ADVERTISEMENT

ರಂಗನಾಯಕಿಯರ ಹಾಡುಪಾಡು

ಸಂತೋಷ ಈ.ಚಿನಗುಡಿ
Published 16 ಆಗಸ್ಟ್ 2025, 23:35 IST
Last Updated 16 ಆಗಸ್ಟ್ 2025, 23:35 IST
ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯಸಂಘದವರ ‘ಗಂಗಿ ಮನ್ಯಾಗ– ಗೌರಿ ಹೊಲದಾಗ’ ನಾಟಕದ ದೃಶ್ಯ
ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯಸಂಘದವರ ‘ಗಂಗಿ ಮನ್ಯಾಗ– ಗೌರಿ ಹೊಲದಾಗ’ ನಾಟಕದ ದೃಶ್ಯ   

ರಂಗದ ಮೇಲೆ ಝಗಮಗಿಸುವ ದೀಪಗಳ ನಡುವೆ ಮಿಣಮಿಣ ಮಿಂಚುವ ಪೋಷಾಕು ಧರಿಸಿ, ಬಣ್ಣ ಬಳಿದುಕೊಂಡು ಪಾತ್ರ ಮಾಡಿ, ರಂಗರಸಿಕರನ್ನು ರಂಜಿಸುವುದೇ ಈ ಕಲಾವಿದೆಯರ ಕಾಯಕ. ರಂಗದ ಮೇಲಿನ ಬಲ್ಬುಗಳು ಆರುವಷ್ಟರಲ್ಲಿ ಜಗತ್ತಿಗೆ ಬೆಳಕಾಗುತ್ತದೆ. ಆಗ ಇವರ ಬದುಕು ಕತ್ತಲೆಗೆ ಜಾರುತ್ತದೆ...

ಆಗ...

ಸಂಪತ್ತಿಗೆ ಸವಾಲ್, ಅಜಾತ ನಾಗಲಿಂಗ ಲೀಲೆ, ಹೇಮರಡ್ಡಿ ಮಲ್ಲಮ್ಮ, ಸತಿ ಸಕ್ಕೂಬಾಯಿ ಮುಂತಾದ ನಾಟಕಗಳು ಸಾಮಾಜಿಕ ಸಂದೇಶ ವಾಹಕಗಳಾಗಿದ್ದವು. ‘ಸಂಪತ್ತಿಗೆ ಸವಾಲ್‌’ ನಾಟಕ ಮಾಡುವಾಗ ನಾನು ತುಂಬು ಗರ್ಭಿಣಿ. ನಾನು ಪಾತ್ರ ಒಲ್ಲೆ ಎಂದರೂ ಊರಿನ ಜನ ಕೇಳಲಿಲ್ಲ. ನೀವೇ ಪಾತ್ರ ಮಾಡಬೇಕು ಎಂದು ಹಟ ಹಿಡಿದರು. ನಟನೆಗೆ ಅಷ್ಟು ಬೆಲೆ ಇತ್ತು–ಇದು ಹುಬ್ಬಳ್ಳಿಯ ಹಿರಿಯ ಕಲಾವಿದೆ ಅನ್ನಪೂರ್ಣ ಅವರ ಮಾತು.

ADVERTISEMENT

ಈಗ...

‘ನಾನು ಒಂದು ನಾಟಕಕ್ಕೆ 20 ಸಾವಿರ ರೂಪಾಯಿ ತೆಗೆದುಕೊಳ್ಳುತ್ತೇನೆ. ಗ್ರಾಮೀಣ ನಾಟಕಗಳಲ್ಲಿ ಹಣ ಗಳಿಕೆ ಚೆನ್ನಾಗಿಯೇ ಆಗುತ್ತಿದೆ. ಆದರೆ, ಆತ್ಮಗೌರವದ್ದೇ ಪ್ರಶ್ನೆ. ರಂಗದ ಮೇಲೆ ಹಾಡಿ, ಕುಣಿದು, ನಗಿಸಿ, ಮುದ್ದಿಸಿ ಮಾಡುವ ಪಾತ್ರಗಳೆಲ್ಲವೂ ಸುಳ್ಳು. ತೆರೆ ಬಿದ್ದ ಮೇಲೆ ಎದುರಾಗುವ ಆತ್ಮಗೌರವದ ಪ್ರಶ್ನೆಯೇ ನಿಜವಾದ ಬದುಕು. ನಾನು ಈ ಪಾತ್ರ ಚೆನ್ನಾಗಿ ಮಾಡುತ್ತೇನೆ ಎಂದು ಹುಮ್ಮಸ್ಸಿನಿಂದ ಹೋಗುತ್ತೇನೆ. ನಾಟಕ ಮುಗಿದ ಮೇಲೆ ನಾನೇಕೆ ಇದನ್ನು ಮಾಡಿದೆ ಎಂಬ ನೋವು ಕಾಡುತ್ತದೆ. ಇನ್ನೊಮ್ಮೆ ಇಂಥ ಪಾತ್ರಗಳನ್ನು ಒಪ್ಪುವುದು ಬೇಡ ಎಂದು ದೃಢವಾಗಿ ಅಂದುಕೊಂಡಿರುತ್ತೇನೆ. ಹೊಟ್ಟೆಪಾಡಿನ ಪ್ರಶ್ನೆ ಬಂದಾಗ ಮತ್ತೆ ಬಣ್ಣ ಹಚ್ಚುತ್ತೇನೆ’ ಎನ್ನುವುದು ಬೆಳಗಾವಿಯ ಹದಿನೆಂಟರ ಹರೆಯದ ರೂಪಾಲಿಯ ತೊಳಲಾಟ.

