ADVERTISEMENT

ಅಂಬೇಡ್ಕರ್‌ ಅವರ ಜೀವನಾಧಾರಿತ ‘ಮಹಾನಾಯಕ’ ಧಾರಾವಾಹಿ ಸ್ಥಗಿತಕ್ಕೆ ಬೆದರಿಕೆ ಕರೆ

ಅಶೋಕನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ ಜೀ ವಾಹಿನಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 12:20 IST
Last Updated 4 ಸೆಪ್ಟೆಂಬರ್ 2020, 12:20 IST
ಮಹಾನಾಯಕ ಧಾರಾವಾಹಿಯ ಪೋಸ್ಟರ್‌
ಮಹಾನಾಯಕ ಧಾರಾವಾಹಿಯ ಪೋಸ್ಟರ್‌   

‌‌ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜೀವನಗಾಥೆ ಸಾರುವ ‘ಮಹಾನಾಯಕ’ ಧಾರಾವಾಹಿಯ ಸ್ಥಗಿತಕ್ಕೆ ಆಗ್ರಹಿಸಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ವಾಹಿನಿಯ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಟ್ವೀಟ್‌ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಮಹಾನಾಯಕ ಧಾರಾವಾಹಿಯ ಪ್ರಸಾರ ಸ್ಥಗಿತಗೊಳಿಸುವಂತೆ ಮೆಸೇಜ್‌ಗಳು ಬರುತ್ತಿವೆ. ಮಧ್ಯರಾತ್ರಿ ಮೊಬೈಲ್‌ ಕರೆಗಳ ಮೂಲಕ ಬೆದರಿಕೆ ಒಡ್ಡಲಾಗುತ್ತಿದೆ. ಇದರ ಬಗ್ಗೆ ವಾಹಿನಿಯು ತಲೆಕೆಡಿಸಿಕೊಳ್ಳುವುದಿಲ್ಲ. ಈ ಧಾರಾವಾಹಿಯು ನಮ್ಮ ಹೆಮ್ಮೆ; ವೈಯಕ್ತಿಕವಾಗಿ ನನಗೆ ಇದರ ಮೇಲೆ ಅತೀವ ಪ್ರೀತಿಯಿದೆ. ಸಮಾಜಕ್ಕೆ ಈ ಸೀರಿಯಲ್‌ ಸಮಸ್ಯೆ ಎಂದು ತಿಳಿದುಕೊಂಡರೆ; ಸಮಾಜಕ್ಕೆ ನೀವೇ ಸಮಸ್ಯೆಯಾಗಿದ್ದೀರಿ ಎಂದರ್ಥ’ ಎಂದು ಹೇಳಿದ್ದಾರೆ.

ಮುಂಜಾಗ್ರತೆಯಾಗಿ ಅಶೋಕನಗರ ಪೊಲೀಸ್‌ ಠಾಣೆಗೆ ವಾಹಿನಿಯು ಈ ಬಗ್ಗೆ ಮಾಹಿತಿ ನೀಡಿದೆ. ಜೊತೆಗೆ, ಬೆದರಿಕೆಗೆ ಸಂಬಂಧಪಟ್ಟ ದಾಖಲೆಯನ್ನೂ ಸಲ್ಲಿಸಿದೆ. ಆದರೆ, ಯಾವುದೇ ದೂರು ದಾಖಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಗುಂಪೊಂದು ಈ ಧಾರಾವಾಹಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು, ಈ ಗುಂಪಿನವರೇ ಬೆದರಿಕೆ ಕರೆ ಮಾಡಿರುವ ಶಂಕೆಯಿದೆ.

