ಬಹುಭಾಷಾ ನಟ ಕಿಶೋರ್ ಕುಮಾರ್ ಹಲವು ವರ್ಷಗಳ ಬಳಿಕ ಮತ್ತೆ ರಂಗಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಯ ‘ಲವ್ ಲೆಟರ್ಸ್; ನಿನ್ನ ಪ್ರೀತಿಯ ನಾನು’ ನಾಟಕ ಇತ್ತೀಚೆಗೆ ಕೆಲವು ಪ್ರದರ್ಶನಗಳನ್ನು ಕಂಡಿತು...
ಅಮೆರಿಕನ್ ನಾಟಕಕಾರ ಎ.ಆರ್.ಗರ್ನಿ 1987-88ರ ಸಮಯದಲ್ಲಿ ‘ಎಪಿಸ್ತೊಲರಿ’ (ಪತ್ರಗಳ ಮೂಲಕ ಬೆಳೆಯುವ ಕೃತಿ/ಕಾದಂಬರಿ) ಶೈಲಿಯಲ್ಲಿ ಬರೆದ ‘ಲವ್ ಲೆಟರ್ಸ್’ ಎನ್ನುವ ನಾಟಕ ನಂತರ ಹಿಂದಿ/ಉರ್ದು ನಾಟಕಕಾರ ಜಾವೇದ್ ಸಿದ್ದಿಕಿ ಅವರ ಕೈಗೆ ಸಿಕ್ಕಿ ‘ತುಮ್ಹಾರೀ ಅಮೃತಾ’ ಆಗಿ, ನಂತರ ಜಯಂತ ಕಾಯ್ಕಿಣಿಯವರು ಅದನ್ನು ‘ಇತಿ ನಿನ್ನ ಅಮೃತಾ’ ಬರೆದದ್ದು ಇತಿಹಾಸ.
ಯುವ ವಯಸ್ಸಿನ ಆಕರ್ಷಣೆ, ‘ಸಿಚುಯೇಶನ್ಶಿಪ್’, ಫ್ರೆಂಡ್ ಜೋನ್, ಕುಕಿ ಜಾರ್ ಇಂತಹ ಸಂಕೀರ್ಣ ಸಂಬಂಧಗಳ ಹೊತ್ತಿನಲ್ಲಿ ಪತ್ರಮುಖೇನ ನಡೆದ ಘಟನೆಗಳನ್ನು ಆಧರಿಸಿದ ನಾಟಕವೊಂದು ಈವತ್ತಿನ ಮಟ್ಟಿಗೆ ಅಪ್ರಸ್ತುತ ಅನ್ನಿಸಿಬಿಡಬಹುದೆ?
ನಮ್ಮ ಆಲೋಚನೆಯೂ ನಮ್ಮ ಮೊಬೈಲಿಗೆ ಗೊತ್ತಾಗುವ ಈ ದಿನಮಾನದಲ್ಲಿ ‘ಲವ್ ಲೆಟರ್ಸ್; ನಿನ್ನ ಪ್ರೀತಿಯ ನಾನು’ ನಾಟಕದ ಬಗ್ಗೆ ಈ ಅನುಮಾನ ಇದ್ದದ್ದು ಸಹಜವೇ. ಈ ಅನುಮಾನಕ್ಕೆ ವ್ಯತಿರಿಕ್ತವಾಗಿ ಮೈಸೂರಿನ ಕಿರುರಂಗಮಂದಿರದ ಮುಂದೆ ಉದ್ದಾನುದ್ದ ಕ್ಯೂ! ‘ನಿನ್ನ ಪ್ರೀತಿಯ ನಾನು’ ಅನ್ನು ಕಣ್ತುಂಬಿಕೊಳ್ಳಲು ಎಲ್ಲಾ ವಯಸ್ಸಿನ ಪ್ರೇಕ್ಷಕರು ಹಾತೊರೆದು ಬಂದಿದ್ದರು. ರಂಗಭೂಮಿ ಹಾಗೂ ಹಲವು ಭಾಷೆಗಳಲ್ಲಿ ಮನೋಜ್ಞ ನಟನೆಗೆ ಹೆಸರಾದ ಕಿಶೋರ್ ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಕಾರಣವೂ ಒಂದಿತ್ತು. ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲೂ ವಾರಾಂತ್ಯ ಪ್ರದರ್ಶನಗಳು ಕೆಲವೊಮ್ಮೆ ಒಂದೇ ದಿನದಲ್ಲಿ ಎರಡು ಪ್ರದರ್ಶನಗಳನ್ನು ಮಾಡುತ್ತಾ ನಾಟಕಾಸಕ್ತರಿಗೆ ಹೆಚ್ಚು ಸಂತೋಷ ನೀಡುತ್ತಿವೆ. ‘ನಿನ್ನ ಪ್ರೀತಿಯ ನಾನು’ವಿನ ಎರಡೂ ಶೋಗಳೂ ‘ರಂಗಮಂದಿರ ಭರ್ತಿ’ಯಾಗಿದ್ದವು ಎನ್ನುವುದು ಮುಖ್ಯ ವಿಷಯ.