ಹಿರಿಯ ಮತ್ತು ಕಿರಿಯ ಕಲಾವಿದೆಯರಿಬ್ಬರ ಮಾತು ಗ್ರಾಮೀಣ ನಾಟಕಗಳು ಮಗ್ಗಲು ಬದಲಿಸಿರುವುದನ್ನು ಸ್ಪಷ್ಟವಾಗಿ ಹೇಳುತ್ತವೆ. ಇಂತಹ ನೂರಾರು ಕಲಾವಿದೆಯರು ನಾಡಿನ ಮೂಲೆ ಮೂಲೆಯಲ್ಲಿದ್ದಾರೆ. ಅವರ ಪ್ರತಿನಿಧಿಯಂತಿದ್ದಾರೆ; ಈ ಇಬ್ಬರು ಕಲಾವಿದೆಯರು.

ಇಂಥ ಕಲಾವಿದೆಯರ ಬಾಳು ಬೆಳಗುವುದೇ ಕತ್ತಲಾದ ಮೇಲೆ. ರಂಗಸಜ್ಜಿಕೆ ಮೇಲೆ ಝಗಮಗಿಸುವ ದೀಪಗಳ ನಡುವೆ, ಮಿಣಮಿಣ ಎನ್ನುವ ಬಟ್ಟೆ ಧರಿಸಿ, ಬಣ್ಣ ಬಳಿದುಕೊಂಡು ಪಾತ್ರ ಮಾಡಿ, ರಂಗ ರಸಿಕರನ್ನು ರಂಜಿಸುವುದೇ ವೃತ್ತಿ ಧರ್ಮ. ರಂಗದ ಮೇಲಿನ ದೀಪ ಆರಿದ ಮೇಲೆ ಜಗತ್ತಿಗೆ ಬೆಳಕಾಗುತ್ತದೆ. ಆಗ ಇವರ ಬದುಕು ಕತ್ತಲೆಗೆ ಜಾರುತ್ತದೆ...

‘ಗ್ರಾಮೀಣ ನಾಟಕ’ಗಳನ್ನೇ ನಂಬಿಕೊಂಡ ಅಪಾರ ಸಂಖ್ಯೆಯ ರಂಗನಟಿಯರ ಕಥನಗಳಲ್ಲಿ ಕರುಣ ರಸವೇ ಹೆಚ್ಚು. ಪ್ರೇಕ್ಷಕರ ಮುಂದೆ ಕುಣಿದು ಕುಪ್ಪಳಿಸುವ, ರಂಗೋನ್ಮಾದ ನೀಡುವ ಕಲಾವಿದೆಯರ ಬದುಕು ನಾಟಕದಲ್ಲಷ್ಟೇ ವರ್ಣರಂಜಿತ; ರಂಗದ ಹಿಂದೆ ವರ್ಣಹೀನ.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ನಾಟಕಗಳಲ್ಲಿ ‘ಡಬಲ್‌ ಮೀನಿಂಗ್‌’ ಸಂಭಾಷಣೆಯೇ ಪ್ರಧಾನ. ಅಶ್ಲೀಲ ಹಾವಭಾವವೇ ಮುಖ್ಯ. ಐಟಂ ಸಾಂಗ್‌ಗಳೇ ಆಧಾರ. ಕಲಾವಿದೆಯರನ್ನು ರಂಗದ ಮೇಲೆ ಬರಸೆಳೆಯುವ, ತಬ್ಬುವ, ಮುದ್ದಿಸುವ, ಸಿನಿಮಾ ಹಾಡಿಗೆ ಕುಣಿಸುವ, ಖಾಸಗಿತನಕ್ಕೆ ಧಕ್ಕೆ ತರುವಂಥ ಯತ್ನಗಳೇ ಹೆಚ್ಚಾಗಿವೆ. ಇದೆಲ್ಲಕ್ಕೂ ಒಪ್ಪಿದರೆ ಮಾತ್ರ ಅವಕಾಶಗಳು ಸಿಗುತ್ತವೆ. ಒಪ್ಪದಿದ್ದರೆ ಹಣ ಕೊಡುತ್ತಾರೋ ಇಲ್ಲವೋ ಎಂಬ ಭಯ ಇವರನ್ನು ಮುತ್ತಿಕೊಳ್ಳುತ್ತದೆ.

ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಹಬ್ಬ, ಸಮಾರಂಭಗಳಲ್ಲಿ ನಾಟಕ ಮಾಡುವ ಉಮೇದು ಹೆಚ್ಚಾಗಿದೆ. ನಿರ್ದೇಶಕ, ನಿರ್ಮಾಪಕ, ಮ್ಯಾನೇಜರ್, ಪಾತ್ರಧಾರಿಗಳೆಲ್ಲರೂ ಹಳ್ಳಿಯವರೇ. ಇವರೆಲ್ಲ ಹವ್ಯಾಸಿಗಳು. ಆದರೆ, ಪಾತ್ರ ಮಾಡುವ ಕಲಾವಿದೆಯರೆಲ್ಲರೂ ವೃತ್ತಿಪರರು. ಹೀಗಾಗಿ, ನಾಟಕಕ್ಕೆ ಇರಬೇಕಾದ ಶಿಸ್ತು ಹಾಗೂ ಸೌಜನ್ಯವನ್ನೂ ಮೀರಿ ಯುವಜನರು ವರ್ತಿಸುವ ಘಟನೆಗಳು ಸಾಕಷ್ಟು ಸಿಗುತ್ತವೆ.

‘ಕಲಾರಸಿಕರು ಕೇಳಿದ್ದನ್ನು ನೀಡುವುದೊಂದೇ ನಮ್ಮ ಕೆಲಸ. ಅವರನ್ನು ಖುಷಿಪಡಿಸಿ ಬರುತ್ತೇವೆ. ಆದರೆ, ನಾವು ನೋವು ತಿನ್ನುತ್ತೇವೆ’ ಎನ್ನುತ್ತಾರೆ ಕಲಾವಿದೆ ರೂಪಾಲಿ.

ಅಂದೊಂದಿತ್ತು ಕಾಲ

ಏಣಗಿ ಬಾಳಪ್ಪ, ಸುಭದ್ರಮ್ಮ ಮನ್ಸೂರ, ಚಿಂದೋಡಿ ಲೀಲಾ ಅವರಂಥ ನೂರಾರು ಕಲಾವಿದರು ಸಮಾಜಕ್ಕೆ ದಾರಿ ತೋರಿದರು. ಉತ್ತರ ಕರ್ನಾಟಕದಲ್ಲಿ ಇವರ ನಾಟಕ ಇದ್ದ ಕಡೆ ಚಿತ್ರಮಂದಿರಗಳು ಖಾಲಿ ಬೀಳುತ್ತಿದ್ದವು ಎನ್ನುವುದನ್ನು ಹಿರಿಯರು ನೆನೆಯುತ್ತಾರೆ. ಇವರ ನಂತರದ ಜೂನಿಯರ್ ಮಾಲಾಶ್ರೀ, ಜೂನಿಯರ್‌ ಶ್ರೀದೇವಿ, ಜೂನಿಯರ್ ಸಿಲ್ಕ್‌ ಸ್ಮಿತಾ ಎಂದು ಕರೆಸಿಕೊಂಡು ಹೆಸರು ಮಾಡಿದವರೂ ಸಾಕಷ್ಟು ಕಲಾವಿದೆಯರು ಇದ್ದಾರೆ.

ರಕ್ತರಾತ್ರಿ, ಕುರುಕ್ಷೇತ್ರ, ಸತಿ ಸಾವಿತ್ರಿ ಮುಂತಾದ ಪೌರಾಣಿಕ ನಾಟಕಗಳು; ಜಗಜ್ಯೋತಿ ಬಸವೇಶ್ವರ, ಸಿದ್ಧಾರೂಢ ಮಹಾತ್ಮೆ, ಕಿತ್ತೂರು ಹುಲಿ, ವೀರ ಸಿಂಧೂರ ಲಕ್ಷ್ಮಣನಂಥ ಐತಿಹಾಸಿಕ ಪ್ರಯೋಗಗಳು; ಗೌಡರ ಗದ್ದಲ, ನನ್ನವರು ನನ್ನ ಹಡೆದವರು, ಚನ್ನಪ್ಪ ಚನ್ನೇಗೌಡ, ವರ ನೋಡಿ ಹೆಣ್ಣುಕೊಡು, ಬೆಳ್ಳಿ–ಬಂಗಾರ, ಮಾವನ ಮಗಳು, ರೈತನ ಮಕ್ಕಳು, ಕಲಿತೂ ಕತ್ತೆ, ತಾಯಿಯಂಥ ಅತ್ತಿಗೆ... ಮುಂತಾದ ಸಾಮಾಜಿಕ ನಾಟಕಗಳು ಸಮಾಜದ ಪಿಡುಗಿನ ವಿರುದ್ಧ ಅಸ್ತ್ರಗಳಾಗಿ ಪ್ರಯೋಗವಾದವು.

ಅಪ್ಪ ಮಂದ್ಯಾಗ-ಮಗಳು ಸಂದ್ಯಾಗ, ಖಾನಾವಳಿ ಚನ್ನಿ, ನೋಡ್ಯಾಳ ರೊಕ್ಕ- ಬಂದಾಳ ಪಕ್ಕ... ಈಗಿನ ಹೆಸರುಗಳು! ಇವು ಬದಲಾದ ಪ್ರೇಕ್ಷಕರ ಅಭಿರುಚಿಯನ್ನು ಸಂಕೇತಿಸುವಂತಿವೆ.

