ADVERTISEMENT

ರಂಗಭೂಮಿ: ಶರ್ಮಿಷ್ಠೆಗೆ ಜೀವ ತುಂಬಿದ ಉಮಾಶ್ರೀ

ನಾ ದಿವಾಕರ
Published 26 ಏಪ್ರಿಲ್ 2025, 23:30 IST
Last Updated 26 ಏಪ್ರಿಲ್ 2025, 23:30 IST
ಉಮಾಶ್ರೀ
ಉಮಾಶ್ರೀ   

ಪುರಾಣ ಕಥನಗಳಿಗೆ ಮೂಲ ಎನ್ನುವುದು ಅಮೂರ್ತ. ನಮ್ಮ ನಡುವಿನ ಸೃಜನಶೀಲ ನಾಟಕಕಾರ ಬೇಲೂರು ರಘುನಂದನ್‌ ಶರ್ಮಿಷ್ಠೆಯ ಪಾತ್ರದ ಮೂಲಕ ಇಡೀ ಕಥಾವಸ್ತುವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.

ಅನುಭವಿ ರಂಗ ನಿರ್ದೇಶಕ ಚಿದಂಬರರಾವ್‌ ಜಂಬೆ ಇದನ್ನು ನಿರ್ದೇಶಿಸಿ, ರಂಗ ವಿನ್ಯಾಸ ಮಾಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಉಮಾಶ್ರೀ ಇಡೀ ನಾಟಕಕ್ಕೆ ಜೀವ ತುಂಬಿದ್ದಾರೆ. ‘ಯಯಾತಿ’ ಕತೆಯಲ್ಲಿ ಶರ್ಮಿಷ್ಠೆಯ ಪಾತ್ರವೇ ಅತ್ಯಂತ ಸಂಕೀರ್ಣವಾದದ್ದು. ಅಮರತ್ವದ ಮಹತ್ವಾಕಾಂಕ್ಷೆ ಒಬ್ಬ ವ್ಯಕ್ತಿಯನ್ನು ಎಂತಹ ಪಾಪಕೂಪಕ್ಕೆ ದೂಡುತ್ತದೆ ಎನ್ನುವುದಕ್ಕೆ ಯಯಾತಿ ಸಾಕ್ಷಿಯಾದರೆ, ತಾರುಣ್ಯವನ್ನು ಬಲಿಕೊಟ್ಟು ವೃದ್ಧಾಪ್ಯಕ್ಕೆ ಒಡ್ಡಿಕೊಳ್ಳುವ ಪುರು ತ್ಯಾಗ-ಕರ್ತವ್ಯ ಸಂಕೇತವಾಗಿ ನಿಲ್ಲುತ್ತಾನೆ. ಇವರಿಬ್ಬರ ನಡುವೆ ಅಪರಾಧಿ ಪ್ರಜ್ಞೆಗೆ ಶರಣಾಗಿ, ತನ್ನ ಬಾಲ್ಯದ ಒಡನಾಡಿಗೇ ದಾಸಿಯಾಗಲು ಮುಂದಾಗುವ ದೈತ್ಯ ರಾಜನ ಮಗಳು ಶರ್ಮಿಷ್ಠೆ. ಮಹಿಳೆಯ ತಲ್ಲಣ ತುಮುಲಗಳಿಗೆ ಸಾಕ್ಷಿಯಾಗಿ, ತಾಯ್ಮಮತೆ ಮತ್ತು ಸಹಜ ಪುತ್ರ ವ್ಯಾಮೋಹವನ್ನೂ ದಾಟಿ ತನ್ನ ವ್ಯಕ್ತಿನಿಷ್ಠೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಮಗನ ಅಕಾಲಿಕ ವೃದ್ಧಾಪ್ಯಕ್ಕೂ ಸಾಕ್ಷಿಯಾಗುವ ತಾಯಿಯಾಗಿ ಶರ್ಮಿಷ್ಠೆ ಈ ನಾಟಕದ ಕೇಂದ್ರ ಬಿಂದುವಾಗುತ್ತಾಳೆ.

