ADVERTISEMENT

Film Review: ‘ವಿಷ್ಣು–ಪ್ರಿಯಾ’ಳ ಗಂಭೀರ ಪ್ರೇಮಕಥೆ

ವಿನಾಯಕ ಕೆ.ಎಸ್.
Published 21 ಫೆಬ್ರುವರಿ 2025, 11:47 IST
Last Updated 21 ಫೆಬ್ರುವರಿ 2025, 11:47 IST
ಪ್ರಿಯಾ, ಶ್ರೇಯಸ್‌
ಪ್ರಿಯಾ, ಶ್ರೇಯಸ್‌   

ಕನ್ನಡದಲ್ಲಿ ಮಲಯಾಳದ ರೀತಿಯ ಸಿನಿಮಾಗಳು ಬರುವುದಿಲ್ಲ ಎಂಬುದಕ್ಕೆ ಅಪವಾದದಂತಿರುವ ಚಿತ್ರ ‘ವಿಷ್ಣುಪ್ರಿಯ’. ನಿಧಾನವಾದ ಆರಂಭ, ಮಧ್ಯದಲ್ಲಿ ಟ್ವಿಸ್ಟ್‌, ಕುತೂಹಲಕಾರಿ ಅಂತ್ಯದೊಂದಿಗೆ ಮಲಯಾಳ ಸಿನಿಮಾದ ಅನುಭವ ನೀಡುವ ಚಿತ್ರವಿದು. ಇದಕ್ಕೆ ಕಾರಣ ನಿರ್ದೇಶಕ ವಿ.ಕೆ.ಪ್ರಕಾಶ್‌ ಮತ್ತು ಸಂಗೀತ ನಿರ್ದೇಶಕ ಗೋಪಿಸುಂದರ್‌. ಇಬ್ಬರೂ ಮಲಯಾಳ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಆದರೂ ಇದು ಅಪ್ಪಟ ಕನ್ನಡದ ಚಿತ್ರ. ಈ ಹಿಂದೊಂದು ಕನ್ನಡ ಚಿತ್ರ ಮಾಡಿದ್ದ ನಿರ್ದೇಶಕರಿಗೆ ಕನ್ನಡ ಗೊತ್ತಿರುವುದರಿಂದ ಎಲ್ಲಿಯೂ ನೆಟಿವಿಟಿಗೆ ಧಕ್ಕೆ ಬರದಂತೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಕಥೆ ನಡೆಯುವುದು ಚಿಕ್ಕಮಗಳೂರಿನ ಗಿರಿಶಿಖರದ ತುತ್ತತುದಿಯಲ್ಲಿ. ಹೀಗಾಗಿ ದೃಶ್ಯ ವೈಭವದಿಂದಲೇ ಚಿತ್ರ ಪ್ರಾರಂಭವಾಗುತ್ತದೆ. ಶೀರ್ಷಿಕೆಯೇ ಹೇಳುವಂತೆ ಇದು ಕಾಲೇಜು ಹುಡುಗ ವಿಷ್ಣು ಮತ್ತು ಪ್ರಿಯಾಳ ಕಥೆ. ಆದರೆ ಮೊದಲಾರ್ಧದಲ್ಲಿ ಕಾಲೇಜಿನ ಸನ್ನಿವೇಶಗಳು ಹೆಚ್ಚು ಬರುವುದಿಲ್ಲ. ಈ ಎರಡು ಪಾತ್ರಗಳ ಮೇಲೆಯೇ ಅರ್ಧ ಸಿನಿಮಾ ಸಾಗುತ್ತದೆ. ಅವರಿಬ್ಬರ ಪ್ರೀತಿಯನ್ನು ನಿಧಾನಕ್ಕೆ ಕಟ್ಟಿಕೊಡುತ್ತ ಹೋಗುತ್ತಾರೆ. ಕಥೆ ಎಲ್ಲಿಗೂ ಸಾಗುತ್ತಲೇ ಇಲ್ಲ ಎನ್ನಿಸುವ ಹೊತ್ತಿಗೆ ಕೌಟಂಬಿಕ ಟ್ವಿಸ್ಟ್‌ ತರುತ್ತಾರೆ. ಅಲ್ಲಿಂದ ಚಿತ್ರ ವೇಗ ಪಡೆದುಕೊಳ್ಳುತ್ತದೆ. 

