ಕೆ.ಪಿ.ಲಕ್ಷ್ಮಣ್ ನಿರ್ದೇಶನದ ‘ಕರ್ನಲ್‌ಗೆ ಯಾರೂ ಬರೆಯೋದಿಲ್ಲ’ ನಾಟಕವು ಪಿಂಚಣಿಗಾಗಿ ಕಾಯುವ ಕರ್ನಲ್ ಒಬ್ಬರ ಕಥೆಯೊಂದಿಗೆ ಮುಕ್ಕಾಗದ ಜೀವನಪ್ರೀತಿಯನ್ನು ಸಾರುತ್ತದೆ.
ಇತ್ತೀಚೆಗೆ ರಂಗ ಶಂಕರದಲ್ಲಿ ಸಮುದಾಯ ತಂಡ ಪ್ರದರ್ಶಿಸಿದ ಕೆ.ಪಿ.ಲಕ್ಷ್ಮಣ್ ನಿರ್ದೇಶನದ ನಾಟಕ ‘ಕರ್ನಲ್‌ಗೆ ಯಾರೂ ಬರೆಯೋದಿಲ್ಲ’ ನಿಧಾನವಾಗಿ ಆವರಿಸಿಕೊಳ್ಳುವ ನಾಟಕ. ಇದು ಶ್ರೀನಿವಾಸ ವೈದ್ಯ ಅವರು ಅನುವಾದಿಸಿದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನ ‘ನೋ ವನ್ ರೈಟ್ಸ್ ಟು ಕರ್ನಲ್’ನ ಕನ್ನಡಾನುವಾದ. ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಯುದ್ಧಾನಂತರ ಹಿಂದೆ ಭರವಸೆ ನೀಡಿದಂತೆ ಪಿಂಚಣಿಗಾಗಿ ಕಾಯುವ ಬಡ ಕರ್ನಲ್‌ನ ಕತೆ ಹೇಳುತ್ತಾ ಇದು ಮಾರ್ಷಿಯಲ್ ಲಾ ದ ಕರಾಳ ನೆರಳಲ್ಲಿ ನಲುಗುತ್ತಿರುವ ಜನರೊಳಗಿನ ಜೀವನ ಪ್ರೀತಿ, ಪ್ರತಿರೋಧದ ಕಿಡಿಯನ್ನು ಕಾಣಿಸುತ್ತಾ ಹೋಗುತ್ತದೆ.
ನಾಟಕ ತೆರೆದುಕೊಳ್ಳುವುದೇ ದಪ್ಪನೆಯ ಹಗ್ಗಕ್ಕೆ ಜೋತುಬಿದ್ದಂತೆ, ಹಗ್ಗದಿಂದ ಕಟ್ಟಿದಂತೆ ಕಾಣುವ ಜನರ ನಿಧಾನ ಚಲನೆಯ ಮೂಲಕ. ನಾಟಕದುದ್ದಕ್ಕೂ ಬೇರೆ ಬೇರೆ ಸನ್ನಿವೇಶಗಳಲ್ಲಿ ಹಗ್ಗ ಬೇರೆ ಬೇರೆ ರೀತಿಯಲ್ಲಿ ಬಳಕೆಯಾಗುತ್ತಾ ವಿಭಿನ್ನ ಅರ್ಥ ನೀಡುತ್ತಾ ಹೋಗುತ್ತದೆ.
ನಾಟಕದ ಆರಂಭದ ದೃಶ್ಯದಲ್ಲಿ ಊರಿನ ಸಂಗೀತಗಾರನೊಬ್ಬನ ಅಂತ್ಯಸಂಸ್ಕಾರಕ್ಕೆ ಕರ್ನಲ್ ಸಜ್ಜಾಗುವ ಹೊತ್ತಿನಲ್ಲಿ ಅದು ಎಷ್ಟೋ ವರ್ಷಗಳ ಬಳಿಕ ಊರಿನಲ್ಲಾದ ಮೊದಲ ‘ಸಹಜ ಸಾವು’ ಎಂಬ ಮಾತು ಬರುತ್ತದೆ. ಪ್ರಭುತ್ವ ವಿರೋಧಿ ದನಿಗಳನ್ನು ನಿರ್ದಯವಾಗಿ ಹೊಸಕಿಹಾಕುತ್ತಿರುವ ಕಾಲದಲ್ಲಿ ಇಲ್ಲಿ ‘ಸಹಜ ಸಾವು’ ಎಂಬುದು ಅಪರೂಪದ ವಿಷಯ. ಕರ್ನಲ್ ಮಗನೂ ಸೈನ್ಯದ ಗುಂಡಿನೇಟಿಗೆ ಬಲಿಯಾಗಿ ಸಾವನ್ನಪ್ಪಿದವನು. ಮಗನ ನೆನಪಿನಲ್ಲೇ ಕರ್ನಲ್ ಹಾಗೂ ಅವನ ಕಾಯಿಲೆಯಿಂದ ನರಳುವ ಮಡದಿ ಕೊರಗುತ್ತಾ ದಿನದ ಬದುಕು ನಡೆಸಲು ಹೆಣಗುತ್ತಿರುತ್ತಾರೆ. ಕಳೆದ ಹತ್ತಾರು ವರ್ಷಗಳಿಂದ ಕರ್ನಲ್ ಪಿಂಚಣಿ ಪತ್ರಕ್ಕಾಗಿ ಕಾಯುತ್ತಿರುವ ಕರ್ನಲ್‌ಗೆ ಕೊನೆಗೂ ‘ಯಾರೂ ಬರೆಯುವುದೇ ಇಲ್ಲ’.
