ದೇಶದ ಕಿರುತೆರೆಯು ಇತ್ತೀಚೆಗೆ ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ. ಅದಕ್ಕೆ ಕಾರಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಬದುಕು ಕುರಿತ ’ಮಹಾನಾಯಕ’ ಧಾರವಾಹಿ. ಝೀ ಟಿ.ವಿಯು ವಾರಾಂತ್ಯದ ಎರಡು ದಿನ ಪ್ರೈಮ್ ಅವಧಿಯಲ್ಲಿ ಕನ್ನಡ, ಮರಾಠಿ ಸೇರಿದಂತೆ ಕೆಲ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಪ್ಲೆಕ್ಸ್, ಕಟೌಟ್‌ಗಳು ಹಳ್ಳಿಗಳಿಂದಿಡಿದು ನಗರಗಳ ಗಲ್ಲಿಗಳವರೆಗೆ ರಾರಾಜಿಸುತ್ತಿವೆ. ಅಭಿಮಾನಿಗಳು ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಿದ್ದಾರೆ. ವಾಹನಗಳಲ್ಲಿ ’ಮಹಾನಾಯಕ’ನ ಸ್ಟಿಕ್ಕರ್‌ಗಳು, ಟೀ ಶರ್ಟ್‌ಗಳು ಎದ್ದು ಕಾಣುತ್ತಿವೆ. ಶೀರ್ಷಿಕೆ ಗೀತೆ ಮೊಬೈಲ್ ಫೋನ್‌ಗಳ ರಿಂಗ್ ಟೋನ್ ಆಗಿದೆ. ಅಂಗಡಿಗಳ ಹೆಸರುಗಳು ‘ಮಹಾನಾಯಕ’ ಆಗುತ್ತಿದೆ.
ಸೂಪರ್ ಸ್ಟಾರ್ ಎನಿಸಿಕೊಂಡ ಸಿನಿಮಾ ನಟರ ಚಿತ್ರಗಳು ಬಿಡುಗಡೆಯಾದಾಗ, ಇಂತಹ ಸಂಭ್ರಮಾಚರಣೆ ಸಹಜವಾಗಿ ಕಾಣುವಂತಹದ್ದು. ಆದರೆ, ಚಿತ್ರಮಂದಿರಗಳು ಬಂದ್ ಆಗಿರುವ ಈ ’ಕೊರೊನಾ’ ಕಾಲದಲ್ಲಿ, ಧಾರಾವಾಹಿಯೊಂದನ್ನುವೀಕ್ಷಕರು ಇಷ್ಟು ದೊಡ್ಡ ಮಟ್ಟದಲ್ಲಿ ಅಪ್ಪಿಕೊಳ್ಳುತ್ತಿರುವುದು ಕಿರುತೆರೆಯ ಮಟ್ಟಿಗೆ ದೊಡ್ಡ ಕ್ರಾಂತಿ.
’ಧಾರಾವಾಹಿ ಪ್ರಸಾರ ಮಾಡದಂತೆ ದುಷ್ಕರ್ಮಿಗಳು ತಮಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ‘ ಎಂಬ ವಿಷಯವನ್ನು ಇತ್ತೀಚೆಗೆ ಝೀ ಟಿ.ವಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹಂಚಿಕೊಂಡಿದ್ದರು. ಆಗ ಧಾರಾವಾಹಿ ಪ್ರೇಮಿಗಳು ತೋರಿದ ಪ್ರತಿಕ್ರಿಯೆ ರಾಘವೇಂದ್ರ ಅವರ ಊಹೆಗೂ ಮೀರಿತ್ತು. ಪ್ರತಿಭಟನೆ, ಖಂಡನೆ, ಪತ್ರಿಕಾಗೋಷ್ಠಿ ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ Stand with Raghavendra Hunasur ಎಂಬ ಸಾಲುಗಳು ಗಮನ ಸೆಳೆದವು. ಧಾರಾವಾಹಿ ನಿಲ್ಲಿಸಬೇಕು ಎಂಬ ಬೆದರಿಕೆಗೆ ವೀಕ್ಷಕರಿಂದ ವ್ಯಕ್ತವಾದ ಪ್ರತಿರೋಧ, ವಾರದ ಹಿಂದೆ ನಿಗದಿತ ಅವಧಿಯಲ್ಲಿ ಧಾರಾವಾಹಿ ಪ್ರಸಾರವಾಗದಿದ್ದಾಗ ಆಕ್ರೋಶವಾಗಿ ಹೊರ ಹೊಮ್ಮಿತ್ತು.
