ADVERTISEMENT

ಯಕ್ಷಗಾನ: 50ರ ಸಂಭ್ರಮದಲ್ಲಿ ಕೋಟದ ಸಾಲಿಗ್ರಾಮ ಮಕ್ಕಳ ಮೇಳ!

ಇಂದು ಸಾಲಿಗ್ರಾಮ ಮಕ್ಕಳ ಮೇಳ ಎಂಬ ಹೆಸರಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.

ಪ್ರಜಾವಾಣಿ ವಿಶೇಷ
Published 4 ಜನವರಿ 2025, 21:05 IST
Last Updated 4 ಜನವರಿ 2025, 21:05 IST
<div class="paragraphs"><p>ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷಗಾನದ ದೃಶ್ಯ, ಎಚ್‌. ಸುಜಯೀಂದ್ರ ಹಂದೆ ಒಳ ಚಿತ್ರದಲ್ಲಿ</p></div>

ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷಗಾನದ ದೃಶ್ಯ, ಎಚ್‌. ಸುಜಯೀಂದ್ರ ಹಂದೆ ಒಳ ಚಿತ್ರದಲ್ಲಿ

   

ಅದು 1975ರ ಕಾಲಘಟ್ಟ. ಶಾಲಾ ವಾರ್ಷಿಕೋತ್ಸವಕ್ಕಾಗಿ ಮಕ್ಕಳಿಗೆ ಯಕ್ಷಗಾನ ಕಲಿಸಲು ತೆರಳುತ್ತಿದ್ದ ಉಡುಪಿ ಜಿಲ್ಲೆಯ ಕೋಟ ಪರಿಸರದ ಇಬ್ಬರು ಶಿಕ್ಷಕರ ಮನಸ್ಸಿನಲ್ಲಿ ಮೂಡಿದ್ದ ಮೇಳ ಕಟ್ಟುವ ಚಿಂತನೆ, ಇಂದು ಸಾಲಿಗ್ರಾಮ ಮಕ್ಕಳ ಮೇಳ ಎಂಬ ಹೆಸರಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.

ಮೇಳ ಕಟ್ಟುವ ಚಿಂತನೆ ಮೂಡಿದ್ದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್‌. ಶ್ರೀಧರ ಹಂದೆ ಅವರಲ್ಲಿ.

ADVERTISEMENT

ಇದಕ್ಕೆ ವೇದಿಕೆ ಸಿದ್ಧಗೊಂಡಿದ್ದು ಶ್ರೀಧರ ಹಂದೆ ಅವರ ನಿವಾಸ ಕೋಟದ ಪಟೇಲರ ಮನೆಯಲ್ಲಿ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದ ರೀತಿಯಲ್ಲಿ ಬಿಡುವಿನ ವೇಳೆಯಲ್ಲಿ ಈ ಮೇಳದ ಕಾರ್ಯಚಟುವಟಿಕೆಗಳು ಗರಿಗೆದರಿದವು.

ಹೀಗೆ ಆರಂಭವಾದ ಸಾಲಿಗ್ರಾಮ ಮಕ್ಕಳ ಮೇಳವು ಈಗ 50ರ ಸಂಭ್ರಮದಲ್ಲಿದೆ. ಮೇಳದ ಸ್ಥಾಪಕರಲ್ಲೊಬ್ಬರಾದ ಕಾರ್ಕಡ ಶ್ರೀನಿವಾಸ ಉಡುಪ ಅವರು ಈಗ ಬದುಕಿಲ್ಲ. ಇನ್ನೊಬ್ಬ ಸ್ಥಾಪಕರಾದ ಶ್ರೀಧರ ಹಂದೆ ಅವರು ಇಳಿ ವಯಸ್ಸಿನಲ್ಲೂ ಮಕ್ಕಳ ನಾಟ್ಯಾಭ್ಯಾಸವನ್ನು ಆಸ್ವಾದಿಸುತ್ತಾರೆ. ಈಗ ಈ ಮೇಳ ಹಾಗೂ ನಾಟ್ಯ ತರಬೇತಿಯ ಜವಾಬ್ದಾರಿ ಶ್ರೀಧರ ಹಂದೆ ಅವರ ಮಗ ಎಚ್‌.ಸುಜಯೀಂದ್ರ ಹಂದೆ ನಿರ್ವಹಿಸುತ್ತಿದ್ದಾರೆ.

ಈ ಮೇಳದಲ್ಲಿ ಧೀಂಗಿಣ ಕಲಿತಿರುವ ನೂರಾರು ವಿದ್ಯಾರ್ಥಿಗಳು ಸಮಾಜದ ನಾನಾ ಸ್ತರಗಳಲ್ಲಿ ಉತ್ತಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ.

