ADVERTISEMENT

ದಸ್ಕತ್ ಸಿನಿಮಾ ವಿಮರ್ಶೆ: ತುಳುನಾಡಿನ ಆಚರಣೆಗಳ ಕಥನ

ವಿನಾಯಕ ಕೆ.ಎಸ್.
Published 10 ಮೇ 2025, 0:29 IST
Last Updated 10 ಮೇ 2025, 0:29 IST
   

ತುಳು ಕಮರ್ಷಿಯಲ್‌ ಚಿತ್ರಗಳೆಂದರೆ ಒಂದಷ್ಟು ಜನಪ್ರಿಯ ರಂಗಭೂಮಿ ಕಲಾವಿದರಿರಬೇಕು. ಕಥೆಗೆ ಅಗತ್ಯವಿರಲಿ, ಇರದಿರಲಿ, ಹಾಸ್ಯವಿರಬೇಕು. ವಾಟ್ಸ್‌ ಆ್ಯಪ್‌ನಲ್ಲಿ, ರಂಗಭೂಮಿಯಲ್ಲಿ ಓಡಾಡಿದ, ಡಬಲ್‌ ಮೀನಿಂಗ್‌ ಎನಿಸುವ ಮಾತುಗಳು ಬೇಕೇಬೇಕು ಎಂಬ ವಾಡಿಕೆಯನ್ನು ಮುರಿದಿರುವ ಚಿತ್ರ ‘ದಸ್ಕತ್‌’. ಈಗಾಗಲೇ ತುಳುವಿನಲ್ಲಿ ಯಶಸ್ವಿಯಾಗಿರುವ ಚಿತ್ರ ಕನ್ನಡಕ್ಕೆ ಡಬ್‌ ಆಗಿದೆ. ಒಂದು ಗ್ರಾಮ ಪಂಚಾಯ್ತಿಯ ಕಥೆಯನ್ನು ಇಟ್ಟುಕೊಂಡು, ಎಲ್ಲಿಯೂ ಬಲವಂತವಾಗಿ ನಗಿಸಲು ಯತ್ನಿಸದೆ ತುಳುನಾಡಿನ ಸಂಸ್ಕೃತಿ, ಆಚರಣೆಗಳನ್ನು ಕಟ್ಟಿಕೊಡಲಾಗಿದೆ.

ತುಳುನಾಡಿನ ಒಂದು ಕುಗ್ರಾಮ ಕೆಪುಲ. ಭೂತಕೋಲ ಕಟ್ಟುವವರು, ಹುಲಿವೇಷ ಹಾಕುವವರೇ ಹೆಚ್ಚಿರುವ ಗ್ರಾಮವದು. ಅಲ್ಲಿನ ಗ್ರಾಮ ಪಂಚಾಯ್ತಿ ಅಧಿಕಾರಿ ಗುಣಪಾಲ. ಈತ ಕೂಡ ಅದೇ ಊರಿನವನು. ಭ್ರಷ್ಟನಾಗಿರುವ ಈತ ಇಡೀ ಊರನ್ನೇ ಹೆದರಿಸಿಟ್ಟುಕೊಂಡಿರುತ್ತಾನೆ. ತನ್ನ ವಿರುದ್ಧ ತಿರುಗಿ ಬಿದ್ದವರ ಧ್ವನಿ ಅಡಗಿಸುತ್ತಾನೆ. ಹೀಗಾಗಿ ಇವನ ವಿರುದ್ಧ ನಿಲ್ಲಲ್ಲು ಯಾರೂ ಮುಂದೆ ಬರುವುದಿಲ್ಲ. ಕೊನೆಗೆ ಶೇಖರ ಎಂಬ ಯುವಕ ಇವನಿಂದಾದ ಅವಮಾನಗಳನ್ನು ಸಹಿಸಲಾಗದೆ ಈತನ ವಿರುದ್ಧ ನಿಲ್ಲುತ್ತಾನೆ. ಇಡೀ ಊರು ಶೇಖರನಿಗೆ ಜೊತೆಯಾಗುತ್ತದೆ. ಈ ಹೋರಾಟದಲ್ಲಿ ಊರಿನವರು ಗೆಲ್ಲುತ್ತಾರಾ ಇಲ್ಲವಾ ಎಂಬುದೇ ಚಿತ್ರಕಥೆ. ಈ ಕಥೆಯನ್ನು ಹೇಳಲು ನಿರ್ದೇಶಕರು ಆಯ್ದುಕೊಂಡ ಮಾರ್ಗ ಬಹಳ ಸೊಗಸಾಗಿದೆ. ಆಟಿ ಋತುವಿನಲ್ಲಿ ಕೋಲ ಕಟ್ಟುವವರು ಆಚರಿಸುವ ಆಟಿಕಳಂಜ, ಪುರುಷ ವೇಷ ಮೊದಲಾದ ತುಳುನಾಡಿನ ಆಚರಣೆಗಳನ್ನು ಬಳಸಿಕೊಂಡು ಕಥೆ ಹೇಳುತ್ತ ಹೋಗುತ್ತಾರೆ.

