–ಶಂಕರ್ ಸಿ.
ಪಿ.ಡಿ.ಸತೀಶ್ ನಿರ್ದೇಶಿಸಿ, ನಾಗವೇಣಿ ರಂಗನ್ ರಚಿಸಿರುವ ನಗೆನಾಟಕ ವರಲಕ್ಷ್ಮಿ ಅವಾಂತರ ಇತ್ತೀಚೆಗಷ್ಟೆ ಪ್ರರ್ದಶನ ಕಲಾ ಸಂಸ್ಥೆಯಿಂದ ಮೊದಲ ಪ್ರದರ್ಶನ ಕಂಡಿತು. ನೋಡುಗರನ್ನು ನಗೆಗಡಲಲ್ಲಿ ತೇಲಿಸಿದ ಈ ನಾಟಕ ಪ್ರಾಣಿ ಹಾಗೂ ಮನುಷ್ಯನ ಸಂಬಂಧವನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ. ಪ್ರಾಣಿಗಳು ಮನುಷ್ಯರಂತಿರುವ ಈಗಿನ ಕಾಲದಲ್ಲಿ ಪ್ರಾಣಿಯನ್ನು ನಮ್ಮೊಂದಿಗೆ ಸಹಬಾಳ್ವೆ ನಡೆಸುವಂತೆ ಪ್ರೇರೇಪಿಸುವುದು ಈ ನಾಟಕದ ಉದ್ದೇಶವೆನಿಸಿತು. ಹೊಸ ಪ್ರೇಕ್ಷಕರನ್ನು ಹಾಗೂ ರಂಗಕರ್ಮಿಗಳನ್ನು ಹುಟ್ಟುಹಾಕುವ ಉದ್ದೇಶದೊಂದಿಗೆ ಪ್ರಾರಂಭವಾದ ಪ್ರಕಸಂನ ಈ ಪ್ರಯೋಗ ಹೊಸಬರನ್ನೇ ಒಳಗೊಂಡಿದ್ದು ವಿಶೇಷ.
ಕಥೆಯ ಮುಖ್ಯಪಾತ್ರವಾದ ಶ್ರೀಲಕ್ಷ್ಮಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಚಿಂತೆ. ಅವಳ ಗಂಡ ಶೇಷಾದ್ರಿ ಹೆಂಡತಿಯ ಬಗ್ಗೆ ಅತೀವ ಪ್ರೀತಿಯಿರುವ ಯುವಕ. ಪಿಂಟ್ ಪ್ರಸಾದಿ, ಶೇಷಾದ್ರಿಯ ಕಷ್ಟ ಸುಖಗಳಲ್ಲೆಲ್ಲ ಭಾಗಿಯಾಗುವ ಸ್ನೇಹಿತ. ಮಕ್ಕಳಿರದ ಶ್ರೀಲಕ್ಷ್ಮಿಗೆ ತನ್ನ ಪಕ್ಕದ ಮನೆಯ ಮಂಗಳ ಒಂದು ನಾಯಿಮರಿಯನ್ನು ತಂದುಕೊಟ್ಟಾಗ ಶುರುವಾಗುವುದೇ ಈ ನಾಟಕದಲ್ಲಿನ ಅವಾಂತರ. ಆ ನಾಯಿಗೆ ವರಲಕ್ಷ್ಮಿ ಎಂದು ಹೆಸರಿಟ್ಟು ತನ್ನ ಮಗುವಿನಂತೆ ನೋಡಿಕೊಳ್ಳುವ ಶ್ರೀಲಕ್ಷ್ಮಿ ತನ್ನ ಗಂಡನ ಪಾಲಿನ ಪ್ರೀತಿಯನ್ನು ನಾಯಿಗೆ ಕೊಡಲಾರಂಭಿಸಿದಾಗ ಗಂಡ ಶೇಷಾದ್ರಿ ತನ್ನ ಸ್ನೇಹಿತ ಪಿಂಟ್ ಪ್ರಸಾದಿಯ ಐಡಿಯಾದಿಂದ ಹೇಗೆ ಎಲ್ಲವನ್ನು ನಿಭಾಯಿಸಿ ತನ್ನ ಹೆಂಡತಿಯ ಪ್ರೀತಿಯನ್ನು ಗಳಿಸುತ್ತಾನೆ ಎಂಬುದು ಕಥಾವಸ್ತು.
