ADVERTISEMENT

BBK-10 | ವಾರದ ನಾಮಿನೇಷನ್‌ ಕಾವು: ಸದಸ್ಯರಿಗೆ ಮಸಿ ನೀರಿನ ಸ್ನಾನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2023, 6:12 IST
Last Updated 19 ಡಿಸೆಂಬರ್ 2023, 6:12 IST
   

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಈ ವಾರದ ನಾಮಿನೇಷನ್‌ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಬಾರಿ ಸದಸ್ಯರನ್ನು ನಾಮಿನೇಟ್‌ ಮಾಡಲು ಬಿಗ್‌ಬಾಸ್‌ ನೀಡಿರುವ ಚಟುವಟಿಕೆಯೂ ಕೂಡ ಭಿನ್ನವಾಗಿದೆ.

ಬಿಗ್‌ಬಾಸ್‌ ನೀಡಿರುವ ನಾಮಿನೇಷನ್‌ ಚಟುವಟಿಕೆಯ ಅನುಸಾರ ಒಂದು ನಿಯೋಜಿತ ಕುರ್ಚಿಯಲ್ಲಿ ಪ್ರತಿಯೊಬ್ಬ ಸದಸ್ಯರು ಕೂರಬೇಕು. ಇನ್ನುಳಿದ ಸ್ಪರ್ಧಿಗಳು ಎದುರು ನಿಂತುಕೊಳ್ಳಬೇಕು. ಯಾರಿಗೆ ಕುರ್ಚಿಯಲ್ಲಿ ಕುಳಿತಿರುವ ಸದಸ್ಯ ನಾಮಿನೇಟ್‌ ಆಗಬೇಕು ಎಂದು ಅನಿಸುತ್ತದೆಯೋ ಅವರು ನಾಮಿನೇಟ್‌ ಎಂಬ ಫಲಕವನ್ನು ತೋರಿಸುವ ಮೂಲಕ ಸೂಕ್ತ ಕಾರಣವನ್ನು ನೀಡಬೇಕು. ನಂತರ ಕುಳಿತಿರುವ ವ್ಯಕ್ತಿಯ ಮೇಲೆ ಮಸಿ ನೀರನ್ನು ಸುರಿಯಬೇಕು. ಕೊನೆಗೆ ಅತಿ ಹೆಚ್ಚು ಸದಸ್ಯರಿಂದ ಸೂಚಿತರಾದವರು ಈ ವಾರ ನಾಮಿನೇಟ್‌ ಆಗುತ್ತಾರೆ.

ಈ ಚಟುವಟಿಕೆಯಲ್ಲಿ ಮೈಕಲ್‌ ಅವರು ‘ಕಾರ್ತಿಕ್‌ ಫೇಕ್‌ ಫ್ರೆಂಡ್‌ಶೀಪ್‌ನಲ್ಲಿ ಲಾಕ್‌ ಆಗಿದ್ದಾರೆ’ ಎಂಬ ಕಾರಣ ನೀಡುವ ಮೂಲಕ ಅವರನ್ನು ನಾಮಿನೇಟ್‌ ಮಾಡಿದ್ದಾರೆ. ಆದರೆ, ಅವರು ನಾಮಿನೇಟ್‌ ಮಾಡಲು ನೀಡಿರುವ ಕಾರಣ ಕಾರ್ತಿಕ್‌ ಅವರಿಗೆ ಸೂಕ್ತ ಅನಿಸಿಲ್ಲ. ಹಾಗಾಗಿ ‘ನಾಮಿನೇಟ್‌ ಮಾಡಲು ಸೂಕ್ತ ಕಾರಣವನ್ನು ಕೊಡಲು ಬರುವುದಿಲ್ಲ ಅಂದರೆ ಆ ವ್ಯಕ್ತಿ ಬಿಗ್‌ಬಾಸ್‌ ಮನೆಯಲ್ಲಿ ಇರಲು ಲಾಯಕಿಲ್ಲ’ ಎಂದು ಕಾರ್ತಿಕ್‌ ಕೂಡ ಮೈಕಲ್‌ ಅವರನ್ನು ನಾಮಿನೇಟ್‌ ಮಾಡಿದ್ದಾರೆ. ಹಾಗೆಯೇ ಸಂಗೀತಾ, ಪ್ರತಾಪ್‌ ಸೇರಿದಂತೆ ಹಲವರ ಹೆಸರುಗಳು ಸೂಚಿತಗೊಂಡಿವೆ. ಯಾರ ಹೆಸರು ಹೆಚ್ಚು ಸಲ ಸೂಚಿತಗೊಂಡಿವೆ, ಈ ವಾರ ಯಾರೆಲ್ಲ ನಾಮಿನೇಟ್‌ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ADVERTISEMENT

ಬಿಗ್‌ಬಾಸ್‌ ಕನ್ನಡ 24 ಗಂಟೆ ನೇರಪ್ರಸಾರವನ್ನು Jio Cinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.