ADVERTISEMENT

ಮರಿದೇವ ಈಗ ಮಾದೇಶ್ವರ

​ಪ್ರಜಾವಾಣಿ ವಾರ್ತೆ
Published 9 ಮೇ 2019, 19:31 IST
Last Updated 9 ಮೇ 2019, 19:31 IST
ಮರಿದೇವ
ಮರಿದೇವ   

ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತಲೇ ಆರಂಭವಾದ ಉಘೇ ಉಘೇ ಮಾದೇಶ್ವರ ಧಾರಾವಾಹಿ ಜೀ ಕನ್ನಡವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದ್ದು, ಕಥೆ ಈಗ ಮತ್ತೊಂದು ಹೊಸ ತಿರುವು ಪಡೆಯುತ್ತಿದೆ.

ಬಾಲಕ ಮರಿದೇವ ಇನ್ನುಮುಂದೆ ದುಂಡುಮುಖದ ಅಂದಗಾರ ಮಾದಪ್ಪನಾಗಿ, ಮಾದೇಶ್ವರರಾಗಿ ಬೆಳೆದು ನಿಲ್ಲುವ ಪರ್ವಕಾಲ ಆರಂಭವಾಗಿದೆ. ಮೇ 11ರ ಸಂಚಿಕೆಯಿಂದ ಬಾಲಕ ಮರಿದೇವ, ಮಾದೇಶ್ವರನಾಗಿ ವೀಕ್ಷಕರ ಮುಂದೆ ಬರುತ್ತಿದ್ದಾನೆ. ಮಲೆ ಮಾದೇಶ್ವರನ ಇನ್ನೂ ಹಲವಾರು ಮಹಿಮೆಗಳನ್ನು ಮುಂದಿನ ಸಂಚಿಕೆಗಳಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳುವ ಅವಕಾಶ ಲಭಿಸುತ್ತಿದೆ.ನಿರ್ಮಾಪಕ, ಪ್ರಧಾನ ನಿರ್ದೇಶಕ ಮಹೇಶ್ ಸುಖಧರೆಭಕ್ತಿರಸ ಪ್ರಧಾನ ಕಥೆಯನ್ನು ಅಚ್ಚುಕಟ್ಟಾಗಿನಿರೂಪಿಸಿದ್ದಾರೆ.

ಉತ್ತಮಾಪುರದ ಉತ್ತರಾಜಮ್ಮ, ಕಲ್ಯಾಣದೇವರ ದಂಪತಿಗೆ ಪವಾಡದ ಮೂಲಕ ಜನಿಸಿದ ಮರಿದೇವ (ಬಾಲ ಮಾದೇಶ್ವರ) ತನ್ನ ಏಳನೇ ವಯಸ್ಸಿಗೆ ಮನೆಬಿಟ್ಟು ಲೋಕಸಂಚಾರಕ್ಕೆ ಕೈಗೊಂಡು, ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುತ್ತಾನೆ. ಓಜಯ್ಯ ಎಂಬ ಗುರುವಿಗೆ ಪಾಠ ಕಲಿಸಿದ್ದಲ್ಲದೆ, ಸುತ್ತೂರು ಮಠದಲ್ಲಿ ಗುರುಗಳ ನೆಚ್ಚಿನ ಶಿಷ್ಯನಾಗಿ ರಾಗಿಕಲ್ಲಿನ ಪವಾಡ ಮೆರೆಯುತ್ತಾನೆ. ಅಲ್ಲಿಂದ ಕುಂತೂರಿಗೆ ಆಗಮಿಸಿ, ಅಲ್ಲಿ ಶ್ರೀಪ್ರಭುದೇವರ ಶಿಷ್ಯನಾಗಿ ಪವಾಡ ಮೆರೆಯುತ್ತ ದೈವಲೀಲೆಗಳನ್ನು ಪ್ರದರ್ಶಿಸುತ್ತ ದೊಡ್ಡವನಾಗುತ್ತಾನೆ. ಕೆಲವು ದೃಶ್ಯಗಳಿಗೆ ವಿಶೇಷ ಗ್ರಾಫಿಕ್ಸ್ ತಂತ್ರಜ್ಞಾನದ ಟಚ್‌ ನೀಡಲಾಗಿದೆ.

