ADVERTISEMENT

ನಟನೆಗೂ ಸೈ, ಹಿನ್ನಲೆ ಧ್ವನಿಗೂ ಜೈ!

ಹಿತೇಶ ವೈ.
Published 25 ಡಿಸೆಂಬರ್ 2018, 19:45 IST
Last Updated 25 ಡಿಸೆಂಬರ್ 2018, 19:45 IST
ಯುದ್ಧದ ಸನ್ನಿವೇಶ
ಯುದ್ಧದ ಸನ್ನಿವೇಶ   

ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯವನ್ನು ನಾಟಕ ರೂಪಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ(ಎನ್.ಆರ್. ವಿಶುಕುಮಾರ್– ಪರಿಕಲ್ಪನೆ) ತಂದಿದ್ದು, ಕೆ.ಜಿ. ಮಹಾಬಲೇಶ್ವರ ಅವರು ನಿರ್ದೇಶನ ಮಾಡಿದ್ದಾರೆ.

ನಾಟಕದ ಕೇಂದ್ರ ಬಿಂದುವಾಗಿ ರಾವಣನ ಪಾತ್ರದಲ್ಲಿ ಅಭಿನಯಿಸಿರುವ ಎಸ್‌. ಅನುರಾಗ್‌ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.ನಗರದ ಜೈನ್‌ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಅವರು, ದೃಷ್ಟಿ, ಸತ್ರು ಅಂದ್ರೆ ಸತ್ರ?, ಹುಲಿಯ ನಾಟಕ, ಮೂರು ತಾಸಿನ ಸಂಗೀತ,ಹುಲಿಯ ನೆರಳು, ಅಗ್ನಿ ಮತ್ತು ಮಳೆ ಎಂಬ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಅವರೊಂದಿಗಿನ ಮಾತುಕತೆ ಇಲ್ಲಿದೆ.

ರಾಮಾಯಣ ದರ್ಶನಂ ನಾಟಕದ ಬಗ್ಗೆ ಹೇಳಿ?

ADVERTISEMENT

ಇದರ ಅನುಭವ ನಿಜಕ್ಕೂ ವಿಸ್ತಾರವಾದ್ದದು, ಈ ನಾಟಕದಲ್ಲಿ 30 ವರ್ಷಗಳಿಂದ ನಟಿಸಿರುವ ಕಲಾವಿದರಿದ್ದಾರೆ. ಅವರಿಂದ ಕಲಿಯುವುದು ತುಂಬಾ ಇದೆ. ಹಿರಿಯ ನಟರ ನಟನಾ ಕೌಶಲ ಮತ್ತು ಬದ್ಧತೆಯನ್ನು ಅನುಕರಿಸಲು ಇದು ಸಹಾಯಕ. ದೊಡ್ಡ ಪಾತ್ರವನ್ನು ಅಚ್ಚುಕಟ್ಟಾಗಿ ರಂಗದ ಮೇಲೆ ತಂದಿರುವ ಖುಷಿ ಇದೆ.

ಇಷ್ಟು ದೊಡ್ಡ ಪಾತ್ರ ಸಿಕ್ಕಿದ್ದು ಹೇಗೆ?

ರಾವಣನ ಪಾತ್ರವೂ ಅದೃಷ್ಟದಂತೆ ಒಲಿದು ಬಂತು. ಮೊದಲು ಹನುಮಂತನ ಪಾತ್ರಸಿಕ್ಕಿತು. ‘ಒಂದೆರಡು ಹಾಡು ಹಾಕಿಸುತ್ತೀನಿ ಡ್ಯಾನ್ಸ್‌ ಮಾಡಯ್ಯ’ ಅಂತ ಸರ್‌ ಹೇಳಿದ್ರು.ನಾಟಕದಲ್ಲಿ ಆದ ಪಾತ್ರ ಬದಲಾವಣೆಗಳಿಂದ ರಾವಣನ ಪಾತ್ರ ಸಿಕ್ಕಿತು.

ನಾಟಕದ ತಯಾರಿಯ ಬಗ್ಗೆ ಹೇಳಿ?

ನಾಟಕಕ್ಕೆ ಗಂಟೆ ಗಟ್ಟಲೆ ತಾಲೀಮು ನಡೆಸಿದ್ದೆವು. ಉಳಿದ ನಾಟಕಗಳಲ್ಲಿ ಒಂದು ಡೈಲಾಗ್‌ ಮರೆತು ಹೋದರು ನಾವೇ ಏನಾದರು ಸೇರಿಸಿ ಕೊಂಡು ನಿಭಾಯಿಸ ಬಹುದು. ಆದರೆ ಈ ನಾಟಕದಲ್ಲಿ ಆ ಪ್ರಯೋಗ ಸಾಧ್ಯವಿಲ್ಲ.

ಹಾವಭಾವಗಳು ಅಷ್ಟು ಆಳಕ್ಕೆ ಇಳಿದದ್ದು ಹೇಗೆ?

