ADVERTISEMENT

ಬೈಜೂಸ್ ಯಂಗ್ ಜೀನಿಯಸ್ ಸೀಸನ್-2: ಬೆಂಗಳೂರಿನ ರಾಹುಲ್, ಸಿರಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 8:28 IST
Last Updated 25 ಜನವರಿ 2022, 8:28 IST
ರಾಹುಲ್ ವೆಲ್ಲಾಲ್ ಮತ್ತು ಸಿರಿ ಗಿರೀಶ್
ರಾಹುಲ್ ವೆಲ್ಲಾಲ್ ಮತ್ತು ಸಿರಿ ಗಿರೀಶ್   

ಬೆಂಗಳೂರು: ಸಣ್ಣವಯಸ್ಸಿನಲ್ಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಪ್ರಶಂಸಿಸುವ ‘ಬೈಜೂಸ್ ಯಂಗ್ ಜೀನಿಯಸ್ ಸೀಸನ್-2’ ಈ ವಾರದ ಎಪಿಸೋಡ್‌ನಲ್ಲಿ ಬೆಂಗಳೂರು ಮೂಲದ ರಾಹುಲ್ ವೆಲ್ಲಾಲ್ ಹಾಗೂ ಸಿರಿ ಗಿರೀಶ್ ಭಾಗವಹಿಸಿದ್ದರು.

ನ್ಯೂಸ್-18 ನೆಟ್‌ವರ್ಕ್‌ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಈ ಕಾರ್ಯಕ್ರಮ ದೇಶದಾದ್ಯಂತ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಡುತ್ತಾ ಬಂದಿದೆ. ಸೀಸನ್-2ರ ಎರಡನೇ ವಾರ ಬೆಂಗಳೂರು ಮೂಲದವರಾದ ರಾಹುಲ್ ವೆಲ್ಲಾಲ್ ಭಾಗವಹಿಸಲು ಅವಕಾಶ ದೊರಕಿದೆ. ಕೇವಲ 14ನೇ ವಯಸ್ಸಿಗೆ ರಾಹುಲ್ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತನಾಗಿದ್ದು, ಎಲ್ಲಾ ಬಗೆಯ ಶಾಸ್ತ್ರೀಯ ಸಂಗೀತದಲ್ಲಿ ನಿಪುಣತೆ ಸಾಧಿಸಿದ್ದಾರೆ. ಅಷ್ಟೆ ಅಲ್ಲದೆ, ತನ್ನ ಎರಡೂವರೆ ವಯಸ್ಸಿನಲ್ಲಿಯೇ ಒಮ್ಮೆ ಕೇಳಿದ ಸಂಗೀತವನ್ನು ಮನನ ಮಾಡಿಕೊಂಡು, ಅದನ್ನ ಹಾಡುವ ಹವ್ಯಾಸ ಬೆಳೆಸಿಕೊಂಡಿದ್ದ. ತನ್ನ 6ನೇ ವಯಸ್ಸಿನಲ್ಲಿ ವೇದಿಕೆ ಏರಿದ ರಾಹುಲ್, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಕಾರ್ಯಕ್ರಮ ನೀಡುವ ಜೊತೆಗೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ,ತಮಿಳು, ತೆಲುಗು, ಹಿಂದಿ, ಮರಾಠಿ ಹಾಗೂ ಗುಜರಾತಿ ಭಾಷೆಯಲ್ಲಿ ಸಂಗೀತ ಪ್ರದರ್ಶನ ನೀಡಿದ್ದಾರೆ. ಪ್ರತಿಷ್ಠಿತ ಷಣ್ಮುಗಾನಂದ ಎಂ.ಎಸ್. ಸುಬ್ಬಲಕ್ಷ್ಮಿ ಫೆಲೋಶಿಪ್ ಪಡೆದಿರುವ ರಾಹುಲ್, ಅನೇಕ ಸಿನಿಮಾಗಳಿಗೆ ಧನಿ ನೀಡಿದ್ದಾರೆ.

ADVERTISEMENT

ಇತ್ತ 15 ವರ್ಷದ ಬಾಲಕಿ ಸಿರಿ ಗಿರೀಶ್ ಸಹ ಬೆಂಗಳೂರು ಮೂಲದವರೇ ಆಗಿದ್ದು, ಈಕೆ ಕರ್ನಾಟಕ ರಾಗ ಸಂಯೋಜಕಿಯಾಗಿ ಈಗಾಗಲೇ ಸಾಧನೆ ಮಾಡಿದ್ದಾರೆ. ಅತಿ ಸಣ್ಣವಯಸ್ಸಿನ ಕರ್ನಾಟಕ ರಾಗ ಸಂಯೋಜಕಿ ಎಂಬ ಖ್ಯಾತಿ ಪಡೆದಿದ್ದಾರೆ. ಈ ಇಬ್ಬರೂ ತಮ್ಮ ಪ್ರತಿಭೆಯಿಂದ ಈ ವಿಶೇಷ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಸಂಗೀತ ಸಂಯೋಜಕರಾದ ಶಂಕರ್ ಮಹದೇವನ್ ಅವರು ಈ ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿದರು. ಅಲ್ಲದೆ, ರಾಹುಲ್ ಜೊತೆಗೂಡಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೇ ವಂದೇ ಮಾತರಂ ಹಾಡನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ನ್ಯೂಸ್18 ನೆಟ್‌ವರ್ಕ್ ಮಕ್ಕಳ ವಿಶೇಷ ಪ್ರತಿಭೆಯನ್ನು ಗುರುತಿಸಿ ವೇದಿಕೆ ಕಲ್ಪಿಸಲು ಬೈಜೂಸ್ ಯಂಗ್ ಜೀನಿಯಸ್ ಸೀಸನ್ ನಡೆಸುತ್ತಿದೆ. ಸೀಸನ್-2 ಆಡಿಷನ್‌ನಲ್ಲಿ ದೇಶದಾದ್ಯಂತ 22 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ ಕೇವಲ 22 ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಆ ಪೈಕಿ ಬೆಂಗಳೂರಿನ ರಾಹುಲ್ ವೆಲ್ಲಾಲ್ ಹಾಗೂ ಸಿರಿ ಗಿರೀಶ್ ಎಂಬುದು ಹೆಮ್ಮೆಯ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.