‘ಬಹಳಷ್ಟು ಕಡೆ ನನ್ನನ್ನು ನಾಟಕ ಉದ್ಘಾಟನೆಗೆ ಕರೆಯುತ್ತಾರೆ. ಉದ್ಘಾಟನೆ ಬಳಿಕ ನಾಟಕ ನೋಡದೇ ಬರುತ್ತೇನೆ. ನನ್ನಂಥವರು ನೋಡಲು ಸಾಧ್ಯವೇ ಇಲ್ಲ; ಅಷ್ಟೊಂದು ಕೀಳು ಅಭಿರುಚಿ ಈಗ ಬೆಳೆದುಬಿಟ್ಟಿದೆ’ ಎನ್ನುತ್ತಾರೆ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಕೆ.ನಾಗರತ್ನ.

‘ರಂಗಭೂಮಿಗೆ ಗುಟುಕು ನೀರು ಕುಡಿಸಿ ಬದುಕಿಸಿದ್ದೇ ಗ್ರಾಮೀಣರು. ಆದರೆ, ಒಂದು ದಶಕದಿಂದ ಈಚೆಗೆ ಹವ್ಯಾಸಿಗಳ ನಾಟಕಗಳು ನಾಟಕಗಳಾಗಿ ಉಳಿದಿಲ್ಲ. ವೇದಿಕೆಯಲ್ಲಿ ಕಾಮ ಪ್ರಚೋದನೆಯೇ ಮುಖ್ಯ ಎನ್ನುವಂತಾಗಿದೆ. ಹುಡುಗಿ ಉನ್ಮಾದದಲ್ಲಿ ಕುಣಿದರೆ ಮಾತ್ರ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ. ನಾಟಕ ಬದುಕಿನ ಕನ್ನಡಿಯಾಗಬೇಕು. ಪ್ರಚೋದನೆ ಆಗಬಾರದು. ಕಲಾವಿದೆಯರು ಎಲ್ಲವನ್ನೂ ಹೇಗೆ ಸಹಿಸಿಕೊಳ್ಳುತ್ತಾರೆ ಎಂಬುದೇ ನನಗೆ ಅಚ್ಚರಿ’ ಎಂದು ಅವರು ಕಸಿವಿಸಿಗೊಂಡರು.

ಈಗ ಕಾಲ ಬದಲಾಗಿದೆ. ಹರೆಯದ ಹುಡುಗಿಯರಿಗೆ ಮಾತ್ರ ಬೇಡಿಕೆ. ಕೆಲವರು ಒಂದೇ ನಾಟಕಕ್ಕೆ ಕನಿಷ್ಠ 10 ಸಾವಿರದಿಂದ ಗರಿಷ್ಠ 30 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾರೆ. ಅಭಿನಯ ಗೊತ್ತಿಲ್ಲದ್ದಿದರೂ ಚಿಂತೆಯಿಲ್ಲ; ಮೈ ಚಳಿ ಬಿಟ್ಟು ಕುಣಿಯಬೇಕು. ಹಸಿಹಸಿ ದೃಶ್ಯಗಳನ್ನು ಮಾಡಬೇಕು. ಲಂಗ ಹಾರಿಸಬೇಕು. ಕೆಟ್ಟ ಡೈಲಾಗುಗಳನ್ನು ಹೇಳಬೇಕು ಎನ್ನುವ ನಿರೀಕ್ಷೆಗಳೇ ಹೆಚ್ಚಾಗಿವೆ’ ಎನ್ನುತ್ತಾರೆ ಕಲಾವಿದೆ ಅನ್ನಪೂರ್ಣ.

ಹುಡುಗಿಯರು ತಂಡ ಮಾಡಿಕೊಂಡು ಓಡಾಡುತ್ತಾರೆ. ಇದರಿಂದ ಪ್ರಯಾಣದ ಹಣ ಉಳಿಯುತ್ತದೆ. ಒಬ್ಬರಿಗೊಬ್ಬರು ಅವಕಾಶಗಳನ್ನು ಹಂಚಿಕೊಳ್ಳುತ್ತಾರೆ. ಸಮಾನ ಮನಸ್ಕರು ಜತೆಯಾಗಿದ್ದರೆ ನಿರ್ಭಯವಾಗಿ ಪಾತ್ರ ಮಾಡಿ ಬರಬಹುದು. ಆದರೆ, ಪಾತ್ರ ಮಾಡಲು ಹೋದಾಗಲೇ ಕೆಲವರು ಇವಳು ಬೇಡ, ಅವಳು ನಟಿಸಬೇಕು ಎಂದು ಒತ್ತಾಯ ಮಾಡುತ್ತಾರೆ. ಕೆಲವರಂತೂ ಇವರ ಫೋಟೊಗಳನ್ನು ನೋಡಿ ಕರೆದಿರುತ್ತಾರೆ. ಅಲ್ಲಿಗೆ ಹೋದ ಮೇಲೆ ಅಂದುಕೊಂಡ ರೀತಿ ಇಲ್ಲ ಎಂದು ಇರಿಸುಮುರಿಸು ಮಾಡುತ್ತಾರೆ ಎನ್ನುವುದು ಹುಬ್ಬಳ್ಳಿಯ ಅಪ್ಸರಾ ಅವರ ನೋವು.

