ADVERTISEMENT

ಜಿ ಸರಿಗಮಪದಲ್ಲಿ ಶಾಲಾನೆನಪು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 13:12 IST
Last Updated 10 ಏಪ್ರಿಲ್ 2019, 13:12 IST
ಸರಿಗಮಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಾಕಿನಲ್ಲಿ ರಾಜೇಶ್‌ ಕೃಷ್ಣನ್‌, ಅನುಶ್ರೀ, ಅರ್ಜುನ್‌ ಜನ್ಯ, ವಿಜಯ್‌ ಪ್ರಕಾಶ್‌
ಸರಿಗಮಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಾಕಿನಲ್ಲಿ ರಾಜೇಶ್‌ ಕೃಷ್ಣನ್‌, ಅನುಶ್ರೀ, ಅರ್ಜುನ್‌ ಜನ್ಯ, ವಿಜಯ್‌ ಪ್ರಕಾಶ್‌   

ಕನ್ನಡ ಕಿರುತೆರೆಯ ಸಂಗೀತ ಕಾರ್ಯಕ್ರಮಗಳಲ್ಲಿ ಸದ್ಯ ನಂಬರ್ ಒನ್ ರಿಯಾಲಿಟಿ ಷೋ ಎನಿಸಿಕೊಂಡಿರುವ 'ಸರಿಗಮಪ' ತನ್ನ 16ನೇ ಆವೃತ್ತಿಯನ್ನು ಯಶಸ್ವಿಯಾಗಿ ಆರಂಭಿಸಿದೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನ ಗೆದ್ದಿದೆ. ರಾಜ್ಯದ ವಿವಿಧ ಜಿಲ್ಲೆಗಳ 19 ಸ್ಪರ್ಧಿಗಳ ಪ್ರತಿಭಾ ಪ್ರದರ್ಶನಕ್ಕೆ ಈ ಕಾರ್ಯಕ್ರಮ ವೇದಿಕೆ ಒದಗಿಸಿದೆ. ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಈ ಸೀಸನ್‌ನ ವಿಶೇಷ.

ಹಾವೇರಿಯ ರುಬಿನಾ, ರಾಯಚೂರಿನ ಮೋನಮ್ಮ, ರಾಮನಗರದ ಕೀರ್ತಿ ನಾಯಕ್, ಸುಳ್ಯದ ಶುಭದಾದಂತಹ ಪ್ರತಿಭೆಗಳನ್ನು ಗುರುತಿಸುವ ಮೂಲಕ ಜಾನಪದ ಕಲಾ ಪ್ರಕಾರಕ್ಕೂ ಆದ್ಯತೆ ನೀಡಲಾಗಿದೆ. ತೀರ್ಪುಗಾರರಲ್ಲಿ ಒಬ್ಬರಾದ ಹಂಸಲೇಖ ಅವರು, ಈ ಕಾರಣಕ್ಕಾಗಿಯೇ ಈ ಆವೃತ್ತಿ 'ಜನಪದ ಸೀಸನ್' ಆಗಿ ಗಮನ ಸೆಳೆಯಲಿದೆ' ಎಂದು ಹೇಳಿದ್ದಾರೆ.

ADVERTISEMENT

'ರಾಜ್ಯದ 30 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿದ್ದೇವೆ. ಈಗ 19 ಮಕ್ಕಳು ಸ್ಪರ್ಧೆಯಲ್ಲಿದ್ದಾರೆ. ಹಳ್ಳಿಯ ಮಕ್ಕಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಗರದ ಮಕ್ಕಳ ಜೊತೆ, ಗ್ರಾಮೀಣ ಪ್ರತಿಭೆಗಳಿಗೂ ಆದ್ಯತೆ ನೀಡುವುದು ಕಾರ್ಯಕ್ರಮದ ಉದ್ದೇಶ. ಜನಪದದ ಜೊತೆಗೆ ಎಲ್ಲ ಪ್ರಕಾರದ ಸಂಗೀತಕ್ಕೂ ಪ್ರಾಮುಖ್ಯತೆ ನೀಡಲಾಗುತ್ತಿದೆ' ಎನ್ನುತ್ತಾರೆ ಕಾರ್ಯಕ್ರಮದ ನಿರ್ದೇಶಕ ಭಾಸ್ಕರ್ ಅಯ್ಯರ್.

ಇದೇ ಶನಿವಾರ ಮತ್ತು ಭಾನುವಾರ (ಏಪ್ರಿಲ್ 13 ಮತ್ತು 14) ಕಾರ್ಯಕ್ರಮದಲ್ಲಿ 'ಶಾಲೆ ವಿಶೇಷ' ಷೋ ಪ್ರದರ್ಶನವಾಗಲಿದೆ. 'ರಾಜಕುಮಾರ' ಚಿತ್ರದ ಬೊಂಬೆ ಹೇಳುತೈತೆ ಶೈಲಿಯಲ್ಲಿ 'ಎಷ್ಟು ಚೆಂದ ಐತೆ ನಮ್ಮೂರ ಶಾಲೆ' ಎಂದು ರುಬೀನಾ ಹಾಡಿದ ಹಾಡಿಗೆ ಸಿಕ್ಕ ಜನಪ್ರಿಯತೆ ಕಂಡು ಸ್ಫೂರ್ತಿಗೊಂಡಿರುವ ವಾಹಿನಿ, ಈ ವಿಶೇಷ ಷೋ ಮಾಡಿದೆ.