ಈ ಸಿನಿಮಾಕ್ಕೆ ನಿರ್ದಿಷ್ಟವಾದ ನಾಯಕನಿಲ್ಲ. ಗುಣಪಾಲನ ವಿರುದ್ಧ ಶೇಖರ ಮುಂದಾಳತ್ವ ವಹಿಸಿದರೂ, ಒಂದು ರೀತಿ ಊರಿನವರೆಲ್ಲ ಹೋರಾಡುತ್ತಾರೆ. ಹೀಗಾಗಿ ಕಥೆ ನಾಲ್ಕಾರು ಪಾತ್ರಗಳ ಮೇಲೆ ಹಂಚಿಹೋಗುತ್ತದೆ. ಇದು ಚಿತ್ರದ ಕೊರತೆಯೂ ಹೌದು. ಊರು, ಅಲ್ಲಿನ ಕುಟುಂಬಗಳು, ಸಂಸ್ಕೃತಿ, ಆಚರಣೆಗಳಲ್ಲಿಯೇ ಚಿತ್ರದ ಮೊದಲಾರ್ಧ ಮುಗಿದು ಹೋಗುತ್ತದೆ. ಅದದೇ ಸನ್ನಿವೇಶಗಳು, ಜಾಗ, ಮಾತುಗಳಿಂದ ಮೊದಲಾರ್ಧ ನೋಡುಗನ ತಾಳ್ಮೆ ಪರೀಕ್ಷಿಸುತ್ತದೆ. ದ್ವಿತೀಯಾರ್ಧದಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತವೆ. ಇಲ್ಲಿ ನಾಯಕ–ಖಳನಾಯಕನ ನೇರ ಸೆಣಸಾಟದ ಸನ್ನಿವೇಶಗಳನ್ನು ಸೃಷ್ಟಿಸುವ ಅವಕಾಶ ನಿರ್ದೇಶಕರಿಗಿತ್ತು.

ADVERTISEMENT

ಇಲ್ಲಿನ ಬಹುತೇಕ ಕಲಾವಿದರು ಹಿರಿತೆರೆಗೆ ಹೊಸಬರು. ಹೀಗಾಗಿ ಅಭಿನಯ ನೈಜವಾಗಿದೆ. ವಯಸ್ಸಾದವರ ಪಾತ್ರಗಳಿಗೆ ಊರಿನವರನ್ನೇ ಬಳಸಿಕೊಂಡಿರುವುದು, ಮನೆಗಳು, ಪರಿಸರ ಇತ್ಯಾದಿ ಊರಿನ ನೈಜ ಚಿತ್ರಣವನ್ನೇ ತೆರೆಯ ಮೇಲೆ ತಂದಿರುವುದು ಅದೇ ಊರಿನಲ್ಲಿ ನಿಂತು ಕಥೆಯನ್ನು ನೋಡುತ್ತಿದ್ದೇವೆ ಎಂಬಂಥ ಅನುಭವ ನೀಡುತ್ತದೆ. ಸಂತೋಷ್‌ ಆಚಾರ್ಯ ಛಾಯಾಚಿತ್ರಗ್ರಹಣ ಸಿನಿಮಾದ ಶಕ್ತಿ. ಡಬ್ಬಿಂಗ್‌ನಲ್ಲಿ ಸಾಕಷ್ಟು ಮಾತುಗಳು ತುಳುವಿನಲ್ಲಿಯೇ ಉಳಿದಿವೆ. ಮತ್ತೊಂದಷ್ಟು ತುಳುವಿನಲ್ಲಿ ಕೇಳಿದರೆ ಚೆಂದವಿತ್ತು ಎಂಬಂತಿವೆ.

ಇಡೀ ಊರನ್ನು ಎದುರು ಹಾಕಿಕೊಳ್ಳುವ ಖಳನಾಯಕನ ನಟನೆಯನ್ನು ಇನ್ನಷ್ಟು ಉತ್ತಮವಾಗಿಸಬಹುದಿತ್ತು. ಕಥೆಯ ಎಳೆ ಚೆನ್ನಾಗಿದೆ. ಆಯ್ದುಕೊಂಡ ಪರಿಸರ, ಪಾತ್ರಗಳು ಪೂರಕವಾಗಿವೆ. ಒಟ್ಟಾರೆ ಚಿತ್ರಕಥೆಯನ್ನು ಬಿಗಿಯಾಗಿಸುವ ಅವಕಾಶ ನಿರ್ದೇಶಕರಿಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.