ಹನುಮಂತ
ಹಾವೇರಿ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್’ 11ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ನಿ ಗ್ರಾಮದ ನಿವಾಸಿ ಹನುಮಂತ ಲಮಾಣಿ ಅವರು ವಿಜಯಶಾಲಿಯಾಗಿದ್ದಾರೆ.
ಆನ್‌ಲೈನ್ ಮತದಾನದ ಮೂಲಕ ವೀಕ್ಷಕರಿಂದ 5.23 ಕೋಟಿ ಮತಗಳನ್ನು ಪಡೆದಿದ್ದ ಹನುಮಂತ, ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಅತ್ಯಧಿಕ ಮತ ಪಡೆದ ಸ್ಪರ್ಧಿ ಎಂಬ ದಾಖಲೆ ಬರೆದಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಸುತ್ತಿನಲ್ಲಿ ನಿರೂಪಕರಾದ ನಟ ಸುದೀಪ್ ಅವರು ಹನುಮಂತ ಅವರ ಕೈ ಎತ್ತಿ ಹಿಡಿಯುವ ಮೂಲಕ ಗೆಲುವು ಘೋಷಿಸಿದರು. ತಮ್ಮೂರಿನ ಹುಡುಗ ‘ಬಿಗ್‌ಬಾಸ್’ ಶೋನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಂಬಂಧಿಕರು ಹಾಗೂ ಸ್ನೇಹಿತರು, ಒಂದೆಡೆ ಸೇರಿ ಸಂಭ್ರಮಾಚರಣೆ ಮಾಡಿದರು.
ಸವಣೂರಿನಿಂದ 6 ಕಿ.ಮೀ. ದೂರದಲ್ಲಿರುವ ಚಿಲ್ಲೂರು ಬಡ್ನಿ ಗ್ರಾಮದ ತಾಂಡಾದ ಮನೆಯಲ್ಲಿ ಹನುಮಂತ ಅವರ ಕುಟುಂಬ ನೆಲೆಸಿದೆ. ಹನುಮಂತ ಅವರ ತಂದೆ ಮೇಘಪ್ಪ ಹಾಗೂ ತಾಯಿ ಶೀಲವ್ವ. ಈ ದಂಪತಿ ಕುರಿ ಕಾಯುತ್ತ ಮಗನನ್ನು ಸಾಕಿದ್ದಾರೆ. ಹನುಮಂತ ಅವರಿಗೆ ಅಣ್ಣ, ತಂಗಿ ಹಾಗೂ ಮೂವರು ಅಕ್ಕಂದಿರಿದ್ದಾರೆ.
5ನೇ ತರಗತಿಯವರೆಗೂ ಓದಿರುವ ಹನುಮಂತ, ಬಾಲ್ಯದಲ್ಲಿಯೇ ಭಜನಾ ಪದಗಳನ್ನು ಕೇಳಲು ಹೋಗುತ್ತಿದ್ದರು. ಭಜನಾ ಮಂಡಳಿ ಸದಸ್ಯರ ಜೊತೆ ಸೇರಿ ಹಾಡು ಹಾಡಲಾರಂಭಿಸಿದ್ದರು. ದಿನ ಕಳೆದಂತೆ ಶಾಲೆ ಬಿಟ್ಟು, ಹಾಡುಗಾರಿಕೆಯಲ್ಲಿಯೇ ಮುಂದುವರಿದರು. ಇದರ ಜೊತೆಯಲ್ಲಿಯೇ ತಂದೆ–ತಾಯಿ–ಸಹೋದರರೊಂದಿಗೆ ಕುರಿ ಕಾಯಲು ಹೋಗುತ್ತಿದ್ದರು. ಇದರ ನಡುವೆಯೇ ಸವಣೂರು, ಶಿಗ್ಗಾವಿ ಹಾಗೂ ಸುತ್ತಮುತ್ತಲ ತಾಲ್ಲೂಕಿನ ಗ್ರಾಮಗಳಲ್ಲಿ ಭಜನಾ ಪದಗಳನ್ನು ಹಾಡುತ್ತ ಪ್ರಸಿದ್ಧಿ ಪಡೆದಿದ್ದರು.
