ADVERTISEMENT

ನಗಿಸುವ ಪಾಚುಗೆ ವಿಲನ್‌ ಆಗುವಾಸೆ

ರೂಪಾ .ಕೆ.ಎಂ.
Published 15 ಆಗಸ್ಟ್ 2019, 19:30 IST
Last Updated 15 ಆಗಸ್ಟ್ 2019, 19:30 IST
shalini 
shalini    

ಒಂದೂವರೆ ದಶಕದ ಹಿಂದೆ ಮನೆಮಾತಾಗಿದ್ದ ಪಾಪಾ ಪಾಂಡುವಿನ ಪಾಚುಶ್ರೀಮತಿಯ ಖ್ಯಾತಿ ಎಳ್ಳಷ್ಟು ಬದಲಾಗಿಲ್ಲ. ಮಗ ಮತ್ತು ಸೊಸೆ ಬಂದಿದ್ದಾರೆ. ತಮ್ಮನ ಮಗಳು ಜತೆಯಾಗಿದ್ದಾಳೆ. ಕುಟುಂಬ ತುಸು ದೊಡ್ಡದಾಗಿದೆ. ಆಗ ಗಂಡನನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದ್ದ ಪಾಚು, ಗಂಡನ ಜತೆ ಮಗನ ಮೇಲೂ ಕಣ್ಗಾವಲಿಟ್ಟಿದ್ದಾರೆ ಎನ್ನುವುದು ಬಿಟ್ಟರೆ ಜನ ತೋರಿಸುತ್ತಿರುವ ಪ್ರೀತಿ, ಅಭಿಮಾನದಲ್ಲಿ ಬದಲಾವಣೆಯೇ ಇಲ್ಲ ಎನ್ನುವುದು ಪಾಚು‌ ಪಾತ್ರಧಾರಿ ಶಾಲಿನಿ ಕಂಡುಕೊಂಡ ಖುಷಿ.

ಆಗ ಮಕ್ಕಳಾಗಿ ಈ ಧಾರಾವಾಹಿ ಇಷ್ಟಪಡುತ್ತಿದ್ದವರೆಲ್ಲರೂ ಈಗ ಮಡದಿ ಮತ್ತು ಮಕ್ಕಳೊಂದಿಗೆ ಧಾರಾವಾಹಿ ನೋಡುತ್ತಿದ್ದಾರೆ. ಈ ನಟನಾ ಕ್ಷೇತ್ರದ ಕುದುರೆಯ ರೇಸ್‌ನಲ್ಲಿ ನಾನಿನ್ನು ಉಳಿದಿದ್ದೇನೆ. ಅದಕ್ಕಿಂತ ದೊಡ್ಡ ಅದೃಷ್ಟ ಮತ್ತು ಆಶೀರ್ವಾದ ಮತ್ತೊಂದಿಲ್ಲ ಎನ್ನುವ ಹೆಮ್ಮೆ ಅವರದ್ದು.

ಸಾಮಾನ್ಯವಾಗಿ‌ ಧಾರಾವಾಹಿಗಳು ಸಂಚಿಕೆಯಿಂದ ಸಂಚಿಕೆಗೆ ಏಕತಾನತೆಯ ಹಾದಿ ಹಿಡಿಯುವ ಅಪಾಯವಿರುತ್ತದೆ.‌ ಪಾಪಾ ಪಾಂಡು‌ ಧಾರಾವಾಹಿಯಲ್ಲಿ ಇದಕ್ಕೆ ಆಸ್ಪದವೇ ಇಲ್ಲ.‌ ದಿನಕ್ಕೊಂದು ಕಥೆ, ಅದಕ್ಕೆ ತಕ್ಕ ವೇಷ. ಜನರನ್ನು ನಕ್ಕು ನಗಿಸಿ, ನಿರಾಳಗೊಳಿಸುವುದಷ್ಟೆ ಇದರ ಕೆಲಸ ಎನ್ನುತ್ತಾರೆ ಅವರು.

ADVERTISEMENT

ಚದುರಂಗ, ಅರ್ಧಸತ್ಯದಂಥ ಧಾರಾವಾಹಿಗಳ ಪಾತ್ರಗಳನ್ನು ಇನ್ನೂ ಜನ ನೆನಪಿಟ್ಟುಕೊಂಡಿರುವುದಾಗಿ ಹೇಳುವ ಅವರು, ಒಳ್ಳೆಯ ಧಾರಾವಾಹಿಗೆ ಎಂದಿಗೂ ಪ್ರೇಕ್ಷಕರು ಇರುತ್ತಾರೆ ಎಂದು ಗಟ್ಟಿಯಾಗಿ ನಂಬಿದ್ದಾರೆ.