ಶಿಕ್ಷಕರಿಬ್ಬರ ಕಲಾ ಕೂಸಾದ ಈ ಮೇಳವು ತನ್ನ ಪ್ರಥಮ ಪ್ರದರ್ಶನವನ್ನು ಮಂಗಳೂರಿನ ಪಿ.ವಿ.ಎಸ್‌.ನ ಕಲಾಕುಂಜದಲ್ಲಿ ನೀಡಿತ್ತು. ದಕ್ಷಿಣ ರೋಟರಿಯ ಅಧ್ಯಕ್ಷರಾಗಿದ್ದ ಮಧುಸೂದನ ಡಿ.ಕುಶೆ ಅವರ ಸಹಕಾರದಲ್ಲಿ ಆ ಪ್ರದರ್ಶನ ನಡೆದಿತ್ತು. ಸ್ಥಾಪನೆಯಾಗಿ ಮೂರೇ ವರ್ಷದಲ್ಲಿ ಅಂದರೆ 1978ರಲ್ಲಿ ಅಮೆರಿಕದ ಮಕ್ಕಳ ಉತ್ಸವದಲ್ಲಿ ಪಾಲ್ಗೊಳ್ಳುವ ಭಾರತದ ಏಕೈಕ ತಂಡವಾಗಿ ಆಯ್ಕೆಯಾಗಿದ್ದು ಈ ಮೇಳದ ಹಿರಿಮೆ. ಈ ಮೂಲಕ ಮೊತ್ತ ಮೊದಲಿಗೆ ಸೀಮೋಲ್ಲಂಘನೆ ಮಾಡಿದ ಯಕ್ಷಗಾನ ತಂಡ ಎಂಬ ಹೆಗ್ಗಳಿಕೆಯೂ ಇದರದ್ದಾಗಿದೆ.

ಅಮೆರಿಕದ ಅಟ್ಲಾಂಟ, ನ್ಯೂಯಾರ್ಕ್‌, ವಾಷಿಂಗ್ಟನ್ ಮೊದಲಾದ ನಗರಗಳಲ್ಲೂ ಯಕ್ಷಗಾನದ ಕಂಪನ್ನು ಮಕ್ಕಳ ಮೇಳವು ಪಸರಿಸಿದೆ. 1985ರಲ್ಲಿ ಬಹರೇನ್‌ನಲ್ಲಿ, 1988ರಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲೂ ಈ ಮಕ್ಕಳ ಮೇಳವು ಪಾಲ್ಗೊಂಡು ವಿದೇಶಗಳಲ್ಲಿ ನೆಲೆಸಿರುವ ಯಕ್ಷಪ್ರೇಮಿಗಳಿಗೆ ಮುದ ನೀಡಿದೆ.

ಯಕ್ಷಗಾನದ ಬಡಗುತಿಟ್ಟಿನ ಆರಾಡಿ, ಮಟಪಾಡಿ ತಿಟ್ಟುಗಳ ಶ್ರೀಮಂತ ಪರಂಪರೆಯ ಸಾಂಪ್ರದಾಯಿಕ ಕುಣಿತ, ವೇಷಭೂಷಣದ ಅನನ್ಯತೆಯನ್ನು ಮೇಳವು ಇಂದಿಗೂ ಜತನದಿಂದ ಕಾಪಾಡಿಕೊಂಡು ಬಂದಿದೆ.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ಕಲೋತ್ಸವದಲ್ಲಿ ಸತತ ಮೂರು ಬಾರಿ ಭಾಗವಹಿಸಿದ್ದ ಕೀರ್ತಿಯೂ ಈ ಮೇಳಕ್ಕಿದೆ. ಮುಂಬೈ, ಗೋವಾ, ಚೆನ್ನೈ, ತಿರುವನಂತಪುರ ಹೀಗೆ ದೇಶದಾದ್ಯಂತ ಯಕ್ಷಗಾನದ ಕಂಪನ್ನು ಪಸರಿಸಿರುವ ಈ ಮೇಳವು ರಾಜ್ಯದ ವಿವಿಧೆಡೆಯೂ ಪ್ರದರ್ಶನ ನೀಡಿ ಭೇಷ್‌ ಎನಿಸಿಕೊಂಡಿದೆ.

‘ವೀರ ವೃಷಸೇನ, ದ್ರುಪದ ಬಂಧನ, ಕೃಷ್ಣಾರ್ಜುನ, ಬಬ್ರುವಾಹನ ಮೊದಲಾದ ಪೌರಾಣಿಕ ಪ್ರಸಂಗಗಳನ್ನು ಸೀಮಿತ ಅವಧಿಯಲ್ಲಿ ಪ್ರದರ್ಶಿಸಿ, ಪ್ರೇಕ್ಷಕರನ್ನು ಯಕ್ಷಲೋಕಕ್ಕೆ ಕೊಂಡೊಯ್ಯುವ ಈ ಮೇಳದ ಕಲಾವಿದರನ್ನು ಮೇರು ಸಾಹಿತಿ ಕೆ.ಶಿವರಾಮ ಕಾರಂತರು ಸೇರಿದಂತೆ ಅನೇಕರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು.