ಮರಿಯಾಗಿ ಬಂದ ನಾಯಿಯು ಸ್ವಲ್ಪ ದೊಡ್ಡದಾದಮೇಲೆ ನಾಯಿಯನ್ನು ಮನುಷ್ಯನ ರೀತಿಯಲ್ಲಿ ತೋರಿಸುವ ನಿರ್ದೇಶಕರ ಪ್ರಯೋಗ ಹಲವು ಶ್ವಾನಪ್ರಿಯರಿಗೆ ಮೆಚ್ಚುಗೆಯ ವಿಷಯವಾಗಿದ್ದು ಸತ್ಯ. ಇತ್ತೀಚೆಗೆ ಹಲವು ರೀತಿಯಲ್ಲಿ ಜನಮನ್ನಣೆ ಪಡೆಯುತ್ತಿರುವ ಸ್ಟಾಂಡಪ್ ಕಾಮೆಡಿಯನ್ನು ನಾಟಕದಲ್ಲಿ ಅಳವಡಿಸಿರುವ ರೀತಿಯು ಹೊಸತನದಿಂದ ಕೂಡಿತ್ತು. ಎಲ್ಲರ ನಟನೆಯೂ ಉತ್ತಮವಾಗಿದ್ದು ಅಲ್ಲಲ್ಲಿ ಬಳಸಿರುವ ಸಿನಿಮಾ ಸಂಗೀತ ಹಾಗೂ ಮಾತುಗಳಿಗೆ ಪ್ರೇಕ್ಷಕರಿಂದ ಚಪ್ಪಾಳೆ ಲಭಿಸಿತು. ಟಿವಿಯಲ್ಲಿ ಬರುವ ಅಂಡಾಂಡ ಗುರೂಜಿ, ಬಾಸ್ ಜೊತೆ ಶೇಷಾದ್ರಿಯ ಮಾತು, ತಾಯಿಯ ಮುಂದೆ ನಾಯಿಗೆ ಸಿಕ್ಕ ಪ್ರೀತಿ ತನಗೆ ಸಿಗಲಿಲ್ಲವೆಂಬ ದೃಶ್ಯ ಮನೆ ಮನೆಯಲ್ಲೂ ನಡೆಯುವ ಸನ್ನಿವೇಶಗಳಾಗಿದ್ದು, ಪ್ರೇಕ್ಷಕರ ಮನಗೆಲ್ಲುವಂತಿತ್ತು. ಬೆಳಕಿನಲ್ಲಿ ವಿಜಯ್ ಕುಮಾರ್ ಪಾಂಡವಪುರ ಹೊಸತನ ತೋರಿಸಿ ರಂಗದಲ್ಲಿ ರಂಜನೆಗೆ ಸಹಾಯಕವಾಗಿದ್ದಾರೆ.
ಹಲವು ವರ್ಷಗಳ ನಂತರ ಕೇವಲ ಹೊಸ ಹವ್ಯಾಸಿ ಪ್ರತಿಭೆಗಳನ್ನು ರಂಗದಮೇಲೆ ಬರಲು ಸಜ್ಜುಗೊಳಿಸಿದ ಪ್ರಕಸಂನ ಪ್ರಯತ್ನ ಫಲಕಾರಿಯಾಗಿದೆ. ರೂಪಶ್ರಿ ರೋಹಿತ, ಸತೀಶ್, ಅರ್ಜುನ್, ಗುರು, ಚೈತ್ರ, ರಚನಾ, ಲೀಲಾವತಿ, ವಿನೋದ್ ಇತ್ಯಾದಿ ಹೊಸಬರು ಮೊದಲ ಸಾಲಿನಲ್ಲಿದ್ದರೆ, ರೋಪಾ ಕೋಮರ್ಲಾ, ಶ್ರೀಹರಿ, ಚೇತನ್‍ರಂಥ ನುರಿತ ಕಲಾವಿದರೂ ಇರುವ ತಾರಾಗಣ ತಿಳಿಯಾದ ಹಾಸ್ಯವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.
ನಾಟಕದ ಮೊದಲಿನಲ್ಲಿ ಬರುವ ಸ್ಟಾಂಡಪ್ ಕಾಮಿಡಿ ತುಣುಕುಗಳು ಸ್ವಲ್ಪ ಮೊಟುಕುಗೊಳ್ಳಬಹುದಿತ್ತು. ನಗೆ ನಾಟಕವಾದ್ದರಿಂದ ಕಥೆಯ ಕೆಲವು ಲಾಜಿಕ್ ಬದಿಗಿಟ್ಟು ನಗುವಿಗೆ ಪ್ರಾಮುಖ್ಯ ನೀಡಲಾಗಿದೆ. ಒಟ್ಟಾರೆ ಒಂದು ಕಾಲು ಘಂಟೆಯ ಎಲ್ಲವನ್ನು ಮರೆತು ನಕ್ಕು ನಲಿವುದು ಖಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.