‘ಅಮರ ಮಧುರ ಪ್ರೇಮ’ ನಾಟಕದಲ್ಲಿ ಸುಂದರ್ ವೀಣಾ, ಯಶವಂತ ಸರದೇಶಪಾಂಡೆ, ವೀಣಾ ಸುಂದರ್
ನಿವೃತ್ತರಾದ ಅಮರನಾಥ ಕಟಗೇರಿ ಹೆಂಡತಿಯನ್ನು ಕಳೆದುಕೊಂಡವರು, ಮನೆಯ ಜವಾಬ್ದಾರಿ ನಿಭಾಯಿಸುವುದರಲ್ಲಿ ಐದು ದಶಕ ಜೀವ ತೇಯ್ದು, ಕೀರ್ತನಕಾರಳಾಗಿರುವ ಮಧುರಾ ಕಾಮತ್, ಬದುಕಿನ ಎರಡನೆಯ ಇನ್ನಿಂಗ್ಸ್‌ನಲ್ಲಿ ಜೊತೆಗಾರರಿದ್ದರೆ ಸೊಗಸು ಎಂದು ನಂಬಿ, ಸಂಗಾತಿಗಳನ್ನು ಜೊತೆಗೂಡಿಸುವವ ಪ್ರೇಮ್ ಸ್ವರೂಪ್.
ಈ ಮೂವರ ಸಂಗಮವೇ ‘ಅಮರ ಮಧುರ ಪ್ರೇಮ’ ನಾಟಕ. ಹೀಗೆ ಮೂರು ಸಾಲುಗಳಲ್ಲಿ ಹೇಳಿ ಮುಗಿಸುವಷ್ಟು ಸರಳವಲ್ಲ ಕತೆ. ಈ ಕತೆಯೊಳಗೆ ವೃದ್ಧಾಪ್ಯದ ಒಂಟಿತನದ ವೇದನೆ ಇದೆ. ಹಲವಾರು ದಶಕಗಳನ್ನು ಒಂಟಿಯಾಗಿ ಕಳೆದ ಹೆಣ್ಣುಮಗಳೊಬ್ಬಳು ಸೂಕ್ತ ಸಾಂಗತ್ಯಕ್ಕಾಗಿ ಹಾತೊರೆಯುವ ಸಂವೇದನೆ ಇದೆ. ಇವರಿಬ್ಬರನ್ನೂ ಒಟ್ಟುಗೂಡಿಸುವ ಭರದಲ್ಲಿ ಮಧ್ಯಸ್ಥಿಕೆ ವಹಿಸಿರುವ ಪ್ರೇಮ್ ಸ್ವರೂಪ್ ಪಾತ್ರವೂ ಪ್ರೇಮದ ಬಲೆಗೆ ಬೀಳುವ ಕತೆಯೂ ಸೇರಿದೆ.
ಎಂದಿನಂತೆ ಯಶವಂತ ಸರದೇಶಪಾಂಡೆ ಅವರ ಉತ್ತರ ಕರ್ನಾಟಕದ ಭಾಷೆ ನಾಟಕದ ಪ್ಲಸ್ ಪಾಯಿಂಟಾಗಿದ್ದರೆ, ಈ ಸಲ ವೀಣಾ ಸುಂದರ್ ಮತ್ತು ಸುಂದರ್ ವೀಣಾ ಅವರ ಶಿಷ್ಟ ಭಾಷೆಯೂ ಜೊತೆಗೂಡಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನದಿಂದ ಬಂದ ಕುಟುಂಬವೊಂದರ ಮೂರು ಮತ್ತು ನಾಲ್ಕನೆ ತಲೆಮಾರು ವಧು–ವರ ವೇದಿಕೆಯನ್ನು ನಡೆಸುತ್ತಿದೆ. ಆದರೆ ಈಗ ಅದು ಮಾಗಿದ ಮನಸುಗಳ ಸಂಗಮವೆಂಬ ಟ್ಯಾಗ್‌ಲೈನಿನೊಂದಿಗೆ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಸಾಂಗತ್ಯ ಬಯಸುವ ಜೋಡಿಗಳನ್ನು ಬೆಸೆಯುವ ಕೆಲಸ ನಡೆಸುತ್ತಿದೆ.
