ADVERTISEMENT

ರತನ್ ಥಿಯಮ್ ಎಂಬ ಧೇನಸ್ಥ ರಂಗ ತಪಸ್ವಿ

ಬಿ.ಜಯಶ್ರೀ
Published 13 ಸೆಪ್ಟೆಂಬರ್ 2025, 23:50 IST
Last Updated 13 ಸೆಪ್ಟೆಂಬರ್ 2025, 23:50 IST
ರತನ್‌ ಥಿಯಮ್‌
ರತನ್‌ ಥಿಯಮ್‌   

ಹಿರಿಯ ರಂಗಕರ್ಮಿ ರತನ್ ಥಿಯಮ್ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಬಳಿಕ ಮಣಿಪುರಕ್ಕೆ ತೆರಳಿ ಮೈಥಿ ಸ್ವತಂತ್ರ ನೆಲೆಯ ರಂಗತಂಡ ಕಟ್ಟಿದರು. ರಂಗಭೂಮಿಯನ್ನು ಎಂದೂ ‘ಮನರಂಜನೆ’ ಯಾಗಿ ನೋಡದ ಅವರ ಜತೆಗಿನ ಒಡನಾಟವನ್ನು ಲೇಖಕಿ ಇಲ್ಲಿ ನೆನಪು ಮಾಡಿಕೊಂಡಿದ್ದಾರೆ...

ಇತ್ತೀಚೆಗೆ ನಮ್ಮನ್ನೆಲ್ಲಾ ಅಗಲಿದ ಭಾರತೀಯ ರಂಗಭೂಮಿಯ ಅನರ್ಘ್ಯ ರತ್ನ, ರತನ್ ಥಿಯಮ್ ಅವರದ್ದು ಸಾರ್ಥಕ ರಂಗ ಜೀವನ. 1948 ರಲ್ಲಿ ಮಣಿಪುರದಲ್ಲಿ ಥಿಯಮ್ ತರುಣ್ ಕುಮಾರ್ ಮತ್ತು ಬಿಲಾಸಿನಿ ದೇವಿ ಎಂಬ ಶಾಸ್ತ್ರೀಯ ನೃತ್ಯಪಟು ದಂಪತಿಗೆ ಮಗನಾಗಿ ಜನಿಸಿದ ರತನ್ ದೈನಂದಿನ ಜೀವನದ ಭಾಗವಾಗಿ ಲಯ, ಚಲನೆ ಮತ್ತು ಕಥೆ ಹೇಳುವ ಕಲೆಯನ್ನು ಜನ್ಮದತ್ತವಾಗಿ ಹಾಗೂ ಪರಿಸರದಿಂದ ಪಡೆದರು.

ಅವರ ಹುಡುಕಾಟದ ರಂಗಭೂಮಿಯೂ ಅವರಷ್ಟೇ ಅಪರೂಪದ ಆಯಾಮವುಳ್ಳದ್ದು. ನಮ್ಮ ದೇಶದ ರಂಗಭೂಮಿ ಸತತ ತಪಸ್ಸು ಮಾಡಿ ಗಳಿಸಿದ ಫಲವೇ ಈ ರತನ್ ಎಂಬ ನಿರ್ದೇಶಕರೇನೋ ಅನ್ನುವ ಹಾಗೆ ಅವರು ಹೋದಲ್ಲೆಲ್ಲಾ ರಂಗಭೂಮಿಯ ಆಳ-ಆಯಾಮಗಳನ್ನು ಮರುಶೋಧಿಸದೆ, ಹೊಸತೊಂದು ಸೃಷ್ಟಿ ಮಾಡದೆ ಯಾವ ಪ್ರೊಡಕ್ಷನ್ ಅನ್ನೂ ಸಂಪನ್ನಗೊಳಿಸುತ್ತಿರಲಿಲ್ಲ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನನ್ನ ನಂತರದ ಬ್ಯಾಚ್ ನಲ್ಲಿ ರಂಗಾಭ್ಯಾಸ ಮಾಡಿದವರು ಅವರು. ಎನ್.ಎಸ್.ಡಿ ಮುಗಿಸಿ ಹೊರಟ ಅವರು ಅಲ್ಲಿಂದ ನೇರವಾಗಿ ತನ್ನ ನೆಲವಾದ ಮಣಿಪುರಕ್ಕೆ ಬಂದ ಈ ದಿಟ್ಟ ಮೈಥಿ ಸ್ವತಂತ್ರ ನೆಲೆಯ ರಂಗಭೂಮಿ ಕಟ್ಟಿದರು. ಸಾಂಪ್ರದಾಯಿಕ ಚೌಕಟ್ಟುಗಳಲ್ಲಿ ಕಥೆ ಹೇಳುವಾಗಲೂ ಹೊಸ ಕಾಣ್ಕೆಗಳ ಗುಚ್ಛಗಳನ್ನೇ ಕಟ್ಟಿ ಪ್ರೇಕ್ಷಕರ ಮುಂದೆ ಇಡುತ್ತಿದ್ದರು.