ADVERTISEMENT

‘ಈವರೆಗೆ ಮರಿದೇವನ ಬಾಲ್ಯ, ಉತ್ತರಾಜಮ್ಮ, ಕಲ್ಯಾಣದೇವ, ಮಂಚಣ್ಣನ ಕಥೆಗಳ ಹದವಾದ ಹೂರಣ ವೀಕ್ಷಕರಿಗೆ ಇಷ್ಟವಾಗುವಂತೆ ಉಣಬಡಿಸಿದ್ದೇವೆ. ಈಗ ಮಾದೇಶ್ವರರ ಆಗಮನದಿಂದ ಇನ್ನೂ ಹೆಚ್ಚಿನ ವೀಕ್ಷಕರನ್ನು ನಾವು ತಲುಪಲಿದ್ದೇವೆ’ ಎಂಬುವುದು ನಿರ್ದೇಶಕ ನವೀನ್ ಕೃಷ್ಣ ಅವರ ನುಡಿ.

ಜಾನಪದ ಕಾವ್ಯದಲ್ಲಿ ದುಷ್ಟರನ್ನು ಶಿಕ್ಷಿಸಿ ಭಕ್ತರನ್ನು ರಕ್ಷಿಸುವ ಹಲವಾರು ಕಥೆಗಳಿದ್ದರೂ, ಇವುಗಳಲ್ಲಿ ಮುಖ್ಯವಾದವುಗಳನ್ನು ಆಯ್ದು ಕಾಲಾನುಕ್ರಮಣಿಕೆಯಲ್ಲಿ ಪೋಣಿಸಿ ವೀಕ್ಷಕರ ಮುಂದೆ ತರುವುದು ನಿಜಕ್ಕೂ ದೊಡ್ಡ ಸವಾಲು ಎನ್ನುವುದು ಚಿತ್ರಕಥೆಯ ಹೊಣೆಯನ್ನೂ ಹೊತ್ತಿರುವ ಕೆ.ಮಹೇಶ್ ಸುಖಧರೆ ಅವರ ಮಾತು.

‘ಕನ್ನಡ ಜಾನಪದ ಕಾವ್ಯ ಧಾರಾವಾಹಿಯಾಗಿ ಯಶಸ್ಸು ಕಂಡಿರುವುದು ನಮಗೆ ಹೆಮ್ಮೆ. ಉಘೇ ಉಘೇ ಮಾದೇಶ್ವರ ಈ ನಿಟ್ಟಿನಲ್ಲಿ ಒಂದು ಮೇಲ್ಪಂಕ್ತಿ. ಮುಂದೆ ಇಂಥ ಹಲವಾರು ಕಥೆಗಳನ್ನು ಕೈಗೆತ್ತಿಕೊಳ್ಳಲು ಸ್ಫೂರ್ತಿಯಾಗಿದೆ’ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.

ಮಾದೇಶ್ವರರ ಪಾತ್ರದಲ್ಲಿ ನಟ ಆರ್ಯನ್‍ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಪೌರಾಣಿಕ ಪಾತ್ರಗಳ ನಿರ್ವಹಣೆಯಲ್ಲಿ ಈಗಾಗಲೇ ಸೈ ಎನ್ನಿಸಿಕೊಂಡವರು. ಆನಿರೀಕ್ಷೆಗೆ ತಕ್ಕಂತೆ ಪಾತ್ರ ನಿರ್ವಹಿಸುವುದೇ ಆರ್ಯನ್‍ರಾಜ್ ಅವರ ಮುಂದಿರುವ ಸವಾಲು. ಮರಿದೇವನ ಪಾತ್ರ ಮಾಡಿರುವ ಮಾಸ್ಟರ್‌ ಮೋಘ ಈಗಾಗಲೇ ವೀಕ್ಷಕರ ಮನ ಗೆದ್ದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.