ಅರಾಜಕ ಸ್ಥಿತಿ ಹುಟ್ಟುಹಾಕಿದ ಅಸಹಾಯಕತೆ, ತಣ್ಣನೆಯ ಕ್ರೌರ್ಯ, ವಿಷಾದ, ಸ್ವಾರ್ಥದ ಜೊತೆಗೇ ಗುಪ್ತ ಪ್ರತಿರೋಧ, ಪಂದ್ಯದ ಉತ್ಸಾಹ ನಾಟಕದ ತುಂಬಾ ಕಾಣುತ್ತಾ ಹೋಗುತ್ತದೆ. ಅಸಹನೀಯ ಸಂದರ್ಭದಲ್ಲೂ ಮುಕ್ಕಾಗದ ಜೀವನಪ್ರೀತಿಯನ್ನು ನಾಟಕದ ಮೂಲಕ ಕಾಣಿಸುವಲ್ಲಿ ನಿರ್ದೇಶಕ ಹಾಗೂ ಕಲಾವಿದರು ಯಶಸ್ವಿಯಾಗಿದ್ದಾರೆ. ಕರ್ನಲ್ ಹಾಗೂ ಮಡದಿಯ ಮಾಸದ ಒಲವಿನ ಹೊಳಪು, ಕಳೆದು ಹೋದ ಮಗನ ಪ್ರೀತಿಯ ಹುಂಜವನ್ನು ಉಳಿಸಲು ನಡೆಸುವ ಪ್ರಯತ್ನ, ಊರವರು ಅದನ್ನು ಪಂದ್ಯಕ್ಕೆ ಬಿಡಲು ತೋರುವ ಹುರುಪು ರೂಪಕವಾಗಿ ಹಲವು ನೆಲೆಗಳಲ್ಲಿ ಅರ್ಥ ನೀಡುತ್ತವೆ. ಕೊನೆಯಲ್ಲಿ ನಾವಿನ್ನು ತಿನ್ನುವುದಾದರೂ ಏನು ಎಂಬ ಮಾತಿಗೆ ಕರ್ನಲ್ ನೀಡುವ ಉತ್ತರ ‘ಹೇಲು’, ನೇರ ಎದೆಗೆ ಬಡಿಯುತ್ತದೆ.
ಕೆ.ಪಿ.ಲಕ್ಷ್ಣಣ್ ನಮ್ಮ ಕಾಲದ ವೈರುಧ್ಯಗಳಿಗೆ ಎದುರಾಗುತ್ತಾ ನಮ್ಮನ್ನು ನಾವು ಕಾಣುವ ಮತ್ತು ಮರುಕಟ್ಟಿಕೊಳ್ಳುವ ಬಗೆಯಲ್ಲಿ ನೋಡುಗರನ್ನು ನಾಟಕದೊಂದಿಗೆ ಸಂವಾದಿಯಾಗಿ ಮಾಡುವ ಮಹತ್ವದ ನಿರ್ದೇಶಕರು. ಅವರ ‘ದಕ್ಲಕಥಾ ದೇವಿ ಕಾವ್ಯ’ ಹಾಗೂ ‘ಬಾಬ್ ಮರ್ಲೆ ಫ್ರಂ ಕೋಡಿಹಳ್ಳಿ’ ನಾಟಕಗಳು ದಟ್ಟ ಮತ್ತು ಶಾಕ್ ನೀಡುವ ಸಂಭಾಷಣೆ, ಹಾಡು, ನಾಟಕೀಯತೆಗಳೊಂದಿಗೆ ನಿರಂತರ ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಕಥೆಯ ಹರಿವೇ ಒಂದು ಬಗೆಯ ಕಥನ ತಂತ್ರವನ್ನು ಅಪೇಕ್ಷಿಸುತ್ತದೆ. ಬಹುಶಃ ಹೀಗಾಗಿಯೇ ಈ ನಾಟಕದಲ್ಲಿ ಅವಕ್ಕಿಂತ ಬೇರೆಯಾಗಿ ನಿಧಾನವಾಗಿ, ನೋಡುಗರನ್ನು ಆಲೋಚನೆಗೆ ಹಚ್ಚುತ್ತಾ ಸಾಗುವ ಕಥನ ತಂತ್ರ ಕಾಣುತ್ತದೆ. ಆರಂಭದಲ್ಲಿ ಕಾಣುವ ಹಗ್ಗಕ್ಕೆ ಆತುಕೊಂಡ ನಟರ ನಿಧಾನ ಚಲನೆ, ನಾಟಕದ ಕೊನೆಯಲ್ಲಿ ಪುನರಾರ್ವತನೆಗೊಳ್ಳುವುದು ಬದಲಾಗದ ಬದುಕಿನ ಸ್ಥಿತಿಯನ್ನು ಸೂಚಿಸುತ್ತಿರಬಹುದೇ? ಎಂಬ ಬಗೆಯಲ್ಲಿ ನಮ್ಮನ್ನು ಕಾಡುತ್ತಾ ಮನಸ್ಸಿನಲ್ಲಿ ಉಳಿದುಬಿಡುತ್ತದೆ.
