ADVERTISEMENT

ಶ್ರುತಿ ಪದ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST
ಶ್ರುತಿ ಪದ
ಶ್ರುತಿ ಪದ   

`ನನ್ನ ಮುಖಕ್ಕೆ ಸೌಮ್ಯ ಪಾತ್ರ ಹೊಂದಿಕೆಯಾಗಲ್ಲ. ಅದಕ್ಕೆ ಬಜಾರಿ ಪಾತ್ರಗಳೇ ಸಿಗುತ್ತವೆ. ನನಗೂ ಕೂಡ ಅಂಥ ಪಾತ್ರಗಳೇ ಇಷ್ಟ~ ಎಂದು ಮನತುಂಬಿ ನಗುತ್ತಾರೆ ಶ್ರುತಿ.

ಜೋರು ಪಾತ್ರಗಳಲ್ಲಿಯೇ ನಟಿಸಲು ಇಷ್ಟಪಡುವ ಇವರಿಗೆ ನಿರ್ದೇಶಕರು ತಮ್ಮನ್ನು ಅಂಥ ಪಾತ್ರಗಳಿಗೆ ಮಾತ್ರ ಕರೆಯುವ ಬಗ್ಗೆಯೂ ಬೇಸರವೇನಿಲ್ಲ.

ಸದ್ಯಕ್ಕೆ ದೂರದರ್ಶನಕ್ಕಾಗಿ `ಒಲುಮೆ~ ಮತ್ತು `ಕುಂತಿ~ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಶ್ರುತಿ ಬ್ಯೂಟಿಷಿಯನ್ ಕೂಡ. ಹುಟ್ಟಿದ್ದು ಬೆಳೆದಿದ್ದು ತುಮಕೂರು. ಪಿಯುಸಿವರೆಗೂ ಓದಿ ನಂತರ ಬಣ್ಣದ ನಂಟಿಗೆ ಒಡ್ಡಿಕೊಂಡ ಶ್ರುತಿ, ಸಂಜೀವ ತಗಡೂರು ಅವರ ನಿರ್ದೇಶನದ `ಚಂದ್ರಬಿಂಬ~ ಧಾರಾವಾಹಿಯಲ್ಲಿ ಮೊದಲು ನಟಿಸಿದರು.

ನಂತರ ನಾಟಕರಂಗದ ಕಡೆ ಹೊರಳಿಕೊಂಡ ಅವರು `ದೇವದಾಸಿ~, `ಮುದುಕನ ಮದುವೆ~, `62 ಅಲ್ಲ 32~, `ಭ್ರಮೆ~ ಹೀಗೆ ಸಾಲುಸಾಲು ನಾಟಕಗಳಲ್ಲಿ ನಟಿಸಿದರು. ಜೊತೆಗೆ `ತೇಲಿ ಹೋದ ನೌಕೆ~, `ಮಾರಿಕಣಿವೆ ರಹಸ್ಯ~, `ವನಿತಾ~, `ಮನ್ವಂತರ~ ಮುಂತಾದ ಧಾರಾವಾಹಿಗಳಲ್ಲೂ ಕಾಣಿಸಿಕೊಂಡರು.

`ರಾಮಸ್ವಾಮಿ ಕೃಷ್ಣಸ್ವಾಮಿ~ ಹೆಸರಿನ ಸಿನಿಮಾದಲ್ಲಿ ಕಾಮಿಡಿ ಪಾತ್ರವನ್ನು ನಿರ್ವಹಿಸಿರುವ ಶ್ರುತಿ ಇದುವರೆಗೂ ಗಯ್ಯಾಳಿ ಪಾತ್ರಗಳಲ್ಲಿ ಹೆಚ್ಚು ನಟಿಸಿದವರು. ತಮ್ಮ ತಾತ ನಾಟಕರಂಗದಲ್ಲಿ ಸಕ್ರಿಯರಾಗಿದ್ದ ಕಾರಣ ತಮಗೂ ನಟನೆಯ ನಂಟು ಹತ್ತಿತು. ಸುಲಭಕ್ಕೆ ಅದನ್ನು ಬಿಡಲು ಇಷ್ಟವಿಲ್ಲ ಎನ್ನುವ ಅವರಿಗೆ ಇದರ ಜೊತೆಜೊತೆಯಲ್ಲಿಯೇ ಬ್ಯೂಟಿಷಿಯನ್ ತರಬೇತಿ ಕೇಂದ್ರವನ್ನು ಆರಂಭಿಸಿ ನಿರ್ವಹಿಸುವಾಸೆ ಇದೆ.

ಆಕಾಶವಾಣಿಯಲ್ಲಿ ಮತ್ತು ಟೀವಿ ಕಾರ್ಯಕ್ರಮಗಳಲ್ಲಿ ತಮಗಿರುವ ಹರ್ಬಲ್ `ಬ್ಯೂಟಿ~ ತಿಳಿವಳಿಕೆಯನ್ನು ಹಂಚಿಕೊಂಡಿರುವ ಅವರು ಸಾಕಷ್ಟು ತರಬೇತಿ ಕೇಂದ್ರಗಳಲ್ಲಿಯೂ ಪಾಠ ಹೇಳಿದ ಅನುಭವವುಳ್ಳವರು.

ಸಂಗೀತಗಾರ್ತಿ ಅಮ್ಮನ ಸಹಕಾರ ತಮ್ಮ ವೃತ್ತಿಗೆ ಇದ್ದೇ ಇದೆ ಎನ್ನುವ ಶ್ರುತಿ ನಟನೆಯಲ್ಲಿ ಹೊಸ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.