ರಾಜ್ಯದ ಆಯ್ದ ಏಳು ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸ್ಪರ್ಧಿಗಳು, ನಿರೂಪಕಿ ಅಲ್ಲದೆ, ತೀರ್ಪುಗಾರರು ಶಾಲಾ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

'ಸರ್ಕಾರಿ ಶಾಲಾ ಮಕ್ಕಳೂ ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ರೂಪಿಸಿದ್ದೇವೆ. ಅದರ ಜೊತೆಗೆ, ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂಬ ಕಾಳಜಿಯೂ ಇದರ ಹಿಂದಿದೆ. ಈ ಷೋ ನೋಡಿದ ಸರ್ಕಾರಿ ಶಾಲಾ ಮಕ್ಕಳಲ್ಲಿ ಹೊಸ ಹುಮ್ಮಸ್ಸು ಮೂಡಲಿದೆ. ಅಲ್ಲದೆ, ತೀರ್ಪುಗಾರರಾದ ರಾಜೇಶ್ ಕೃಷ್ಣನ್ ಅವರ ಪ್ರಾಚಾರ್ಯರು ಮತ್ತು ನಿರೂಪಕಿ ಅನುಶ್ರೀ ಅವರ ಶಿಕ್ಷಕರು ಕೂಡ ಅಂದು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ' ಎಂದು ಕಾರ್ಯಕ್ರಮ ಸಹಾಯಕ ನಿರ್ದೇಶಕ ಎಸ್. ಅಭಿಷೇಕ್ ಹೇಳುತ್ತಾರೆ.

ಪ್ರಧಾನ ತೀರ್ಪುಗಾರರಾದ, ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಅವರ ಅನುಭವದ ನುಡಿಗಳು, ಸಂಗೀತ ಪಾಠದ ಜೊತೆಗೆ ಕವಿತೆ ಮೂಲಕವೂ ರಂಜಿಸುವ ವಿಜಯ್ ಪ್ರಕಾಶ್, ಹಾಡಿನಲ್ಲಷ್ಟೇ ಅಲ್ಲದೆ, ಹೇಳುವ ತೀರ್ಪಿನಲ್ಲಿಯೂ ಜೇನಿನಷ್ಟೇ ಸಿಹಿ ಮಾತಾಡುವ ರಾಜೇಶ್ ಕೃಷ್ಣನ್, ತಮ್ಮ ಮ್ಯೂಸಿಕ್ ನಂತೆಯೇ, ಇತ್ತೀಚೆಗೆ ಡೈಲಾಗ್‌ನಲ್ಲಿಯೂ ಪಂಚ್ ಕೊಡುತ್ತಿರುವ ಅರ್ಜುನ್ ಜನ್ಯ ಹಾಗೂ ಅನುಶ್ರೀ ಅವರ ಚಿನಕುರಳಿ ನಿರೂಪಣಾ ಶೈಲಿ ವೀಕ್ಷಕರ ಮನ ಗೆದ್ದಿದೆ.

ಆಯಾ ಸಂದರ್ಭಕ್ಕೆ ತಕ್ಕಂತೆ ವಿಶೇಷ ಎಪಿಸೋಡ್‌ಗಳನ್ನು ಮಾಡುವ ಮೂಲಕವೂ, ಕಾರ್ಯಕ್ರಮ ನಿರ್ದೇಶಕರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

'ಸರಿಗಮಪ ಸೀಸನ್ 16 ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಶಾಸ್ತ್ರೀಯ ಸಂಗೀತದ ಜೊತೆಗೆ, ಜಾನಪದ ಅಥವಾ ದೇಸಿ ಸೊಗಡಿನ ಗಾಯಕರೂ ಇಲ್ಲಿ ಯಶಸ್ವಿಯಾಗುತ್ತಿದ್ದಾರೆ. ಕಳೆದ ಸೀಸನ್‌ನ ಮೊದಲೆರಡು ಸ್ಥಾನ ಗೆದ್ದ ಕೀರ್ತನ್ ಹೊಳ್ಳ ಮತ್ತು ಹನುಮಂತಪ್ಪ ಇದಕ್ಕೆ ಸಾಕ್ಷಿ. ಸುಚೇತನ್ ರಂಗಸ್ವಾಮಿ ಮೆಂಟರ್ ಆಗಿ ಎಲ್ಲ ಸ್ಪರ್ಧಿಗಳನ್ನು ಉತ್ತಮವಾಗಿ ಸಿದ್ಧಗೊಳಿಸುತ್ತಿದ್ದಾರೆ' ಎನ್ನುತ್ತಾರೆ ಭಾಸ್ಕರ್.

ಸಮವಸ್ತ್ರದಲ್ಲಿಪುಟಾಣಿಗಳು ಕನ್ನಡ ಚಂದನವನದ ಮಕ್ಕಳ ಗೀತೆಗಳನ್ನು ಹಾಡಲಿದ್ದಾರೆ. ಮನಸಿಗೆ ಮುದ, ಮನರಂಜನೆ ನೀಡುವ ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.