ಇದು 90ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಹೀಗಾಗಿ ಕಥೆ ಒಂದು ಚೌಕಟ್ಟಿನಲ್ಲಿ ನಡೆಯುತ್ತದೆ. ಸುತ್ತಲಿನ ಪರಿಸರ ಆ ಕಾಲಘಟ್ಟದ್ದು ಎಂದು ತೋರಿಸಲು ನಿರ್ದೇಶಕರು ಯತ್ನಿಸಿದ್ದಾರೆ. ಆದರೆ ನಟನಟಿಯರ ವೇಷಭೂಷಣದ ಮೇಲೆ ಸ್ವಲ್ಪ ಗಮನಹರಿಸುವ ಅಗತ್ಯವಿತ್ತು. ಚಿತ್ರದ ಮೊದಲಾರ್ಧದಲ್ಲಿ ಹೆಚ್ಚೇನು ಕಥೆ ನಡೆಯುವುದಿಲ್ಲ. ವಿಷ್ಣು ಮತ್ತು ಪ್ರಿಯಾಳ ಪ್ರೇಮದ ನಡುವೆ ಇಬ್ಬರ ಕುಟುಂಬದ ನಡುವಿನ ಸಂಘರ್ಷವನ್ನು ತಂದಿಡುತ್ತಾರೆ. ಅದನ್ನು ಬಿಡಿಸುವುದು ಚಿತ್ರದ ದ್ವಿತೀಯಾರ್ಧ. 

ADVERTISEMENT

ಹಾಸ್ಯ ಕುರಿತು ನಿರ್ದೇಶಕರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಭಾವತೀವ್ರವಾದ, ಗಂಭೀರವಾದ ಪ್ರೇಮಕಥೆಯನ್ನೇ ಹೇಳಿಕೊಂಡು ಹೋಗುತ್ತಾರೆ. ಇಡೀ ಚಿತ್ರದ ಶಕ್ತಿ ಗೋಪಿಸುಂದರ್‌ ಹಿನ್ನೆಲೆ ಸಂಗೀತ ಮತ್ತು ವಿನೋದ್‌ ಭಾರತಿ ಅವರ ಛಾಯಾಚಿತ್ರಗ್ರಹಣ. ಆದರೆ ಹಾಡಿನಲ್ಲಿ ಈ ಸೊಬಗು ಕಾಣುವುದಿಲ್ಲ. ಒಂದು ಹಾಡು ಮಾತ್ರ ಮತ್ತೆ ಗುನುಗಿಕೊಳ್ಳುವಂತಿದೆ. ಶ್ರೇಯಸ್‌ ಮಂಜು ನಟನೆಯಲ್ಲಿ ಹಿಂದಿನ ಸಿನಿಮಾಗಳಿಗಿಂತ ತುಸು ಪ‍ಕ್ವವಾಗಿದ್ದಾರೆ. ಪ್ರಿಯಾ ವಾರಿಯರ್‌ ಕಣ್ಸನ್ನೆಯಿಂದಲೇ ಮಾತಾಡುತ್ತಾರೆ. ಅದದೇ ಜಾಗ, ಅದದೇ ಪಾತ್ರಗಳ ಸುತ್ತ ಕಥೆ ಸಾಗುವುದನ್ನು ಸ್ವಲ್ಪ ತಗ್ಗಿಸಿ ಚಿತ್ರದ ಅವಧಿಯನ್ನು 15–20 ನಿಮಿಷ ಕಡಿಮೆ ಮಾಡುವ ಅವಕಾಶ ನಿರ್ದೆಶಕರಿಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.