ಸೂರಜ್ ಸಿಂಗ್, ಬಿಗ್‌ಬಾಸ್ ಸ್ಪರ್ಧಿಗಳು
ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮ್ಯೂಟಂಟ್ ರಘು, ರಿಷಾ ಗೌಡ ಹಾಗೂ ಸೂರಜ್ ಸಿಂಗ್ ಈಗಾಗಲೇ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಈ ಮೂವರ ಆಗಮನದಿಂದ ಒಂದೇ ದಿನಕ್ಕೆ ಬಿಗ್‌ಬಾಸ್ ಮನೆಯ ಚಿತ್ರಣವೇ ಬದಲಾಗಿದೆ.
ಕಲರ್ಸ್ ಕನ್ನಡ ಒಂದೊಂದಾಗಿ ಪ್ರೊಮೋಗಳನ್ನು ಬಿಡುಗಡೆ ಮಾಡುತ್ತಿದೆ. ಮೊದಲು ಮ್ಯೂಟಂಟ್ ರಘು ಬಳಿಕ ರಿಷಾ ಗೌಡ. ಈಗ ಸೂರಜ್ ಸಿಂಗ್ ಮನೆಗೆ ಆಗಮಿಸಿದ ಪ್ರೊಮೋವನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಸದೃಢ ದೇಹದಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಪಡೆದುಕೊಂಡಿರುವ ಸೂರಜ್ ಸಿಂಗ್ ಬಿಗ್‌ಬಾಸ್ ಸ್ಪರ್ಧಿಗಳಿಗೂ ಅಚ್ಚರಿ ಮೂಡಿಸಿದ್ದಾರೆ.
ಬಿಡುಗಡೆಯಾದ ಪ್ರೊಮೋದಲ್ಲಿ ಸೂರಜ್ ಸಿಂಗ್ ಬಿಗ್‌ಬಾಸ್ ಮನೆಯಲ್ಲಿರುವ ಈಜುಕೊಳದಲ್ಲಿ ನಿಂತುಕೊಂಡಿದ್ದರು. ಆಗ ಕಿಚ್ಚ ಸುದೀಪ್ ಅಭಿನಯದ ‘ವಿಷ್ಣುವರ್ಧನ್’ ಸಿನಿಮಾದ ‘ಎದೆಯೊಳಗೆ ಗಿಟ್ಟಾರು’ ಹಾಡನ್ನು ಹಾಕಿದ್ದಾರೆ. ಹಾಡು ಕೇಳುತ್ತಿದ್ದಂತೆ ಮನೆಯಲ್ಲಿದ್ದ ಸ್ಪರ್ಧಿಗಳು ಓಡೋಡಿ ಗಾರ್ಡನ್ ಏರಿಯಾಗೆ ಬಂದಿದ್ದಾರೆ. ಈಜುಕೊಳದಲ್ಲಿ ನಿಂತುಕೊಂಡಿದ್ದ ಸೂರಜ್ ಸಿಂಗ್‌ರನ್ನು ನೋಡಿ ದಂಗಾಗಿದ್ದಾರೆ.
ಈಜುಕೊಳದಿಂದ ಆಚೆ ಬಂದ ಸೂರಜ್ ಸಿಂಗ್, ಎಲ್ಲರಿಗೂ ಪರಿಚಯ ಮಾಡಿಕೊಂಡಿದ್ದಾರೆ. ಆಗ ಬಿಗ್‌ಬಾಸ್, ‘ಸೂರಜ್ ಸಿಂಗ್ ನಿಮ್ಮ ಪ್ರಕಾರ ಈ ಮನೆಯ ಅತಿ ಸುಂದರವಾದ ಸ್ತ್ರೀ ಸದಸ್ಯೆ ಯಾರು’ ಎಂದು ಕೇಳಿದ್ದಾರೆ. ಆಗ ಸೂರಜ್, ಕೈಯಲ್ಲಿ ಗುಲಾಬಿಯನ್ನು ಹಿಡಿದುಕೊಂಡು ನೇರವಾಗಿ ರಾಶಿಕಾ ಬಳಿ ಹೋಗಿದ್ದಾರೆ. ಬಳಿಕ ರಾಶಿಕಾ ಕೈಗೆ ಗುಲಾಬಿ ಹೂವನ್ನು ಕೊಟ್ಟು ನೀವು ಈ ಮನೆಯ ಸುಂದರವಾದ ಹುಡುಗಿ ಎಂದಿದ್ದಾರೆ. ಸೂರಜ್ ಗುಲಾಬಿ ಕೊಡುತ್ತಿದ್ದಂತೆ ರಾಶಿಕಾ ನಾಚಿ ನೀರಾಗಿದ್ದಾರೆ. ಇನ್ನು ಮನೆಮಂದಿ ಈ ಇಬ್ಬರನ್ನು ಅಚ್ಚರಿಯಿಂದ ನೋಡುತ್ತಾ ನಿಂತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.