ಸಮುದಾಯ, ಬೆಂಗಳೂರು ತಂಡ ನಟಿಸಿದ ಈ ನಾಟಕ ಲ್ಯಾಟಿನ್ ಅಮೆರಿಕದ ಕತೆಯಾಗದೇ ನಮ್ಮ ಪ್ರಸ್ತುತ ಸ್ಥಿತಿಗೂ ಕನ್ನಡಿ ಹಿಡಿಯುತ್ತಾ ಚಿಂತನೆಗೆ ಹಚ್ಚುತ್ತದೆ. ಕಲಾವಿದರ ಸಾಧ್ಯತೆಗಳನ್ನು ಹೊರಗೆಳೆಯುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ನಾಟಕದ ಸನ್ನಿವೇಶಗಳಿಗೆ ಪೂರಕವಾದ ಹಾಡುಗಳು, ಗಿಟಾರ್, ಹಾರ‍್ಮೋನಿಯಂನ ಪಲುಕುಗಳು ಪರಿಣಾಮವನ್ನು ಹೆಚ್ಚಿಸಿವೆ. ಮಂಜು ನಾರಾಯಣ್ ಅವರ ಬೆಳಕಿನ ನಿರ್ವಹಣೆ ಉತ್ತಮ ಆವರಣ ನಿರ್ಮಿಸಿಕೊಟ್ಟಿತು. ನಾಟಕದ ಸೆಟ್ಟಿಂಗ್, ಹೆಚ್.ಕೆ.ಶ್ವೇತಾರಾಣಿಯವರ ವಸ್ತ್ರಾಲಂಕಾರ ಸನ್ನಿವೇಶವನ್ನು ನೈಜವಾಗಿ ಕಟ್ಟಿಕೊಟ್ಟಿವೆ. ‘ಬಾರೆ ಬಾರೆನ್ನ ಸಖಿಯೇ' ಹಾಡು, ಬೇರೆ ಬೇರೆ ಸಂದರ್ಭಗಳ ಹಮ್ಮಿಂಗ್ ಹಾಗೆಯೇ ಕಿವಿಯಲ್ಲಿ ಅನುರಣಿಸುವಂತಿವೆ.
ತುಂಬಾ ನಿಧಾನವಾಗಿ ಸಾಗುವ ಈ ಕಾದಂಬರಿಯ ಒಳಗಿನ ವಿಷಾದ, ತಣ್ಣನೆಯ ಪ್ರತಿರೋಧವನ್ನು ರಂಗದ ಮೇಲೆ ತರುವುದು ಸವಾಲಿನ ಕೆಲಸ. ನಾಡಿಗಾಗಿ ದುಡಿದ ಯೋಧನೇ ಪರಿತ್ಯಕ್ತನಾಗಿ ಬದುಕು ನಡೆಸಲು ಕಷ್ಟಪಡುತ್ತಿರುವ ಈ ವೈರುಧ್ಯವನ್ನು ಮಾರ್ಕ್ವೆಜ್‌ನ ಕಥೆ ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ವ್ಯಕ್ತಿಗಳ ಅಸಹಾಯಕ ಸ್ಥಿತಿಗೆ ಪ್ರಭುತ್ವ, ಕೆಲವರ ಸ್ವಾರ್ಥ ಹೊಣೆಯಾಗಿರುವ ಈ ವಾಸ್ತವ ನೋಡುಗರಿಗೆ ಇದೇ ತೀವ್ರತೆಯಲ್ಲಿ ತಟ್ಟುವುದಿಲ್ಲ.
ಕೆಲವೊಂದು ಸಂದರ್ಭಗಳಲ್ಲಿ ಪರಿಣಾಮಕ್ಕಾಗಿ ತಂದ ನಿಧಾನಗತಿ ನಾಟಕದ ತೀವ್ರತೆಯ ಮೇಲೆ ಪ್ರಭಾವ ಬೀರಿದಂತೆನಿಸಿತು. ಜೊತೆಗೆ ನೋಡುಗರಾಗಿ ನಾವೂ ಭಿನ್ನ ಭಿನ್ನ ಕಥನ ತಂತ್ರಗಳ ನಾಟಕಗಳನ್ನು ನೋಡುವುದಕ್ಕೆ ನಮ್ಮನ್ನು ಸಜ್ಜುಗೊಳಿಸಿಕೊಳ್ಳುವುದು ತುಂಬಾ ಮುಖ್ಯ ಎನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.