ADVERTISEMENT

ಕಷ್ಟದಲ್ಲಿದ್ದೇನೆ, ಗಟ್ಟಿಯಾಗಿ ನೆಲೆಗೊಳ್ಳುವೆ

ರಾಘವೇಂದೆ ಕೆ.
Published 20 ಏಪ್ರಿಲ್ 2019, 13:22 IST
Last Updated 20 ಏಪ್ರಿಲ್ 2019, 13:22 IST
ಟೀವಿ
ಟೀವಿ   

* ನಿಮ್ಮ ಮಹತ್ವಾಂಕ್ಷೆ ಏನು?

ನಾನು ಬಣ್ಣದ ಲೋಕದಲ್ಲಿ ನಟಿಯಾಗಿ ಬೆಳೆಯಬೇಕು. ಕಿರುತೆರೆ– ಹಿರಿತೆರೆ ಎರಡರಲ್ಲೂ ನಾನು ನಟಿಸಬೇಕು. ನಾನು ಈಗಿನ್ನೂ ಪಿಯುಸಿ ಓದುತ್ತಿದ್ದೇನೆ. ಶಿಕ್ಷಣವನ್ನು ಮುಂದುವರಿಸುತ್ತಾ ಅಭಿನಯಿಸುತ್ತೇನೆ. ‘ಮನಸ್ಸಿದ್ದರೆ ಮಾರ್ಗ’ ಎಂದು ಹಿರಿಯರು ಹೇಳಿದ್ದಾರೆ. ಆ ಮಾತಿನಲ್ಲಿ ಭರವಸೆ ಇಟ್ಟು ಮುನ್ನಡೆಯುತ್ತೇನೆ. ನಾನು ಪಿಯು ಓದುವಾಗ ದೀರ್ಘಕಾಲ ಆರೋಗ್ಯ ತಪ್ಪಿತ್ತು. ಆಗ ಸ್ವತಃ ಓದಿ ಒಳ್ಳೆಯ ಫಲಿತಾಂಶ ಪಡೆದಿದ್ದೇನೆ. ಈಗಲೂ ಅದೇ ವಿಶ್ವಾಸ ಇದೆ.

* ನೀವೂ ಒಬ್ಬ ನಟಿಯಾಗಿ ರೂಪಿತವಾಗಲು ಹೇಗೆ ಸಾಧ್ಯ ಆಯ್ತು?

ADVERTISEMENT

ನಟನೆಯನ್ನು ಎಲ್ಲಿಯೂ ಕಲಿತಿಲ್ಲ. ಭರತನಾಟ್ಯವನ್ನು ಸ್ವಲ್ಪ ಅಭ್ಯಾಸ ಮಾಡಿದ್ದೆ ಅಷ್ಟೇ. ನನಗೆ ನಟಿಸಬೇಕು ಎನ್ನುವ ಆಸೆ ಮಾತ್ರ ಇತ್ತು. ನನ್ನ ಬಾಲ್ಯದ ದಿನಗಳಲ್ಲಿಯೇ ಜನ ‘ಇವಳೊಳ್ಳೆ ಹೀರೋಯಿನ್‌ ತರಾ ಇದ್ದಾಳೆ’ ಎನ್ನುತ್ತಿದ್ದರು. ನನ್ನ ತಾಯಿ ಕೂಡ ‘ಹೌದು ಕಣೆ, ನೀನು ನಟಿ ಆಗಬೇಕು’ ಎಂದಾಗ ಖುಷಿ ಆಗ್ತಾ ಇತ್ತು. ಅದೇ ತಲೆಯಲ್ಲಿ ಇಟ್ಟುಕೊಂಡು ಆಡಿಷನ್‌ ನೀಡ್ತಾ ಇದ್ದೆ. ಯಾರೂ ನನಗೆ ಈ ಕ್ಷೇತ್ರದಲ್ಲಿ ಪರಿಚಯ ಇರಲಿಲ್ಲ. ‘ಶಾಂತಂ ಪಾಪಂ’ನಲ್ಲಿ ಒಂದು ಕಂತಿನ ಪುಟ್ಟ ಪಾತ್ರಕ್ಕೆ ಒಂದು ಸಣ್ಣ ಅವಕಾಶ ಸಿಕ್ಕಿತು. ಆದಾದ ಮೇಲೆ ನನ್ನ ಪ್ರಯತ್ನವನ್ನು ಮುಂದುವರಿಸಿದ್ದೆ. ‘ಮಿಥುನ ರಾಶಿ’ಗೆ ಒಮ್ಮೆ ಆಡಿಷನ್‌ ಕೂಡ ನೀಡಿ ಬಂದಿದ್ದೆ. ಆದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ‘ಶಾಂತಂ ಪಾಪಂ’ ಬಂದ ಮೇಲೆ ಮತ್ತೊಮ್ಮೆ ಆಡಿಷನ್‌ಗೆ ಕರೆದರು, ಅವಕಾಶವೂ ಸಿಕ್ಕಿತು.

* ಬಣ್ಣದ ಲೋಕಕ್ಕೆ ಪ್ರವೇಶಿಸಿದ ಮೊದಲ ದಿನಗಳನ್ನು ನೆನೆಪಿಸಿಕೊ‌ಂಡರೆ ಈಗ ಹೇಗೆನಿಸುತ್ತದೆ?

