ADVERTISEMENT

‘ಸಪ್ಲಯರ್‌ ಶಂಕರ’ ಸಿನಿಮಾ ವಿಮರ್ಶೆ: ಸಾಧಾರಣ ಕಥೆಯ ಅಸಾಧಾರಣ ಅಂತ್ಯ

ಅಭಿಲಾಷ್ ಪಿ.ಎಸ್‌.
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ದೀಪಿಕಾ ಆರಾಧ್ಯ, ನಿಶ್ಚಿತ್‌ 
ದೀಪಿಕಾ ಆರಾಧ್ಯ, ನಿಶ್ಚಿತ್‌    

ಸಿನಿಮಾ: ಸಪ್ಲಯರ್‌ ಶಂಕರ (ಕನ್ನಡ)

ನಿರ್ದೇಶನ: ರಂಜಿತ್‌ ಸಿಂಗ್‌ ರಜಪೂತ್‌ 

ನಿರ್ಮಾಣ: ಎಂ. ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್

ADVERTISEMENT

ತಾರಾಗಣ: ನಿಶ್ಚಿತ್‌ ಕೊರೋಡಿ, ದೀಪಿಕಾ ಆರಾಧ್ಯ, ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮತ್ತಿತರರು 

ಗೋಪಾಲಕೃಷ್ಣ ದೇಶಪಾಂಡೆ ಸಿನಿಮಾವೊಂದಕ್ಕೆ ಶಕ್ತಿ ತುಂಬುವ ಸಾಮರ್ಥ್ಯವುಳ್ಳ ನಟ. ‘ಗರುಡ ಗಮನ ವೃಷಭ ವಾಹನ’,  ‘ಟೋಬಿ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’, ‘ಸಪ್ತ ಸಾಗರದಾಚೆ ಎಲ್ಲೋ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿದವರು. ಇವರಿದ್ದರೆ ಸಾಧಾರಣ ಕಥೆಯ ಸಿನಿಮಾವೊಂದಕ್ಕೂ ವಿಶೇಷ ಶಕ್ತಿ ಬರುತ್ತದೆ. ಇದಕ್ಕೆ ‘ಸಪ್ಲಯರ್‌ ಶಂಕರ’ ಸಿನಿಮಾವೇ ಸಾಕ್ಷಿ. ಈ ಸಿನಿಮಾದಲ್ಲಿ ಹಲವೆಡೆ ಜಾಳುಜಾಳಾಗಿರುವ ಚಿತ್ರಕಥೆಯು ವೀಕ್ಷಣೆಗೆ ತೊಡಕಾದರೂ, ಗೋಪಾಲಕೃಷ್ಣ ದೇಶಪಾಂಡೆ ನಟನೆ ಕೊನೆಯವರೆಗೂ ಹಿಡಿದಿಡುತ್ತದೆ. ಆ ನಟನೆ ಕ್ಲೈಮ್ಯಾಕ್ಸ್‌ನಲ್ಲೊಂದು ಚಪ್ಪಾಳೆ ಗಿಟ್ಟಿಸುತ್ತದೆ. ಹೀರೊ ಪಾತ್ರವಾಗಿ ಬದಲಾಗುತ್ತದೆ. 

ಹಳ್ಳಿಯೊಂದರಲ್ಲಿ ಹುಟ್ಟಿದ ಶಂಕರನ(ನಿಶ್ಚಿತ್‌ ಕೊರೋಡಿ) ತಂದೆ ಕುಡುಕ. ಪತಿಯ ಈ ಚಟದಿಂದ ಬೇಸತ್ತ ಶಂಕರನ ತಾಯಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಆ ದುರ್ಘಟನೆಯಲ್ಲಿ ಪತಿ, ಪತ್ನಿ ಇಬ್ಬರೂ ಸಜೀವವಾಗಿ ಸುಟ್ಟುಹೋಗುತ್ತಾರೆ. ಅನಾಥನಾದ ಬಾಲಕ ಶಂಕರ ‘ಮಾದಾಪುರ’ ಎಂಬ ಪೇಟೆಗೆ ಪಯಣ ಬೆಳೆಸುತ್ತಾನೆ. ಅಲ್ಲಿ ಬಾರ್‌ ಮಾಲೀಕನೊಬ್ಬ ಈತನಿಗೆ ತನ್ನ ಬಾರ್‌ನಲ್ಲಿ ಸಪ್ಲಯರ್‌ ಕೆಲಸ ನೀಡುತ್ತಾನೆ. ಅಲ್ಲಿಂದ ‘ಸಪ್ಲಯರ್‌ ಶಂಕರ’ನಾಗಿ ಬೆಳೆಯುತ್ತಾನೆ. ಅದೇ ಪೇಟೆಯ ಪ್ರಾಥಮಿಕ ಶಾಲೆ ಟೀಚರ್‌ ಪುಣ್ಯ (ದೀಪಿಕಾ ಆರಾಧ್ಯ) ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ ಶಂಕರ. ಬೆನ್ನಲ್ಲೇ, ಪೇಟೆಯಲ್ಲಿ ಹೆಣ್ಣುಮಕ್ಕಳ ಕಳ್ಳಸಾಗಣೆ, ‘ಪುಣ್ಯ’ಳ ಅಪಘಾತ, ಶಂಕರ ಅಪ್ಪಾಜಿಯಂತೆ ಕಂಡ ಬಾರ್‌ ಮಾಲೀಕನ ಹತ್ಯೆಯಾಗುತ್ತದೆ. ಹೆಣ್ಣುಮಕ್ಕಳ ಕಳ್ಳಸಾಗಣೆಯ ಬೆನ್ಹತ್ತಿ ‘ಮಾದಾಪುರ’ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌(ಗೋಪಾಲಕೃಷ್ಣ ದೇಶಪಾಂಡೆ) ತನಿಖೆಗೆ ಇಳಿಯುತ್ತಾನೆ. ಇಲ್ಲಿಂದ ಕಥೆ ತಿರುವು ಪಡೆದು ಮುಂದಡಿ ಇಡುತ್ತದೆ.  

