ADVERTISEMENT

ಯಶಸ್ಸಿನತ್ತ ‘ಹೂ ಮಳೆ’ಯ ಯದುವೀರ

ವಿದ್ಯಾಶ್ರೀ ಎಸ್.
Published 31 ಡಿಸೆಂಬರ್ 2020, 19:32 IST
Last Updated 31 ಡಿಸೆಂಬರ್ 2020, 19:32 IST
ಯಶವಂತ್ ಯದುವೀರ್‌
ಯಶವಂತ್ ಯದುವೀರ್‌   

‘ಬಣ್ಣದ ಲೋಕದ ಪ್ರವೇಶ ನನಗೆ ಸುಲಭವಾಗಿರಲಿಲ್ಲ. ಹಂತ ಹಂತವಾಗಿ ಕನಸುಗಳ ಮೆಟ್ಟಿಲು ಏರುತ್ತಿದ್ದೇನೆ. ಸಿಕ್ಕ ಅವಕಾಶಗಳ ಬಗ್ಗೆ ತೃಪ್ತಿ ಇದೆ’ ಎಂದು ಚುರುಕಿನಿಂದಲೇ ಮಾತು ಆರಂಭಿಸಿದರು ‘ಹೂ ಮಳೆ’ ಧಾರಾವಾಹಿಯ ಯದುವೀರ್‌ ಪಾತ್ರಧಾರಿ ಯಶವಂತ್‌.

‘ಹೂ ಮಳೆ’ ಧಾರಾವಾಹಿಯಲ್ಲಿ ವಯಸ್ಸಿಗೆ ಮೀರಿದ ಗಾಂಭೀರ್ಯ, ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ಹೊತ್ತ ಸವಾಲಿನ ಪಾತ್ರಕ್ಕೆ ಯಶವಂತ್‌ ಜೀವ ತುಂಬಿದ್ದಾರೆ. ‘ಈ ಪಾತ್ರಕ್ಕೂ ನನಗೂ ಬಹಳಷ್ಟು ವ್ಯತ್ಯಾಸಗಳಿವೆ. ಪಾತ್ರ ನಿರ್ವಹಣೆ ಸವಾಲಾಗಿತ್ತು’ ಎನ್ನುತ್ತಾ ‘ಪ್ರಜಾಪ್ಲಸ್’ ಜೊತೆ ಮಾತಿಗಿಳಿದರು.

‘ನನಗೀಗ 24 ವರ್ಷ. ಧಾರಾವಾಹಿಯಲ್ಲಿ 29 ವರ್ಷ. ರಾಜಕೀಯದಲ್ಲಿ ಹೆಸರು ಗಳಿಸಿರುವ, ತನ್ನದೇ ಸಿದ್ಧಾಂತಗಳಿಗೆ ನೆಚ್ಚಿಕೊಂಡಿರುವ ಪಾತ್ರವದು. ಜೊತೆಗೆ ಮಗುವಿನ ತಂದೆ ಕೂಡ. ಇವೆಲ್ಲ ನನಗೆ ಹೊಸ ಅನುಭವಗಳು. ಹಾಗಾಗಿ, ಪಾತ್ರ ನಿರ್ವಹಣೆ ಸವಾಲಾಗಿತ್ತು. ಆದರೆ, ನಟನೆಯ ಮೇಲಿನ ಪ್ರೀತಿಯು ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ನೆರವಾಗಿದೆ’ ಎನ್ನುತ್ತಾ ನಟನೆಯ ಮೇಲಿನ ಪ್ರೀತಿಯನ್ನು ಹೊರ ಹಾಕುತ್ತಾರೆ ಅವರು.

ADVERTISEMENT

‘ನಾನು ಅಭಿನಯದಲ್ಲಿ ಯಾವ ತರಬೇತಿಯನ್ನೂ ಪಡೆದಿಲ್ಲ. ಆದರೆ, ಅದನ್ನು ಒಲಿಸಿಕೊಳ್ಳಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಅದರ ಫಲ ನಿಧಾನವಾಗಿ ಸಿಗುತ್ತಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಯಶವಂತ್‌.

