ADVERTISEMENT

ಕಾಲ್ಪನಿಕ ಕಥೆಗಳ ನೆಚ್ಚುವ ನಾಗಿಣಿ ಈ ನಮ್ರತಾ

ರೂಪಾ .ಕೆ.ಎಂ.
Published 23 ಜನವರಿ 2020, 19:30 IST
Last Updated 23 ಜನವರಿ 2020, 19:30 IST
ನಮ್ರತಾ ಗೌಡ
ನಮ್ರತಾ ಗೌಡ   

‘ಪುಟ್ಟಗೌರಿ ಮದುವೆ’ಯಲ್ಲಿ ಎರಡನೇ ನಾಯಕಿಯಾಗಿ ಮನೆ ಮಾತಾಗಿದ್ದ ನಮ್ರತಾ ಗೌಡ ಈಗ ಮತ್ತೆ ನಾಗಿಣಿ 2ರಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅಲ್ಲಿ ಎರಡನೇ ನಾಯಕಿ, ಇಲ್ಲಿ ಈಗ ನಾಗಿಣಿ 2, ಏನಿದು ಎರಡರ ನಂಟು ಎಂದು ಕೇಳಿದರೆ, ಕುತೂಹಲದ ಕಣ್ಣಾಗುವ ಅವರು, ಸಂಖ್ಯಾ ಬಲದೆಡೆಗೆ ಗಮನ ಹರಿಸಿಲ್ಲ. ಆದರೆ, ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರಗಳೆಲ್ಲವೂ ನನ್ನದೇ ಎಂದು ಹೇಳುತ್ತಾರೆ.

ನಾಗಿಣಿ 2 ಪ್ರೊಮೊಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ ದೀಪಿಕಾದಾಸ್‌ ನಾಗಿಣಿಯಾಗಿ ಕಾಣಿಸಿಕೊಂಡು ಜನಪ್ರಿಯರಾಗಿದ್ದರು. ಹಾಗಾಗಿ ಜನರ ನಿರೀಕ್ಷೆ ತುಸು ಜಾಸ್ತಿ ಇದೆ. ಜತೆಗೆ ಈ ಪಾತ್ರಕ್ಕೆ ಹೊಂದಿಕೆಯಾಗಿ, ಜನರ ಮನಸ್ಸನ್ನು ಗೆದ್ದೇ ಗೆಲ್ಲುವೆ ಎನ್ನುವ ಆತ್ಮವಿಶ್ವಾಸವನ್ನುಅವರು ಅರಹುತ್ತಾರೆ.

ಹುಟ್ಟಿದ್ದು, ಬೆಳೆದಿದೆಲ್ಲವೂ ಉದ್ಯಾನನಗರಿ ಬೆಂಗಳೂರಿನಲ್ಲಿಯೇ. ಗಳಿಸಿದ್ದು ವಾಸ್ತುಶಿಲ್ಪ ವಿಷಯದಲ್ಲಿ ಎಂಜಿನಿಯರಿಂಗ್‌. ನಟನೆಯ ಬಗ್ಗೆ ಚಿಕ್ಕಂದಿನಿಂದಲೂ ತುಡಿತವಿತ್ತು. ‘ಎಕ್ಸ್‌ಕ್ಯೂಸ್‌ಮಿ’ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಮೇಲೆ ಹಲವು ಅವಕಾಶಗಳು ಸಿಕ್ಕವು. ಅವನ್ನೆಲ್ಲ ಅವರು ಸದುಪಯೋಗ ಪಡಿಸಿಕೊಂಡ ಮೇಲೆಯೇ ‘ಪುಟ್ಟಗೌರಿಯ ಮದುವೆ’ಗೆ ಬಂದಿದ್ದು.‌

ADVERTISEMENT

ಎಂಟು ವರ್ಷದ ಹುಡುಗಿಯಾಗಿದ್ದಾಗಲೇ ಅಭಿನಯಕ್ಕೆ ಇಳಿದಿದ್ದರಿಂದ ಕ್ಯಾಮೆರಾ ಎದುರಿಸುವ ಬಗ್ಗೆ ಯಾವುದೇ ಭಯ ಇರಲಿಲ್ಲ. ಆದರೆ, ನಾಲ್ಕು ವರ್ಷ ಸತತವಾಗಿ ಪ್ರಸಾರವಾಗಿದ್ದ ’ನಾಗಿಣಿ’ಯ ನಾಯಕಿಯೇ ಮತ್ತೆ ಕಾಣಿಸಿಕೊಳ್ಳಲಿ ಎಂಬ ಕಮೆಂಟ್‌ಗಳು ಕೆಲವು ಪ್ರೇಕ್ಷಕರಿಂದ ಬಂದಿತ್ತು. ಆಗ ಸ್ವಲ್ಪ ಅಳುಕಿತ್ತು. ಆದರೆ, ಜನ ಮೊದಲ ನಾಗಿಣಿಯಂತೆ ನನ್ನನ್ನು ಸ್ವೀಕರಿಸುವ ಭರವಸೆ ಈಗ ಬಂದಿದೆ. ಪ್ರತಿ ಸಂಚಿಕೆಯು ವಿಭಿನ್ನವಾಗಿದ್ದು, ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿದೆ. ಜನರಿಗೆ ಇದು ಖಂಡಿತಾ ಇಷ್ಟವಾಗುತ್ತದೆ ಎಂದು ದೃಢವಾಗಿ ಹೇಳುತ್ತಾರೆ.