ಬೆದರಿಕೆ ಕರೆಯ ಬೆನ್ನಲ್ಲೆ, ನಡೆದ ಈ ಬೆಳವಣಿಗೆ ವೀಕ್ಷಕರಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿತ್ತು. ‘ಧಾರಾವಾಹಿ ನಿಲ್ಲಿಸಲಾಗಿದೆ’ ಎಂಬ ಗಾಳಿಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು. ಚಾನೆಲ್‌ನ ಕಚೇರಿಗೆ ಸಾವಿರಾರು ಕರೆಗಳು ಹೋದವು. ಕೆಲವರು ಚಾನೆಲ್‌ನವರಿಗೂ ಕರೆ ಮಾಡಿ ‘ಇಂದು ಯಾಕೆ ಮಹಾನಾಯಕ ಪ್ರಸಾರವಾಗಿಲ್ಲ’ ಎಂದು ಹಕ್ಕಿನಿಂದ ಕೇಳಿದರು. ’ಪೂರ್ವನಿಗದಿಯಾಗಿದ್ದರಿಂದ ಸಿನಿಮಾ ಪ್ರಸಾರ ಮಾಡಲಾಗಿದೆ. ಧಾರಾವಾಹಿ ನಿಲ್ಲಿಸುವ ಮಾತೇ ಇಲ್ಲ’ ಎಂಬ ಪ್ರತಿಕ್ರಿಯೆ ಕಡೆಗೆ ಎಲ್ಲರನ್ನೂ ತಣ್ಣಗಾಗಿಸಿತ್ತು. ಮರಾಠಿ ಭಾಷೆಯಲ್ಲಿ ಮಹಾರಾಷ್ಟ್ರದಲ್ಲಿ ಮೊದಲಿಗೆ ಪ್ರಸಾರವಾದ ಈ ಧಾರವಾಹಿಗೆ, ಅಲ್ಲಿ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಕರ್ನಾಟಕದಲ್ಲೂ ಸಿಗುತ್ತಿದೆ.
ಎಲ್ಲಿದ್ದರು ಈ ವೀಕ್ಷಕರು
ಹತ್ತಾರು ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ನೂರೆಂಟು ಧಾರಾವಾಹಿಗಳ ಪೈಕಿ, ‘ಮಹಾನಾಯಕ’ನಿಗೆ ಮಾತ್ರ ಯಾಕೆ ಇಂತಹ ಪ್ರತಿಕ್ರಿಯೆ ಸಿಗುತ್ತಿದೆ? ಅತ್ತೆ–ಸೊಸೆ ಜಗಳ, ಸಂಸಾರ ಕಲಹ, ಲವ್ ಸ್ಟೋರಿಗಳು, ಪೌರಾಣಿಕ ಕಥೆಗಳು, ನಾಗ–ನಾಗಿಣಿಯರು, ಕ್ರೈಂ ಕಥಾನಕಗಳ ಸೀರಿಯಲ್ ಸಂತೆಯಲ್ಲಿ ‘ಮಹಾನಾಯಕ’ನಿಗೆ ಇಷ್ಟು ದೊಡ್ಡ ವೀಕ್ಷಕರ ದಂಡು ಎಲ್ಲಿ ಸೃಷ್ಟಿಯಾಯಿತು ಎಂಬ ಪ್ರಶ್ನೆಗಳು ಸಹಜವಾಗಿಯೇ ಹಲವರಲ್ಲಿ ಮೂಡಿವೆ.