ಟಿವಿ ಪರದೆಯ ಮೇಲೆ ಕಂಡ ಸಂಭಾಷಣೆಯನ್ನು ತನ್ನದೇ ಶೈಲಿಯಲ್ಲಿ ಬಾಲ್ಯದಿಂದಲೂ ಪ್ರಸ್ತುತಪಡಿಸುತ್ತಿದ್ದ ಯಶವಂತ್‌, ಬಹಳ ಬೇಗನೇ ನಟನಾ ಮೋಹಕ್ಕೆ ಒಳಗಾಗಿದ್ದರು. ಆದರೆ, ಬಣ್ಣದ ಲೋಕವನ್ನು ಪ್ರವೇಶಿಸುವ ಹಾದಿ ಅವರಿಗೆ ಸುಲಭವಾಗಿರಲಿಲ್ಲ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಡಿಪ್ಲೊಮಾಗೆ ಸೇರಿದ್ದ ಅವರಿಗೆ ಈ ಕ್ಷೇತ್ರ ತನ್ನದಲ್ಲ ಎನಿಸಿದ್ದೆ ತಡ, ಅರ್ಧದಲ್ಲಿಯೇ ಓದನ್ನು ಮೊಟಕುಗೊಳಿಸಿ, ಆ್ಯಕ್ಟಿಂಗ್‌ ತರಬೇತಿಗೆ ಸೇರಿದರು.

‘ನಟನೆಯೇ ನನ್ನ ಮುಖ್ಯ ಗುರಿ ಎಂಬುದು ಅರಿವಾದ ತಕ್ಷಣ, ನಟನಾ ಕ್ಷೇತ್ರದಲ್ಲಿ ಅವಕಾಶ ಅರಸಲು ಶುರುಮಾಡಿದೆ. ಆ್ಯಕ್ಟಿಂಗ್‌ ಕ್ಲಾಸ್‌ಗೂ ಸೇರಿಕೊಂಡೆ. ಆದರೆ, ಅಲ್ಲಿ ಸರಿಯಾಗಿ ಕಲಿಸುತ್ತಿರಲಿಲ್ಲ’ ಎನ್ನುವ ಅವರು, ‘ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಒಂದಷ್ಟು ಸ್ನೇಹಿತರಿದ್ದರು. ಅವರ ಜೊತೆಗೆ ಸೇರಿ ತಾಲೀಮು ನಡೆಸುತ್ತಿದ್ದೆ. ನಾನು ನಟನೆಯನ್ನು ಕಲಿತಿದ್ದೇ ಆಡಿಷನ್‌ಗಳ ಮೂಲಕ. ಸಾಕಷ್ಟು ಆಡಿಷನ್‌ಗಳಿಗೆ ಹೋಗುತ್ತಿದ್ದೆ. ಅಲ್ಲಿ ಕೊಡುತ್ತಿದ್ದ ಸಂಭಾಷಣೆಗಳನ್ನು ಮನೆಗೆ ಬಂದ ನಂತರವೂ ಅಭ್ಯಾಸ ಮಾಡುತ್ತಿದ್ದೆ. ಇನ್ನೂ ಚೆನ್ನಾಗಿ ಹೇಗೆ ಹೇಳಬಹುದು ಎಂದು ಕನ್ನಡಿಯ ಮುಂದೆ ನಿಂತು ನನಗೆ ನಾನೇ ಮಾರ್ಗದರ್ಶಕನಾಗಿ ಕಲಿಯುತ್ತಿದ್ದೆ’ ಎಂದು ನಟನೆಯ ಪಟ್ಟುಗಳನ್ನು ಕಲಿತ ಬಗೆ ವಿವರಿಸುತ್ತಾರೆ.

ಅಭಿನಯಿಸುವ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿಯೇ ಯಶವಂತ್‌ ಮಾಡೆಲಿಂಗ್‌ ಕ್ಷೇತ್ರವನ್ನು ಪ್ರವೇಶಿಸಿದರು. ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಿಗೂ ಅವರು ಬಣ್ಣ ಹಚ್ಚಿದ್ದಾರೆ. ‘ಇವಳು ಸುಜಾತಾ’ದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಒದಗಿ ಬಂತು. ‘ಹೂ ಮಳೆ’ಯ ಮೂಲಕ ಇವರ ನಟನಾ ಕೌಶಲಕ್ಕೆ ಮತ್ತೊಂದು ಗರಿ ಸೇರಿದೆ.

ನಟನೆಯ ಬಲವನ್ನೇ ನಂಬಿ ಬಣ್ಣದ ಲೋಕಕ್ಕೆ ಅಡಿಯಿರಿಸಿರುವ ಅವರಿಗೆ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಇರಾದೆ ಇದೆ. ಹಿರೋ ಆಗುವ ಅವಕಾಶ ಒಮ್ಮೆಲ್ಲೇ ಸಿಗುವುದಿಲ್ಲ. ಹಂತ ಹಂತವಾಗಿ ಮೇಲೇರಿದರೆ ಗೆಲುವಿನ ಸುಖವನ್ನು ಸಂಪೂರ್ಣವಾಗಿ ಅನುಭವಿಸಬಹುದು. ತಾಳ್ಮೆಯಿಂದ ಕಾದರೆ ಯಶಸ್ಸು ಖಂಡಿತ ಎನ್ನುವುದು ಅವರ ಸಿದ್ಧಾಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.