ಮನೆಯಲ್ಲಿ ನಟನೆಯ ಹಿನ್ನೆಲೆ ಇಲ್ಲ. ಓದು ಮತ್ತು ಅಭಿನಯವನ್ನು ಒಟ್ಟೊಟ್ಟಿಗೆ ನಿರ್ವಹಿಸುತ್ತಿದ್ದೆ. ಮತ್ತೆ ನಟನೆಗೆ ಬರಲು ರಾಮ್‌ಜಿ ಸರ್‌ ಕಾರಣ. ಅಪ್ಪ ಅಮ್ಮನ ನಿರಂತರ ಪ್ರೋತ್ಸಾಹವೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ನಟನೆಯ ವಿಷಯದಲ್ಲಿ ಪುನೀತ್ ರಾಜ್‌ಕುಮಾರ್‌ ಅಂದರೆ ಬಹಳ ಇಷ್ಟ. ಮೊದಲಿನಿಂದಲೂ ಕಾಲ್ಪನಿಕ ಲೋಕದ ಕತೆಗಳೆಂದರೆ ಇಷ್ಟ. ಅನುಷ್ಕಾ ಶೆಟ್ಟಿ ನಟಿಸಿದ್ದ ‘ಅರುಂಧತಿ’ಯಂಥ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯಿದೆ. ಸದ್ಯಕ್ಕೆ ನಾಗಿಣಿಯು ಮಹಿಳಾ ಪ್ರಧಾನ ಧಾರಾವಾಹಿಯಾಗಿರುವುದು ಖುಷಿ ತಂದಿದೆ ಎಂದು ಹೇಳುವುದನ್ನು ಮರೆಯುವುದಿಲ್ಲ.

‘ಪುಟ್ಟ ಗೌರಿ’ ಮುಗಿದ ಮೇಲೆ ಖಳನಾಯಕಿಯಾಗಿ ಅಭಿನಯಿಸಲು ಹಲವು ಅವಕಾಶಗಳು ಬಂದವು. ಆದರೆ, ಇಷ್ಟು ಬೇಗ ಖಳನಾಯಕಿಯಾಗಿ ಕಾಣಿಸಿಕೊಳ್ಳುವುದು ಬೇಡವೆಂದು ನಿರ್ಧರಿಸಿದೆ. ನಾಗಿಣಿಯ ಪಾತ್ರಕ್ಕೆ ತುಂಬಾ ಪೂರ್ವಸಿದ್ಧತೆಯನ್ನು ನಡೆಸಿದ್ದೇನೆ. ಸ್ವಲ್ಪ ದಪ್ಪಗಿದ್ದೆ. ವರ್ಕ್ಔಟ್‌ ನಂತರ ತೆಳ್ಳಗಾಗಿದ್ದೇನೆ. ಹಾವು ಹೆಣ್ಣಿನ ಪಾತ್ರವಾಗಿ, ಅದು ನೋಡುವ, ನಡೆಯುವ, ಮಾತನಾಡುವ ಬಗೆಯನ್ನು ಅರಿಯಲುಹಾವಿನ ಪಾತ್ರದ ಹಿನ್ನೆಲೆ ಇರುವ ನಾಟಕ, ಸಿನಿಮಾಗಳನ್ನು ಹೆಚ್ಚು ನೋಡಿದ್ದೇನೆ ಎಂದು ತಾವು ಪಟ್ಟ ಪರಿಶ್ರಮದ ಬಗ್ಗೆಯೂ ಹೇಳುತ್ತಾರೆ.

ಸಿನಿಮಾದಲ್ಲಿ ನಟಿಸುವುದು ಅಷ್ಟೇ ಗುರಿಯಲ್ಲ. ಏನೇ ಮಾಡಿದರೂ ಪರಿಪೂರ್ಣವಾಗಿರಬೇಕು ಎನ್ನುವವಳು ನಾನು. ಹಾಗಾಗಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು ಸಮಯಾವಕಾಶವಿದೆ. ಅದಕ್ಕಾಗಿ ಸಿದ್ಧತೆ ನಿರಂತರವಾಗಿ ಜಾರಿಯಲ್ಲಿರುತ್ತದೆ ಎನ್ನುವ ನಮ್ರತಾ, ಬಿಡುವಿನ ವೇಳೆಯಲ್ಲಿ ನೃತ್ಯಮಾಡುವುದನ್ನು ಮರೆಯುವುದಿಲ್ಲ. ಭರತನಾಟ್ಯ ಪ್ರವೀಣೆಯಾಗಿರುವ ಅವರು, ಪಾಶ್ಚಿಮಾತ್ಯ ನೃತ್ಯ ಪ್ರಕಾರದಲ್ಲಿಯೂ ಸೈ ಅನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.