ADVERTISEMENT

ಪೆಪೆ ಸಿನಿಮಾ ವಿಮರ್ಶೆ: ಹಳೆ ಕಥೆಗೆ ಹೊಸ ದೃಶ್ಯ ಸ್ಪರ್ಶ!

ಕೊಡಗಿನ ಕಾಡು, ಸಂಸ್ಕೃತಿ, ಕಾಡು ಜನರ ಹಾಡಿ ಚಿತ್ರಣ ಸೊಗಸಾಗಿದೆ

ವಿನಾಯಕ ಕೆ.ಎಸ್.
Published 30 ಆಗಸ್ಟ್ 2024, 12:16 IST
Last Updated 30 ಆಗಸ್ಟ್ 2024, 12:16 IST
<div class="paragraphs"><p>ಪೆಪೆ ಸಿನಿಮಾ</p></div>

ಪೆಪೆ ಸಿನಿಮಾ

   

1990ರ ದಶಕದಲ್ಲಿ ನಂಜನಗೂಡು ಸಮೀಪದ ಬದನವಾಳು ಗ್ರಾಮದಲ್ಲಿ ನಡೆದ ದಲಿತರ ಹತ್ಯಾಕಾಂಡವೇ ‘ಪೆಪೆ’ ಚಿತ್ರದ ಕಥೆಯ ಸಾರಾಂಶ. ಹಾಗಂತ ಹತ್ಯಾಕಾಂಡವನ್ನೇ ಯಥಾವತ್ತಾಗಿ ಸಿನಿಮಾ ಮಾಡಿಲ್ಲ. ಕೊಡಗಿನ ಕಾಲ್ಪನಿಕ ಬದನಾಳು ಗ್ರಾಮದಲ್ಲಿನ ನಾಲ್ಕು ಬೇರೆ, ಬೇರೆ ಜಾತಿಗಳ ನಡುವೆ ನೀರಿನ ತೊರೆಗಾಗಿ ನಡೆಯುವ ಸಂಘರ್ಷವೇ ಮುಖ್ಯ ಕಥಾವಸ್ತು. ಇದು ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಸಂಘರ್ಷ. ಚಿತ್ರದ ನಾಯಕ ‘ಪೆಪೆ’ ಕೆಳಜಾತಿಯವರ ಪ್ರತಿನಿಧಿಯಾಗಿರುತ್ತಾನೆ. ಚಿತ್ರದ ಬಹುದೊಡ್ಡ ಕೊರತೆಯೇ ದುಬರ್ಲ ಕಥೆ.

ಜಾತಿ ಸಂಘರ್ಷ, ಮೂಢನಂಬಿಕೆ, ಪುರುಷ ಪ್ರಾಬಲ್ಯ, ಮಹಿಳಾ ದೌರ್ಜನ್ಯಗಳ ವಿರುದ್ಧ ಒಂದೇ ಕಥೆಯಲ್ಲಿ ಅರಿವು ಮೂಡಿಸುವ ನಿರ್ದೇಶಕರ ಯತ್ನ ಕಥೆಗೆ ಬಲವಂತವಾಗಿ ಒಂದಷ್ಟನ್ನು ತುರುಕಿದ ಭಾವನೆ ಮೂಡಿಸುತ್ತದೆ. ಕೆಳಜಾತಿಯವರ ಕೇರಿಗೆ ಬೆಂಕಿ ಇಟ್ಟಾಗ ರಸ್ತೆಯಲ್ಲಿ ಸುರಿದು ಬಿದ್ದ ಅಕ್ಕಿಯನ್ನು ಹೆಕ್ಕುವ ಅಜ್ಜಿ, ಹೆಣ್ಣಿನ ಮುಟ್ಟಿನ ಕುರಿತಾದ ದೃಶ್ಯಗಳಂತಹ ಕೆಲವಷ್ಟು ಕೃತಕವೆನಿಸುತ್ತವೆ. ಜೊತೆಗೆ ಈ ರೀತಿಯ ಸಾಕಷ್ಟು ಸಿನಿಮಾಗಳು ಈಗಾಗಲೇ ಬಂದಿರುವುದರಿಂದ ಹೊಸತೇನು ಕಾಣಿಸುವುದಿಲ್ಲ. ಆದರೆ ನಿರ್ದೇಶಕ ಶ್ರೀಲೇಶ್‌ ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಅನನ್ಯವಾಗಿದೆ. ಮಲಯಾಳದ ‘ಅಂಗಮಾಲಿ ಡೈರೀಸ್‌’, ‘ಕಮ್ಮಾಟಿಪಾಡಂ’ ಮೊದಲಾದ ಚಿತ್ರಗಳ ರೀತಿಯಲ್ಲಿ ನಿರ್ದೇಶಕರು ‘ಪೆಪೆ’ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಛಾಯಾಚಿತ್ರಗ್ರಹಣ, ಸಂಕಲನ ಕೂಡ ಇದಕ್ಕೆ ಪೂರಕವಾಗಿದೆ.

ADVERTISEMENT

ಕೊಡಗಿನ ಕಾಡು, ಸಂಸ್ಕೃತಿ, ಕಾಡು ಜನರ ಹಾಡಿ ಚಿತ್ರಣ ಸೊಗಸಾಗಿದೆ. ಫೈಟ್‌ ದೃಶ್ಯಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಸನ್ನಿವೇಶಗಳು ನೈಜ ಸ್ಥಳಗಳಲ್ಲಿಯೇ ನಡೆಯುತ್ತವೆ. ಪಾತ್ರಗಳ ನಡುವಿನ ಸಂಬಂಧ, ಭಾವನೆಗಳನ್ನು ಬಹಳ ಸಹಜವಾಗಿಡಲು ನಿರ್ದೇಶಕರು ಯತ್ನಿಸಿದ್ದಾರೆ. ಬಹುತೇಕ ಎಲ್ಲ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನಿರ್ದೇಶಕರು ಬಹಳ ತಾಳ್ಮೆಯಿಂದ ಕಥೆಯನ್ನು ಹೇಳಿರುವುದು ಸಾಕಷ್ಟು ಕಡೆ ನೋಡುಗನ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಕಥೆಯಲ್ಲಿ ಹೆಚ್ಚು ತಿರುವು ಇಲ್ಲದೇ ಇರುವುದರಿಂದ, ಬಹಳ ಕಡೆ ನಿರೀಕ್ಷಿಸಿದಂತೆಯೇ ಕಥೆ ನಡೆಯುವುದರಿಂದ ದ್ವಿತೀಯಾರ್ಧವನ್ನು ಸ್ವಲ್ಪ ವೇಗವಾಗಿಸಿ ಸಿನಿಮಾ ಅವಧಿಯನ್ನು ಕೊಂಚ ತಗ್ಗಿಸುವ ಅವಕಾಶ ನಿರ್ದೇಶಕರಿಗಿತ್ತು. 

ಚಿತ್ರದಲ್ಲಿ ಶೀರ್ಷಿಕೆ ಗೀತೆ ಬಿಟ್ಟರೆ ಬೇರೆ ಹಾಡಿಲ್ಲ. ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನೆಲೆ ಸಂಗೀತ ಆಪ್ತವಾಗಿದೆ. ಆ್ಯಕ್ಷನ್‌ ದೃಶ್ಯಗಳ ಸಂಯೋಜನೆ ಹೊಸತೆನಿಸುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.