ಐದನೇ ವಯಸ್ಸಿನಲ್ಲಿರುವಾಗಲೇ ಪ್ರೇಮಾ ಕಾರಂತರ ನಿರ್ದೇಶನದ ನಾಟಕವೊಂದರಲ್ಲಿ ನಟಿಸಿದ್ದೆ. ಅಲ್ಲಿಂದ ಬಣ್ಣದ ಯಾನ ಆರಂಭವಾಯಿತು. ನಟನಾ ಕ್ಷೇತ್ರದ ಬಗ್ಗೆ ಏನೊಂದು ತಿಳಿವಳಿಕೆ ಇಲ್ಲದೇ ಇರುವಾಗ‌ಲೂ ಅದರಲ್ಲಿಯೇ ಮುಂದುವರಿಯುವ ಧೃಡಸಂಕಲ್ಪ ಮಾಡಿದ್ದೆ. ನಟನೆ ನನ್ನ ಬದುಕಿಗೆ ದೊಡ್ಡ ತಿರುವು ನೀಡಿದೆ. ವ್ಯಕ್ತಿತ್ವಕ್ಕೆ ಮೆರುಗು ನೀಡಿದೆ. ತಾಳ್ಮೆ, ಪ್ರಾಮಾಣಿಕತೆ, ಗರ್ವವಿಲ್ಲದೇ ಸರಳವಾಗಿ ಬದುಕುವ ಕಲೆ ಕಲಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸದಾ ಕ್ರಿಯಾಶೀಲಳಾಗುವ ಬಗೆಯನ್ನು ಹೇಳಿಕೊಟ್ಟಿದೆ. ಪ್ರತಿ ಬಾರಿ ಹೊಸತು ನೀಡಬೇಕು ಎನ್ನುವ ತುಡಿತವನ್ನು ಕಲಿಸಿದೆ ಎಂದು ವಿನಮ್ರರಾಗುತ್ತಾರೆ ಅವರು.

ಬೆಣ್ಣೆಯಲ್ಲಿ ಕೂದಲು ತೆಗೆಯುವ, ನಗುತ್ತಲೇ ಕ್ರಿಮಿನಲ್‌ ಬುದ್ಧಿ ತೋರಿಸುವ ವಿಲನ್‌ ಪಾತ್ರ ಮಾಡಬೇಕು ಅಂತ ತುಂಬಾ ಆಸೆ ಇದೆ. ಅದನ್ನು ಜನ ಹುಚ್ಚಾಪಟ್ಟೆ ಸ್ವೀಕರಿಸಬೇಕು ಎನ್ನುವ ದುರಾಸೆಯೂ ಇದೆ ಎಂದು ಹೇಳಿಕೊಳ್ಳುವ ಅವರು, ‌ದೊಡ್ಡಮಟ್ಟದ ನಿರ್ದೇಶನಕ್ಕೆ ಕೈಹಾಕುವ ಧೈರ್ಯ ಇಲ್ಲದೇ ಇದ್ದರೂ ಈ ಕ್ಷೇತ್ರದಲ್ಲಿಯೇ ಏನಾದರೂ ಮಾಡಬೇಕು ಎಂಬ ಸಂಕಲ್ಪ ಮಾಡಿದ್ದಾರೆ.

ಒಂದೊಮ್ಮೆ ನಟಿಯಾಗಿಲ್ಲದಿದ್ದರೆ ಪಕ್ಕಾ ಗೃಹಿಣಿಯಾಗಿ ಮೂರು ಮಕ್ಕಳ ತಾಯಿಯಾಗಿರುತ್ತಿದ್ದೆ ಎಂದು ನಗುವ ಶಾಲಿನಿಗೆ ಅಮ್ಮನೇ ಮೊದಲ ವಿಮರ್ಶಕಿ. ಸಂಭಾಷಣೆಯಲ್ಲಿ ಎಲ್ಲೇ ತಪ್ಪು ಕಂಡರೂ, ಭಾಷಾಶುದ್ಧಿ ಬೆಳೆಸಿಕೊ ಎಂದು ಹೇಳುವ ಅಮ್ಮನ ಮಾತನ್ನು ತಪ್ಪದೇ ಪಾಲಿಸುತ್ತಾರೆ.

ಮನೆ, ಗಂಡ, ಮಗಳನ್ನು ಬಿಟ್ಟು ಬಿಗ್‌ಬಾಸ್‌ನಲ್ಲಿ ಮೂರು ತಿಂಗಳು ಹೇಗಿರುವುದು ಎನ್ನುವ ಗೊಂದಲ ಕಾಡಿದಾಗ ‘ಅಮ್ಮ ಬರೀ ಮೂರು ತಿಂಗಳು ಅಲ್ವಾ, ಆಮೇಲೆ ಮನೆಗೆ ಬರ್ತಿಯಲ್ವ’ ಎನ್ನುವ ಮಗಳ ಮಾತು ಬದುಕಿನ ಎಲ್ಲ ಸವಾಲುಗಳನ್ನು ಸರಳವಾಗಿ ತೆಗೆದುಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟಿದೆ ಎಂದು ಹೆಮ್ಮೆಯಿಂದ ಹೇಳುವ ಅವರು ಈವರೆಗೆ 75ಕ್ಕೂ ಹೆಚ್ಚು ಧಾರಾವಾಹಿ ಹಾಗೂ ಟಿ.ವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.