ಸ್ವಾತಂತ್ರ್ಯಪೂರ್ವದ ಕತೆ, ದೇಶ ಇಬ್ಭಾಗವಾಗುವ ಸಂದರ್ಭದಲ್ಲಿ ಮಿಡಿದ ಮಾನವೀಯತೆ, ಆ ಸಂದರ್ಭದ ಋಣ ಸಂದಾಯ ಇವೆಲ್ಲವೂ ನಾಟಕದ ಒಂದು ಭಾಗ. ಇನ್ನೊಂದು ಇಬ್ಬರನ್ನು ಕೂಡಿಸುವ ಪಣ ತೊಟ್ಟ ಪ್ರೇಮ್ ಸ್ವರೂಪ್ ಸಹ ಮೇಲಿಂದ ಮೇಲೆ ಭೇಟಿಯಾಗುತ್ತ, ತಾನೂ ಮಧುರಾ ಪಾತ್ರವನ್ನು ಪ್ರೇಮಿಸತೊಡಗುತ್ತಾರೆ. ಪ್ರೇಮ್ ಸ್ವರೂಪ್ ಇಲ್ಲಿ ತಮ್ಮ ಮೋಹಕ್ಕೆ ಸೋಲುತ್ತಾರೋ, ಕರ್ತವ್ಯವನ್ನು ನೆನಪಿಸಿಕೊಂಡು ಪ್ರೇಮವನ್ನು ತ್ಯಾಗ ಮಾಡುತ್ತಾರೋ? ಮಧುರಾಳ ಒಲವು ಯಾರಿಗೆ ದೊರೆಯಿತು? ಎನ್ನುವುದೇ ಕುತೂಹಲ.
ರಂಗಭೂಮಿಯಲ್ಲಿ ಯಾವತ್ತಿಗೂ ಅಂತರಂಗವೆಂಬುದು ಬಹಿರಂಗವಾಗಿ ತೋರುತ್ತಿದ್ದರೆ, ಬಹಿರಂಗವಾಗಿ ಕಂಡಿದ್ದು ಅಂತರಂಗದಲ್ಲಿ ಆಲೋಚನಾಸುಳಿಯನ್ನು ಹುಟ್ಟಿಸುತ್ತದೆ. ಅದು ಪಕ್ಕಾ ಮನೋರಂಜನೆಗಾಗಿ ಇರುವ ನಾಟಕ ಎಂದು ಹೇಳಿದ ಮೇಲೂ ಪ್ರೇಕ್ಷಕನ ತಲೆಗೆ ಗುಂಗಿಹುಳ ಬಿಡುವ ಕೆಲಸ ಮಾಡುತ್ತದೆ. ಈ ನಾಟಕ ರಚಿಸಿದ ಕಾಲದಲ್ಲಿ ಬಹುಶಃ ವಿವಾಹ ವಿಚ್ಛೇದನಗಳು ಸಾಮಾನ್ಯವಾಗಿರಲಿಲ್ಲ. ವಿಧವಾ ವಿವಾಹವೂ ವಿಧುರರ ವಿವಾಹದಷ್ಟು ಮನ್ನಣೆ ಪಡೆದಿರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ವಿಧುರನ ಸಾಂಗತ್ಯಕ್ಕೆ ಕುಮಾರಿಯ ಶೋಧವೇ ಯಾಕಾಯಿತು ಎಂದು ಕೂದಲು ಸೀಳುವ ಪ್ರಶ್ನೆಯನ್ನಿರಿಸಿಕೊಂಡು ನೋಡಿದರೆ ನಾಟಕವನ್ನು ಆನಂದಿಸಲಾಗುವುದಿಲ್ಲ. ಆದರೆ ನಾಟಕದ ಅಂತರಂಗವಾಗಿರುವ ಸಾಂಗತ್ಯ ಅದೆಷ್ಟು ಮುಖ್ಯ ಎಂಬ ಪ್ರಶ್ನೆಯನ್ನು ಬಿಡಿಸುತ್ತ ಹೋದರೆ, ಉಳಿದವೆಲ್ಲವೂ ಗೌಣವೆನಿಸತೊಡಗುತ್ತವೆ.