ADVERTISEMENT

ಅವರೊಬ್ಬ ಅದ್ಭುತ ರಂಗನಿರ್ದೇಶಕ, ಬರಹಗಾರ, ಚಿತ್ರ ಕಲಾವಿದ, ತನ್ನನ್ನೂ ಸೇರಿಸಿ ನಾವೆಲ್ಲರೂ ಓದಿದ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಿರ್ದೇಶಕ ಹಾಗೂ ಚೇರ್ಮನ್ ಪದವಿಯನ್ನು ಅಲಂಕರಿಸಿ ಅವಕ್ಕೆ ಘನತೆ ತಂದು ಕೊಟ್ಟವರು. ಅಂತೆಯೇ ಅವರಿಗೆ ಸಂದ ಗೌರವಗಳೂ ಹಲವಾರು. ಒಮ್ಮೊಮ್ಮೆ ಗಾಢವಾದ ಅಭ್ಯಾಸಿ ಅಂದರೆ ಸ್ಕಾಲರ್ ಥರವೂ ಮತ್ತೊಮ್ಮೆ ಆಳವಾದ ಅರಿವಿನ ಬಾಗಿಲಲ್ಲಿ ನಿಂತ ಫಿಲಾಸಫರ್ ಅಥವಾ ವೇದಾಂತಿಯ ಹಾಗೂ ಭಾಸವಾಗುತ್ತಿದ್ದ ಥಿಯಮ್ ತಮ್ಮ ನಾಟಕಗಳಿಂದಾಗಿ ಭಾರತದಲ್ಲಿ ಅಷ್ಟೇ ಅಲ್ಲ, ಹೊರ ದೇಶಗಳಗಳಲ್ಲೂ ಕೂಡ ಹೆಸರು ಮಾಡಿದವರು. ಅವರೊಳಗಿನ ಗಾಂಭೀರ್ಯ ಹಾಗೂ ರಂಗಜ್ಞಾನದ ಹೊಸ ಹುಡುಕಾಟವನ್ನು ಕಂಡರೆ ನನಗೆ ಹಿಂದಿನ ದಿನಗಳಲ್ಲಿ ಜನ ನ್ಯಾಯ ಕೇಳಲಿಕ್ಕೆಂದು ಬಂದು ಬಾರಿಸುತ್ತಿದ್ದ ನ್ಯಾಯದ ಗಂಟೆ ಅಥವಾ ಹಳೆಯ ಚರ್ಚುಗಳ ಮೇಲೆ ಕಟ್ಟಿರುತ್ತಿದ್ದ ಬೃಹತ್ ಗಂಟೆ ನೆನಪಾಗುತ್ತಿತ್ತು. ಆ ಗಂಟೆಗಳನ್ನು ಯಾರಾದರೂ ಅಲ್ಲಾಡಿಸಿದಾಗಲೆಲ್ಲಾ ಅವು ಅತ್ಯಂತ ಗಾಢವಾದ ಶಬ್ದ ಹೊರಡಿಸುತ್ತಿದ್ದವು, ಅದು ದೂರದೂರಕ್ಕೂ ಸಾವಧಾನವಾಗಿ ಅಲೆಅಲೆಯಾಗಿ ಕೇಳಿಸುತ್ತಿತ್ತು. ಆ ಶಬ್ದದ ಅರ್ಥ ಇಲ್ಲೇನೋ ಗಹನವಾದ ವಿಷಯ ಇದೆ, ಅದನ್ನು ನಾವು ಗಮನಿಸಬೇಕು ಎಂಬ ಹಾಗೆ ಭಾಸವಾಗುತ್ತಿತ್ತು. ರತನ್ ಅವರನ್ನ ನೋಡಿದರೂ ಅದೇ ಭಾವ ಹುಟ್ಟುತ್ತಿತ್ತು ನನಗೆ.

