ADVERTISEMENT

ಆಕಾಶ ದೀಪದ ಮೂಲಕ ಕನ್ನಡಕ್ಕೆ ಮರಳುತ್ತಿರುವ ಜೈ ಜೂಜೆ ಡಿಸೋಜಾ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 19:30 IST
Last Updated 28 ಜನವರಿ 2021, 19:30 IST
ಜೈ ಜೂಜೆ ಡಿಸೋಜಾ
ಜೈ ಜೂಜೆ ಡಿಸೋಜಾ   

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಮನೆದೇವ್ರು’ ಧಾರಾವಾಹಿಯ ಸೂರ್ಯ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಮನೆಮಾತಾದವರು ಜೈ ಜೂಜೆ ಡಿಸೋಜಾ. ಒಂದೇ ಧಾರಾವಾಹಿಯಲ್ಲಿನ ನಟನೆ ಪರಭಾಷೆಯಿಂದ ಅವಕಾಶಗಳು ಇವರನ್ನು ಅರಸಿ ಬರುವಂತೆ ಮಾಡಿತ್ತು. ಆ ಕಾರಣಕ್ಕೆ ತೆಲುಗು ಕಿರುತೆರೆ ರಂಗ ಪ್ರವೇಶಿಸಿದ್ದ ಅವರು ಕೆಲಕಾಲ ಅಲ್ಲಿಯೇ ನೆಲೆ ನಿಂತರು.

‘ಪವಿತ್ರ ಬಂಧನಂ’, ‘ಆಡದೇ ಆಧಾರ’ದಂತಹ ಯಶಸ್ವಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಆಕಾಶ ದೀಪ’ ಧಾರಾವಾಹಿಯ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ತಾವು ಕನ್ನಡ ಕಿರುತೆರೆಗೆ ಮರಳುತ್ತಿರುವ ಖುಷಿಯಲ್ಲಿ ಧಾರಾವಾಹಿ ಹಾಗೂ ಪಾತ್ರದ ಬಗ್ಗೆ ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ್ದಾರೆ.

ಆಕಾಶದೀಪ ಧಾರಾವಾಹಿ ಹಾಗೂ ಪಾತ್ರದ ಬಗ್ಗೆ
ಆಕಾಶ ದೀಪದಲ್ಲಿ ನನ್ನದು ಶ್ರೀಮಂತ ಮನೆತನದ ಕುರುಡ ವ್ಯಕ್ತಿಯ ಪಾತ್ರ. ನನ್ನ ಪಾತ್ರದ ಹೆಸರು ಆಕಾಶ್‌. ಫೋಟೊಗ್ರಫಿ ಅವನ ಹವ್ಯಾಸ. ಕಣ್ಣಿಲ್ಲ ಎಂದು ಸುಮ್ಮನೆ ಕೂರದ, ತನ್ನಲ್ಲಿರುವ ಕೊರತೆಯನ್ನೇ ಸವಾಲಾಗಿ ಸ್ವೀಕರಿಸಿದ ವ್ಯಕ್ತಿ ಆಕಾಶ್‌.

ADVERTISEMENT

ಇನ್ನು ಕಥೆಯ ಬಗ್ಗೆ ಹೇಳುವುದಾದರೆ ‘ಬಾಲ್ಯದಲ್ಲಿ ಕಣ್ಣು ಕಳೆದು ಬದುಕುತ್ತಿರುವ ಆಕಾಶ್‌ನ ಜೀವನದಲ್ಲಿ ದೀಪ ಹೇಗೆ ಬರುತ್ತಾಳೆ, ಅವಳ ಪ್ರವೇಶದ ನಂತರ ಅವರ ಜೀವನ ಹೇಗೆ ಬದಲಾಗುತ್ತದೆ, ಹೀಗೆ ಧಾರಾವಾಹಿ ಸಾಗುತ್ತದೆ’ ಎಂದು ಒಂದೇ ಎಳೆಯಲ್ಲಿ ಸಂಕ್ಷಿಪ್ತವಾಗಿ ಕಥೆ ಹಾಗೂ ಪಾತ್ರವನ್ನು ವಿವರಿಸುತ್ತಾರೆ.

