ADVERTISEMENT

Bigg Boss: ‘ಬಳೆ’ಗೆ ಸಿಕ್ಕಿತು ಕಿಚ್ಚನ ಚಪ್ಪಾಳೆ– ಮದವೇರಿದ ‘ಆನೆ’ಗೂ ಉತ್ತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2023, 6:55 IST
Last Updated 5 ನವೆಂಬರ್ 2023, 6:55 IST
   

ಬೆಂಗಳೂರು: ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯು 4ನೇ ವಾರಕ್ಕೆ ರೋಚಕತೆ ಪಡೆದುಕೊಂಡಿದೆ. ಈ ಬಾರಿಯ ಸ್ಪರ್ಧಿಗಳಲ್ಲಿ ಕೆಲವರ ಆಕ್ರಮಣಕಾರಿ ನಡವಳಿಕೆ ಮನೆಯಲ್ಲಿ ಎದ್ದು ಕಾಣುತ್ತಿದೆ. ಇದರ ಜೊತೆಗೆ ಅವಹೇಳನಕಾರಿ ಶಬ್ದಗಳ ಬಳಕೆಯೂ ಹೆಚ್ಚಾಗಿದೆ. ಈ ವಾರದ ಕೊನೆಯಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿಗಳ ಆಕ್ಷೇಪಾರ್ಹ ಮಾತುಗಳಿಗೆ ಖಡಕ್ ಉತ್ತರ ಸಿಕ್ಕಿದೆ. ಅದರಲ್ಲೂ ಹೆಚ್ಚು ಗಮನ ಸೆಳೆದಿದ್ದು, ಬಳೆ ಮಾತು.

ಮನೆಯ ಸ್ಪರ್ಧಿಗಳಲ್ಲಿ ‘ಆನೆ’ ಎಂದು ಕರೆಸಿಕೊಳ್ಳುವ ವಿನಯ್ ಅವರು ಬಳೆ ಎಂಬ ಶಬ್ದವನ್ನು ಬಲಹೀನತೆ ಎಂಬಂತೆ ಬಳಸಿರುವ ಬಗ್ಗೆ ಸುದೀಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಣ್ಣಿನಿಂದ ಮನೆಯ ಸಾಮಗ್ರಿಗಳನ್ನು ತಯಾರಿಸುವ ಟಾಸ್ಕ್‌ನಲ್ಲಿ ವಿನಯ್, ಸಂಗೀತಾ ಜೊತೆಗಿನ ಆವೇಶದಿಂದ ಕೂಡಿದ ಮಾತುಕತೆಯಲ್ಲಿ ನಾವೇನು ಬಳೆ ಹಾಕಿಕೊಂಡು ನಿಂತಿಲ್ಲ ಎಂದು ಹೇಳಿದ ಮಾತು ವಿವಾದಕ್ಕೆ ನಾಂದಿ ಹಾಡಿತು. ಪದೇ ಪದೇ ಬಳಸಿದ್ದು ಮತ್ತಷ್ಟು ಕೋಪಕ್ಕೆ ಎಡೆ ಮಾಡಿತ್ತು. ನಾನು ಬಳೆ ತೊಟ್ಟಿಲ್ಲ ಎಂಬ ಟಾಂಗ್, ಜೊತೆಗಿರುವ ಕಾರ್ತಿಕ್‌ಗೂ ಬಳೆ ತೊಡಿಸು ಎಂಬ ಮಾತುಗಳು ಪಂಚಾಯ್ತಿಯಲ್ಲಿ ಹಲವು ಬಾರಿ ಪ್ರತಿಧ್ವನಿಸಿದವು.

ವಿನಯ್ ಪದೇ ಪದೇ ಬಳೆ ಬಗ್ಗೆ ಮಾತನಾಡುತ್ತಿದ್ದಾಗ ಮನೆಯ ಉಳಿದ ಮಹಿಳಾ ಸದಸ್ಯರು ನಿಲುವು ತೆಗೆದುಕೊಳ್ಳದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಸುದೀಪ್, ನಕ್ಕು ಸುಮ್ಮನಾಗಿದ್ದ ನಮ್ರತಾ ಅವರಿಗೆ ಕ್ಲಾಸ್ ತೆಗೆದುಕೊಂಡರು. ವಾರಪೂರ್ತಿ ನಮಗೆ ನಿಮ್ಮಲ್ಲಿ ಕಂಡಿದ್ದು, ನಿಮ್ಮ ಕೈಯಲ್ಲಿರುವ ಚಮಚ ಮಾತ್ರ ಎನ್ನುವ ಮೂಲಕ ಯಾವುದೇ ನಿರ್ಧಾರಕ್ಕೂ ವಿನಯ್ ಮೇಲೆ ಅವಲಂಬಿತವಾಗುತ್ತಿದ್ದ ನಮ್ರತಾಗೆ ಚಾಟಿ ಬೀಸಿದರು. ಮಹಿಳೆಯರಿಗೆ ಗೌರವ ಕೊಡಬೇಕೆಂದು ಮೈಕಲ್‌ ಅವರಿಗೆ ಬುದ್ಧಿ ಹೇಳಿದ್ದ ನೀವು, ಸಂಗೀತಾ ಅವರೆದರು ವಿನಯ್ ಬಳೆ ಬಗೆಗಿನ ಹಗುರವಾದ ಮಾತುಗಳನ್ನು ಕಂಡು ನಿಲುವು ಏಕೆ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ನಮ್ರತಾ ಬಳಿ ಉತ್ತರವೇ ಇರಲಿಲ್ಲ. ಅದು ತಪ್ಪಾಗಿರುವ ಬಗ್ಗೆ ನಮ್ರತಾ ವಿಧಿ ಇಲ್ಲದೆ ಒಪ್ಪಿಕೊಂಡರು.