ಕಂಪನಿ ನಾಟಕಗಳಲ್ಲಿಯೂ ಸಿನಿಮಾ ಹಾಡುಗಳನ್ನೇ ಹಾಕಿ ಕುಣಿಸುವ ದಿನಗಳು ಬಂದಿವೆ. ಹುಗ್ಗಿಯಲ್ಲಿನ ಸಂಡಿಗೆ ಹಾಗೆ; ಅಲ್ಲೊಂದು ಮಿತಿ ಇದೆ. ಆದರೆ, ಹವ್ಯಾಸಿಗಳ ನಾಟಕಗಳಲ್ಲಿ ಹದ್ದು ಮೀರಿದೆ. ಇದು ಪಾತ್ರಧಾರಿಗೆ ಮಾತ್ರವಲ್ಲ; ಪಾತ್ರಕ್ಕೂ ಮಾಡುವ ಅನ್ಯಾಯ. ಅಲ್ಲಿ ನಾಟಕಕಾರರಿಂದ ಹಿಡಿದು ಪಾತ್ರಧಾರಿಯವರೆಗೆ ಎಲ್ಲರೂ ಅದನ್ನೇ ಬಯಸುತ್ತಿದ್ದಾರೆ ಎನ್ನುವುದು ವಾಸ್ತವ.

ಕಣ್ಮರೆಯಾದ ರಾಜಹಾಸ್ಯ

ನಾಟಕಗಳಲ್ಲಿ ಹಾಸ್ಯ ಪಾತ್ರಧಾರಿಗಳಿಗೆ ಸಿಕ್ಕಷ್ಟು ಸಿಳ್ಳೆ–ಚಪ್ಪಾಳೆ ಇನ್ಯಾರಿಗೂ ಸಿಗುವುದಿಲ್ಲ. ಹಿಂದೆ ‘ರಾಜಹಾಸ್ಯ’ ಎಂದು ಕರೆಯುತ್ತಿದ್ದರು. ಈಗ ‘ಅಪಹಾಸ್ಯ’ವಾಗಿದೆ. ಕಾಮ ಭಾವನೆ ಕೆರಳಿಸುವ ದ್ವಂದ್ವಾರ್ಥದ ಹಾಸ್ಯಕ್ಕೆ ಮಿತಿಯಿಲ್ಲ. ಇದು ರೋಗಗ್ರಸ್ಥ ಹಾಸ್ಯ. ನಟಿಯರೂ ಲೀಲಾಜಾಲವಾಗಿ ಇದನ್ನೇ ಮಾಡುತ್ತಿದ್ದಾರೆ. ಅಭಿನಯ ಗೊತ್ತಿಲ್ಲದಿದ್ದರೂ ಡಬಲ್‌ ಮೀನಿಂಗ್‌ ಹಾಸ್ಯ ಮಾಡಲು ಸಿದ್ಧಳಾದರೆ ಸಾಕು ಎನ್ನುವ ಮನೋಭಾವನೆ ಬೆಳೆದಿದೆ.

ರಾತ್ರಿ ನಾಟಕ ನೋಡಿದ ಜನ ಬೆಳಿಗ್ಗೆ ತಮ್ಮ ವೈಮನಸ್ಸು ಮರೆಯುತ್ತಿದ್ದರು. ಜಗಳವಾಡಿದ ಸಹೋದರರು ಒಂದಾಗುತ್ತಿದ್ದರು. ಮುನಿಸಿಕೊಂಡು ತವರಿಗೆ ಹೋದ ಹೆಂಡತಿಯನ್ನು ಕರೆತರುತ್ತಿದ್ದರು. ಹೆತ್ತವರು ಎಷ್ಟು ಮುಖ್ಯ ಎಂದು ಅರಿಯುತ್ತಿದ್ದರು. ಆದರೆ, ಈಗ ಸಾಮಾಜಿಕ ನಾಟಕಗಳು ಸಾಮಾಜಿಕ ಆರೋಗ್ಯಕ್ಕೂ ಮಾರಕವಾಗಿವೆ. ಸಾಮಾಜಿಕ ಬದಲಾವಣೆಗಳ ಜತೆಗೆ ಆಟ–ಮಾಟ–ನೋಟ ಎಲ್ಲವೂ ಬದಲಾಗಿವೆ. ರಸಗ್ರಹಣ ಎಂಬುದು ನೆಪ ಮಾತ್ರ.