ಈಗ ಮೇಳವನ್ನು ಮುನ್ನಡೆಸುತ್ತಿರುವ ಸುಜಯೀಂದ್ರ ಹಂದೆ ಅವರು ಭಾಗವತರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ ಯಕ್ಷಗಾನದ ಹಿಮ್ಮೇಳ, ಮುಮ್ಮೇಳದಲ್ಲಿ ಪಳಗಿದವರಾಗಿದ್ದಾರೆ. ಇದೇ ಮಕ್ಕಳ ಮೇಳದ ಮೂಲಕ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿರುವ ಅವರಿಗೆ ತಂದೆ ಶ್ರೀಧರ ಹಂದೆ ಅವರೇ ಮೊದಲ ಗುರುಗಳಾಗಿದ್ದಾರೆ. ಇದೀಗ 50 ರ ಸಂಭ್ರಮದಲ್ಲಿ ಹೊಸ ಹುರುಪಿನೊಂದಿಗೆ ಮಕ್ಕಳ ಮೇಳವು ರಂಗ ಪಯಣವನ್ನು ಮುನ್ನಡೆಸಿದೆ.

ಮಕ್ಕಳ ಯಕ್ಷಗಾನದ ದೃಶ್ಯ
ಶ್ರೀಧರ ಹಂದೆ ಅವರ ಮನೆಯಂಗಳದಲ್ಲಿ ಮಕ್ಕಳ ನಾಟ್ಯಾಭ್ಯಾಸ
ಶ್ರೀಧರ ಹಂದೆ
ದಿ. ಕಾರ್ಕಡ ಶ್ರೀನಿವಾಸ ಉಡುಪ
ಶ್ರೀಧರ ಹಂದೆ ಎಚ್‌.
ಶ್ರೀಧರ ಹಂದೆ ಅವರ ಮನೆಯಂಗಳದಲ್ಲಿ ಮಕ್ಕಳ ನಾಟ್ಯಾಭ್ಯಾಸ

ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನ
ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನದ ಆರಂಭ ಕಾಲದ ಚಿತ್ರ
ಮೇಳದ ಬಾಲ ಕಲಾವಿದನ ನಾಟ್ಯಭಂಗಿ

‘ಮಕ್ಕಳ ಮನಮುಟ್ಟುವ ಪ್ರಸಂಗ ಆಯ್ಕೆ’

‘ಒಂದು ದಿನದ ಸ್ಕೂಲ್‌ ಡೇಗಾಗಿ ಯಕ್ಷಗಾನ ಕಲಿಸುವುದಕ್ಕಿಂತ ಮೇಳ ಕಟ್ಟುವುದು ಲೇಸೆಂಬ ಕಲ್ಪನೆಯಲ್ಲಿ ರೂಪುಗೊಂಡಿರುವ ಮೇಳ ಇದು. ನಮ್ಮ ಊರಿನ ಆಸುಪಾಸಿನ ಮಕ್ಕಳಿಗೆ ತರಬೇತಿ ನೀಡಿ ರಜಾ ದಿನಗಳಲ್ಲೇ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿತ್ತು. ಈಗ ಈ ಮೇಳವನ್ನು ನಾನೇ ಮುನ್ನಡೆಸುತ್ತಿದ್ದೇನೆ. ಈಗ 15 ಮಕ್ಕಳು ಮೇಳದಲ್ಲಿದ್ದಾರೆ’ ಎಂದು ವಿವರಿಸುತ್ತಾರೆ ಸುಜಯೀಂದ್ರ ಹಂದೆ. ‘ನಾಲ್ಕನೇ ತರಗತಿಯಿಂದ ಪಿಯುಸಿ ವರೆಗಿನ ಮಕ್ಕಳು ಮೇಳದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಪಿಯುಸಿ ನಂತರ ಮಕ್ಕಳ ಧ್ವನಿಯಲ್ಲಿ ಬದಲಾವಣೆ ಉಂಟಾಗುವುದರಿಂದ ಅವರನ್ನು ಮೇಳದಲ್ಲಿ ಬಳಸಿಕೊಳ್ಳುವುದಿಲ್ಲ. ನಮ್ಮ ಮೇಳದಲ್ಲಿ ಹುಡುಗರಷ್ಟೇ ಇದ್ದಾರೆ’ ಎನ್ನುತ್ತಾರೆ ಅವರು. ‘ಮಕ್ಕಳ ಮೇಳವಾಗಿರುವುದರಿಂದ ಮಕ್ಕಳ ಮನಸ್ಸಿಗೆ ಮುಟ್ಟುವ ಪ್ರಸಂಗಗಳನ್ನು ಆಯ್ದುಕೊಂಡು ಅದನ್ನು ಅವರ ಮಟ್ಟಕ್ಕೆ ಇಳಿಸಿ ಯಕ್ಷಗಾನ ಪ್ರಸಂಗ ಸಿದ್ಧಪಡಿಸಬೇಕಾಗುತ್ತದೆ’ ಎಂದು ಪ್ರಸಂಗ ರೂಪುಗೊಳ್ಳುವ ಬಗೆಯನ್ನೂ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.