ರಾಷ್ಟ್ರೀಯ ನಾಟಕ ಶಾಲೆ ದೆಹಲಿ - ಇಲ್ಲಿ ನಾನು ಎಪ್ಪತ್ತರ ದಶಕದಲ್ಲಿ 2ನೇ ವರ್ಷಕ್ಕೆ ಕಾಲಿಟ್ಟಾಗ ರತನ್ ಥಿಯಮ್ ಆಗಷ್ಟೇ ಎನ್.ಎಸ್.ಡಿಗೆ ಸೇರಿದರು. ನನಗಂತೂ ನನ್ನ ಹುಟ್ಟು, ಬೆಳವಣಿಗೆ, ವಿದ್ಯಾಭ್ಯಾಸ, ಅರಿವು, ಭಾವನೆಗಳು ಎಲ್ಲವೂ ನನಗೆ ನನ್ನ ತಾಯಿ ಮತ್ತು ಕಂಪನಿ ಆಗಿತ್ತು. ಒಂದು ರೀತಿ ಅಮ್ಮನ ಸೆರಗಿನಲ್ಲೇ ಬೆಚ್ಚಗೆ ಇದ್ದವಳು – ಕಂಪನಿಯನ್ನು ಹೊರತುಪಡಿಸಿ ನನಗೆ ಬೇರೆ ಜಗತ್ತೇ ಇರಲಿಲ್ಲ. ಎನ್.ಎಸ್.ಡಿಗೆ ಬಂದ ನಿಧಾನಕ್ಕೆ ಒಂದು ಹೊಸ ಜಗತ್ತು ತೆರೆದುಕೊಳ್ಳತೊಡಗಿತು. ಈ ಜಾಗ ನಮ್ಮ ಗುಬ್ಬಿ ಕಂಪನಿಗಿಂತ ಹೇಗೆ ಭಿನ್ನ ಎಂಬ ಹುಡುಕಾಟ ಗಾಢವಾಗಿ ಬೆಳೆಯತೊಡಗಿತು.