ADVERTISEMENT

ವಿನಯ್ ಆಟಾಟೋಪಕ್ಕೆ ‘ಕಿಚ್ಚು’

ವಾರಪೂರ್ತಿ ಗುಂಪು ಕಟ್ಟಿಕೊಂಡು ಕ್ಯಾಪ್ಟನ್ ಆಗಿ ಮೆರೆದಾಡುತ್ತಿದ್ದ ವಿನಯ್ ಅವರಿಗೂ ಸುದೀಪ್, ಮಾತಿನ ಚಾಕ್ಯಚಕ್ಯತೆ ಮೂಲಕ ಚಾಟಿ ಬೀಸಿದರು. ಕಾರ್ತಿಕ್ ಅವರನ್ನು ನೀವು ಬಳೆಗಳ ರಾಜ ಎಂದು ಕರೆದಿದ್ದೀರಿ. ಹೆಣ್ಣುಮಕ್ಕಳ ಜೊತೆಗಿದ್ದರೆ ಅವರೇಕೆ ಬಳೆಗಳ ರಾಜ ಆಗಬೇಕು. ಹೆಣ್ಣು ಮಕ್ಕಳೇಕೆ ಮೀಸೆಗಳ ರಾಣಿಯರು ಆಗಬಾರದು? ಎಂದು ಪ್ರಶ್ನಿಸಿದರು. ವಿನಯ್ ಅದಕ್ಕೆ ಸಮಜಾಯಿಷಿ ನೀಡಲು ಮುಂದಾದಾಗ ಮಧ್ಯಪ್ರೇಶಿಸಿದ ಸುದೀಪ್, ನಾವೇನು ಬಳೆ ಹಾಕಿಕೊಂಡು ನಿಂತಿಲ್ಲ ಎಂಬುದರ ಅರ್ಥವೇನು ಎಂದು ಪ್ರಶ್ನಿಸಿದರು. ಬಳೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕೆಲವರು ಅದನ್ನು ಅಂದ ಎನ್ನುತ್ತಾರೆ, ಕೆಲವರು ಅಲಂಕಾರ ಎನ್ನುತ್ತಾರೆ, ಮತ್ತೆ ಕೆಲವರು ಶಕ್ತಿ ಎನ್ನುತ್ತಾರೆ, ನೀವು ಬಲಹೀನತೆ ಎನ್ನುವಂತೆ ಬಳಸಿದ್ದೀರಿ ಎಂದು ಸುದೀಪ್ ತರಾಟೆಗೆ ತೆಗೆದುಕೊಂಡರು. ಅದು ಶಕ್ತಿಯ ಸಂಕೇತವೇ ಹೊರತು ಬಲಹೀನತೆಯಲ್ಲ ಎಂದು ಸುದೀಪ್ ತಿಳಿ ಹೇಳಿದರು. ಸುದೀಪ್ ಮಾತುಗಳಿಂದ ತಣ್ಣಗಾದ ವಿನಯ್, ಇಡೀ ಕರ್ನಾಟಕದ ಕ್ಷಮೆ ಕೋರಿದರು.

‘ಬಳೆ’ ಹಾಕಿದ ಕೈಗೆ ಕಿಚ್ಚನ ಚಪ್ಪಾಳೆ

ಹೌದು, ಬಳೆ ಕುರಿತಂತೆ ಹಗುರವಾಗಿ ಮಾತನಾಡಿದ್ದ ವಿನಯ್ ಅವರಿಗೆ ಬುದ್ಧಿ ಕಲಿಸುವ ಯತ್ನದಲ್ಲಿ ಸುದೀಪ್ ಈ ಬಾರಿ ಬಳೆಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಟಾಸ್ಕ್ ವೇಳೆ ಬಳೆ ಹಾಕಿದ್ದೀನಿ ನೋಡು ಎಂದು ಸಂಗೀತಾ ತೋರಿಸಿದ್ದ ಕೈ ಚಿತ್ರಕ್ಕೆ ಈ ಬಾರಿ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ಸ್ಟೋರ್ ರೂಮ್‌ಗೆ ಹೋಗಿ ಅಲ್ಲಿರುವ ಚಿತ್ರ ತರುವಂತೆ ಸುದೀಪ್ ವಿನಯ್‌ಗೆ ಸೂಚಿಸುತ್ತಾರೆ. ಕವರ್ ತೆಗೆದು ಚಿತ್ರವನ್ನು ಎಲ್ಲರಿಗೂ ತೋರಿಸಿ. ಆ ಚಿತ್ರಕ್ಕೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ ಎಂದು ಸುದೀಪ್ ಘೋಷಿಸಿದರು. ಚಿತ್ರದ ಕವರ್ ಓಪನ್ ಆಗುತ್ತಿದ್ದಂತೆ ನೆರೆದಿದ್ದ ಜನ, ಸ್ಪರ್ಧಿಗಳಿಂದ ಜೋರು ಚಪ್ಪಾಳೆ ಬಂದಿತು. ಅಷ್ಟೇ ಅಲ್ಲ, ವಿನಯ್ ಕೈಯಿಂದಲೇ ಅದನ್ನು ಗೋಡೆಗೆ ಹಾಕಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.