ಧಾರಾವಾಹಿಯನ್ನು ತಮ್ಮ ಅಸ್ಮಿತೆ ಎಂದು ಸಂಭ್ರಮಿಸುತ್ತಿರುವವರು, ತುಳಿತಕ್ಕೊಳಗಾದ ಹಾಗೂ ಇಂದಿಗೂ ಸಾಮಾಜಿಕ ಸ್ಥಾನಮಾನದ ವಿಷಯದಲ್ಲಿ ಕೊನೆಯವರಾಗಿಯೇ ಉಳಿದಿರುವ ಕೆಳ ವರ್ಗದವರು ಅಥವಾ ದಲಿತರು. ಅವರು ಕುಲದೇವರಂತೆ ಆರಾಧಿಸುವ ಅಂಬೇಡ್ಕರ್ ಅವರನ್ನು ಕಿರುತೆರೆಯಲ್ಲಿ ಕಣ್ತುಂಬಿಕೊಳ್ಳುತ್ತಿರುವ ಆನಂದದ ಧ್ಯೋತಕವಾಗಿ ಇಂತಹ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಾಗಿದ್ದರೆ, ಬಹುಸಂಖ್ಯಾತ ಈ ವೀಕ್ಷಕ ಸಮುದಾಯಕ್ಕೆ ಕಿರುತೆರೆಯಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲವೆ? ಕಿರುತೆರೆ ಇತಿಹಾಸವನ್ನು ನೋಡಿದರೆ ಕಾಣುವುದು ‘ಸಿಕ್ಕಿಲ್ಲ’ ಎಂಬ ಉತ್ತರ. ಕಿರುತೆರೆಯು ಈ ಸಮುದಾಯವನ್ನು, ಇದುವರೆಗೆ ಇಡಿಯಾಗಿ ನೋಡಿಯೆ ಇಲ್ಲ. ದೃಶ್ಯ ಮಾಧ್ಯಮಗಳ ಕಂಟೆಂಟ್‌ಗಳಲ್ಲಿ ಇದುವರೆಗೆ ಅವರು ನಗಣ್ಯರಾಗಿದ್ದಾರೆ.
ಇದನ್ನು ಸಿನಿಮಾ ನಿರ್ದೇಶಕ ಟಿ.ಕೆ. ದಯಾನಂದ ವಿಶ್ಲೇಷಿಸುವುದು ಹೀಗೆ; ‘ಹಿಂದೆ ಪ್ರಬುದ್ಧರಿಗೆ ಮಾತ್ರ ಎಂಬಂತಹ ಕಥೆ, ಕಾದಂಬರಿಗಳು ಹಾಗೂ ಪೌರಾಣಿಕ ಎಳೆಯ ಧಾರಾವಾಹಿಗಳು ಪ್ರಸಾರವಾಗುತ್ತಿದ್ದವು. ನಂತರ ಬಂದಿದ್ದು, ಏಕ್ತಾ ಕಪೂರ್ ಪರಿಚಯಿಸಿದ ಅತ್ತೆ–ಸೊಸೆ ಕಹಾನಿ. ಈಗ ಹಳೇ ಹಾಗೂ ಹೊಸ ಮಾದರಿಗಳ ಮಿಶ್ರಣ ಟ್ರೆಂಡ್ ಇದ್ದರೂ, ಎಲ್ಲಿಯೂ ಬಹುಸಂಖ್ಯಾತ ದಲಿತರ ಪ್ರಾತಿನಿಧ್ಯತೆ ಇರಲಿಲ್ಲ. ಧಾರಾವಾಹಿಗಳ ಕಂಟೆಂಟ್ ಶುರುವಾಗುವುದೇ ಮೇಲ್ ಮಧ್ಯಮ ವರ್ಗದಿಂದ. ಒಂದೊ ನಾಯಕ ಶ್ರೀಮಂತನಾಗಿರುತ್ತಾನೆ ಅಥವಾ ನಾಯಕಿ ಕಡು ಬಡವಿ ಆಗಿರುತ್ತಾಳೆ. ಅಥವಾ ಉಲ್ಟಾ ಇರುತ್ತದೆ. ಬಡವರ ಮನೆ ಎಂದರೆ, ಕಣ್ಮುಂದೆ ಬರುವುದೇ ಮಧ್ಯಮ ವರ್ಗ. ಆ ವರ್ಗದ ಬಡತನವೇ ಸಮಾಜದ ಬಡತನ ಎಂದು ಬಿಂಬಿಸಲಾಗಿದೆ. ಇದರ ಮಧ್ಯೆಯೇ ‘ಮಹಾನಾಯಕ’ ಪ್ರಸಾರವಾಗಿದೆ. ತಮ್ಮದಲ್ಲದ ಕಥನಕ್ಕೆ ವೀಕ್ಷಕರಾಗಿದ್ದ ದಲಿತ ಸಮುದಾಯಕ್ಕೆ ‘ಮಹಾನಾಯಕ’ ಪ್ರವಾಹದ ಮಾದರಿಯಲ್ಲಿ ಪ್ರಾತಿನಿಧ್ಯ ತಂದುಕೊಟ್ಟಿದೆ. ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಳ್ಳಲ್ಪಟ್ಟವರ ಆಶಾಕಿರಣ ತೆರೆ ಮೇಲೆ ಬಂದಾಗ, ಅದು ಅವರಿಗೆ ಗೌರವದ ವಿಷಯವೂ ಆಗಿದೆ’.
ಧಾರಾವಾಹಿಯನ್ನು ಸಂಭ್ರಮಿಸುತ್ತಿರುವವರ ಹಿನ್ನೆಲೆಯನ್ನು ಗಮನಿಸಿದಾಗ, ದಯಾನಂದ ಅವರ ಮಾತುಗಳು ಅಕ್ಷರಶಃ ಸತ್ಯ. ‘ಮಹಾನಾಯಕ’ ಪ್ಲೆಕ್ಸ್, ಬ್ಯಾನರ್, ಮೆರವಣಿಗೆ, ಪ್ರತಿಭಟನೆಯ ಹಿಂದೆ ದಲಿತ ಸಂಘರ್ಷ ಸಮಿತಿಯಿಂದಿಡಿದು ಅಂಬೇಡ್ಕರ್ ಹೆಸರು ಅಥವಾ ದಲಿತ ಜಾತಿಗಳ ಹೆಸರಿನ ಸಂಘ, ಸಂಘಟನೆಗಳೇ ಹೆಚ್ಚಾಗಿರುವುದನ್ನು ಕಾಣಬಹುದು.
ಯಶಸ್ಸಿನ ಹೊಸ ಸೂತ್ರ
‘ಮಹಾನಾಯಕ’ ಧಾರಾವಾಹಿಯನ್ನು ಕೇವಲ ಸಮುದಾಯೀಕರಣದ ಹಿನ್ನೆಲೆಯಲ್ಲಷ್ಟೇ ನೋಡಲಾಗದು. ‘ಜನ ಯಾವುದನ್ನು ಜಾಸ್ತಿ ನೋಡುತ್ತಾರೊ, ಅದನ್ನೇ ಜಾಸ್ತಿ ಕೊಡ್ತಿವಿ’ ಎನ್ನುವ ದೃಶ್ಯ ಮಾಧ್ಯಮಗಳ ಸೋಕಾಲ್ಡ್ ಮಾರುಕಟ್ಟೆ ಅಜೆಂಡಾದ ನೆಲೆಯಲ್ಲೂ ನೋಡಬೇಕಿದೆ.