ತನ್ನ ಹತ್ತನೇ ಹುಟ್ಟುಹಬ್ಬಕ್ಕೆ ಬಂದ ಸಿದ್ಧಾರ್ಥನಿಗೆ ಪುಟ್ಟ ರಶ್ಮಿ ಧನ್ಯವಾದ ಹೇಳಲು ಬರೆಯುವ ಮುಗ್ಧ ಪತ್ರದ ಮೂಲಕ ನಾಟಕ ಶುರುವಾಗುತ್ತದೆ. ಬಾಲ್ಯದಿಂದ ತಮ್ಮದೇ ಚೌಕಟ್ಟುಗಳಲ್ಲಿ ಬಂಧಿತವಾದ ಎರಡು ಜೀವಗಳು ಹರೆಯಕ್ಕೆ ಬಂದು ತಂತಮ್ಮ ಒಳಗನ್ನು ಅರುಹುವಾಗ ಕೆಲವೊಮ್ಮೆ ನಗು ತರಿಸಿದರೆ, ಮತ್ತೆ ಕೆಲವೊಮ್ಮೆ ನೋವು ಉಕ್ಕಿ ಬರುವಂತೆ ಮಾಡುತ್ತವೆ. ಇಲ್ಲಿ ಘೋಷಣೆಗಳಿಲ್ಲ, ಎದುರುಗೊಳ್ಳುವ ಸಂಭಾಷಣೆಗಳಿಲ್ಲ–ಕಾಗದ, ಮಸಿ ಮತ್ತು ಅವರಿಬ್ಬರನ್ನು ಕಾಡುವ ಖಾಲಿತನ ಪ್ರೇಕ್ಷಕರ ಒಳಕ್ಕೂ ದಾಟಿಬಿಡುತ್ತದೆ. ಪದಗಳ ನಡುವಿನ ಅಂತರದಲ್ಲಿ ಬಾಲ್ಯದ ಗಾಯಗಳು, ಹಸಿ ಪ್ರೀತಿ, ಘನ ನೋವು, ಇನ್ನೇನು ಸಿಕ್ಕಿತು ಅನ್ನುವಾಗ ಕೈ ತಪ್ಪಿದ ಅನುಬಂಧದ ಅನಿವಾರ್ಯತೆ ಎಲ್ಲವೂ ಕಾಣಿಸುವಾಗ ಆಗುವ ಅಗಾಧ ಸಂಕಟಕ್ಕೆ ಸ್ಥಾಯೀಭಾವವಿದೆ.
ಪ್ರಶಾಂತತೆಯನ್ನೇ ಹೊತ್ತಿರುವ ರಂಗಸ್ಥಳ. ಅಲ್ಲಲ್ಲಿ ತೂಗುಬಿಟ್ಟಿರುವ ದುಂಡನೆಯ ಮಂದಬೆಳಕಿನ ಉಂಡೆಗಳು ನಕ್ಷತ್ರಗಳನ್ನು ಹೋಲುತ್ತಾ ಅನೂಹ್ಯ ಜಗತ್ತೊಂದು ಸೃಷ್ಟಿಯಾಗಿದೆ. ಆಗಾಗ ಸ್ವಲ್ಪವೇ ಬದಲಾಗುವ ಬೆಳಕನ್ನು ಬಿಟ್ಟರೆ ಮತ್ತೆ ಯಾವುದೇ ಅಂಶ ತನ್ಮಯ ಪ್ರೇಕ್ಷಕರನ್ನು ನಾಟಕದಿಂದ ಹೊರಗೆ ಎಳೆಯುವುದಿಲ್ಲ. ಕಲಾವಿದರು ರಂಗದ ತುಂಬೆಲ್ಲಾ ಓಡಾಡಿ ಮಾಡುವ ನಾಟಕಗಳನ್ನು ನೋಡಿ ಅಭ್ಯಾಸವಿದ್ದ ಪ್ರೇಕ್ಷಕರು ಈ ಕೂತು ಪತ್ರ ಓದುವ ಮಾದರಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು.
ನಟರಿಗೆ ಶಾರೀರ ಅಂದರೆ ‘ಧ್ವನಿ’ ಎಂಬುದು ಕೆಲವೊಮ್ಮೆ ಅಭಿನಯಕ್ಕೆ ಒದಗುವ ಮಿತಿಯಾದರೆ, ಇಲ್ಲಿ ಅಭಿನಯದ ಶಕ್ತಿಯೇ ‘ಧ್ವನಿ’ಯಾಗುತ್ತದೆ.