ಆಗ ಬಂದು ಸೇರಿದ್ದ ರತನ್ ಕೂಡ ಮಿತಭಾಷಿ, ತುಂಬಾ ಶಾಂತಚಿತ್ತ, ನಿಧಾನಿ, ಆತನ ಕಣ್ಣುಗಳಂತೂ ಬಹಳ ಸೂಕ್ಷ್ಮವಾಗಿ ಎಲ್ಲವನ್ನೂ ಗ್ರಹಿಸುತ್ತಿದ್ದವು. ಮುಂದೆ ಒಮ್ಮೆ ಸಂಗೀತ ನಾಟಕ ಅಕಾಡೆಮಿ (ಎಸ್.ಎನ್. ಎ) ನಮಗೆ ಒಂದು ಪ್ರಾಜೆಕ್ಟ್ ಕೊಟ್ಟಿತು. ಆಗಲೇ ಕರ್ನಾಟಕದಿಂದ ನಾನು ಅಂದರೆ ನಮ್ಮ ಸ್ಪಂದನ ತಂಡ, ಮಣಿಪುರದಿಂದ ರತನ್ ಅವರ ಕೋರಸ್ ರೆಪೆರ್ಟರಿ ಥಿಯೇಟರ್, ಮಹಾರಾಷ್ಟದಿಂದ ವಾಮನ ಕೇಂದ್ರೆ ಅವರ ರಂಗಪೀಠ, ಕಾಶ್ಮೀರದಿಂದ ಬಲವಂತ ಠಾಕೂರ್ ಅವರ ನಟರಂಗ್ ಮತ್ತು ಜೈಪುರದಿಂದ ಭಾನುಭಾರತಿ ಅವರ ತಂಡ ಆಜ್ ರಂಗಮಂಡಲ್ ಹೀಗೆ ಎಲ್ಲಾ ಬಂದಿದ್ದೆವು.

ಸ್ಥಳೀಯ ಜಾನಪದ ಬಳಸಿಕೊಂಡು ಮೂಲ ಪ್ರಕಾರಕ್ಕೆ ಚ್ಯುತಿ ಬಾರದಂತೆ ಹೊಸ ನಾಟಕವೊಂದನ್ನು ತಯಾರು ಮಾಡಬೇಕು, ಅದರ ಮೊದಲ ಪ್ರದರ್ಶನ ನಾವೇ ಆಯೋಜಿಸುತ್ತೇವೆ ಎಂದು ಸಂಗೀತ ನಾಟಕ ಅಕಾಡೆಮಿ ಹೇಳಿತ್ತು. ಆಗ ತಯಾರಾದದ್ದೇ ನಮ್ಮ ತಂಡದ ಲಕ್ಷಾಪತಿರಾಜನ ಕಥೆ, ಥಿಯಮ್ ಅವರ ಚಕ್ರವ್ಯೂಹ, ವಾಮನ ಕೇಂದ್ರೆ ಅವರ ಜುಲ್ವ ಇತ್ಯಾದಿ. ಆಗ ಬಂದ ಎಲ್ಲಾ ನಾಟಕಗಳೂ ಈಗಲೂ ಜನಮಾನಸದಲ್ಲಿ ಉಳಿದು ಕಾಲಾತೀತ ಮಾಸ್ಟರ್ ಪೀಸ್ ಎನಿಸಿಕೊಂಡವು!

ರತನ್ ಕಟ್ಟಿದ ನಾಟಕ ನೋಡುತ್ತಿದ್ದರೆ- ಚಿತ್ರಕಲೆಯೋ ಫೋಟೋಗ್ರಫಿಯೋ ಎಂದು ಅಚ್ಚರಿಯಾಗುತ್ತಿತ್ತು. ಮುಂದೊಮ್ಮೆ ಭೇಟಿ ಆದಾಗ ‘ರತನ್, ಈ ಕಲ್ಪನಾ ವಾಸ್ತವವನ್ನು ಹೇಗೆ ಸಾಧಿಸಿದಿರಿ?’ ಎಂದು ಕೇಳಿದೆ. ಅದಕ್ಕೆ ಉತ್ತರವಾಗಿ ಅವರು ಮುಗುಳನಕ್ಕು, ‘ನಾನು ನಾಟಕದ ದೃಶ್ಯಗಳನ್ನು ರಂಗದ ಮೇಲೆ ಪೇಂಟ್ ಮಾಡುತ್ತೇನೆ. ಬಣ್ಣ- ಅಥವಾ ಬ್ರಶ್ ನಿಂದ ಅಲ್ಲ, ಕಲಾವಿದರು ಮತ್ತು ಲೈಟುಗಳಿಂದ’ ಅಂದಿದ್ದರು.