ದಯಾನಂದ ಅವರು ಹೇಳುವಂತೆ; ‘ದಲಿತ ಸಮುದಾಯದ ಕಥನಗಳನ್ನು ದೃಶ್ಯ ಮಾಧ್ಯಮಗಳು ಇದುವರೆಗೆ ತೆರೆ ಮೇಲೆ ತರದೆ, ದೊಡ್ಡ ವೀಕ್ಷಕ ಸಮುದಾಯವೊಂದನ್ನು ಮಿಸ್ ಮಾಡಿಕೊಂಡಿದ್ದವು. ನೀವು ಅವರನ್ನು ಪ್ರತಿನಿಧಿಸಿದರೆ, ಅವರು ಕೊಡುವ ಪ್ರೀತಿ ಯಾವ ಮಟ್ಟಕ್ಕಿರುತ್ತದೆ ಎಂಬುದನ್ನು ‘ಮಹಾನಾಯಕ’ ತೋರಿಸಿ ಕೊಟ್ಟಿದ್ದಾನೆ. ದಲಿತ ಕೇಂದ್ರಿತ ಕಥೆಗಳಿಗೆ ಹೆಚ್ಚು ವೀಕ್ಷಕರಿದ್ದಾರೆ. ಗೋಳಿನ ಕಥೆ ಬದಲಿಗೆ ಅವರು ಆರಾಧಿಸುವ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹವರ ಬದುಕನ್ನು ತೆರೆ ಮೇಲೆ ತಂದರೂ, ಇಂತಹ ಪ್ರತಿಕ್ರಿಯೆಯೇ ಸಿಗುತ್ತದೆ. ಇಷ್ಟಕ್ಕೂ ಶ್ರಮಿಕ ವರ್ಗದವರನ್ನು ಪ್ರತಿನಿಧಿಸಿದವರೇ ಸಿನಿಮಾ ರಂಗದಲ್ಲಿ ಸ್ಟಾರ್ ಮತ್ತು ಮೆಗಾ ಸ್ಟಾರ್‌ಗಳಾಗಿರುವುದು. ‘ಮಹಾನಾಯಕ’ನನ್ನು ಸಹ ನಾವು ಅದೇ ನೆಲೆಯಲ್ಲಿ ನೋಡಬೇಕಿದೆ. ಹಿಂಜರಿಕೆಯಿಂದಲೇ ಆರಂಭವಾದ ಈ ಪ್ರಯೋಗಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಯಶಸ್ಸಿನ ಈ ಹೊಸ ಮಾದರಿಯನ್ನು ಕಿರುತೆರೆ ಮುಂದೆ ಹೇಗೆ ಸ್ವೀಕರಿಸಿ, ತೆಗೆದುಕೊಂಡು ಹೋಗಲಿದೆ ಎಂಬುದನ್ನು ಕಾದು ನೋಡಬೇಕು’.
ಹೌದು. ಹಲವು ದಶಕಗಳ ಹೋರಾಟ, ಸಾಹಿತ್ಯ, ಭಾಷಣಗಳು ಮಾಡಲಾಗದ್ದನ್ನು ಕೇವಲ ಒಂದು ಧಾರಾವಾಹಿ ಮಾಡಿದೆ. ಶೋಷಿತರ ಅಸ್ಮಿತೆಯಾದ ಅಂಬೇಡ್ಕರ್ ಅವರನ್ನು ಮಕ್ಕಳಿಂದಿಡಿದು ವೃದ್ಧರವರೆಗೆ ತಲುಪಿಸಿದೆ. ಹುಟ್ಟಿನ ಹಿನ್ನೆಲೆಯಿಂದಾಗಿಯೇ ದಲಿತೇತರಿಗೆ ಅಪಥ್ಯವಾಗಿದ್ದ ಈ ಮಾನವತಾವಾದಿ, ಇಂದು ಅವರ ಮನೆಗೂ ‘ಮಹಾನಾಯಕ’ನಾಗಿ ಬಂದಿದ್ದಾರೆ. ‘ನಮ್ಮ ಹಕ್ಕುಗಳಿಗೆ ಹೋರಾಡಿದವರು ಇವರೇನಾ’ ಎಂಬ ಪ್ರಜ್ಞೆಯನ್ನು ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.