ಇಲ್ಲಿ ಶರ್ಮಿಷ್ಠೆ ಯಯಾತಿಯ ತಾರುಣ್ಯದ ಭ್ರಮೆಯ ಹಿಂದಿನ ಲೋಭ, ದುರಾಸೆಯನ್ನು ಪ್ರಶ್ನಿಸುವ ದಿಟ್ಟ ಮಹಿಳೆಯಾಗಿ ಒಂದೆಡೆ ಕಂಡರೆ, ಮತ್ತೊಂದೆಡೆ ಪುತ್ರನ ವಾರ್ಧಕ್ಯದಿಂದ ಸಂಕಟಕ್ಕೀಡಾಗುವ ಹೆತ್ತೊಡಲ ಅಭಿವ್ಯಕ್ತಿಯಾಗಿಯೂ ಕಾಣುತ್ತಾಳೆ. ಈ ನಡುವೆ ಪ್ರಭುತ್ವ ರಾಜಕಾರಣದ ಅತಿರೇಕಗಳು, ರಾಜಪ್ರಭುತ್ವದ ಯಜಮಾನಿಕೆ ಮತ್ತು ಮಹಿಳೆಯ ಮೇಲೆ ಹೇರಲ್ಪಡುವ ವಸ್ತ್ರಸಂಹಿತೆ ಮೊದಲಾದ ಪುರುಷಾಧಿಪತ್ಯದ ಕಟ್ಟಳೆಗಳು ಇವೆಲ್ಲವನ್ನೂ ಏಕಾಂಗಿಯಾಗಿ ಪ್ರತಿರೋಧಿಸಿ, ಪ್ರಶ್ನಿಸುತ್ತಲೇ, ಮನುಷ್ಯನ ಬದುಕಿನ ಸಾರ್ಥಕತೆಯನ್ನು ವಾಸ್ತವಿಕ ನೆಲೆಯಲ್ಲಿ ಬಿಂಬಿಸುವ ಮೂಲಕ ಭ್ರಮಾಧೀನ ಯಯಾತಿ ಮತ್ತು ಪುರು ಇಬ್ಬರ ನಡುವಿನ ಹುಸಿ ಜಗತ್ತನ್ನು ಬೆತ್ತಲೆಗೊಳಿಸಿ, ಪುರುವನ್ನು ಬಂಧಮುಕ್ತನನ್ನಾಗಿ ಮಾಡಿ ಕೊನೆಗೆ ರಾಜಮಾತೆಯ ಪಟ್ಟವನ್ನೂ ಸ್ವೀಕರಿಸದೆ ವಾನಪ್ರಸ್ಥಕ್ಕೆ ತೆರಳುವ ಸ್ವಾಭಿಮಾನಿ ಮಹಿಳೆಯಾಗಿ ಶರ್ಮಿಷ್ಠೆ ಸಮಕಾಲೀನ ಪ್ರೇಕ್ಷಕರ ನಡುವೆ ನಿಲ್ಲುತ್ತಾಳೆ.