ADVERTISEMENT

‘ಮನುವಾದಿಗಳ ಷಡ್ಯಂತ್ರಕ್ಕೆ ತಲೆಕೆಡಿಸಿಕೊಳ್ಳಬೇಡಿ. ಧಾರಾವಾಹಿಯು ಉತ್ತಮವಾಗಿ ಮೂಡಿಬರುತ್ತಿದ್ದು, ಮುಂದುವರಿಸಿ’ ಎಂದು ನೆಟ್ಟಿಗರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಅಂಬೇಡ್ಕರ್‌ ಅವರ ಬಾಲ್ಯದ ಜೀವನ ಕುರಿತ ಕಥೆ ಪ್ರಸಾರವಾಗುತ್ತಿದೆ. ಅವರ ಜೀವನ ಕುರಿತು ಧಾರಾವಾಹಿಯನ್ನು ಚಿತ್ರೀಕರಿಸಲಾಗಿದೆ. ಹಾಗಾಗಿ, ಇನ್ನೊಂದು ವರ್ಷ ಕಾಲ ಇದು ಪ್ರಸಾರವಾಗಲಿದೆ.

ಪೊಲೀಸ್‌ ಠಾಣೆಗೆ ಮಾಹಿತಿ

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಾಘವೇಂದ್ರ ಹುಣಸೂರು, ‘ನಾವು ಇದನ್ನು ಧಾರಾವಾಹಿ ಎಂದು ಪರಿಗಣಿಸಿಲ್ಲ. ಶ್ರೇಷ್ಠ ವ್ಯಕ್ತಿಯ ಬದುಕಿನ ಸಂಭ್ರಮ ಇದು. ಜಾತಿ ಮೀರಿದ ಪ್ರಾಜೆಕ್ಟ್‌ ಇದಾಗಿದೆ. ಹಾಗಾಗಿ, ಸಮಾಜದ ಸಾಮರಸ್ಯ ಕಾಪಾಡುವುದು ನಮ್ಮ ಹೊಣೆ. ಜೊತೆಗೆ, ಇದೊಂದು ಸೂಕ್ಷ್ಮ ವಿಚಾರವೂ ಹೌದು. ಬೆದರಿಕೆ ಹಾಕುವವರಿಗೆ ಉತ್ತರಿಸಲು ನನಗೆ ಮನಸ್ಸು ಇರಲಿಲ್ಲ. ಆದರೆ, ಅವರಿಗೆ ಸಂದೇಶ ರವಾನಿಸಬೇಕಿತ್ತು. ಹಾಗಾಗಿಯೇ, ಟ್ವೀಟ್‌ ಮಾಡಿದೆ. ಅಶೋಕನಗರ ಠಾಣೆಗೆ ಬೆದರಿಕೆ ಕರೆಗಳ ಸಂಬಂಧ ಮಾಹಿತಿ ನೀಡಲಾಗಿದೆ. ಹೀಗೆಯೇ ಬೆದರಿಕೆ ಮುಂದುವರಿಸಿದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಅನಿವಾರ್ಯ’ ಎಂದು ಪ್ರತಿಕ್ರಿಯಿಸಿದರು.

‘ಸಮಾಜದಲ್ಲಿ ಇನ್ನೂ ಇಂತಹ ಮನಸ್ಥಿತಿಯ ಜನರಿರುವ ಬಗ್ಗೆ ನನಗೆ ನೋವಾಗಿದೆ. ಪ್ರಚಾರಕ್ಕಾಗಿ ಈ ಟ್ವೀಟ್‌ ಮಾಡಿದ್ದಾರೆ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಟಿ.ವಿ ರೇಟಿಂಗ್‌ಗಾಗಿ ಈ ಮಾದರಿಯ ಪ್ರಚಾರದ ಅಗತ್ಯ ನಮಗಿಲ್ಲ. ‘ಮಹಾನಾಯಕ’ನಿಗೆ ಪ್ರಚಾರದ ಅಗತ್ಯವೂ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನರೇ ಧಾರಾವಾಹಿಯ ಕಟೌಟ್‌ ಕಟ್ಟಿ ಪ್ರೀತಿ ತೋರಿಸಿದ್ದಾರೆ’ ಎಂದು ಹೇಳಿದರು.

‘ಇಂಟೆಲಿಜೆನ್ಸ್‌ ವಿಭಾಗದ ಡಿವೈಎಸ್‌ಪಿ ಜೊತೆಗೂ ಮಾತುಕತೆ ನಡೆಸಿದ್ದೇವೆ. ಸದ್ಯಕ್ಕೆ ಕಚೇರಿಗೆ ರಕ್ಷಣೆ ಬೇಡವೆಂದು ತಿಳಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.