ADVERTISEMENT

ಹೊನ್ನಾರು.. ಆರು ತಂಡಗಳ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 23:11 IST
Last Updated 21 ಫೆಬ್ರುವರಿ 2026, 23:11 IST
<div class="paragraphs"><p>ಹೊನ್ನಾರು.. ಆರು ತಂಡಗಳ ಸುವರ್ಣ ಸಂಭ್ರಮ</p></div>

ಹೊನ್ನಾರು.. ಆರು ತಂಡಗಳ ಸುವರ್ಣ ಸಂಭ್ರಮ

   

ರಾಜ್ಯದಲ್ಲಿ ಐವತ್ತು ವರ್ಷಗಳಿಂದಲೂ ಸಕ್ರಿಯವಾಗಿರುವ ಆರು ರಂಗತಂಡಗಳು ಒಟ್ಟಾಗಿ ‘ಹೊನ್ನಾರು ರಂಗೋತ್ಸವ’ ಹಮ್ಮಿಕೊಂಡಿವೆ. ಈ ಉತ್ಸವ ಫೆಬ್ರುವರಿ 21ರಿಂದ 25ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ಇರುತ್ತದೆ.

–––

ADVERTISEMENT

ಸಾರ್ವಜನಿಕ ಬದುಕಿನಲ್ಲಿ ಅದು ಸೊಂಪಾದ ಕಾಲ; ಕಳೆದ ಶತಮಾನದ ಎಪ್ಪತ್ತನೆಯ ದಶಕದ ಪೂರ್ವಾಪರದ ಸಂದರ್ಭದಲ್ಲಿ ಸೃಷ್ಟಿಯಾದ ಈ ಕಾಲಕ್ಕೆ ಹಿನ್ನೆಲೆಯೂ ಇತ್ತು - ಹಾಗೆಯೇ ಮುನ್ನೆಲೆಯೂ ಇತ್ತು. ನಿರ್ದಾಕ್ಷಿಣ್ಯವಾಗಿ ಹೇಳಬೇಕೆಂದರೆ, ಈಗಲೂ ಕೂಡ ಅದೇ ಮುನ್ನೆಲೆಯ ನೆರಳು ಸಾರ್ವಜನಿಕ ಬದುಕಿಗೆ ಒಂದು ರಕ್ಷೆ. ಸಾಹಿತ್ಯ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ವಲಯದಲ್ಲಿ ಲವಲವಿಕೆಯ ವಾತಾವರಣ ಕಂಡುಬರಲು ಸ್ವಾತಂತ್ರ್ಯದ ಹೊಂಗನಸಿನಿಂದ ಹತಾಶೆಯ ಲೋಕಕ್ಕೆ ಪ್ರವೇಶಿಸಿದ್ದು ಒಂದು ಅಸಲೀ ಕಾರಣ. ರಾಜಕಾರಣದಲ್ಲಿಯೂ ಕೂಡ ಇಂತಹ ವಿಪ್ಲವದ ಸ್ಥಿತಿ. ಮಾರ್ದನಿಗೊಂಡಾಗ ರಂಗಭೂಮಿಯಲ್ಲಿ ಹೊಸ ಲವಲವಿಕೆ ಸೃಷ್ಟಿಯಾಗಿ ಕೇವಲ ಚಟುವಟಿಕೆಗೆ ಸೀಮಿತವಾಗಿದ್ದ ರಂಗಭೂಮಿ ಚಳವಳಿಯ ಕಡೆ ಹೆಜ್ಜೆ ಹಾಕಿದ್ದನ್ನು ಇಡೀ ದೇಶವೇ ಗುರುತಿಸಿ ಗೌರವಿಸಿದ್ದನ್ನು ಮರೆಯುವಂತಿಲ್ಲ.