ADVERTISEMENT

ಶರ್ಮಿಷ್ಠೆಯ ಕಥಾಹಂದರದಲ್ಲಿ ಕೆಲವು ದೃಶ್ಯಗಳು, ಸಂಭಾಷಣೆಗಳು ಸಮಕಾಲೀನತೆಯನ್ನೂ ಪಡೆದುಕೊಂಡಿರುವುದು ಪ್ರಶಂಸನಾರ್ಹ. ಪುರು ವಾರ್ಧಕ್ಯವನ್ನು ಆಯ್ಕೆ ಮಾಡಿದಾಗ ಶರ್ಮಿಷ್ಠೆ, ತನ್ನ ಪುತ್ರ ಅವನ ಪತ್ನಿ ಚಿತ್ರಲೇಖೆಯ ಬಗ್ಗೆ ಯೋಚಿಸಲೂ ಇಲ್ಲವಲ್ಲಾ ಎಂದು ಪರಿತಪಿಸುವುದು, ವಸ್ತ್ರಸಂಹಿತೆಯನ್ನು ಪ್ರಭುತ್ವದ, ಪಿತೃಪ್ರಧಾನ ಯಜಮಾನಿಕೆಯ ಹೇರಿಕೆಯಾಗಿ ಕಾಣುವ ಸಂಭಾಷಣೆಗಳು, ದಾಸಿಯಾಗಿರುವ ಶರ್ಮಿಷ್ಠೆಯನ್ನು ತನ್ನ ಕಾಮತೃಷೆಗಾಗಿ ಬಳಸಿಕೊಳ್ಳುವ ಯತಿ ಪ್ರಸಂಗವೂ ಸಹ ವರ್ತಮಾನವನ್ನು ಬಿಂಬಿಸುತ್ತದೆ. ನಾಟಕದ ಕಥಾವಸ್ತು ಪೌರಾಣಿಕವೇ ಆದರೂ ಅದನ್ನು ಸಮಕಾಲೀನಗೊಳಿಸುವ ಪ್ರಯತ್ನಗಳು ಇಲ್ಲಿವೆ.

