ADVERTISEMENT

ಟಿ.ವಿ. ಪರದೆಯಲ್ಲಿ ಹಳೆಯ ದಿನಗಳು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 19:45 IST
Last Updated 29 ಮಾರ್ಚ್ 2020, 19:45 IST
ಮೊಬೈಲ್‌ ಮೂಲಕ ‘ರಾಮಾಯಣ’ ವೀಕ್ಷಣೆಯಲ್ಲಿ ಬಾಲೆ ಮಗ್ನ
ಮೊಬೈಲ್‌ ಮೂಲಕ ‘ರಾಮಾಯಣ’ ವೀಕ್ಷಣೆಯಲ್ಲಿ ಬಾಲೆ ಮಗ್ನ   

ಕೊರೊನಾ ವೈರಾಣುವಿನ ಭೀತಿಯು ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಗಳು ಸ್ಥಗಿತಗೊಳ್ಳುವಂತೆ ಮಾಡಿದೆ. ಈಗಾಗಲೇ ಪ್ರಸಾರ ಆಗುತ್ತಿರುವ ಧಾರಾವಾಹಿಗಳ ಕಂತುಗಳ ಸಂಗ್ರಹ ಕೂಡ ಖಾಲಿ ಆಗುತ್ತಿದೆ. ಈ ಹೊತ್ತಿನಲ್ಲಿ ಕೆಲವು ಟಿ.ವಿ. ವಾಹಿನಿಗಳು ಹಳೆಯ ಹಾಗೂ ಈಚಿನ ಹಿಟ್ ಕಾರ್ಯಕ್ರಮಗಳ ಮರುಪ್ರಸಾರದ ಮೊರೆ ಹೋಗುತ್ತಿವೆ.

ಇದರಿಂದಾಗಿ ‘ರಾಮಾಯಣ’, ‘ಕಸಮ್‌ ಸೆ’, ‘ಕುಂಕುಮ್ ಭಾಗ್ಯ’ದಂತಹ ಕಾರ್ಯಕ್ರಮಗಳ ಮರುವೀಕ್ಷಣೆಗೆ ಅವಕಾಶ ಸಿಗುತ್ತಿದೆ. ಕೆಲವು ವಾಹಿನಿಗಳು ಜನಪ್ರಿಯ ವೆಬ್ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುವ ಯೋಜನೆ ಹಾಕಿಕೊಂಡಿವೆ.

ಧಾರಾವಾಹಿಗಳ ಹೊಸ ಕಂತುಗಳ ಪ್ರಸಾರ ಮಾರ್ಚ್‌ ಅಂತ್ಯದವರೆಗೆ ಮಾತ್ರ ಸಾಧ್ಯವಾಗಬಹುದು. ಏಪ್ರಿಲ್‌ ತಿಂಗಳಲ್ಲಿ ಪ್ರಸಾರ ಮಾಡಲು ಹೊಸ ಕಂತುಗಳ ಸಂಗ್ರಹ ಇಲ್ಲ ಎನ್ನಲಾಗಿದೆ. ಜನರ ಬೇಡಿಕೆಗೆ ಮಣಿದು ದೂರದರ್ಶನ ವಾಹಿನಿಯು ‘ರಾಮಾಯಣ’ ಧಾರಾವಾಹಿಯ ಮರುಪ್ರಸಾರ ಆರಂಭಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಈ ಧಾರಾವಾಹಿಯ ಮರುಪ್ರಸಾರವು ಶನಿವಾರದಿಂದಲೇ ಆರಂಭ ಆಗಿದೆ. ಕಲರ್ಸ್‌ ವಾಹಿನಿಯು ‘ಬೆಲಾನ್ ವಾಲಿ ಬಹು’, ‘ಭಾಗ್ ಬಕೂಲ್ ಭಾಗ್’, ‘ದಿಲ್ ಸೆ ದಿಲ್ ತಕ್’ ಕಾರ್ಯಕ್ರಮಗಳನ್ನು ಪುನಃ ಪ್ರಸಾರ ಮಾಡುತ್ತಿದೆ. ಬಿಗ್ ಬಾಸ್ 13 ಸೀಸನ್‌ ಕೂಡ ಮತ್ತೆ ಬರುತ್ತಿದೆ.