ಐವತ್ತು ವರ್ಷಗಳ ಈ ಭವ್ಯ ಇತಿಹಾಸದ ನೆನಪುಗಳನ್ನು ಕೆದಕಿ ಹೊಸ ಚಳವಳಿಯನ್ನು ರೂಪಿಸುವ ನಿಟ್ಟಿನಲ್ಲಿ ಹಲವು ಯತ್ನಗಳು ಜರುಗಿ ತಕ್ಕಮಟ್ಟಿಗೆ ಯಶಸ್ಸು ಪಡೆದಿರುವುದು ನಿಜವೇ. ಆದರೆ ಚಳವಳಿಗೆ ಬೇಕಾದದ್ದು ನಿರಂತರತೆ. ಇಂತಹ ನಿರಂತರೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಐವತ್ತು ವರ್ಷಗಳಿಂದಲೂ ಸಕ್ರಿಯವಾಗಿರುವ ಆರು ರಂಗತಂಡಗಳು ಸಂಘಟಿತವಾಗಿ ‘ಹೊನ್ನಾರು’ ಹೆಸರಿನಲ್ಲಿ ಉತ್ಸವವನ್ನು ಹಮ್ಮಿಕೊಂಡಿರುವುದು ಮಹತ್ವದ ಹೆಜ್ಜೆ.

ಚಟುವಟಿಕೆಯಿಂದ ಚಳವಳಿಯ ಅಂಕಣ ಪ್ರವೇಶಿಸಲು ಬೇಕಾದದ್ದು ಕೇವಲ ಉತ್ಸಾಹ ಅಷ್ಟೇ ಅಲ್ಲ, ಶ್ರದ್ಧೆಯಷ್ಟೇ ಸಾಲದೂ ಕೂಡ. ಇದರ ಜೊತೆಗೆ ಭದ್ರನೆಲೆಗಟ್ಟಿನ ಆಶಯ ಹಾಗೂ ಪರಂಪರೆಯನ್ನು ಕಾಪಿಟ್ಟುಕೊಂಡು ವರ್ತಮಾನದ ವರಾತವನ್ನು ಸಾಕ್ಷಾತ್ಕಾರಗೊಳಿಸುವ ಒಂದು ಸೂತ್ರ. ಹೌದು, ಇಂತಹ ಸೂತ್ರ ಕೇವಲ ಒಬ್ಬರಿಂದ ಸೃಷ್ಟಿಯಾಗುವಂತದ್ದಲ್ಲ, ಇದೊಂದು ಸಾಮೂಹಿಕ ಜವಾಬ್ದಾರಿಯ ಸೃಷ್ಟಿ. ಹೊನ್ನಾರು ನಾಟಕೋತ್ಸವದ ಆಶಯವೇ ಇದು.

ಕನ್ನಡ ರಂಗಭೂಮಿಯಲ್ಲಿ ಖಚಿತ ಹೆಜ್ಜೆಗಳನ್ನಿಟ್ಟು ಐವತ್ತು ವರ್ಷಗಳ ಸಾತತ್ಯವನ್ನು ಹೊಂದಿರುವ ‘ರಂಗಸಂಪದ’, ‘ಸಮುದಾಯ’, ‘ನಟರಂಗ’, ‘ಕಲಾಗಂಗೋತ್ರಿ’, ‘ಸ್ಪಂದನ’ ಹಾಗೂ ‘ಬೆನಕ’ ತಂಡಗಳು ಈ ಹೊನ್ನಾರು ನಾಟಕೋತ್ಸವದಲ್ಲಿ ಸಾಂಸ್ಕೃತಿಕ ಲೋಕದಲ್ಲಿ ಹೊನ್ನುಡಿ ಬರೆಯುತ್ತಿರುವುದು ಹೊಸ ತಲೆಮಾರಿಗೆ ಒಂದು ರೀತಿಯಲ್ಲಿ ಸುಸಜ್ಜಿತ ರಂಗಮಂಟಪ.