ಈ ಧಾರಾವಾಹಿ ಆಯ್ಕೆ ಮಾಡಿಕೊಳ್ಳಲು ಕಾರಣ
ಇದು ತುಂಬಾ ಭಿನ್ನವಾದ ಪಾತ್ರ. ಶೀರ್ಷಿಕೆಯಲ್ಲೇ ನಾಯಕನ ಹೆಸರಿದೆ. ಸಾಮಾನ್ಯವಾಗಿ ಧಾರಾವಾಹಿಯಲ್ಲಿ ನಾಯಕಿಗೆ ಹೆಚ್ಚು ಮಹತ್ವವಿರುತ್ತದೆ. ಆದರೆ ಈ ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿ ಇಬ್ಬರಿಗೂ ಸಮಾನ ಮಹತ್ವವಿದೆ. ಅದರೊಂದಿಗೆ ಕಮಲಿ, ನಾಗಿಣಿ ಖ್ಯಾತಿಯ ಹಯವದನ ಅವರು ಈ ಧಾರಾವಾಹಿಯನ್ನು ಮಾಡುತ್ತಿದ್ದಾರೆ. ಅವರೊಂದಿಗೆ ಕೆಲಸ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಜೊತೆಗೆ ಒಂದು ಒಳ್ಳೆಯ ಕಥೆ ಹಾಗೂ ಪಾತ್ರದ ಮೂಲಕ ಕನ್ನಡಕ್ಕೆ ಮರಳಬೇಕು ಎಂಬ ಹಂಬಲವಿತ್ತು. ಆ ಕಾರಣಕ್ಕೆ ಈ ಧಾರಾವಾಹಿಯನ್ನು ಒಪ್ಪಿಕೊಂಡೆ ಎನ್ನುತ್ತಾರೆ.

ಪಾತ್ರದ ಸವಾಲುಗಳು
ಕುರುಡನ ರೀತಿ ನಟಿಸುವುದೇ ಒಂದು ದೊಡ್ಡ ಸವಾಲು. ಕನ್ನಡಕ ಹಾಕಿಕೊಂಡು ನಟಿಸುವಾಗ ಸಮಸ್ಯೆ ಅನ್ನಿಸುವುದಿಲ್ಲ. ಕನ್ನಡಕ ತೆಗೆದು ನಟಿಸುವುದು ನಿಜಕ್ಕೂ ಕಷ್ಟ. ಯಾಕೆಂದರೆ ಆಗ ಕಣ್ಣು ಮುಚ್ಚುವುದು, ತೆರೆಯುವುದು ಮಾಡಬಾರದು, ಕಣ್ಣುಗುಡ್ಡೆ ಅಲುಗಾಡಿಸಬಾರದು ಇದೆಲ್ಲಾ ಸವಾಲಾಗಿತ್ತು.

ಮತ್ತೆ ಕನ್ನಡ ಕಿರುತೆರೆಗೆ ಮರಳಿದ ಬಗ್ಗೆ
‘ನಾನು ಕನ್ನಡದಲ್ಲಿ ಮಾಡಿದ್ದು ಒಂದೇ ಧಾರಾವಾಹಿಯಾದರೂ ಜನ ಈಗಲೂ ನನ್ನನ್ನು ‘ಮನೆದೇವ್ರು ಸೂರ್ಯ’ ಅಂತಲೇ ಗುರುತಿಸುತ್ತಾರೆ. ಆಕಾಶದೀಪ ಧಾರಾವಾಹಿಗೂ ಜನರು ಅದೇ ರೀತಿ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ ನೀಡಬೇಕು. ಈ ಧಾರಾವಾಹಿ ಆರಂಭದಲ್ಲಿ 2, 3 ಎಪಿಸೋಡ್ ನೋಡಿದರೆ ಅವರೇ ಧಾರಾವಾಹಿಗೆ ಅಡಿಕ್ಟ್ ಆಗುತ್ತಾರೆ. ಕಥೆ ತುಂಬಾ ಚೆನ್ನಾಗಿದೆ. ಇದು ಫೆಬ್ರುವರಿಯಿಂದ ಪ್ರಸಾರವಾಗಲಿದೆ, ನೋಡಿ ಹರಸಿ’ ಎಂದು ಮನವಿ ಮಾಡಿಕೊಳ್ಳುವ ಜೊತೆಗೆ ಕನ್ನಡಕ್ಕೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ.

ಬೇರೆ ಭಾಷೆಯಿಂದಲೂ ಧಾರಾವಾಹಿಗೆ ಅವಕಾಶಗಳು ಬರುತ್ತಿದ್ದು, ಸದ್ಯ ಆಕಾಶದೀಪದ ಮೇಲೆ ಗಮನಹರಿಸಿದ್ದಾರೆ ಜೈ. ಈ ನಡುವೆ ತಮಿಳು ಸಿನಿಮಾವೊಂದರಿಂದಲೂ ಅವಕಾಶ ಬಂದಿದ್ದು ಮಾರ್ಚ್‌ನಿಂದ ಆ ಸಿನಿಮಾ ಆರಂಭವಾಗುವ ನಿರೀಕ್ಷೆ ಇದೆ ಎನ್ನುವುದು ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.