ರತನ್ ಮೊದಲು ಚಿತ್ರಕಲೆ, ಕಾವ್ಯ ಮತ್ತು ಕಾದಂಬರಿಯನ್ನು ಅನ್ವೇಷಿಸಿದರೂ, ರಂಗಭೂಮಿ ಅವರ ಆತ್ಯಂತಿಕ ಆಯ್ಕೆಯಾಗಿತ್ತು. ಇದರಿಂದ ಈಶಾನ್ಯ ರಂಗಭೂಮಿಗೆ ಪ್ರಾತಿನಿಧ್ಯ ದೊರೆತು ಶ್ರೀಮಂತವೇ ಆಯಿತು. ನಾಟ್ಯ ಸಂಕೀರ್ತನೆ, ತಂಗ್-ತಾ, ರಾಸ ಲೀಲಾ ಮತ್ತು ಅವರ ಮಣಿಪುರಿ ಪರಂಪರೆಯಿಂದ ಪ್ರಭಾವಿತರಾಗಿದ್ದ ಅವರು, ಗಟ್ಟಿ ಬೇರಿನ ಸಾರ್ವತ್ರಿಕ ಚಳವಳಿಯ ರಂಗಭೂಮಿಯನ್ನು ರೂಪಿಸಿದರು. ಥಿಯಮ್ ಅವರಲ್ಲಿ ಮೌನ ಪ್ರತಿಭಟನೆಯಾಯಿತು, ಪುರಾಣ ರೂಪಕವಾಯಿತು, ಮತ್ತು ಆ ವೇದಿಕೆ ಸಮಾಜದ ಗಾಯಗಳಿಗೆ ಹಿಡಿದ ಕನ್ನಡಿಯಾಯಿತು. ಚಕ್ರವ್ಯೂಹ, ಉತ್ತರ ಪ್ರಿಯದರ್ಶಿ ಮತ್ತು ನೈನ್ ಹಿಲ್ಸ್ ಒನ್ ವ್ಯಾಲಿಯಂತಹ ಕೃತಿಗಳಲ್ಲಿ, ಅವರು ಪುರಾಣವನ್ನು ಆಧುನಿಕ ಸ್ಮರಣೆಯಾಗಿ ಪರಿವರ್ತಿಸಿದರು. ಈಚೆಗೆ ತಮ್ಮ 77 ನೇ ವಯಸ್ಸಿನಲ್ಲಿ ರತನ್ ಥಿಯಮ್ ಈ ಪ್ರಪಂಚದಿಂದ ನಿರ್ಗಮಿಸಿದಾಗ ಕವಿದ ಶೂನ್ಯದ ನಡುವೆಯೂ ನಾವು ಮುಖ್ಯವಾಗಿ ನೆನಪಿಟ್ಟುಕೊಳ್ಳಬೇಕಿರುವುದು ರತನ್ ರಂಗಭೂಮಿಯನ್ನು ಎಂದೂ ‘ಮನರಂಜನೆ’ ಯಾಗಿ ನೋಡಲಿಲ್ಲ, ಬದಲಿಗೆ ಅದು ಅವರಿಗೆ ಒಂದು ಗಟ್ಟಿ ಧ್ವನಿಯ ಸ್ವರೂಪ, ತನ್ನೊಳಗಿನ ಒಂದು ಆಪ್ತ ಮುಖಾಮುಖಿ ಮತ್ತು ಆತ್ಮದೀಪದ ಹಾಗೆ ಬೆಳಗುವ ಅರಿವಿನ ಜಾಗೃತ ಸ್ಥಿತಿಯಾಗಿತ್ತು. ಆ ಬೆಳಕನ್ನು ಮತ್ತಷ್ಟು ಪಸರಿಸುವಂತೆ ಮಾಡುವುದು ಮುಂದಿನ ಪೀಳಿಗೆಗಳ ಜವಾಬ್ದಾರಿಯಾಗಿದೆ.

(ನಿರೂಪಣೆ: ಪ್ರೀತಿ ನಾಗರಾಜ್‌)

ಮೈಥಿ ರಂಗ ತಂಡದ ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.