ಈ ಉತ್ಸವದಲ್ಲಿ ರಂಗಸಂಪದ ತಂಡದ ಉಮಾಶ್ರೀ ಅಭಿನಯಿಸುವ ಶರ್ಮಿಷ್ಠೆ, ಸಮುದಾಯ ತಂಡದ ಸ್ಯಾಮ್ ಕುಟ್ಟಿ ಪಟ್ಟಂಕರಿ ನಿರ್ದೇಶನದ ಭಗವಂತನ ಮರಣ, ನಟರಂಗ ತಂಡದ ಬಿ. ಸುರೇಶ್ ನಿರ್ದೇಶನದ ನೀರಗನ್ನಡಿ, ಕಲಾಗಂಗೋತ್ರಿ ತಂಡದ ಬಿ.ವಿ. ರಾಜಾರಾಮ್ ನಿರ್ದೇಶನದ Moneye ದೇವರು, ಸ್ಪಂದನ ತಂಡದ ಬಿ.ಜಯಶ್ರೀ ನಿರ್ದೇಶನದ ಹಗಲು ಗನಸು ಹಾಗೂ ಬೆನಕ ತಂಡದ ಬಿ.ವಿ. ಕಾರಂತ ನಿರ್ದೇಶನದ (ಮರುನಿರ್ದೇಶನ ಟಿ.ಎಸ್. ನಾಗಾಭರಣ) ಜೋಕುಮಾರಸ್ವಾಮಿ ನಾಟಕಗಳು ಪ್ರಯೋಗಗೊಳ್ಳಲಿವೆ.

ಹಾಗೆ ನೋಡಿದರೆ ಕನ್ನಡ ರಂಗಭೂಮಿಯಲ್ಲಿ ಹೊಸತನಕ್ಕೆ ಹಾದಿ ನಿರ್ಮಿಸಿಕೊಟ್ಟವರ ಪೈಕಿ ಟಿ.ಪಿ. ಕೈಲಾಸಂ, ಪರ್ವತವಾಣಿ ಮೊದಲಿಗರು. ನಂತರ ಶ್ರೀರಂಗರ ಸಾರಥ್ಯದಲ್ಲಿ ಗರಿಗಟ್ಟಿದ ಈ ರಂಗಯಾತ್ರೆಯಲ್ಲಿ ಬಿ.ವಿ. ಕಾರಂತ, ಎಂ.ಎಸ್ ಸತ್ಯು, ಚಂದ್ರಶೇಖರ ಕಂಬಾರ, ಸಿ.ಆರ್. ಸಿಂಹ, ಪ್ರೊ.ಬಿ.ಚಂದ್ರಶೇಖರ್, ವಿ.ರಾಮಮೂರ್ತಿ, ಪ್ರಸನ್ನ ಮೊದಲಾದ ಧೀಮಂತರು ಪಾಲ್ಗೊಂಡು ಅದರ ವಿನ್ಯಾಸವನ್ನು ವಿಸ್ತರಿಸಿ ರಾಷ್ಟ್ರದ ಕಣ್ಣು ಕರ್ನಾಟಕದ ಕಡೆ ತಿರುಗುವಂತೆ ಮಾಡಿದ್ದು ದೊಡ್ಡ ಇತಿಹಾಸ.

ತುಘಲಕ್ ನಾಟಕ ಪ್ರಯೋಗಕ್ಕೆ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನವಿದೆ. ಪ್ರೊ. ಬಿ. ಚಂದ್ರಶೇಖರ್ ನಿರ್ದೇಶನದಲ್ಲಿ 1969ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಹದಿಮೂರು ರಂಗತಂಡಗಳು ಒಂದಾಗಿ ತುಘಲಕ್ ನಾಟಕವನ್ನು ಯಶಸ್ಸುಗೊಳಿಸಿದ್ದು ಇನ್ನೂ ರಂಗಾಸಕ್ತರಲ್ಲಿ ಹಚ್ಚ ಹಸಿರಾಗಿದೆ. ಕನ್ನಡ ಸಾಹಿತ್ಯ ಕಲಾ ಸಂಘದ ಆರ್. ನಾಗೇಶ್ ಸಾರಥ್ಯದಲ್ಲಿ ಈ ನಾಟಕ ಪ್ರದರ್ಶನಗೊಂಡು ಗಿರೀಶ ಕರ್ನಾಡ ಒಬ್ಬ ನಾಟಕಕಾರರಾಗಿ ಮೂಡಿಬರಲು ಕಾರಣವಾದ ವಿದ್ಯಮಾನವಿದು. ಅಭಿಜಾತ ನಟರಾದ ಸಿ.ಆರ್. ಸಿಂಹ ಹಾಗೂ ಲೋಕೇಶ್ ಅವರೂ ಕೂಡ ಕನ್ನಡ ರಂಗಭೂಮಿಗೆ ದಕ್ಕಿದ್ದು ಇದೇ ಸಂದರ್ಭದಲ್ಲಿ.

ಬಿ.ವಿ. ಕಾರಂತರು 1970ರಲ್ಲಿ ನಿರ್ದೇಶಿಸಿದ ಶ್ರೀರಂಗರ ಸ್ವರ್ಗಕ್ಕೆ ಮೂರೇ ಬಾಗಿಲು ಎಂಬ ನಾಟಕ ಪ್ರಯೋಗ ವಿನೂತನ ಕ್ರಮಗಳ ಅಳವಡಿಕೆಯಿಂದ ಗಮನ ಸೆಳೆಯಿತು. ಇದಾದ ನಂತರ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಸುವರ್ಣಯುಗ ಎಂದು ಗುರುತಿಸಬಹುದಾದ 1971ರ ಬಯಲು ರಂಗೋತ್ಸವದಲ್ಲಿ ಬಿ.ವಿ. ಕಾರಂತರ ನಿರ್ದೇಶನದ ಜೋಕುಮಾರಸ್ವಾಮಿ, ಈಡಿಪಸ್ ಹಾಗೂ ಸಂಕ್ರಾಂತಿ ನಾಟಕಗಳು ಹೊಸ ಅಲೆಯನ್ನು ಸೃಷ್ಟಿಸಿ ಚೇತನದ ಅಧ್ಯಾಯವನ್ನು ಸೃಷ್ಟಿಸಿದರು.

ಇದಕ್ಕೆ ಪೂರಕವಾಗಿ ಮಾರನೇ ವರ್ಷ ಜರುಗಿದ ರಾಷ್ಟ್ರೀಯ ನಾಟಕೋತ್ಸವದ ಪರಿಣಾಮವಾಗಿ ರಂಗಸಂಪದ, ಬೆನಕ, ಸ್ಪಂದನ, ನಟರಂಗ, ಕಲಾಗಂಗೋತ್ರಿ ಮತ್ತು ಸಮುದಾಯ ತಂಡಗಳು ಹುಟ್ಟಿಕೊಂಡವು. ಆರ್. ನಾಗೇಶ್, ಪ್ರಸನ್ನ, ಬಿ. ಜಯಶ್ರೀ, ಎಸ್. ಮಾಲತಿ, ಸಿ.ಆರ್. ಸಿಂಹ, ಸಿ.ಜಿ.ಕೆ. ಟಿ.ಎನ್. ನರಸಿಂಹನ್, ಶಂಕರ್‌ನಾಗ್, ಎಚ್.ವಿ.ವೆಂಕಟಸುಬ್ಬಯ್ಯ, ಟಿ.ಎಸ್‌. ನಾಗಾಭರಣ ಹಾಗೂ ಸಂಘಟಕರಾಗಿ ಶ್ರೀನಿವಾಸ್ ಕಪ್ಪಣ್ಣ, ಜಿ.ಲೋಕೇಶ್ ಮೊದಲಾದ ನಿರ್ದೇಶಕರು ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿದರು. ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ, ಪಿ. ಲಂಕೇಶ್, ಹೆಚ್.ಎಸ್. ಶಿವಪ್ರಕಾಶ್, ಟಿ.ಎನ್. ಸೀತಾರಾಂ ಮೊದಲಾದ ನಾಟಕಕಾರರು ತಮ್ಮ ಕೃತಿಗಳ ಮೂಲಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದರು.

