ADVERTISEMENT

ರಂಗಭೂಮಿ: ನಮ್ಮೊಳಗಿನ ರಾಕ್ಷಸನ್ನು ಹುಡುಕುವ ‘ಅಟ್ಟಹಾಸ ಅಂಕಲ್’

ಪ್ರಜಾವಾಣಿ ವಿಶೇಷ
Published 2 ಮಾರ್ಚ್ 2024, 23:45 IST
Last Updated 2 ಮಾರ್ಚ್ 2024, 23:45 IST
<div class="paragraphs"><p>ನಾಟಕದ ದೃಶ್ಯ </p></div>

ನಾಟಕದ ದೃಶ್ಯ

   

ಚಿತ್ರಗಳು:ಕಿರಣ್ ಟಿ. ಸಿ.

ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮಕ್ಕಳಿಗೆ ಪರ್ಯಾಯ ಭಾಗವಹಿಸುವಿಕೆ ಏನಿದೆ ಎಂಬ ಪ್ರಶ್ನೆ ಪೋಷಕರು, ಶಿಕ್ಷಕರು ಹಾಗೂ ಸಮಾಜ ವಿಜ್ಞಾನಿಗಳನ್ನು ಬಹುವಾಗಿ ಕಾಡುತ್ತಿದೆ. ಈಜು, ಕರಾಟೆ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳು ಕೂಡ ನಗರ-ಗ್ರಾಮವೆಂಬ ಭೇದವಿಲ್ಲದೆ ಸಾಂಸ್ಥೀಕರಣಗೊಂಡು ಮಕ್ಕಳಿಗೆ ಆತ್ಮತೃಪ್ತಿ ನೀಡದೆ ಕೇವಲ ಸುಸ್ತು ಮಾಡುತ್ತಿರುವ ಕಾಲಘಟ್ಟವಿದು. ದಶಕಗಳ ಹಿಂದೆ ಟಿವಿ ನೋಡಿದ್ದಕ್ಕಾಗಿ ಬೈಸಿಕೊಂಡ ಮಕ್ಕಳು, ಇಂದು ತಂದೆ-
ತಾಯಿಯರಾಗಿ ತಮ್ಮ ಮಕ್ಕಳ ಮೊಬೈಲ್–ಟ್ಯಾಬ್–ರೀಲ್ಸ್ ಚಟ ಬಿಡಿಸುವುದರಲ್ಲಿ ಮಾತ್ರ ಸೋಲುತ್ತಿದ್ದಾರೆ.

ADVERTISEMENT

ಇಂತಹ ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳನ್ನೇ ಮಕ್ಕಳ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರೆ ಹೇಗಿರುತ್ತದೆ? ಮಕ್ಕಳಿಗೆ ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಮುಂದಿಟ್ಟರೆ ಮಕ್ಕಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಮಕ್ಕಳೊಡನೆ ಸಂವಾದ ನಡೆಸುತ್ತಲೇ ‘ಅಟ್ಟಹಾಸ ಅಂಕಲ್’ ಬೇಕಾ ಅಥವಾ ‘ರೊಬೋಟ್’ ಬೇಕಾ ಎಂಬ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದು ಸಂಚಾರಿ ಥಿಯೇಟರ್ ತಂಡದ ಮಕ್ಕಳು ಪ್ರಸ್ತುತ ಪಡಿಸಿದ ನಾಟಕ ‘ಮಿಸ್ಟರ್ ಅಟ್ಟಹಾಸ ಅಂಕಲ್’ ಮೂಲಕ.