ಆಗ ಹೊಸ ಪ್ರಪಂಚಕ್ಕೆ ಕಾಲಿಟ್ಟಿದ್ದೇನೆ ಎಂದು ಅನ್ನಿಸುತ್ತಿತ್ತು. ಯಾರೊಬ್ಬರೂ ಪರಿಚಯ ಇಲ್ಲ. ಕಣ್ಣಿಗೆ ಕಾಣುವುದೆಲ್ಲ ಹೊಸತು, ಅದು ಗಾಬರಿಯನ್ನು ಹುಟ್ಟಿಸಿತ್ತು. ಆರಂಭದಲ್ಲಿ ಕಷ್ಟ ಆಗ್ತಾ ಇತ್ತು. ಮೊದಲಿಗೆ ನನ್ನ ಆಕ್ಷನ್‌ ಟೇಕ್‌ ಆಗಲಿಲ್ಲ ಎನ್ನುವ ಮಾತು ಕೇಳಿದ ತಕ್ಷಣ ಬೇಜಾರ ಆಗ್ತಾ ಇತ್ತು. ಆದರೆ, ನಿರ್ದೇಶಕರು ಮಾತ್ರ ‘ನೀನು ಈಗ ತಾನೆ ಅಭಿನಯ ಆರಂಭಿಸಿದ್ದೀಯ ಆತಂಕ ಪಡಬೇಡ. ಖಂಡಿತ ನಿನ್ನಿಂದ ಸಾಧ್ಯವಿದೆ. ಈಜಿಯಾಗಿ ತೆಗೆದುಕೊ’ ಎಂದು ಸಮಾಧಾನ ಹೇಳಿ ಕಲಿಸಿದ್ದಾರೆ. ಅಭಿನಯ ರಂಗದಲ್ಲಿ ಅಂಬೇಗಾಲು ಇಡುತ್ತ ಈಗ ಪರ್ವಾಗಿಲ್ಲ ಎನ್ನುವ ಮಟ್ಟಿಗೆ ನಟಿಸಬಲ್ಲೆ. ಇನ್ನೂ ಬೇಬಿ ಸಿಟ್ಟಿಂಗ್‌ನಷ್ಟು ಬೆಳೆದಿದ್ದೇನೆ. ಇನ್ನೂ ಸಾಕಷ್ಟು ಕಲಿಯಬೇಕು, ಬೆಳೆಯಬೇಕು. ಶೂಟಿಂಗ್‌ ಮನೆ ಹೊಸತು ಎಂಬ ಭಾವನೆ ಈಗಿಲ್ಲ. ಅದು ಮತ್ತೊಂದು ಮನೆಯಂತೆ ಗೋಚರಿಸುತ್ತಿದೆ.

* ನೀವು ನಟಿಯಾದ ಮೇಲೆ ಕಾಲೇಜಿನಲ್ಲಿ ನಿಮ್ಮ ಇಮೇಜ್‌ ಹೇಗಿದೆ?

ನಮ್ಮ ಕಾಲೇಜಿನಲ್ಲಿ ಅಧಿಕ ಮಂದಿ ಉತ್ತರ ಭಾರತೀಯರಿದ್ದಾರೆ. ಹೆಚ್ಚಾಗಿ ನಾನೂ ಕಾಲೇಜಿಗೂ ಹೋಗುವುದಿಲ್ಲ ಹಾಗಾಗಿ ತುಂಬ ಜನರಿಗೆ ಗೊತ್ತಿಲ್ಲ ಎಂದುಕೊಂಡಿದ್ದೇನೆ. ಕನ್ನಡದ ಸ್ನೇಹಿತರು ಗುರುತಿಸಿದ್ದಾರೆ. ನನ್ನ ಆಪ್ತ ಗೆಳತಿಯೊಬ್ಬಳಿದ್ದಾಳೆ ಅವಳಂತೂ ನಮ್ಮ ಕುಟುಂಬದವರಿಗಿಂತ ಹೆಚ್ಚಿನ ಮುತುವರ್ಜಿ ವಹಿಸುತ್ತಾಳೆ. ನಮ್ಮ ಶಿಕ್ಷಕರಿಗೆಲ್ಲ ಗೊತ್ತಿದೆ. ಅವರು,ನನಗೆ ಅನೇಕ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಅವರೆಲ್ಲರ ಸಹಾಯ ಓದುವ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

* ನಿಮ್ಮ ವೈಯಕ್ತಿಕ ಜೀವನ ಹೇಗಿದೆ?

ನಾನು ನಮ್ಮ ಅಜ್ಜಿ ಮನೆಯಲ್ಲಿ ಇದ್ದೇನೆ. ನನ್ನ ತಾಯಿ ಎ.ಎನ್‌. ವಿಜಯಲಕ್ಷ್ಮಿ. ಮನೆಯಲ್ಲಿ ತುಂಬ ಕಷ್ಟದಲ್ಲೆ ಬೆಳೆದಿದ್ದೇನೆ. ನಿಗದಿತ ವರಮಾನ ಕೂಡ ಇರಲಿಲ್ಲ. ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿತ್ತು. ಶಿಕ್ಷಣವನ್ನು ಮುಂದುವರಿಸಬೇಕು ಬದುಕು ರೂಪಿಸಿಕೊಳ್ಳುವ ಸವಾಲು ನನ್ನ ಮುಂದೆ ಇತ್ತು. ಆ ಕಾರಣ ಕೂಡ ನಾನು ಇಷ್ಟು ಬೇಗ ಅಭಿನಯರಂಗದಲ್ಲಿ ತೊಡುಗುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.