ಚಿತ್ರಗಳು: ತಾಯಿ ಲೋಕೇಶ್

ಪಾತ್ರಗಳ ನಡುವಿನ ವಿರೋಧಾಭಾಸ ಮತ್ತು ಅಂತರಂಗದ ವೈರುಧ್ಯಗಳ ಸಂಘರ್ಷ ಇಡೀ ನಾಟಕವನ್ನು ಆವರಿಸುತ್ತದೆ. ಏಕವ್ಯಕ್ತಿ ನಾಟಕದಲ್ಲಿ ಎಲ್ಲ ಪಾತ್ರಗಳಲ್ಲೂ ನುಸುಳುವ ಈ ಲಕ್ಷಣಗಳನ್ನು ಮತ್ತು ಅಭಿವ್ಯಕ್ತಿಯ ತಂತುಗಳನ್ನು ತಮ್ಮ ಅಮೋಘ ಭಾವಾಭಿನಯ ಮತ್ತು ಆಂಗಿಕ ಅಭಿವ್ಯಕ್ತಿಯ ಮೂಲಕ, ಯಯಾತಿ, ರಾಜಮಾತೆ, ಕಚದೇವ, ದೇವಯಾನಿ ಮತ್ತು ಸ್ವತಃ ಶರ್ಮಿಷ್ಠೆ ಈ ಎಲ್ಲ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡುವ ಉಮಾಶ್ರೀ ಅವರ ಅಭಿನಯಕ್ಕೆ ಹ್ಯಾಟ್ಸ್‌ ಆಫ್‌ ಹೇಳಲೇಬೇಕು. ದೇಹಭಾಷೆ ಮತ್ತು ಸಂಭಾಷಣೆಯ ನಡುವೆ ಕಾಣುವ ಏರಿಳಿತಗಳು ಮತ್ತು ಕಣ್ಣುಮಿಟುಕಿಸುವಷ್ಟರಲ್ಲಿ ಬದಲಾಗುವ ಪಾತ್ರಗಳಲ್ಲಿ ತಮ್ಮನ್ನು ತಾವು ಇಳಿಸಿಕೊಂಡು ತಲ್ಲೀನತೆಗೆ ಸಾಕ್ಷಿಯಾಗಿ ನಿಲ್ಲುವುದು ಉಮಾಶ್ರೀ ಅವರ ಅಭಿನಯ ಸಾಮರ್ಥ್ಯ ಮತ್ತು ಬತ್ತದ ಕಲಾಚೈತನ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಏಕವ್ಯಕ್ತಿ ನಾಟಕಗಳಲ್ಲಿ ಸವಾಲಾಗಿ ಪರಿಣಮಿಸುವುದು ಧ್ವನಿ ಹಾವಭಾವ ದೇಹಭಾಷೆ ಮತ್ತು ಸಂವಹನದ ಶೈಲಿಯ ಕ್ಷಣಮಾತ್ರದ ಪರಿವರ್ತನೆಗಳು. ಉಮಾಶ್ರೀ ನಿರ್ವಹಿಸುವ ಐದಾರು ಪಾತ್ರಗಳಲ್ಲಿ ವ್ಯಕ್ತಿ ವೈಶಿಷ್ಟ್ಯಗಳಿಗನುಗುಣವಾಗಿ, ಕ್ಷಣಮಾತ್ರದಲ್ಲಿ ತಮ್ಮ ಭಾವಾಭಿನಯವನ್ನು ಮತ್ತೊಂದು ಉತ್ತುಂಗಕ್ಕೆ ಕೊಂಡೊಯ್ಯುವ ಅವರ ಮೇರು ಪ್ರತಿಭೆ ಮತ್ತು ರಂಗಾಭಿವ್ಯಕ್ತಿಯೇ ನಾಟಕದ ಜೀವಾಳ. ಪ್ರಮೋದ್‌ ಶಿಗ್ಗಾಂವ್‌ ಅವರ ರಂಗಸಜ್ಜಿಕೆ/ವಸ್ತ್ರವಿನ್ಯಾಸ ಸರಳ-ಸಹಜತೆಯಿಂದ ಕೂಡಿದ್ದು, ಇವೆಲ್ಲವನ್ನೂ ಗಮನಿಸಲು ಪ್ರೇಕ್ಷಕರಿಗೆ ಅವಕಾಶವನ್ನೇ ನೀಡದಂತೆ ಶರ್ಮಿಷ್ಠೆ ಪ್ರೇಕ್ಷಕರನ್ನು ಮಂತ್ರಮುಗ್ಧಳಾಗಿಸುತ್ತಾಳೆ. ಬಾಲ್ಯದ ಶರ್ಮಿಷ್ಠೆಯ ಲವಲವಿಕೆಯಿಂದ ದಾಸಿಯಾಗಿ ಅವಳು ಅನುಭವಿಸುವ ತಲ್ಲಣಗಳನ್ನು ಮನಮುಟ್ಟುವಂತೆ ಅಭಿವ್ಯಕ್ತಿಸುವ ಉಮಾಶ್ರೀ, ಯಯಾತಿ ಪಾಪಪ್ರಜ್ಞೆಯಿಂದ ಪರಿತಪಿಸುವ ದೃಶ್ಯದಲ್ಲಿ, ಶರ್ಮಿಷ್ಠೆ ತಂದೆಯ ಓಲೆಯನ್ನು ಕಂಡು ಭಾವೋದ್ವೇಗಕ್ಕೊಳಗಾಗುವ ದೃಶ್ಯದಲ್ಲಿ ಅವರ ಅಭಿನಯಕ್ಕೆ ಸಾಟಿಯೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ.

ಈ ಏಕವ್ಯಕ್ತಿ ನಾಟಕದ ಮೂಲಕ ಯಯಾತಿಯನ್ನು ಮತ್ತೊಮ್ಮೆ ರಂಗಾಸಕ್ತರ ನಡುವೆ ತಂದು ನಿಲ್ಲಿಸುವ ಬೇಲೂರು ರಘುನಂದನ್‌, ನಾಟಕವನ್ನು ಆಯೋಜಿಸಿ ಮೈಸೂರಿನ ರಂಗಾಸಕ್ತರ ಹೃದಯ ಗೆದ್ದ ರಂಗಸಂಪದ ಬೆಂಗಳೂರು ಮತ್ತು ನೇಪಥ್ಯದಲ್ಲಿರುವ ಎಲ್ಲರೂ ಅಭಿನಂದನಾರ್ಹರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.