ಮೂಲ ಮರಾಠಿಯ ಈ ನಾಟಕವನ್ನು ಹೇಮಂತ ಎದಲಾಬಾದಕರ ಅವರು ರಚಿಸಿದ್ದಾರೆ. ಕನ್ನಡಕ್ಕೆ ಯಶವಂತ ಸರದೇಶಪಾಂಡೆ ತಂದಿದ್ದಾರೆ. ಎಂದಿನಂತೆ ಉತ್ತರ ಕನ್ನಡದ ಲವಲವಿಕೆಯ ಭಾಷೆ ಇದು ಮೂಲ ಕನ್ನಡದ್ದೇ ರಚನೆ ಎನ್ನುವಷ್ಟು ಆಪ್ತವಾಗಿದೆ.
ಸಂಗೀತವನ್ನು ಪ್ರವೀಣ ಡಿ. ರಾವ್ ಅವರು ನೀಡಿದ್ದು, ರಂಗಸಜ್ಜಿಕೆಯನ್ನು ಜೀವನ್ ಫರ್ನಾಂಡಿಸ್ ನಿರ್ವಹಿಸಿದ್ದಾರೆ. ವೇದಿಕೆಯ ಮೇಲೆ ಮೂರು ನಾಲ್ಕು ಸೆಟ್ಟುಗಳನ್ನು ಪಟಪಟನೆ ಬದಲಿಸುತ್ತ ದೇಗುಲದ ದೃಶ್ಯ, ಜಾಗರ್ಸ್ ಪಾರ್ಕ್ ದೃಶ್ಯ, ಕಚೇರಿಯ ದೃಶ್ಯ ವೇದಿಕೆಯ ಮೇಲೆ ಕಳೆಗಟ್ಟುತ್ತವೆ. ಬೆಳಕಿನ ವಿನ್ಯಾಸವನ್ನು ನಾಗರಾಜ ಪಾಟೀಲ್ ಮಾಡಿದ್ದಾರೆ. ವಸ್ತ್ರಾಲಂಕಾರದ ಹೊಣೆಯನ್ನು ಮಾಲತಿ ಸರದೇಶಪಾಂಡೆ ಹೊತ್ತುಕೊಂಡಿದ್ದಾರೆ. ಮಧುರಾ ಪಾತ್ರ ಉಡುವ ನೌ ವಾರಿ ಸೀರೆ, ನತ್ತು ಗಮನ ಸೆಳೆಯುತ್ತವೆ.
ವೀಣಾ ಸುಂದರ್ ಮತ್ತು ಸುಂದರ್ ವೀಣಾ ಅವರ ಪಾತ್ರಗಳು ಶಿಷ್ಟ ಭಾಷೆಯಲ್ಲಿ ಜನರನ್ನು ಸೆಳೆಯುತ್ತವೆ. ಅವರಿಬ್ಬರ ನಡುವಿನ ಬಾಂಧವ್ಯದ ಸಲುಗೆ ಮತ್ತು ಸದ್ಭಾವಗಳೆರಡೂ ಈ ನಾಟಕದ ಒಳಗುಣಗಳಾಗಿ ಹರಿಯುತ್ತಲೇ ಇರುತ್ತವೆ.