ಸಾಮಾಜಿಕ ಜಾಲತಾಣಗಳು ಕ್ರಿಯಾಶೀಲವಾದ ಮೇಲೆ ಪಾತ್ರಧಾರಿಗಳಿಗೆ ಗೊತ್ತಿಲ್ಲದೆಯೇ ಶೋಷಣೆ ನಡೆಯುತ್ತಿದೆ. ಒಂದೂರಿನಲ್ಲಿ ಎರಡು ಸಾವಿರ ಜನ ನಾಟಕ ನೋಡುತ್ತಾರೆ ಎಂದಿಟ್ಟುಕೊಳ್ಳಿ. ಆದರೆ, ಕಲಾವಿದೆಯ ಹಸಿಹಸಿ ದೃಶ್ಯಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಯುಟ್ಯೂಬ್‌ ಚಾನೆಲ್‌ಗಳಲ್ಲಿ ಅಪ್ಲೋಡ್‌ ಮಾಡಿ ಲಕ್ಷ–ಲಕ್ಷ ವೀಕ್ಷಣೆಗಳನ್ನು ಪಡೆಯುತ್ತಿದ್ದಾರೆ. ತನ್ನ ದೃಶ್ಯ ಎಲ್ಲೆಲ್ಲಿ ಹರಿದಾಡುತ್ತಿದೆ, ಅದರಿಂದ ಯಾರು ಎಷ್ಟು ಗಳಿಸುತ್ತಿದ್ದಾರೆ ಎಂಬುದು ಆ ನಟಿಗೇ ಗೊತ್ತಿರುವುದಿಲ್ಲ.

ಇಷ್ಟೆಲ್ಲದರ ಮಧ್ಯೆ ಸಮಾಧಾನಕರ ಸಂಗತಿಯೆಂದರೆ; ಮೊಬೈಲ್‌ ಬಂದ ಮೇಲೆ ನಾಟಕಗಳು ಕಡಿಮೆಯಾಗುತ್ತವೆ, ಪ್ರೇಕ್ಷಕರು ಕಡಿಮೆಯಾಗುತ್ತಾರೆ ಎಂಬ ಆತಂಕವಿತ್ತು. ಆದರೆ, ಅದು ಉಲ್ಟಾ ಆಗಿದೆ. ನಾಟಕಗಳ ಸಂಖ್ಯೆಯೂ, ಪ್ರೇಕ್ಷಕರ ಸಂಖ್ಯೆಯೂ ಹೆಚ್ಚುತ್ತ ಸಾಗಿದೆ. ಆದರೆ, ಸಿನಿಮಾಗಳ ಪ್ರಭಾವ ಹಳ್ಳಿಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವ ಹವ್ಯಾಸಿ ಕಲಾವಿದರ ಮೇಲೆ ದೊಡ್ಡ ಪರಿಣಾಮ ಬೀರಿವೆ ಎನ್ನುವುದೂ ಸತ್ಯ.

ಆ ಕಾಲ, ಈ ಕಾಲ ಎಲ್ಲ ಕಾಲಕ್ಕೂ ನಾಟಕಗಳು ಸಲ್ಲುತ್ತವೆ. ಆದರೆ, ಸದಭಿರುಚಿಯನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಈ ಸವಾಲಿಗೆ ಪ್ರತಿಸವಾಲನ್ನು ಉತ್ತಮ ಅಭಿರುಚಿಯಳ್ಳ ಪ್ರೇಕ್ಷಕರು ಮಾತ್ರ ಹಾಕಲು ಸಾಧ್ಯ.

ಹುಬ್ಬಳ್ಳಿಯ ಗಣೇಶ ಪೇಟೆ

ಹುಬ್ಬಳ್ಳಿಯ ಗಣೇಶ ಪೇಟೆ ಕಲಾವಿದೆಯರಿಂದಲೇ ತುಂಬಿತ್ತು. ಉತ್ತರ ಕರ್ನಾಟಕದಲ್ಲಿ ಎಲ್ಲೇ ನಾಟಕವಿದ್ದರೂ ಇಲ್ಲಿಗೆ ಬಂದು ಜನ ಕರೆಯುತ್ತಿದ್ದರು. ಸದ್ಯ ಇಲ್ಲಿ ಐದಾರು ಕುಟುಂಬಗಳು ಮಾತ್ರ ಉಳಿದಿವೆ. ಉಳಿದವರು ತಮ್ಮಿಷ್ಟದ ಊರುಗಳಿಗೆ ವಲಸೆ ಹೋಗಿದ್ದಾರೆ.

ದಾವಣಗೆರೆ, ತುಮಕೂರು, ಬಾದಾಮಿ, ಬಳ್ಳಾರಿ, ಹೊಸಪೇಟೆ, ಮೈಸೂರು ಸೇರಿದಂತೆ ಅಲ್ಲಿಲ್ಲಿ ನಟಿಯರು ವಾಸವಾಗಿದ್ದಾರೆ.

ಉತ್ತರ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ಸಂಘ ಇತ್ತು. ಈಗ ಅದು ಇಲ್ಲ. ಕೆಲವರು ತಮಗೆ ಅನುಕೂಲವಾದ ಕಲಾ ಬಳಗ ಮಾಡಿಕೊಂಡಿದ್ದಾರೆ. ಕಲಾವಿದೆಯರದ್ದೇ ಎನ್ನುವ ಒಂದು ಸಂಘ ಇಲ್ಲ. ಹೀಗಾಗಿ, ಅವರ ಒಡಲಾಳದ ಧ್ವನಿ ಕೇಳುವವರು ದಿಕ್ಕಿಲ್ಲ. ಹೇಳುವುದಕ್ಕೆ ‘ಮೈಕೂ’ ಇಲ್ಲ.

