊಂದಿಗೆ ಸಂಗೀತವನ್ನು ಬೆರೆಸಿದ ರೀತಿ ಚೆನ್ನಾಗಿದೆ. ಹೀಗಾಗಿ ಹಿನ್ನೆಲೆ ಸಂಗೀತ ಬಹಳ ಆಪ್ತವೆನಿಸುತ್ತದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಚಿತ್ರದಲ್ಲಿ ಮಲೆನಾಡನ್ನು ಇನ್ನಷ್ಟು ಸೊಗಸಾಗಿ ತೋರಿಸುವ ಅವಕಾಶವಿತ್ತು. ಚಿತ್ರಕಥೆಯನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿದ್ದರೆ ‘ಸೀತಾರಾಮನ’ ಪಯಣ ಮತ್ತಷ್ಟು ಎತ್ತರಕ್ಕೆ ತಲುಪುವ ಸಾಧ್ಯತೆಯಿತ್ತು.  

ನೋಡಬಹುದಾದ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.