‘ಅಟ್ಟಹಾಸ ಅಂಕಲ್’, ಸಾಹಿತಿ ಚಂದ್ರಶೇಖರ ಕಂಬಾರರ ಜನಪದ ಕತೆಗಳ ರಾಕ್ಷಸ ಎಂಬ ಕವನದಿಂದ ಸ್ಫೂರ್ತಿ ಪಡೆದು ರೂಪುಗೊಂಡ ನಾಟಕ. ನಿರ್ದೇಶಕ ಧನುಷ್, ಈ ಕವನವನ್ನಿಟ್ಟುಕೊಂಡು ‘ಬಾಲರಂಗ’ದ ಶಿಬಿರದ ಮಕ್ಕಳೊಡನೆ ಸಂವಾದ ನಡೆಸುತ್ತ, ಮಕ್ಕಳ ಪ್ರಸ್ತುತ ಸವಾಲುಗಳು, ಬಿಕ್ಕಟ್ಟುಗಳು, ಮಾನಸಿಕತೆ, ಯೋಚನಾಶೈಲಿ, ಅಭಿಪ್ರಾಯಗಳನ್ನೆಲ್ಲ ಒಗ್ಗೂಡಿಸುತ್ತ, ಸೋಸುತ್ತ ‘ಮಿಸ್ಟರ್ ಅಟ್ಟಹಾಸ ಅಂಕಲ್’ ರೂಪಿಸಿದ್ದಾರೆ. ಈ ನಾಟಕದಲ್ಲಿ ಬರುವ ‘ರೊಬೋಟ್’, ಈಗಿನ ಮಕ್ಕಳ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಮೊಬೈಲ್, ಟ್ಯಾಬ್, ಗೇಮಿಂಗ್, ರೀಲ್ಸ್ ಮುಂತಾದವುಗಳನ್ನು ಪ್ರತಿನಿಧಿಸಿದರೆ, ‘ಅಟ್ಟಹಾಸ ಅಂಕಲ್’ ನಮ್ಮ ಪರಂಪರೆಯ ಪಳಿಯುಳಿಕೆಯಾಗಿ ಕಾಣಿಸಿಕೊಳ್ಳುತ್ತಾನೆ. ಅಟ್ಟಹಾಸನ ಹೆಸರು ಅಟ್ಟಹಾಸ ಎಂದಿದ್ದರೂ, ಆತ ಎಂದಿಗೂ ಅಟ್ಟಹಾಸ ಮೆರೆದವನಲ್ಲ. ಥೇಟ್ ನಮ್ಮ ಜನಪದ ಕಥೆಗಳಲ್ಲಿ ಬರುವ ರಾಕ್ಷಸನಂತೆ ರಾಜಕುಮಾರಿಯನ್ನು ಅಪಹರಿಸಿಕೊಂಡು ಬಂದು, ರಾಜಕುಮಾರ ಆಕೆಯನ್ನು ಹುಡುಕಿಕೊಂಡು ಬರುವಂತೆ ಮಾಡಿ, ಆತನೊಡನೆ ಹೋರಾಡಿ, ಕೊಲ್ಲಲ್ಪಟ್ಟು, ಪರೋಕ್ಷವಾಗಿ ಅವರ ಮಿಲನಕ್ಕೆ ಕಾರಣನಾಗುವ ನಿಸ್ವಾರ್ಥಿ!

‘ಮಿಸ್ಟರ್ ಅಟ್ಟಹಾಸ ಅಂಕಲ್’ ನಾಟಕದಲ್ಲಿ ಒಂದು ಹಂತದಲ್ಲಿ ರೊಬೋಟ್ ನಿರ್ದಯವಾಗಿ ಅಟ್ಟಹಾಸನ್ನು ಸೋಲಿಸಿ, ಪಕ್ಕೆಲಬು ಮುರಿದುಬಿಡುತ್ತದೆ. ಇದೇ ವೇಳೆ, ಮಕ್ಕಳ ತಂದೆ-ತಾಯಂದಿರು ನಗರದ ಹುಚ್ಚಿಗೆ ಬಿದ್ದು ತಮ್ಮ ಹೊಲ, ಮನೆ, ಜಾನುವಾರುಗಳನ್ನೆಲ್ಲ ರಿಯಲ್ ಎಸ್ಟೇಟ್ ಗುಜ್ಜಿಗೆ ಮಾರಲು ನಿರ್ಧರಿಸಿ ನಗರದ ಬದುಕಿನ ಬಣ್ಣಬಣ್ಣದ ಕನಸು ಕಾಣಲು
ಆರಂಭಿಸುತ್ತಾರೆ. ಆಗ ಮಕ್ಕಳೆಲ್ಲ ಸೇರಿ ಹಳ್ಳಿಯ ಕಾಡಿನೊಳಕ್ಕೆ ಹೊಕ್ಕು ಅಟ್ಟು ಅಂಕಲ್‌ನನ್ನು ಮತ್ತೆ ಕರೆತರುತ್ತಾರೆ. ಅಟ್ಟು ಅಂಕಲ್ ಹಾಗೂ ರೊಬೋಟ್‌ಗೆ ಮತ್ತೊಮ್ಮೆ ಭಯಂಕರ ಯುದ್ಧವಾಗುತ್ತದೆ. ಪರಂಪರೆಯನ್ನು ಪ್ರತಿನಿಧಿಸುವ ಅಟ್ಟು ಅಂಕಲ್, ಯಾಂತ್ರಿಕತೆಯ ಪ್ರತೀಕವಾಗಿರುವ ರೊಬೋಟ್‌ನನ್ನು ಕೊಂದುಬಿಡುತ್ತಾನಾ ಅಥವಾ ಯಾರನ್ನಾದರೂ ಕೊಲ್ಲುವಷ್ಟು ಕ್ರೂರಿಯಾ ನಮ್ಮ ಮುದ್ದು ಜನಪದ ರಾಕ್ಷಸ?