ಇಂತಹ ಅಪೂರ್ವ ಪರಂಪರೆಯ ದೀವಿಗೆಯ ಬೆಳಕಿನಲ್ಲಿ ವರ್ತಮಾನದಲ್ಲಿ ರಂಗ ಚಟುವಟಿಕೆಗೆ ಹೊಸ ಕಳೆ ತಂದುಕೊಡಲೆಂದು ಏರ್ಪಡಿಸಿರುವ ಹೊನ್ನಾರು ರಂಗೋತ್ಸವ ಹಲವು ಕಾರಣಗಳಿಂದ ನಿರ್ಣಾಯಕ ಎಂಬುದು ಸಾಂಸ್ಕೃತಿಕ ಲೋಕದ ನಂಬುಗೆ. ಹಲವು ತಂಡಗಳು ಸೇರಿ ನಾಟಕೋತ್ಸವವನ್ನು ಏರ್ಪಡಿಸಿರುವುದು ಇದೇ ಮೊದಲಲ್ಲದಿರಬಹುದು, ಈ ಹಿಂದೆ 80ರ ದಶಕದಲ್ಲಿ ಬೆನಕ, ರಂಗಸಂಪದ, ಸೂತ್ರಧಾರ ತಂಡಗಳು ಬೆರಸು ಹೆಸರಿನಲ್ಲಿ ದೆಹಲಿಯಲ್ಲಿ ನಾಟಕೋತ್ಸವವನ್ನು ಏರ್ಪಡಿಸಿ ಯಶಸ್ಸು ಕಂಡಿದ್ದವು. ಆರ್. ನಾಗೇಶ್ ಅವರ ಸೂತ್ರಧಾರತ್ವದಲ್ಲಿ ಈ ಉತ್ಸವ ನಡೆದಿತ್ತು. ಈಗ ಹೊಸ ತಲೆಮಾರಿಗೆ ರಂಗತೇರನ್ನು ಎಳೆಯುವ ಅವಕಾಶ ದೊರಕುವಂತಾಗಲು ಹೊನ್ನಾರು ನಾಟಕೋತ್ಸವ ಏರ್ಪಡಿಸಿರುವುದು ನಿಜಕ್ಕೂ ಸಾರ್ಥಕ.

***

ಆರು ತಂಡಗಳು ಐವತ್ತು ವರ್ಷಗಳ ಸಾರ್ಥಕ ರಂಗಬದುಕನ್ನು ಮತ್ತಷ್ಟು ಗಟ್ಟುಗೊಳಿಸಲು ಹಾಗೂ ಹೊಸ ಕಲಾವಿದರಿಗೆ ಅವಕಾಶ ಸೃಷ್ಟಿಸಲು ಹೊನ್ನಾರು ರಂಗೋತ್ಸವ ಏರ್ಪಡಿಸಿದೆ. ಇಂತಹ ಮಹತ್ವದ ಆಶಯದ ಉತ್ಸವ ಯಶಸ್ಸು ಕಂಡರೆ ಅದು ಕನ್ನಡ ರಂಗಭೂಮಿಗೆ ಹೊಸ ದಿಕ್ಕುದೆಸೆಯನ್ನು ತೋರಿಸುವ ಬೆಳ್ಳಿಗೆರೆ.

–ಶ್ರೀನಿವಾಸ್ ಜಿ. ಕಪ್ಪಣ್ಣ ಹೊನ್ನಾರು ರಂಗೋತ್ಸವದ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.