ಚಿಲ್ಲೂರು ಬಡ್ನಿ ಗ್ರಾಮಕ್ಕೆ ಸಮೀಪದಲ್ಲಿ ಶಿಶುನಾಳ ಗ್ರಾಮವಿದೆ. ಇದೇ ಊರಿನ ಸಂತ ಶಿಶುನಾಳ ಷರೀಫ್‌ರ ತತ್ವಪದಗಳನ್ನು ಹನುಮಂತ ಸರಾಗವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಕುರಿ ಕಾಯುತ್ತಿದ್ದ ಸಂದರ್ಭದಲ್ಲಿಯೇ ಹಾಡು ಹಾಡಿ ಸಹೋದರನ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಸ್ನೇಹಿತರ ಒತ್ತಾಯದ ಮೇರೆಗೆ ಜೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ಕಾರ್ಯಕ್ರಮಕ್ಕೆ ಆಡಿಷನ್ ನೀಡಿದ್ದ ಅವರು, ತಮ್ಮ ಕಂಠದ ಮೂಲಕ ಅವಕಾಶ ಗಿಟ್ಟಿಸಿಕೊಂಡರು.
‘ಕೇಳ ಜಾಣ, ಶಿವ ಧ್ಯಾನ ಮಾಡಣ್ಣ... ನಿನ್ನೊಳಗ ನೀನು ತಿಳಿದ ನೋಡಣ್ಣ...’ ಹಾಡಿನ ಮೂಲಕ ತೀರ್ಪುಗಾರರ ಮನಗೆದ್ದ ಹನುಮಂತ, ಬಳಿಕ ತಿರುಗಿ ನೋಡಲೇ ಇಲ್ಲ. ಹಾಡಿದ ಹಾಡುಗಳೆಲ್ಲವೂ ಪ್ರಸಿದ್ಧಿ ತಂದುಕೊಟ್ಟವು. ನೃತ್ಯದ ರಿಯಾಲಿಟಿ ಶೋಗಳಲ್ಲಿಯೂ ಹನುಮಂತ ಮಿಂಚಿದರು. ಹಲವು ಪ್ರಶಸ್ತಿಗಳು, ಸನ್ಮಾನಗಳು ಮುಡಿಗೇರಿದವು. ಸಂಗೀತ ಆರ್ಕೆಸ್ಟ್ರಾಗಳೂ ಕೈ ಹಿಡಿದವು.
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ನಿಯಲ್ಲಿರುವ ಹನುಮಂತ ಲಮಾಣಿ ಅವರ ಮನೆಯೊಳಗಿರುವ, ಹನುಮಂತ ಅವರಿಗೆ ಬಂದ ಪ್ರಶಸ್ತಿಗಳು ಹಾಗೂ ಹಾರಗಳು
ವೈಲ್ಡ್ ಕಾರ್ಡ್ ಪ್ರವೇಶ
ಕಲರ್ಸ್ ಕನ್ನಡ ವಾಹಿನಿಯಲ್ಲಿ 11ನೇ ಆವೃತ್ತಿಯ ಬಿಗ್‌ಬಾಸ್ ಆರಂಭಗೊಂಡಿದ್ದಾಗ, ಹೊಡೆದಾಟದ ಕಾರಣಕ್ಕೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಿದ್ದರು. ಇದೇ ವೇಳೆಯೇ ಹನುಮಂತ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ತಮ್ಮ ಸರಳತೆ, ಹಾಡುಗಾರಿಕೆ ಹಾಗೂ ಉತ್ತರ ಕರ್ನಾಟಕ ಶೈಲಿನ ಮಾತುಗಳ ಮೂಲಕವೇ ಹನುಮಂತ ಪ್ರಸಿದ್ಧಿ ಪಡೆದು ಈಗ ಜಯಶಾಲಿಯಾಗಿದ್ದಾರೆ.
ನಾವು ಹನುಮಂತನ ಹೆತ್ತವರು ಮಾತ್ರ. ಅವನು ಇಡೀ ರಾಜ್ಯದ ಮಗ. ಜನರು ಅವನನ್ನು ಬೆಳೆಸುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ– ಶೀಲವ್ವ ಲಮಾಣಿ, ಹನುಮಂತರ ತಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.