ADVERTISEMENT

ಕಿರುತೆರೆಯಲ್ಲಿ ಶಿವಣ್ಣ ‘ಕಿಕ್’

​ಪ್ರಜಾವಾಣಿ ವಾರ್ತೆ
Published 14 ಜುಲೈ 2016, 20:02 IST
Last Updated 14 ಜುಲೈ 2016, 20:02 IST
ಹರ್ಷ
ಹರ್ಷ   

ಚಿತ್ರರಂಗದ ಮೂವರು ಪ್ರಮುಖರು ತೀರ್ಪುಗಾರರಾಗಿರುವ ಹೊಸ ಡಾನ್ಸ್ ರಿಯಾಲಿಟಿ ಷೋ ‘ಕಿಕ್’ ಈ ಶನಿವಾರದಿಂದ (ಜುಲೈ 16) ಉದಯ ವಾಹಿನಿಯಲ್ಲಿ ಆರಂಭವಾಗಲಿದೆ. ನಟ ಶಿವರಾಜಕುಮಾರ್, ನಿರ್ದೇಶಕ ಹರ್ಷ ಹಾಗೂ ನಟಿ ರಚಿತಾ ರಾಂ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈಗ ವಿವಿಧ ಚಾನೆಲ್‌ಗಳಲ್ಲಿ ಡಾನ್ಸ್‌ ರಿಯಾಲಿಟಿ ಷೋ ಪ್ರಸಾರವಾಗುತ್ತಿವೆ. ಅದೆಲ್ಲಕ್ಕಿಂತ ‘ಕಿಕ್’ ವಿಭಿನ್ನ ಎಂದು ವಾಹಿನಿಯ ಮುಖ್ಯಸ್ಥ ಸುಧೀಂದ್ರ ಭಾರದ್ವಾಜ್ ಹೇಳುತ್ತಾರೆ. ‘ಕನ್ನಡದ ಡಾನ್ಸ್ ರಿಯಾಲಿಟಿ ಷೋದಲ್ಲಿ ಮೊದಲ ಬಾರಿಗೆ ಶಿವರಾಜಕುಮಾರ್ ಈ ಸ್ಥಾನದಲ್ಲಿ ಕಾಣಿಸಿಕೊಳ್ಳುವುದು ವಿಶೇಷ.

ಡಾನ್ಸ್ ಅಂದರೆ ಶಿವಣ್ಣ; ಶಿವಣ್ಣ ಅಂದರೆ ಡಾನ್ಸ್ ಎಂಬ ಮಾತಿದೆ. ನಮ್ಮ ಷೋದಲ್ಲಿ ಶಿವಣ್ಣ ಬರುವುದಕ್ಕಿಂತ ಹೆಚ್ಚಿನ ವಿಶೇಷ ಇನ್ನೇನಿದೆ’ ಎಂದು ಖುಷಿಯಿಂದ ಪ್ರಶ್ನಿಸುತ್ತಾರೆ ಸುಧೀಂದ್ರ.

ಶಿವಣ್ಣ ಜತೆ ಹರ್ಷ ಹಾಗೂ ರಚಿತಾ ರಾಂ ಕೂಡ ತೀರ್ಪುಗಾರರು. ಕಾರ್ಯಕ್ರಮದ ನಿರೂಪಣೆಯನ್ನು ಅಕುಲ್ ಬಾಲಾಜಿ ನಿರ್ವಹಿಸಲಿದ್ದಾರೆ. ಮೈಸೂರು ಮಹಾರಾಜಾಸ್, ಬೆಂಗಳೂರು ಬುಲ್ಡೋಜರ್ಸ್, ಹುಬ್ಬಳ್ಳಿ ಹೈದಾಸ್ ಹಾಗೂ ಮಂಗಳೂರು ಮಾಸ್ಟರ್ಸ್ ಎಂಬ ನಾಲ್ಕು ತಂಡಗಳಿಗೆ ನಟಿಯರು ಒಡತಿಯರು ಆಗಲಿದ್ದಾರೆ.

ಒಂದೊಂದು ತಂಡಕ್ಕೆ ಮೂರು ಜೋಡಿಗಳಂತೆ ಒಟ್ಟು 12 ಜೋಡಿಗಳು ತಮ್ಮ ನಾಟ್ಯ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ. ಭಾರತದ ವಿವಿಧೆಡೆ ನಡೆದಿರುವ ಹಲವು ಡಾನ್ಸ್‌ ಷೋಗಳ ವಿನ್ನರ್ಸ್‌ ಹಾಗೂ ರನ್ನರ್ಸ್‌ ಜತೆಗೆ ಆಯಾ ಊರಿನ ಹೊಸ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ದೀಪಿಕಾ ಕಾಮಯ್ಯ, ಕಾವ್ಯಾ ಶಾ, ಕಾರುಣ್ಯಾ ರಾಮ್ ಹಾಗೂ ಅಪೂರ್ವ ಗೌಡ ಅವರು ತಂಡಗಳನ್ನು ಮುನ್ನಡೆಸಲಿದ್ದಾರೆ.

‘ಉದಯ’ ಟೀವಿ ಮೂಲಕ ಬಣ್ಣದ ಲೋಕ ಪ್ರವೇಶಿಸಿರುವ ಅಕುಲ್ ಬಾಲಾಜಿ ಹಾಗೂ ಹರ್ಷ, ಇಂಥದೊಂದು ದೊಡ್ಡ ಷೋ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

‘ಶಿವಣ್ಣ ಅವರೇ ಜಡ್ಜ್‌ ಸ್ಥಾನದಲ್ಲಿ ಇರುವುದರಿಂದ ಕಾರ್ಯಕ್ರಮ ನಿರೂಪಿಸುವುದು ನನಗೆ ಸವಾಲು’ ಎಂದು ಅಕುಲ್ ಹೇಳಿದರೆ, ‘ನೂರಾರು ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ನನಗೆ ಇದೊಂದು ಹೊಸ ಅನುಭವ’ ಎಂದು ಹರ್ಷ ಹೇಳಿಕೊಂಡರು.

ಭರತನಾಟ್ಯ ಕಲಾವಿದೆಯೂ ಆಗಿರುವ ನಟಿ ರಚಿತಾ ರಾಂ, ‘ಡಾನ್ಸ್ ಮಾಡುವುದೆಂದರೆ ನನಗೆ ತುಂಬ ಇಷ್ಟ. ಆದರೆ ಇಲ್ಲಿ ನನಗೆ ವಹಿಸಿರುವ ಜವಾಬ್ದಾರಿ ದೊಡ್ಡದು’ ಎಂದರು. ನೃತ್ಯದಿಂದ ಮತ್ತಷ್ಟು ಅಭಿಮಾನಿಗಳನ್ನು ಪಡೆಯುವ ವಿಶ್ವಾಸವನ್ನು ಕಾರುಣ್ಯಾ ವ್ಯಕ್ತಪಡಿಸಿದರು. ನಾನ್–ಫಿಕ್ಷನ್ ಮುಖ್ಯಸ್ಥ ತ್ಯಾಗಿ ಕಾರ್ಯಕ್ರಮದ ವಿವರ ನೀಡಿದರು.

ನಾಳೆಯಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ರಿಂದ 10.30ರವರೆಗೆ ‘ಕಿಕ್’ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.