‘ಪುಟ್ಟರಾಜ ಗವಾಯಿ’ ನಾಟಕದ ಸನ್ನಿವೇಶ
ದಾವಣಗೆರೆಯ ರಂಗಾಯಣದಲ್ಲಿ ಈಚೆಗೆ ಪ್ರದರ್ಶಿಸಿದ ‘ಕುರುಕ್ಷೇತ್ರ’ ನಾಟಕದ ರಂಗಗೀತೆಗಳ ಗಾಯನ– ಅಭಿನಯದಲ್ಲಿ ರಶ್ಮಿ ಹಾಗೂ ಭವತಾರಿಣಿ ನೃತ್ಯ ಮೋಡಿ
ನಾನು ಐದು ವರ್ಷದವಳಿದ್ದಾಗ ಮೊದಲು ಬಣ್ಣ ಹಚ್ಚಿದೆ. ಆಗ ನಾಟಕಕಾರ ಬರೆದಿದ್ದೆಲ್ಲವನ್ನೂ ತಾಲೀಮು ನಡೆಸುತ್ತಿದ್ದೆವು. ಹಾರ್ಮೋನಿಯಂ ಮಾಸ್ತರ್‌ ಹೇಳುವ ಎಲ್ಲ ಹಾಡುಗಳನ್ನೂ ನಾವೇ ಹಾಡಬೇಕಿತ್ತು. ಅದಕ್ಕೆ ಸಂಗೀತ ಕಲಿಯುವುದು ಅನಿವಾರ್ಯವಾಗಿತ್ತು. ಈಗ ಹೆಣ್ಣು–ಗಂಡು ಧ್ವನಿಗಳಲ್ಲಿ ಒಬ್ಬರೇ ಹಾಡುವವರು ಸಿಗುತ್ತಾರೆ. ಕಲಾವಿದೆಯರಿಗೆ ಶ್ರಮ ಇಲ್ಲ. ಕೈ ತುಂಬ ಹಣ ಸಿಗುತ್ತದೆ. ಆದರೆ ಗೌರವ ಸಿಗುತ್ತಿಲ್ಲ. 12ನೇ ವಯಸ್ಸಿಗೇ ಮೈ ಚಳಿ ಬಿಟ್ಟು ಕುಣಿಯುವವರೂ ನಾಟಕಕ್ಕೆ ಬರುತ್ತಿದ್ದಾರೆ.
ಭಾರತಿ ಮನೂಬಾಯಿ ದಾವಣಗೆರೆ
ಆರು ದಶಕ ರಂಗಭೂಮಿಯಲ್ಲಿದ್ದೆ. ನಾಟಕಕ್ಕೆ 25 ರೂಪಾಯಿ ಸಂಭಾವಣೆ ಸಿಗುತ್ತಿತ್ತು. ನಾಟಕ ಅಮೃತ ಎನ್ನುತ್ತಿದ್ದೆವು. ಈಗ ಅಮಲು ಎನ್ನುವಂತಾಗಿದೆ. ಸತ್ಯ ಹರಿಶ್ಚಂದ್ರ ಸುಡಗಾಡು ಕಾದ ಪಾತ್ರ ಕಂಡು ಪ್ರೇಕ್ಷಕರು ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ಪರಕಾಯ ಪ್ರವೇಶ ಮಾಡಿ ನಾನೂ ಕಣ್ಣೀರು ಹಾಕಿದ್ದೇನೆ. ಅಷ್ಟೊಂದು ತನ್ಮಯತೆ ಇತ್ತು. ಆ ಪರಂಪರೆ ಮಣ್ಣಾಗಿದೆ.
ಕೆ.ನಾಗರತ್ನ ಬಳ್ಳಾರಿ
ವರ್ಷಕ್ಕೆ 15 ಸಾವಿರ ನಾಟಕ ಪ್ರದರ್ಶನ ಗ್ರಾಮೀಣ ರಂಗಭೂಮಿ ಬಹಳ ಸಮೃದ್ಧವಾಗುತ್ತ ಸಾಗಿದೆ. ರಾಜ್ಯದಲ್ಲಿ ಆರು ಸಾವಿರಕ್ಕೂ ಹೆಚ್ಚು ಗ್ರಾಮಗಳಿವೆ. ವರ್ಷಕ್ಕೆ ಏನಿಲ್ಲವೆಂದರೂ ಹದಿನೈದು ಸಾವಿರ ನಾಟಕಗಳು ಪ್ರದರ್ಶನವಾಗುತ್ತವೆ. ಪ್ರತಿ ನಾಟಕಕ್ಕೂ ಕನಿಷ್ಠ 5 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಅಂದಾಜು 75 ಕೋಟಿಯಿಂದ 100 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ಸರ್ಕಾರ ಅಮೆಚೂರ್‌ ನಾಟಕಗಳನ್ನು ನಿರ್ಲಕ್ಷ್ಯ ಮಾಡಬಾರದು.
-ಮಲ್ಲಿಕಾರ್ಜುನ ಕಡಕೋಳ ವೃತ್ತಿ ರಂಗಾಯಣ ನಿರ್ದೇಶಕ ದಾವಣಗೆರೆ
ಚಿಮಣಾ ಪರಂಪರೆ ನಾಟಕ ಕಲಾವಿದೆಯರಿಗೆ ಮುಂಬೈ ಕರ್ನಾಟಕ ಭಾಗದಲ್ಲಿ ‘ಚಿಮಣಾ’ ಎಂದು ಕರೆಯುವುದು ರೂಢಿ. ಚಿಮಣಾ ಎನ್ನುವುದು ಮರಾಠಿಯ ರಾಧಾನಾಟದಲ್ಲಿ ಬರುವ ಒಂದು ಪಾತ್ರದ ಹೆಸರು. ಈ ಭಾಗದಲ್ಲಿ ರಾಧಾನಾಟ ಎಷ್ಟು ಪ್ರಸಿದ್ಧವಾಗಿತ್ತೆಂದರೆ; ಇದೂವರೆಗಿನ ಎಲ್ಲ ಕಲಾವಿದೆಯರಿಗೂ ಚಿಮಣಾ ಎಂದೇ ಹೆಸರುಬಿದ್ದಿದೆ. ಮರಾಠಿಯಲ್ಲಿ ‘ಚಿಮಣಿ’ ಎಂದರೆ ಗುಬ್ಬಿ. ಅಂಗಳಕ್ಕೆ ಬಂದು ಕಾಳು ಎತ್ತಿಕೊಂಡು ಹಾರಿಹೋಗುವ ಗುಣವಿದೆ ಅದಕ್ಕೆ. ಅದೇ ಪದ ಚಿಮಣಾ ಆಗಿ ಬಳಕೆ ಆಗಿರುವ ಸಾಧ್ಯತೆ ಇದೆ.
-ಡಿ.ಎಸ್.ಚೌಗಲೆ ನಾಟಕಕಾರ ಬೆಳಗಾವಿ