ಈ ಸಂದಿಗ್ಧಕ್ಕೆ ನಿರ್ದೇಶಕ ಧನುಷ್ ನಾಗ್ ಕೂಡ ಸಿಕ್ಕಿಹಾಕಿಕೊಂಡು ಮಕ್ಕಳ ಬಳಿಯಿಂದಲೇ ಉತ್ತರ ತೆಗೆಸುವ ಪ್ರಯತ್ನ ಮಾಡಿದ್ದಾರೆ. ಧನುಷ್, ಬೊಂಬೆಯಾಟದ ಆಯಾಮಗಳನ್ನೂ ನಾಟಕದಲ್ಲಿ ಅಳವಡಿಸಿದ್ದಾರೆ. ನಾಟಕ ಆರಂಭವಾಗುತ್ತಲೇ ಯುವಿಲೈಟ್ ನ ಪ್ರತಿಫಲನದಲ್ಲಿ ಕಾಣುವ ಅಟ್ಟಹಾಸ ಅಂಕಲ್ ಎಂಬ ನಾಟಕದ ಅಕ್ಷರಗಳು ಹಾಗೂ ಸೈಡ್‌ವಿಂಗ್‌ನಿಂದ ಬರುವ
ಅಟ್ಟಹಾಸ ಅಂಕಲ್ ನ ಆಳೆತ್ತರದ ಬೊಂಬೆ ಗಮನ ಸೆಳೆಯುತ್ತದೆ. ಹಾಗೆಯೇ, ಸೈಡ್‌ವಿಂಗ್‌ನಿಂದ ರೆಕ್ಕೆಗಳನ್ನು ಪಟಪಟನೆ ಬಡಿಯುತ್ತ ಬರುವ (ಬೊಂಬೆಯೊಂದು) ದೊಡ್ಡಹಕ್ಕಿಯೊಂದು, ಗಂಪು ಅಜ್ಜಿಯ ರೂಪ ತಾಳುವುದು, ಆ ಅಜ್ಜಿ ಮಕ್ಕಳಿಗೆ ಮಾತ್ರ ಕಾಣುವುದು, ಮತ್ತೆ ಹಕ್ಕಿಯಾಗಿ ಸೈಡ್ ವಿಂಗ್‌ಗೆ ಹೋಗುವುದು ವಿಶೇಷವಾಗಿದೆ.

ಮಕಾಶಿಪೋ ನಾಶಿಪೋ,
ದಾರಾಶಿತೋ ಮಾನಿತೋ
ಬಗಾರಿಸೋ ನಾಟಾವೋ
ದಾರಾಪೋಚಾರಿತೋ ದಾರಾಪೋಚಾರಿತೋ ದಾರಾಪೋಚಾರಿತೋ
ಪುಟ್ರಿ ಪೋರಿ ಪೋಣಾಚಾ, ಗುಚ್ಚಿ ಮುಚ್ಚಿ ಗುಂಜಾಕಾ, ಕಾಗೆ ಮೂತಿ ಜಂಜಾಚಾ
ದಾರಾಪೋಚಾರಿತೋ ದಾರಾಪೋಚಾರಿತೋ ದಾರಾಪೋಚಾರಿತು–ನಂತಹ ಹಾಡುಗಳು, ಹಾಸ್ಯ, ಚೇಷ್ಟೆ, ನಗರದ ಸೋಗಲಾಡಿ ಬದುಕಿನ ಕಾಲೆಳೆಯುವಿಕೆ, ಮಕ್ಕಳ ವೇಷಭೂಷಣ ಎಲ್ಲವೂ ನಾಟಕದ ಸ್ವಾದವನ್ನು ಹೆಚ್ಚಿಸಿವೆ.

ಗಂಪು ಅಜ್ಜಿ (ವಿಸ್ಮಯ), ರೊಬೋಟ್ (ಶಾರಿಣಿ ಸಿ. ವಿ), ಅಟ್ಟಹಾಸ ಅಂಕಲ್ (ಉದಾತ್ತ), ಗ್ರಾಮಸ್ಥರಾಗಿ (ಆದಿತ್ಯ ನಂದನ್, ಶಮಿತಾ,  ವೈನವಿ ಸಾಯಿ ದುರ್ಗ), ರಿಯಲ್ ಎಸ್ಟೇಟ್ ಗುಜ್ಜಿ (ಸಮರ್ಥ್ ಅಭಿಷೇಕ್) ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಮಕ್ಕಳು ಅಟ್ಟಹಾಸ ಅಂಕಲ್ ಮೂಲಕ ನಮ್ಮೊಳಗಿನ ನಿಜವಾದ ರಾಕ್ಷಸನನ್ನು ಹುಡುಕುವ ಸೈದ್ಧಾಂತಿಕ ಪ್ರಶ್ನೆಯನ್ನೂ ಜವಾಬ್ದಾರಿಯನ್ನೂ ನಮ್ಮ ಮುಂದಿಟ್ಟಿದ್ದಾರೆ.

ಚಿತ್ರ:ಕಿರಣ್ ಟಿ. ಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.