ಸಿದ್ಧಾರ್ಥನಾಗಿ ಕಿಶೋರ್ ಅವರ ‘ನಟನೆ’ ಹಲವು ಮಜಲುಗಳನ್ನು ದಾಟುತ್ತದೆ. ಹುಡುಗನಾಗಿ, ಯುವಕನಾಗಿ, ಆಫೀಸರ್ ಆಗಿ, ಸಂಸಾರಸ್ಥನಾಗಿ ಮತ್ತೆ ರಾಜಕೀಯ ಹಂಬಲಗಳ ವ್ಯಕ್ತಿಯಾಗಿ ಪಕ್ಕಾ ಮಧ್ಯಮವರ್ಗದ ಅಭಿಲಾಷೆಗಳ ಮೂಟೆ ಈ ಸಿದ್ಧಾರ್ಥ. ಆದರೆ ಅವನ ಎದುರಿಗೆ ಇರುವ ಚಂಚಲ ಮನಸ್ಸಿನ, ಯಾವುದೋ ಹುಡುಕಾಟದಲ್ಲಿ ತೊಡಗಿ ಖಾಲಿಯಾಗುತ್ತಿರುವ ತನ್ನನ್ನು ಎಲ್ಲೆಲ್ಲೋ ತಡಕಾಡಿ ಜೀವಿಸಲು ಪ್ರಯತ್ನಿಸುತ್ತಿರುವ ರಶ್ಮಿಯಾಗಿ ಸಿರಿ ರವಿಕುಮಾರ್ ಅವರ ಅಸ್ಖಲಿತ ಮಾತಿನ ಹದ ತಿಳಿಗಾಳಿಯಂತೆ ಪ್ರಾರಂಭವಾಗಿ, ಕಾಲಾನುಕ್ರಮದಲ್ಲಿ ಭಾರದ ಸಂಕೇತವಾಗುತ್ತದೆ. ತನ್ನದೊಂದು ಮನೆ ಹುಡುಕುತ್ತಾ ಪ್ರಪಂಚ ತಿರುಗುತ್ತಾ ಕಲೆಯಲ್ಲಿ ಮುಳುಗಿದ ಈ ಶ್ರೀಮಂತೆಯ ಆತ್ಮ ನೋವನ್ನು ತೋರುವುದು ದೊಡ್ಡ ಪದಗಳಿಂದಲ್ಲ, ಬದಲಿಗೆ ಕಣ್ಣುಗಳಿಗೆ ದಾಟದೇ ಹೋದ ನಗೆಯ ಅಲೆಗಳಲ್ಲಿ.
ಸಿದ್ಧಾರ್ಥ ತನ್ನ ಭಾವನಾತ್ಮಕ ಜಗತ್ತನ್ನು ಬಹು ಎಚ್ಚರಿಕೆಯಿಂದ ತೊಗಲಿನಂತೆ ಧರಿಸಿದರೆ, ರಶ್ಮಿ ತನ್ನ ಹುಡುಕಾಟಕ್ಕೆ ಸಿಗುವ ಎಲ್ಲವನ್ನೂ ನಿರ್ಭಿಡೆಯಿಂದ ತನ್ನದಾಗಿಸಿಕೊಳ್ಳುತ್ತಾಳೆ. ಆದರೆ ಎಲ್ಲವನ್ನೂ ಪ್ರಸ್ತುತಕ್ಕೆ ಇಳಿಸುವ ಸ್ವಾತಂತ್ರ್ಯವನ್ನು ಅವಳ ‘ದುರಂತ’ ವ್ಯಕ್ತಿತ್ವಕ್ಕೆ ಹೊಸ ಆಯಾಮ ಕೊಡುವಲ್ಲಿ ಅನುವಾದಕರು/ನಿರ್ದೇಶಕರು ಬಳಸಬಹುದಿತ್ತು ಎಂದು ಅನ್ನಿಸದೆ ಇರದು.
ಇದು ಹತ್ತಿಗೆ ತಗುಲಿದ ಕಿಡಿಯ ಹಾಗೆ. ಜ್ವಾಲೆ ಧಗಧಗಿಸಿ ಉರಿಯುವುದಿಲ್ಲ. ಕಿಡಿ ಸೋಕಿದ್ದು ಗೊತ್ತಾಗುವ ಹೊತ್ತಿಗೆ ಬರೀ ಬೂದಿ ಉಳಿದಿರುತ್ತದೆ.
ಎ.ಆರ್.ಗರ್ನಿ ನಾಟಕ ರೂಪಾಂತರ ಮತ್ತು ನಿರ್ದೇಶನವನ್ನು ವೆಂಕಟೇಶ್ ಪ್ರಸಾದ್ ಮಾಡಿದ್ದಾರೆ. ಜಯಂತ್ ಜಿ. ನಿಶಾಂತ್ ಗುರುಮೂರ್ತಿ ಅವರ ವಿನ್ಯಾಸವಿದ್ದು, ಅರುಣ್ ಡಿ.ಟಿ ಅವರ ಬೆಳಕಿನ ವಿನ್ಯಾಸವಿದೆ. ಸುಷ್ಮ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.