ADVERTISEMENT

‘ಲಾಕ್‌ಡೌನ್‌ ಬೇಸರ ದೂರ ಮಾಡಲು ನಾವು ವೀಕ್ಷಕರಿಗೆ ಹಾಸ್ಯ, ಭಾವುಕತೆ, ರೊಮ್ಯಾನ್ಸ್‌ನ ಹದಪಾಕವನ್ನು ನೀಡುತ್ತಿದ್ದೇವೆ’ ಎನ್ನುತ್ತಾರೆ ಕಲರ್ಸ್‌ ವಾಹಿನಿಯ ಅಧಿಕಾರಿ ಮನೀಶಾ ಶರ್ಮಾ.

ಜೀ ಟಿ.ವಿ. ವಾಹಿನಿಯು ವೆಬ್‌ ಆಧಾರಿತ ‘ಕರ್ಲೆ ತೂ ಭಿ ಮೊಹಬ್ಬತ್’, ‘ಬಾರಿಶ್’, ‘ಕೆಹ್ನೆ ಕೊ ಹಮ್‌ಸಫರ್‌ ಹೈ’ಕಾರ್ಯಕ್ರಮಗಳನ್ನು ಇದೇ ಮೊದಲ ಬಾರಿಗೆ ಟಿ.ವಿ. ಮೂಲಕ ಪ್ರಸಾರ ಮಾಡಲಿದೆ. ಈ ಮೂರು ಕಾರ್ಯಕ್ರಮಗಳು ಆಲ್ಟ್‌ ಬಾಲಾಜಿ ಒಟಿಟಿ ವೇದಿಕೆ ಮೂಲಕ ಪ್ರಸಾರ ಆಗಿರುವುವು.

ಹಿಂದೆ ಹಿಟ್ ಆಗಿದ್ದ ‘ಕುಂಕಮ್ ಭಾಗ್ಯ’, ‘ಕುಂಡಲಿ ಭಾಗ್ಯ’, ‘ಕಸಂ ಸೆ’ ಮತ್ತು ‘ಬ್ರಹ್ಮರಾಕ್ಷಸ’ ಕಾರ್ಯಕ್ರಮಗಳನ್ನು ಪುನಃ ವೀಕ್ಷಿಸುವ ಅವಕಾಶವನ್ನು ಜೀ ಟಿ.ವಿ. ನೀಡಿದೆ. ‘ಕೋವಿಡ್–19 ರೋಗ ಹರಡುತ್ತಿರುವ ಕಾರಣ, ಜನ ಮನೆಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಹಾಗಾಗಿ, ನಾವು ಇಡೀ ಕುಟುಂಬದ ಮನರಂಜನೆಗೆ ಬೇಕಿರುವ ಹೂರಣ ನೀಡುತ್ತಿದ್ದೇವೆ’ ಎಂದು ಜೀ ಟಿ.ವಿ. ಬ್ಯುಸಿನೆಸ್ ಹೆಡ್ ಅಪರ್ಣಾ ಭೋಸ್ಲೆ ಹೇಳುತ್ತಾರೆ.

ಸ್ಟಾರ್ ಪ್ಲಸ್ ವಾಹಿನಿಯು ‘ಮಹಾರಾಜ್ ಕಿ ಜೈ ಹೊ’ ಎಂಬ ಹೊಸ ಕಾರ್ಯಕ್ರಮ ಪ್ರಸಾರ ಮಾಡುವ ಆಲೋಚನೆಯಲ್ಲಿ ಇದೆ. ಹಾಟ್‌ಸ್ಟಾರ್‌ ಒಟಿಟಿ ವೇದಿಕೆ ಮೂಲಕ ಪ್ರಸಾರ ಆಗಿದ್ದ ‘ಹಾಸ್ಟೇಜಸ್’ ಸರಣಿಯನ್ನು ಟಿ.ವಿ. ಮೂಲಕ ಪ್ರಸಾರ ಮಾಡುವ ಆಲೋಚನೆ ಕೂಡ ಅದಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.