ಪುಟ್ಟ ಮಕ್ಕಳಿಗೆ ಅಭಿನಯ ಕಲಿಸುವುದು, ಅದರಲ್ಲೂ ಇಂದಿನ ಮೊಬೈಲ್ ಯುಗದಲ್ಲಿ ಅಷ್ಟು ಸುಲಭವಲ್ಲ. ಅಂತಹ ಸುಲಭವಲ್ಲದ ಕಾರ್ಯವನ್ನೇ ಬೆಂಗಳೂರಿನ 'ಹನುಮಂತನಗರ ಬಿಂಬ' ಮಾಡುತ್ತಿದೆ. ಈ ಮೂಲಕ ಹಿರಿಯ ರಂಗಕರ್ಮಿ ದಿವಂಗತ ಎ.ಎಸ್.ಮೂರ್ತಿಯವರ ಕನಸನ್ನು ನನಸು ಮಾಡುತ್ತ ರಂಗಸೇವೆಯಲ್ಲಿ ತೊಡಗಿದೆ.
ಮಕ್ಕಳಿಗಾಗಿ ಪ್ರತಿವರ್ಷ ಬೇಸಿಗೆ ಶಿಬಿರವಲ್ಲದೆ ಆರು ತಿಂಗಳ ಕಲಾಭಿರುಚಿ ಕೋರ್ಸ್‌ನಲ್ಲಿ ಮಕ್ಕಳಿಂದಲೇ ನಾಟಕ ಮಾಡಿಸಿ ರಂಗಭೂಮಿಗೆ ಹೊಸ ಹೊಸ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಕಳೆದ 35 ವರ್ಷಗಳಲ್ಲಿ 30ಕ್ಕೂ ಹೆಚ್ಚು ಪೂರ್ಣಾವಧಿ ಮಕ್ಕಳ ಹೊಸ ನಾಟಕಗಳನ್ನು ಪ್ರದರ್ಶಿಸಿದೆ.
2024ನೇ ಸಾಲಿನ ಆರು ತಿಂಗಳ ಕೋರ್ಸ್‌ನಲ್ಲಿ ಪಾಲ್ಗೊಂಡ ಮಕ್ಕಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿಕೊಟ್ಟ ಹೊಸ ನಾಟಕವೇ ಹೂ ಹಬ್ಬ.
ಅದೊಂದು ಬುಡಕಟ್ಟು ರಾಜ್ಯ. ಪ್ರಕೃತಿಯನ್ನು ಆರಾಧಿಸುವ ಈ ಜನರಿಗೆ ಈ ವರ್ಷ ದುಪ್ಪಟ್ಟು ಸಂಭ್ರಮ. ಔಷಧೀಯ ಗುಣಗಳುಳ್ಳ ಅಪರೂಪದ ತ್ರಿಲಾಂಗಿ ಮರಕ್ಕೆ ಐವತ್ತು ವರ್ಷ ತುಂಬಿದೆ. ಇದೇ ಸಂದರ್ಭದಲ್ಲಿ ತ್ರಿಲಾಂಗಿ ಹೂವೂ ಅರಳಿದೆ. ಹಾಗೆಯೇ ಹೊಸ ರಾಣಿಗೆ ಪಟ್ಟಾಭಿಷೇಕವಾಗಿ ಒಂದು ವರ್ಷ. ಇವೆರಡರ ಸಂಭ್ರಮವೇ ಹೂ ಹಬ್ಬ.
ಈ ತ್ರಿಲಾಂಗಿ ಮರಕ್ಕೆ ರಾಣಿ ಪೂಜೆ ಸಲ್ಲಿಸಲಿದ್ದಾಳೆ. ಈ ಸಮಯದಲ್ಲಿ ರಾಣಿಯನ್ನು ನೋಡಬಹುದು ಎಂಬ ಖುಷಿ ರಾಜ್ಯದ ಜನರದ್ದು. ಹೂ ಹಬ್ಬದ ಸಮಯದಲ್ಲಿ ರಾಜ್ಯಾದ್ಯಂತ ರಾಣಿ ಹಾಗೂ ತ್ರಿಲಾಂಗಿಯದ್ದೇ ಮಾತು.