ಮಾತಿನಿಂದಲೂ ನಗೆಹೊನಲು, ಮಾಗಿದ ಆಂಗಿಕ ಚಲನೆಯಿಂದಲೂ ನಗುವಿನ ನದಿ ಸದಾ ಹರಿಯುವಂತೆ ವೇದಿಕೆಯನ್ನು ನಿಭಾಯಿಸುತ್ತಾರೆ.
ಇಡೀ ನಾಟಕವನ್ನು ನೋಡಿದ ಮೇಲೆ ಪ್ರೇಕ್ಷಕನಿಗೆನಿಸುವುದು, ಸಾಂಗತ್ಯವೆಂಬುದು ಕೇವಲ ಅವಲಂಬನೆಯಲ್ಲ. ಕೆಲಸಕ್ಕಾಗಿ, ನೋಡಿಕೊಳ್ಳಲು, ದೇಖುರೇಕಿಗಾಗಿ ಅಲ್ಲವೇ ಅಲ್ಲ. ಸಾಂಗತ್ಯವೆಂದರೆ ನೀನೆನಗೆ, ನಾನಿನಗೆ ಜೇನಾಗುವ, ರಸಗಂಗೆಯಲ್ಲಿ ಮೀನಾಗುವ ಹಾಡಿದ್ದಂತೆ. ಒಲಿದ ಜೀವಗಳು ಜೀವನವನ್ನು ಸವೆಸುವುದಿಲ್ಲ. ಸವಿಯುತ್ತಾರೆ. ಆ ಸವಿ ಸವಿಯಲು ಯಾವ ವಯಸ್ಸಾದರೇನು ಎಂಬ ನಿರಂತರ ಜವ್ವನದ ನೀತಿಯೊಂದು ಹೇಳಿ ಸಾಗುತ್ತದೆ.
ಮೂಲ ಮರಾಠಿ, ರಚನೆ : ಶ್ರೀ ಹೇಮಂತ ಎದಲಾಬಾದಕರ, ಪುಣೆಕನ್ನಡಾನುವಾದ - ನಿರ್ದೇಶನ : ಡಾ ಯಶವಂತ ಸರದೇಶಪಾಂಡೆ ಸಂಗೀತ : ಪ್ರವೀಣ ಡಿ ರಾವ್ಧ್ವನಿ : ಅಂಜಿ ಕೆ ವೀರ ರಂಗ ಸಜ್ಜಿಕೆ : ಜೀವನ ಫರ್ನಾಂಡಿಸ್ ಬೆಳಕು : ನಾಗರಾಜ ಪಾಟೀಲ್ ವಸ್ತ್ರಾಲಂಕಾರ : ಮಾಲತಿ ಸರದೇಶಪಾಂಡೆಪ್ರದರ್ಶನ - ಪ್ರಚಾರ ವ್ಯವಸ್ಥೆ : ಡಾ ಯಶವಂತ ಸರದೇಶಪಾಂಡೆ ನೇಪಥ್ಯ ಸಹಾಯ : ಪ್ರದೀಪ ಮುಧೋಳ ರಂಗ ಮೇಲ್ವಿಚಾರಣೆ : ಜೀವನ ಫರ್ನಾಂಡಿಸ್ ರಂಗದ ಮೇಲೆ :ಪ್ರೇಮಸ್ವರಪ ಪ್ರೇಮಚಂದ ಪ್ರೇಮಾನಂದ ಪಾತ್ರದಲ್ಲಿ : ಶ್ರೀ ಸುಂದರ ವೀಣಾ ಅಮರನಾಥ ಕಟಗೇರಿ ಪಾತ್ರದಲ್ಲಿ : ಡಾ ಯಶವಂತ ಸರದೇಶಪಾಂಡೆ ಮಧುರಾ ಕಾಮತ ಪಾತ್ರದಲ್ಲಿ : ಶ್ರೀಮತಿ ವೀಣಾ ಸುಂದರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.