ಕರ್ನಾಟಕ ನಾಟಕ ಅಕಾಡೆಮಿಯಿಂದ ಅಕ್ಟೋಬರ್ 19ರಂದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸಂಜೆ 6.30ಕ್ಕೆ ‘ರಕ್ತ ವಿಲಾಪ’ ನಾಟಕ ಪ್ರದರ್ಶನ ನಡೆಯಲಿದೆ.
ಈ ನಾಟಕವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿ ಅವರು ನಿರ್ದೇಶಿಸಿದ್ದು, ರಾಯಚೂರು ಸಮುದಾಯ ತಂಡ ಪ್ರಸ್ತುತಪಡಿಸಲಿದೆ. ಅತಿಥಿಯಾಗಿ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಭಾಗವಹಿಸಲಿದ್ದಾರೆ.
ರಕ್ತ ವಿಲಾಪ ಕುರಿತು: ಕಾಲಗರ್ಭದಿಂದ ಸತ್ಯವನ್ನು ಹೆಕ್ಕಿ ತೆಗೆಯಲು ಹಂಬಲಿಸುವ ಸಂಶೋಧಕನ ತಳಮಳಗಳನ್ನು ‘ರಕ್ತ ವಿಲಾಪ’ ನಾಟಕ ಅನನ್ಯವಾಗಿ ಅಭಿವ್ಯಕ್ತಿಸಿದೆ. ಸತ್ಯವೆಂಬ ಅಗ್ನಿದಿವ್ಯವನ್ನು ಹಿಡಿಯಲು ಯತ್ನಿಸಿ ಮೈ ಸುಟ್ಟುಕೊಂಡ ಜ್ಞಾನಿಗಳ ಪರಂಪರೆಯೇ ಲೋಕದಲ್ಲಿದೆ. ಲೋಕವು ತಾನು ಕಟ್ಟಿಕೊಂಡು ಬಂದ ನಂಬಿಕೆಗಳ ಗುಳ್ಳೆಯೊಡೆಯುವುದನ್ನು ಸಹಿಸದು. ಸತ್ಯದ ಸೂಜಿಮೊನೆ ಸುಮ್ಮನಿರುವುದನ್ನು ಅರಿಯದು. ಸತ್ಯವನ್ನು ಕಾಣಲು ಮನಸ್ಸು ಮೊದಲು ಸುಳ್ಳುಗಳಿಂದ ಬಿಡುಗಡೆ ಹೊಂದಬೇಕು. ಸತ್ಯವು ಸ್ವತಃ ಚಲನಶೀಲವಾದಾಗ ಮಾತ್ರ ನಮ್ಮನ್ನು ಜಂಗಮಗೊಳಿಸಬಲ್ಲದು. ಭಕ್ತರ ಹೆಸರಲ್ಲಿ ವೀರಾವೇಶ ತಾಳಿ ಅಸ್ತ್ರ ಹಿಡಿದವರ ಮಿದುಳು ಕತ್ತಲಾಗಿದ್ದರೆ, ಬೆಳಕನ್ನು ಹುಡುಕುತ್ತಾ ಕಾಲದ ಸುರಂಗ ಮಾರ್ಗದಲ್ಲಿ ಏಕಾಂಗಿ ಅಲೆವ ಸತ್ಯಶೋಧಕ ಸಾವಿನಲ್ಲಿ ಮೌನ ತಾಳಿದ್ದಾನೆ. ಈ ನಾಟಕ ಹಲವು ಪ್ರಶ್ನೆಗಳೊಂದಿಗೆ ತೀವ್ರವಾಗಿ ಆಲುಗಾಡಿಸುತ್ತ ನೋಡುಗರನ್ನು ವಿಹ್ವಲಗೊಳಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.