ADVERTISEMENT

ಕಾಡಿನೊಳಗಿನ ಸಾಹಸಿಯಾಗಿ ಅಜಯ್‌ ದೇವಗನ್‌

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 9:47 IST
Last Updated 12 ಅಕ್ಟೋಬರ್ 2021, 9:47 IST
ಅಜಯ್‌ ದೇವಗನ್‌
ಅಜಯ್‌ ದೇವಗನ್‌   

ಕಾಡಿನೊಳಗೆ ಸಾಹಸಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅಜಯ್‌ ದೇವಗನ್‌. ಡಿಸ್ಕವರಿ ಚಾನೆಲ್‌ಗಾಗಿ ನಿರ್ಮಿಸಲಾದ ‘ಮ್ಯಾನ್‌ ಇನ್‌ಟು ವೈಲ್ಡ್‌’ ಸಾಕ್ಷ್ಯಚಿತ್ರದಲ್ಲಿ ಅಜಯ್‌ ದೇವಗನ್‌ ಅವರು ಖ್ಯಾತ ಬ್ರಿಟಿಷ್‌ ಸಾಹಸಿಗ, ನಿಸರ್ಗ ಸಾಹಸ ಕಾರ್ಯಕ್ರಮಗಳ ನಿರೂಪಕ ಬೇಯರ್‌ ಗ್ರಿಲ್ಸ್‌ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಹಿಂದೂಮಹಾಸಾಗರದಲ್ಲಿ ಈ ಚಿತ್ರೀಕರಣ ನಡೆದಿದೆ.

‘ಅ. 22ರಂದು ಡಿಸ್ಕವರಿ ಪ್ಲಸ್‌ನಲ್ಲಿ (ಒಟಿಟಿ), ಅ. 25ರಂದು ಡಿಸ್ಕವರಿ ಚಾನೆಲ್‌ನಲ್ಲಿ ಈ ಸಂಚಿಕೆ ಪ್ರಸಾರವಾಗಲಿದೆ. ಒಟ್ಟು 142 ದೇಶಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ’ ಎಂದು ಡಿಸ್ಕವರಿ ಇಂಕ್‌ನ ದಕ್ಷಿಣ ಏಷ್ಯಾದ ಆಡಳಿತ ನಿರ್ದೇಶಕಿ ಮೇಘಾ ಟಾಟಾ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಚಿಕೆಯ ಚಿತ್ರೀಕರಣದ ಅನುಭವ ತೆರೆದಿಟ್ಟ ಅಜಯ್‌ ದೇವಗನ್‌, ‘ದಟ್ಟ ಕಾಡು, ಸಮುದ್ರ, ನೀರು ತುಂಬಿದ ಪ್ರದೇಶ ಎಲ್ಲವೂ ಹೊಸತು. ಇಲ್ಲಿ ಎಲ್ಲವೂ ಅನಿರೀಕ್ಷಿತವೇ ಆಗಿವೆ. ನಾನುಬರಿಗೈಲಿ ಹೋಗಿದ್ದೆ. ಪ್ರತಿ ಕ್ಷಣವೂ ಅಚ್ಚರಿ ಮತ್ತು ಖುಷಿಯೇ ಸಿಕ್ಕಿತು’ ಎಂದರು.

ADVERTISEMENT

‘ಇಲ್ಲಿ ರಿಟೇಕ್‌ಗೆ ಅವಕಾಶವಿಲ್ಲ. ಏನಿದ್ದರೂ ಸಹಜವಾಗಿಯೇ ಚಿತ್ರೀಕರಿಸಬೇಕು. ಕೆಲವೊಮ್ಮೆ ಭಯವಾದದ್ದೂ ಇದೆ. ಇಂಥ ಹೊಸ ಜಾಗಗಳಿಗೆ ಹೋಗಿ ಹೊಸ ವಿಷಯ ತಿಳಿದುಕೊಳ್ಳುವುದೂ ಇಷ್ಟ’ ಎಂದು ಹೇಳಿದರು.

ಬೇಯರ್‌ ಗ್ರಿಲ್ಸ್‌ ಮಾತನಾಡಿ, ‘ಭಾರತ ಎಲ್ಲ ದೃಷ್ಟಿಯಿಂದಲೂ ವೈವಿಧ್ಯಮಯವಾದ ದೇಶ. ಹವಾಮಾನ, ಆಹಾರ, ಸಂಸ್ಕೃತಿ ಇಲ್ಲಿ ಭಿನ್ನವಾದದ್ದೆ. ಹೀಗಾಗಿ ನನ್ನ ಅನುಭವದಲ್ಲಿ ಭಾರತ ತುಂಬಾ ಗುರುತಿಟ್ಟುಕೊಳ್ಳುವ ಅದ್ಭುತ ದೇಶ. ಹಾಗೆ ನೋಡಿದರೆ ನಾನು ಕಾಡಿನೊಳಗೆ ಬಾಳುವುದಕ್ಕಿಂತ ನಗರದಲ್ಲಿಯೇ ಹೆಚ್ಚು ಕಷ್ಟ, ಸವಾಲುಗಳನ್ನು ಎದುರಿಸುತ್ತೇನೆ’ ಎಂದರು.

ಅಜಯ್‌ ದೇವಗನ್‌ ಒಡನಾಟದ ಕುರಿತೂ ಶ್ಲಾಘಿಸಿದ ಬೇಯರ್‌, ‘ಅಜಯ್‌ ಮಿತಭಾಷಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವರು ಒಂದು ಗೌರವ ಎಂದು ಭಾವಿಸಿ ತಮ್ಮ ಬದ್ಧತೆ ಹಾಗೂ ಪ್ರಾಮಾಣಿಕತೆ ಮೆರೆದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.