ADVERTISEMENT

ಶ್ರಾವಣ ಸಂಭ್ರಮದಲ್ಲಿ ‘ಮಾಂಗಲ್ಯಂ ತಂತುನಾನೇನಾ’

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
‘ಮಾಂಗಲ್ಯಂ ತಂತು ನಾನೇನಾ’ ಧಾರಾವಾಹಿಯ ದೃಶ್ಯ
‘ಮಾಂಗಲ್ಯಂ ತಂತು ನಾನೇನಾ’ ಧಾರಾವಾಹಿಯ ದೃಶ್ಯ   

ಶ್ರಾವಣ ಮಾಸ ಬಂತೆಂದರೆ ಹಬ್ಬ, ಸಂಭ್ರಮ - ಸಡಗರ, ಸಂತಸ... ಎಲ್ಲವೂ ಒಟ್ಟೊಟ್ಟಿಗೆ ಬರುತ್ತದೆ. ಹಾಗೆಯೇ ಕಂಕಣಭಾಗ್ಯಕ್ಕೆ ಇದು ಸಕಾಲ. ವಧು-ವರ ಹೊಸ ದಾಂಪತ್ಯಕ್ಕೆ ಅಡಿಯಿರಿಸುವ ಸುಸಮಯ. ಇವೆಲ್ಲವೂ ಶ್ರಾವಣಿ ಹಾಗೂ ತೇಜಸ್ವಿ ಬಾಳಿನಲ್ಲಿ ಆಕಸ್ಮಿಕವಾಗಿ ನಡೆದುಹೋಗಿದೆ..!

ಹೌದು. ಅವರಿಬ್ಬರ ಪಾಲಿಗಿದು ಬಯಸದೇ ಬಂದ ಭಾಗ್ಯವಾದರೂ, ಮನೆಯವರ ದೃಷ್ಟಿಯಲ್ಲಿ ಇದು ದೊಡ್ಡ ಅನಾಹುತ. ಯಾಕೆಂದರೆ, ಇದು ಮಧ್ಯಮವರ್ಗ ಹಾಗೂ ಶ್ರೀಮಂತನದ ನಡುವಿನ ವಿವಾಹ ಬಂಧನ.

ಆಕಸ್ಮಿಕವಾಗಿ ನಡೆದುಹೋದ ಘಟನೆಗೆ ಎರಡೂ ಮನೆಯವರು ಮನಸ್ಸಿಲ್ಲದ ಮನಸ್ಸಿನಿಂದ ಕಲ್ಯಾಣ ಮಂಟಪದಲ್ಲಿ ಸೇರುತ್ತಿದ್ದಾರೆ. ಆದರೆ ಅಲ್ಲಿ ಮುಂದೆ ನಡೆಯುವ ಕಥೆಯೇ ಕುತೂಹಲ...

ADVERTISEMENT

ಇದು ಕಲರ್ಸ್ ಸೂಪರ್ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಾಂಗಲ್ಯಂ ತಂತುನಾನೇನಾ' ಧಾರಾವಾಹಿಯ ಸದ್ಯದ ಕಥೆ-ವ್ಯಥೆ. ಕಿರುತೆರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡೂ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮಾಂಗಲ್ಯಂ ತಂತುನಾನೇನಾ’ ಪ್ರೇಕ್ಷಕರ ಮನಸ್ಸನ್ನು ಗೆದ್ದು ಮುನ್ನುಗ್ಗುತ್ತಿದೆ.

ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಕಲರ್ಸ್ ಸೂಪರ್ ಹಾಗೂ ರಾತ್ರಿ 10.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಮಾಂಗಲ್ಯಂ ತಂತುನಾನೇನಾ’ ಪ್ರಸಾರವಾಗುತ್ತಿದೆ. ರಾಜಶ್ರೀ ಕ್ಯಾಂಪಸ್ ನಿರ್ಮಾಣದಲ್ಲಿ ರಘುಚರಣ್ ಕಥೆ, ಚಿತ್ರಕಥೆ ಹಾಗೂ ಪ್ರಧಾನ ನಿರ್ದೇಶನವಿರುವ ಈ ಧಾರಾವಾಹಿಗೆ ಯಶವಂತ್ (ಪಾಂಡು) ಸಂಚಿಕೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದ್ಯ ಮದುವೆ ಘಟ್ಟ ತಲುಪಿರುವ ಈ ಸಂದರ್ಭದಲ್ಲಿ ಅದ್ಧೂರಿಯಾಗಿ ಮೂಡಿಬರಬೇಕೆಂಬ ನಿಟ್ಟಿನಲ್ಲಿ ಬೃಹತ್ ಕಲ್ಯಾಣ ಮಂಟಪದ ಸೆಟ್ ಹಾಕಿಸಲಾಗಿದೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಭವ್ಯ ಸೆಟ್‌ನಲ್ಲಿ ಶ್ರಾವಣಿ-ತೇಜಸ್ವಿ ಮದುವೆಯ ಮಂಗಳಕಾರ್ಯಗಳು ನೆರವೇರಲಿವೆ.

ಎರಡು ವಾರಗಳ ಕಾಲ ಈ ವಿಶೇಷ ಸಂಚಿಕೆಗಳು ಪ್ರಸಾರವಾಗಲಿದ್ದು, ಕಣ್ಣಿಗೆ ಹಬ್ಬವಂತೂ ಗ್ಯಾರೆಂಟಿ ಅನ್ನೋದು ನಿರ್ಮಾಪಕ ಸೋಮಶೇಖರ್ ಪಿ.ಎಲ್. ಅವರ ಅನಿಸಿಕೆ. ಮಧ್ಯಮ ಹಾಗೂ ಮೇಲ್ವರ್ಗದ ಕುಟುಂಬದ ನಡುವಿನ ಕಥಾಹಂದರವೇ ‘ಮಾಂಗಲ್ಯಂ ತಂತುನಾನೇನಾ’. ಅದೃಷ್ಟದ ಹುಡುಗಿ ಶ್ರಾವಣಿ, ನತದೃಷ್ಟ ಹುಡುಗ ತೇಜಸ್ವಿ ನಡುವಿನ ಕುತೂಹಲಕಾರಿ ಘಟನೆಗಳೇ ಈ ಧಾರಾವಾಹಿಯ ಕೇಂದ್ರಬಿಂದು.

ರಾಜಾರಾಂ, ಹನುಮಂತೇಗೌಡ್ರು, ಸಂಗೀತಾ, ವೀಣಾಸುಂದರ್, ಸ್ಪಂದನ, ಅರುಣ್ ಮೂರ್ತಿ ಮುಂತಾದ ಅನುಭವಿ ಕಲಾವಿದರ ಜೊತೆಗೆ ಆರ್.ಕೆ.ಚಂದನ್, ದಿವ್ಯಾ, ಪವಿತ್ರಾ, ಪ್ರಜ್ಞಾ ಭಟ್, ಚಂದನ್ ಹಾಗೂ ಯಶವಂತ್ ಸೇರಿದಂತೆ ಯುವಪ್ರತಿಭೆಗಳ ದಂಡೇ ಈ ಧಾರಾವಾಹಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.