ಆ ಪಾತ್ರವೇ ಅದಕ್ಕೆ ಕಾರಣ. ಎಲ್ಲರ ದೃಷ್ಟಿಯಲ್ಲಿ ರಾವಣನೇ ಬೇರೆ, ಕುವೆಂಪು ದೃಷ್ಟಿಯಲ್ಲಿನ ರಾವಣನೇ ಬೇರೆ. ಸೀತೆಯನ್ನು ಅಪಹರಿಸಿದ ನಂತರ, ರಾವಣ ಸಂತೋಷದಿಂದ ಇರಲಿಲ್ಲ, ಅವನಲ್ಲಿ ಗೊಂದಲವಿತ್ತು ಎನ್ನುವುದನ್ನು, ಯುದ್ಧದ ಸಮಯದಲ್ಲಿ ತನ್ನವರನ್ನು ಕಳೆದುಕೊಂಡಾಗ ತೊಳಲಾಟ ಅನುಭವಿಸಿದ್ದ ಎನ್ನುವ ಅಂಶಗಳು ನಾಟಕದಲ್ಲಿ ಇರುವುದರಿಂದಲೇ ವಿಭಿನ್ನವಾಗಿ ಅಭಿನಯಿಸಲು ಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇಈ ರಾವಣ ನಮ್ಮನ್ನು ನಗಿಸುತ್ತಾನೆ, ದುಃಖಕ್ಕೆ ದೂಡುತ್ತಾನೆ, ಮರುಗುವಂತೆಯೂ ಮಾಡುತ್ತಾನೆ.

ರಂಗಭೂಮಿಗೆ ಪ್ರವೇಶಿಸಿದ್ದು ಹೇಗೆ?

ಶಾಲೆಯಲ್ಲಿ ನಡೆದ ನಾಟಕಕ್ಕೆ ಮೇಷ್ಟ್ರು ನನ್ನನ್ನು ಸೇರಿಸಿಕೊಳ್ಳದೆ ಇದ್ದದ್ದೆ ಇಂದು ನಾಟಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕಾರಣ! ಇದಕ್ಕಿದ್ದಂಗೆ ಬಂದು ನಾಟಕದಲ್ಲಿ ಪಾತ್ರ ಕೇಳಿದರೆ ಹೇಗೆ ಎಂದು ಮೇಷ್ಟ್ರು ನಾಟಕಕ್ಕೆ ಸೇರಿಸಿ ಕೊಂಡಿರಲಿಲ್ಲ. ಅವರ ಮುಂದೆಯೇ ನಾಟಕದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡೆ.

ಮೈಸೂರಿನ ಮಂಡ್ಯ ರಮೇಶ್‌ ಅವರ ‘ನಟನ’ ರಂಗಾಯಣದಲ್ಲಿ 5 ವರ್ಷ, ನೀನಾಸಂನಲ್ಲಿ ಒಂದು ವರ್ಷ. ಹಾಗೇ ಮೈಸೂರಿನ ‘ನಿರಂತರ’ ತಂಡದಲ್ಲಿ ಕೆಲಸ ಮಾಡಿದ್ದೇನೆ.

ನಿಮ್ಮೂರಿನ ಬಗ್ಗೆ?

ಅಪ್ಪ ವೃತ್ತಿಯಲ್ಲಿ ಶಿಕ್ಷಕರು ಅವರು ವರ್ಗಾವಣೆಯಾದಂತೆಲ್ಲ ನಮ್ಮ ವಾಸಸ್ಥಾನ ಬದಲಾಗುತ್ತಿತ್ತು. ಏಳು ಕೆರೆ ನೀರು ಕುಡಿದವರು ಎನ್ನುತ್ತಾರಲ್ಲ ಆ ಗುಂಪಿಗೆ ಸೇರಿದವನು ನಾನು.

ಕುಂಭಕರ್ಣನ ಧ್ವನಿ ನೀಡಿರುವುದು ಇವರೇ!

ಈ ನಾಟಕದಲ್ಲಿ ದೇಹವೇ ಇಲ್ಲದ ಪಾತ್ರ ಕುಂಭಕರ್ಣನದು. ಕೇವಲ ಕಾಲು (ಕೃತಕ)ಗಳಿಂದಲ್ಲೇ ಬಂದು ಹೋಗುವ ಪಾತ್ರವದು ಅದಕ್ಕೆ ಜೀವಾಳ (ಧ್ವನಿ) ನೀಡಿರುವುದು ಅನುರಾಗ್‌. ಹೀಗೆ ಹಿನ್ನಲೆ ಧ್ವನಿ ನೀಡಿದ ಕೆಲವೇ ಕ್ಷಣಗಳಲ್ಲಿ ರಾವಣನ ಪಾತ್ರ ರಂಗದ ಮೇಲೆ ಮೂಡಿ ಬರುತ್ತದೆ. ಎರಡು ಕ್ಷಣಗಳಲ್ಲಿ ಧ್ವನಿಯ ಏರಿಳತವನ್ನು ಅವರು ಸರಿ ಮಾಡಿಕೊಳ್ಳುತ್ತಾರೆ. ಈ ಬದಲಾವಣೆ ಪ್ರೇಕ್ಷಕರಿಗೆ ಪಾತ್ರ ಪರಿಚಯ ಮಾಡುವವರೆಗೆ ತಿಳಿಯುವುದೇ ಇಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.