ಮಹಾರಾಣಿಯ ನೇತೃತ್ವದಲ್ಲಿ ನಡೆಯುವ 'ಹೂಹಬ್ಬ' ಕ್ಕೆ ಸಿದ್ಧತೆಗಳು ಜೋರಾಗಿ ನಡೆದಿರುವಾಗಲೇ ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ಸಮಸ್ಯೆ ಎದುರಾಗುತ್ತದೆ. ಕೆಂಪು ಜ್ವರ ಕಾಣಿಸಿಕೊಳ್ಳುತ್ತದೆ. ರಾತ್ರಿ ಹರಡುವ ಈ ರೋಗಕ್ಕೆ ರಾತ್ರಿಯೆಲ್ಲ ಪ್ರಜೆಗಳು ಮುಖವಾಡ ಹಾಕಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಇಂದಿನ ಕೋವಿಡ್ ಕಾಲದ ಬಿಕ್ಕಟ್ಟಿನಂತೆ ಜನರು ಈ ಮುಖವಾಡದ ಬದುಕಿಗೆ ಹೊಂದಿಕೊಳ್ಳುತ್ತಿರುವಾಗ ನಾಟಕದಲ್ಲಿ ಮಹತ್ವದ ತಿರುವಿನೊಂದಿಗೆ ರಹಸ್ಯವೊಂದು ಬಯಲಾಗುತ್ತದೆ. ಮುಖವಾಡ ಮಾರಾಟ ಮಾಡಿ ಹಣ ಗಳಿಸಲು ವೈದ್ಯರು ಕೆಂಪು ಜ್ವರವನ್ನು ಸೃಷ್ಟಿಸಿದ್ದಾರೆಂಬ ರಹಸ್ಯವನ್ನು ಮಹಾರಾಣಿ ಹಾಗೂ ಮಂತ್ರಿ ಮಾರುವೇಷದಲ್ಲಿ ಬಂದು ಭೇದಿಸಿ ರಾಜ್ಯಕ್ಕೆ ಕವಿದಿದ್ದ ಆತಂಕವನ್ನು ದೂರ ಮಾಡುತ್ತಾರೆ.
ಹೀಗೆ ಮಕ್ಕಳು ಸಮಕಾಲೀನ ಸಮಸ್ಯೆಯನ್ನು ರಂಗದಲ್ಲಿ ಪ್ರಸ್ತುತಪಡಿಸುತ್ತ ದೊಡ್ಡವರಿಗೊಂದು ಸಂದೇಶವನ್ನೂ ನೀಡಿದರು. ರಾಣಿಯಾಗಿ ಬೆಳಕು ಪ್ರೌಢ ಅಭಿನಯ ನೀಡಿದ್ದಲ್ಲದೆ, ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡರು. ಮುಖವಾಡ ತಯಾರಕ ಸಿದ್ಧಾಂತ್, ಪ್ರಚಾರಕ ಧ್ರುವ ಅವರ ಅಭಿನಯ ಭರವಸೆ ಹುಟ್ಟಿಸುವಂತಿತು. ಮಂತ್ರಿ ಕ್ರಿಶಾಂತ್, ಬುಡಕಟ್ಟು ನಾಯಕ ಪ್ರಥಮ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದರು. ಬಹುತೇಕ ಎಲ್ಲ ಮಕ್ಕಳೂ ರಂಗದ ಮೇಲೆ ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದರು.
ನಾಟಕ ವರ್ಣಮಯವಾಗಿ ಹಾಗೂ ಸಮಕಾಲೀನ ಸಮಸ್ಯೆಯನ್ನು ಸಮರ್ಥವಾಗಿ ಬಿಂಬಿಸುವಲ್ಲಿ ಯಶಸ್ವಿಯಾಯಿತು. ‘ಗೊರು ಗೊರುಕೋ ಗೊರುಕನಾ...’ ಹಾಡು ಹಾಗೂ ಹಿನ್ನೆಲೆ ಸಂಗೀತದಿಂದ ನಾಟಕ ಮತ್ತಷ್ಟು ಕಳೆಗಟ್ಟಿತು.
ಹನುಮಂತನಗರ ಬಿಂಬದ ನಿರ್ದೇಶಕ, ಚಿತ್ರಕಲಾವಿದ ಎ.ಎಂ. ಪ್ರಕಾಶ್ ಈ ನಾಟಕ ರಚಿಸಿ, ನಿರ್ದೇಶಿಸಿದರು. ಬಿಂಬದ ಸಂಚಾಲಕಿ ವನಮಾಲಾ ಪ್ರಕಾಶ್ ನಿರ್ಮಾಣದ ಈ ಪ್ರಯೋಗದಲ್ಲಿ ಅನ್ವಿತಾ ಪ್ರಕಾಶ್ ವಸ್ತ್ರವಿನ್ಯಾಸ, ರಂಗನಿರ್ವಹಣೆ ಮಾಡಿದರೆ, ಅನೂಪ್ ಸಿಂಹ ಸಂಗೀತ ನಿರ್ವಹಿಸಿದರು. ಮೋಹನ್ ರಾವ್ ರಂಗ ಸಹಕಾರ, ರಾಮಕೃಷ್ಣ ಕನ್ನರಪಾಡಿ ಪ್ರಸಾಧನ, ಜಶ್ವಿನಿ ಕಲೆ, ನವೀನ್ ಬೆಳಕಿನ ವಿನ್ಯಾಸದಲ್ಲಿ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.