ಒಟ್ಟು ಸಿನಿಮಾದ ಅವಧಿ 163 ನಿಮಿಷವಿದೆ. ಇದರಲ್ಲಿ ಕನಿಷ್ಠ ಇಪ್ಪತ್ತು ನಿಮಿಷದ ಚಿತ್ರಕಥೆಗೆ ನಿರ್ದೇಶಕರು ಕತ್ತರಿ ಹಾಕಿದ್ದರೆ ಒಟ್ಟು ಸಿನಿಮಾ ರೂಪವೇ ಬೇರೆಯಾಗಿರುತ್ತಿತ್ತು. ಚಿತ್ರದ ಮೊದಲಾರ್ಧದ ಕಥೆ ತೆವಳಿಕೊಂಡು ಸಾಗುತ್ತದೆ. ಪ್ರೀತಿ, ಬಾರ್‌ನಲ್ಲಿ ನಡೆಯುವ ಘಟನೆಗಳು, ಹಾಡುಗಳಿಂದಾಗಿ ಇಲ್ಲಿನ ಚಿತ್ರಕಥೆಗೆ ವೇಗವಿಲ್ಲ. ಬಾರ್‌ ಮಾಲೀಕನ ಹತ್ಯೆಯ ಬಳಿಕ ಸಿನಿಮಾದ ಕಥೆ ವೇಗ ಪಡೆದುಕೊಳ್ಳುತ್ತದೆ. ಆದರೂ, ದ್ವಿತೀಯಾರ್ಧದಲ್ಲಿ ಪೊಲೀಸ್‌ ಠಾಣೆಯೊಳಗೆ ನಡೆಯುವ ದೌರ್ಜನ್ಯದ ದೃಶ್ಯಾವಳಿಗಳು ಸಾಕೆನಿಸಿಬಿಡುವಷ್ಟಿದೆ. ಇಷ್ಟೆಲ್ಲಾ ತಡೆದುಕೊಂಡ ಬಳಿಕ ಕ್ಲೈಮ್ಯಾಕ್ಸ್‌ ಹತ್ತಿರವಾದಂತೆ ಗೋಪಾಲಕೃಷ್ಣ ದೇಶಪಾಂಡೆ ತೆರೆ ಆವರಿಸಿಕೊಳ್ಳಲಾರಂಭಿಸುತ್ತಾರೆ. ಬಳಿಕ ಕಥೆಯು ಊಹಿಸಿರದಂತಹ ಹೊಸ ಆಯಾಮವನ್ನೇ ಪಡೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ‘ಗರುಡ ಗಮನ ವೃಷಭ ವಾಹನ’ದಲ್ಲಿನ ಪಾತ್ರದಂತೆ ಗೋಪಾಲಕೃಷ್ಣ ದೇಶಪಾಂಡೆ ಕಾಣಿಸುತ್ತಾರೆ. ಸಿನಿಮಾದ ಎರಡನೇ ಭಾಗಕ್ಕೆ ಸುಳಿವನ್ನೂ ಕ್ಲೈಮ್ಯಾಕ್ಸ್‌ ನೀಡಿದೆ. 

ಅಭಿನಯದಲ್ಲಿ ನಿಶ್ಚಿತ್‌ ಹಾಗೂ ದೀಪಿಕಾ ಆರಾಧ್ಯ ತಮ್ಮ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಇಬ್ಬರಿಗೂ ನಟನೆಯಲ್ಲಿ ಭವಿಷ್ಯವಿದೆ. ನೋಡುಗನ ದೃಷ್ಟಿಯಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಸಿನಿಮಾ ಕೊನೆಯಲ್ಲಿ ಹೀರೊ ಆಗಿ ಬದಲಾಗುತ್ತಾರೆ. ಕುಡುಕನ ಪಾತ್ರದಲ್ಲಿ ನವೀನ್‌ ಡಿ. ಪಡೀಲ್‌ ನಗಿಸುವ ಹೊಣೆ ಹೊತ್ತು ತೆರೆಯಲ್ಲಿದ್ದಷ್ಟು ಹೊತ್ತು ನಗಿಸುತ್ತಾರೆ. ಹಿನ್ನೆಲೆ ಸಂಗೀತ ಅಚ್ಚುಕಟ್ಟಾಗಿದೆ. ಸಿನಿಮಾದಲ್ಲಿ ನಿರ್ದೇಶಕರ ಹುರುಪು ಕಾಣಿಸುತ್ತದೆ. ಸಾಧಾರಣವಾದ ಕಥೆಗೆ ಭಿನ್ನ ಆಯಾಮಗಳನ್ನು ಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಚಿತ್ರಕಥೆಯಲ್ಲಿ ಎಲ್ಲವನ್ನೂ ವಿಸ್ತೃತವಾಗಿ ಹೇಳಲು ಹೊರಟು ಕೊಂಚ ಎಡವಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.