ADVERTISEMENT

BBK 10: ಪ್ರತಾಪ್ ಬಿಟ್ಟು ಸಂಗೀತಾಗೆ ಫಿನಾಲೆ ಟಿಕೆಟ್ ಕೊಟ್ಟಿದ್ದು ಸರಿಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2024, 11:38 IST
Last Updated 13 ಜನವರಿ 2024, 11:38 IST
<div class="paragraphs"><p>ಪ್ರತಾಪ್ ಮತ್ತು&nbsp;ಸಂಗೀತಾ</p></div>

ಪ್ರತಾಪ್ ಮತ್ತು ಸಂಗೀತಾ

   

ಬೆಂಗಳೂರು: ಬಿಗ್‌ಬಾಸ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಶೋ ಮೇಲೆ ಒಂದು ಆರೋಪ ಕೇಳಿಬಂದಿದೆ. ಏನದು ಆರೋಪ? ಅದು ಎಷ್ಟರಮಟ್ಟಿಗೆ ಸತ್ಯ? ಈ ಪ್ರಶ್ನೆಯ ಕುರಿತೇ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಚರ್ಚೆ ನಡೆಯಲಿದೆ.

ಬಿಗ್‌ಬಾಸ್‌ ಶೋ ಆರಂಭದಿಂದಲೂ ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದಿದೆ. ಆದರೆ, ಸೀಸನ್‌ –10 ಕಳೆದ ವಾರದ ಕೆಲವು ಸಂಗತಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚರ್ಚೆ ನಡೆಯುತ್ತಿದೆ. ಅದನ್ನು ಗಮನಿಸಿದ ಕಿಚ್ಚ ವಾರಾಂತ್ಯದ ಎಪಿಸೋಡ್‌ನಲ್ಲಿ ಈ ಬಗ್ಗೆಯೇ ಚರ್ಚೆ ನಡೆಸಲಿದ್ದಾರೆ.

ADVERTISEMENT

‘ವಾರಪೂರ್ತಿ ಟಾಸ್ಕ್ ಆಡಿ ಲೀಡ್‌ನಲ್ಲಿದ್ದೊರನ್ನು ಬಿಟ್ಟು ವೋಟಿಂಗ್‌ ಆಧಾರದ ಮೇಲೆ ಫಿನಾಲೆ ಟಿಕೆಟ್ ಕೊಟ್ಟಿದ್ದು ತಪ್ಪಾ? ಹಾಗಾದರೆ ಎಲ್ಲರೂ ನ್ಯಾಯ ಎಂದು ಯಾವುದನ್ನು ಅಂದುಕೊಂಡಿದ್ದಾರೋ, ಅದು ಸಿಗಬೇಕಾಗಿದ್ದು ಯಾರಿಗೆ? ಈ ಎಲ್ಲದರ ಬಗ್ಗೆ ಈ ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆ ಮಾಡೋಣ’ ಎಂದು ಕಿಚ್ಚ ಹೇಳಿರುವುದು ಪ್ರೊಮೊದಲ್ಲಿ ಸೆರೆಯಾಗಿದೆ.

ಕಳೆದ ವಾರದ ಆರಂಭದಲ್ಲಿ ಬಿಗ್‌ಬಾಸ್‌, ಎಲ್ಲರಿಗೂ ವೈಯಕ್ತಿಕ ಟಾಸ್ಕ್‌ ನೀಡಿದ್ದು, ಅದರಲ್ಲಿ ಅತ್ಯುತ್ತಮವಾಗಿ ಆಡಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದುಕೊಂಡವರಲ್ಲಿ ಒಬ್ಬರು ಫಿನಾಲೆಗೆ ನೇರವಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಿದ್ದರು.

ಅದೇ ಪ್ರಕಾರ ಟಾಸ್ಕ್‌ಗಳನ್ನು ನೀಡಲಾಗಿತ್ತು. ವಾರಾಂತ್ಯದ ಹೊತ್ತಿಗೆ ಪ್ರತಾಪ್‌ 420 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರು. 300 ಅಂಕಗಳನ್ನು ಪಡೆದ ಸಂಗೀತಾ ಎರಡನೇ ಸ್ಥಾನದಲ್ಲಿದ್ದರು ಮತ್ತು 210 ಅಂಕಗಳನ್ನು ಪಡೆದ ನಮ್ರತಾ ಮೂರನೇ ಸ್ಥಾನದಲ್ಲಿದ್ದರು. ಕೊನೆಯಲ್ಲಿ ಬಿಗ್‌ಬಾಸ್‌ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂವರು ಸದಸ್ಯರ ಪೈಕಿ ಯಾರು ಫಿನಾಲೆಗೆ ಹೋಗಲು ಅರ್ಹರು ಎಂಬ ನಿರ್ಧಾರವನ್ನು ಬಹುಮತದ ಆಧಾರದ ಮೇಲೆ ಕೈಗೊಳ್ಳಲು ಮನೆಯ ಉಳಿದೆಲ್ಲ ಸದಸ್ಯರಿಗೆ ಸೂಚಿಸಿದ್ದರು. ಅದರಲ್ಲಿ ತುಕಾಲಿ ಸಂತೋಷ್, ಕಾರ್ತಿಕ್ ಮತ್ತು ತನಿಷಾ ಮೂವರೂ ಸಂಗೀತಾ ಅವರಿಗೆ ಓಟ್ ಮಾಡಿದ್ದರಿಂದ ಅತಿ ಹೆಚ್ಚು ವೋಟ್ ಪಡೆದ ಸಂಗೀತಾ ಫಿನಾಲೆಗೆ ನೇರ ಟಿಕೆಟ್ ಪಡೆದುಕೊಂಡಿದ್ದರು.

ವಾರವಿಡೀ ಅತ್ಯುತ್ತಮವಾಗಿ ಆಡಿ ಅತಿ ಹೆಚ್ಚು ಅಂಕ ಪಡೆದಿರುವ ಪ್ರತಾಪ್ ಬಿಟ್ಟು ಸಂಗೀತಾ ಅವರಿಗೆ ಫಿನಾಲೆ ಟಿಕೆಟ್ ಕೊಟ್ಟಿದ್ದು ಸರಿಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸುದೀಪ್, ವಾರಾಂತ್ಯದ ಎಪಿಸೋಡ್‌ನಲ್ಲಿ ಈ ಕುರಿತಾದ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಿದ್ದಾರೆ.

ಹಾಗಾದರೆ ಸುದೀಪ್ ಈ ವಿಷಯವನ್ನು ಹೇಗೆ ಬಗೆಹರಿಸುತ್ತಾರೆ? ಯಾವುದು ಸರಿ? ಯಾವುದು ತಪ್ಪು? ಈ ಎಲ್ಲ ಪ್ರಶ್ನೆಗಳಿಗೆ ಈ ಸಂಜೆಯ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.