ಹಣ ಹೆಚ್ಚು ಗೌರವ ಕಡಿಮೆ...

ನಾನು ಐದು ವರ್ಷದವಳಿದ್ದಾಗ ಮೊದಲು ಬಣ್ಣ ಹಚ್ಚಿದೆ. ಆಗ ನಾಟಕಕಾರ ಬರೆದಿದ್ದೆಲ್ಲವನ್ನೂ ತಾಲೀಮು ನಡೆಸುತ್ತಿದ್ದೆವು. ಹಾರ್ಮೋನಿಯಂ ಮಾಸ್ತರ್‌ ಹೇಳುವ ಎಲ್ಲ ಹಾಡುಗಳನ್ನೂ ನಾವೇ ಹಾಡಬೇಕಿತ್ತು. ಅದಕ್ಕೆ ಸಂಗೀತ ಕಲಿಯುವುದು ಅನಿವಾರ್ಯವಾಗಿತ್ತು. ಈಗ ಹೆಣ್ಣು–ಗಂಡು ಧ್ವನಿಗಳಲ್ಲಿ ಒಬ್ಬರೇ ಹಾಡುವವರು ಸಿಗುತ್ತಾರೆ. ಕಲಾವಿದೆಯರಿಗೆ ಶ್ರಮ ಇಲ್ಲ. ಕೈ ತುಂಬ ಹಣ ಸಿಗುತ್ತದೆ. ಆದರೆ ಗೌರವ ಸಿಗುತ್ತಿಲ್ಲ. 12ನೇ ವಯಸ್ಸಿಗೇ ಮೈ ಚಳಿ ಬಿಟ್ಟು ಕುಣಿಯುವವರೂ ನಾಟಕಕ್ಕೆ ಬರುತ್ತಿದ್ದಾರೆ.

-ಭಾರತಿ ಮನೂಬಾಯಿ ದಾವಣಗೆರೆ

ಆಗ ಅಮೃತ ಈಗ ಅಮಲು

ಆರು ದಶಕ ರಂಗಭೂಮಿಯಲ್ಲಿದ್ದೆ. ನಾಟಕಕ್ಕೆ 25 ರೂಪಾಯಿ ಸಂಭಾವನೆ ಸಿಗುತ್ತಿತ್ತು. ನಾಟಕ ಅಮೃತ ಎನ್ನುತ್ತಿದ್ದೆವು. ಈಗ ಅಮಲು ಎನ್ನುವಂತಾಗಿದೆ. ಸತ್ಯ ಹರಿಶ್ಚಂದ್ರ ಸುಡಗಾಡು ಕಾದ ಪಾತ್ರ ಕಂಡು ಪ್ರೇಕ್ಷಕರು ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ಪರಕಾಯ ಪ್ರವೇಶ ಮಾಡಿ ನಾನೂ ಕಣ್ಣೀರು ಹಾಕಿದ್ದೇನೆ. ಅಷ್ಟೊಂದು ತನ್ಮಯತೆ ಇತ್ತು. ಆ ಪರಂಪರೆ ಮಣ್ಣಾಗಿದೆ.

-ಕೆ.ನಾಗರತ್ನ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.